ದ್ವಂದ್ವ

ಹೊರ ಬಂದವೋ ಹಾಡುತ್ತ, ಒಳ ನಡೆದವೋ ಹಕ್ಕಿ?

ಮಿನುಗುತಿಹವೋ ನಲಿದು, ಮುಸುಕುತಿಹವೋ ಚುಕ್ಕಿ?

ಹಗಲು ರಾತ್ರಿಗೂ ಮತ್ತು ರಾತ್ರಿ ಹಗಲಿಗೂ ಒಪ್ಪಿ,

ಬೆಳಗು-ಸಂಜೆಯಲಿ ಮೆರೆಯುತಿದೆ, ಜ್ಯೋತಿ-ತಮಸುಗಳ ದ್ವಂದ್ವ...

 

ಸಕಲ ನದಿಗಳ ಕುಡಿದು ಮತ್ತೆ ಬಾಯಾರಿದೆ ಕಡಲು,

ಸಪ್ತ ವರ್ಣಗಳ ಕರೆದು ಸುಧೆಯ ಸುರಿಸಿದೆ ಮುಗಿಲು,

ವಾಸ್ತವದಿ ಬೇರೆಯಾದರೂ, ಕ್ಷಿತಿಜದೊಳೊಂದೇ ಇರಲು,

ಬಾನು ಕಡಲಿನ ಅಂಚಿಗೆ ದ್ವೈತಾದ್ವೈತದ ದ್ವಂದ್ವ...

 

ಕನಸು ಬಳ್ಳಿಗಳು ಚಿಗುರಿ ಜೊತೆಗೆ ಬಿರಿಯುವ ಮನಸು.

ಬೇಕು ಬೇಕೆಂದರೂ ಅತ್ತ ಕೈದಕ್ಕದ ಸೊಗಸು.

ಒಲವ ಬಂಧನವ ಬಯಸಿದರೆ ತಮ್ಮ ತಮ್ಮೊಳಗೆ ಮುನಿಸು.

ಕನಸು-ಮನಸುಗಳ ನಡುವೆ ಬೇಕು-ಬೇಡಗಳ ದ್ವಂದ್ವ...