ನಾಳೆ ಅಂದರೆ, ಮೇ 9ನ್ನು ವಿಶ್ವದ ಬಹಳಷ್ಟು ಕಡೆ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಂದು ಆಚರಣೆಗೂ ಒಂದೊಂದು ದಿನವಿರುವ ಹಾಗೆ, ತಾಯಿತಂದೆಯರಿಗೂ ಪ್ರೇಮಿಗಳಿಗೂ ಒಂದೊಂದು ದಿನ. ಇದು ಅಂತಹ ಒಂದು ದಿನ ಮಾತ್ರ ತಾಯಿಯನ್ನು ನೆನೆಸಿಕೊಳ್ಳುವ ಮಕ್ಕಳಿಗಾಗಿ ಅಲ್ಲ. ತಾಯಿಗೆ ಮಗು ಹೇಗೆಯೋ, ಹಾಗೆಯೇ ಮಗುವಿಗೆ ತಾಯಿ ಕೂಡ ಆಗಿರಬೇಕು. ತಾಯಿ ತನ್ನ ಕೊನೆಯುಸಿರಿರುವವರೆಗೆ ತನ್ನ ಮಗುವ ಪ್ರೀತಿಸುವ ಹಾಗೆ ತಾಯಿಯನೂ ಪ್ರೀತಿಸುವ ಮಕ್ಕಳಿಗಾಗಿ ಈ ಕವನ.
ಈ ಕವನ ವಿಶ್ವಕವಿ ರವೀಂದ್ರನಾಥ ಠಾಗೋರ್ ಬರೆದ ಬಂಗಾಳಿ ಕವನದ ಇಂಗ್ಲಿಶ್ ಅನುವಾದ 'The Begining'ನ ಕನ್ನಡ ಅನುವಾದ. ಹೀಗಾಗಲೇ ವರಕವಿ ಬೇಂದ್ರೆಯವರಿಂದ ಹಿಡಿದು ಅನೇಕರು ಈ ಕವನವನ್ನು ಅನುವಾದ ಮಾಡಿದ್ದಾರೆ. ನನ್ನ ಈ ಅನುವಾದಿತ ಕವನ ಅಂತಹ ಅನುವಾದಗಳನ್ನು ಓದದ, ಓದಿದ್ದರೂ ನೆನಪಿರದ, ನೆನಪಿದ್ದರೂ ಅದರ ಬೇರೊಂದು ರೂಪವನು ಓದಬಯಸುವ ಎಲ್ಲ ಕನ್ನಡಿಗರಿಗಾಗಿ. ಆದರೆ, ಈ ಅನುವಾದ ಅವಕ್ಕಿಂತ ಹೇಗೆ ಭಿನ್ನ ಎಂಬುದನ್ನು ಓದುಗರೇ ಹೇಳಬೇಕು. ಇಂಗ್ಲಿಶ್ ಮೂಲದ ಒಂದೇ ಒಂದು ಶಬ್ದವನ್ನು ಬಿಡದೆ, ಕನ್ನಡದ ಜಾಯಮಾನಕ್ಕೆ, ಸೊಗಸಿಗೆ ಧಕ್ಕೆಯೂ ಬಾರದ ಹಾಗೆ ಅನುವಾದಿಸುವ ಪ್ರಯತ್ನ ಮಾಡಿದ್ದೇನೆ. ನಾನು ಬೇರೆಬೇರೆ ರೀತಿಯ ಹಲವಾರು ಅನುವಾದ, ಭಾಷಾಂತರಗಳನ್ನು ಮಾಡಿದ್ದರೂ, ಇದು ನನ್ನ ಮೊದಲ ಕವನಾನುವಾದ. ಆದ್ದರಿಂದ, ತಪ್ಪಿದ್ದರೆ ಮನ್ನಿಸಿ, ಹರಸಿ, ಹಾರೈಸಿ. ಇದು ಕನ್ನಡ ಜಗದ ಎಲ್ಲ ತಾಯಂದಿರಿಗೆ ಹಾಗೂ ಮಕ್ಕಳಿಗೆ ಅರ್ಪಿತ.
-----------------------------------------------------------------------------------
"ನಾನು ಎಲ್ಲಿದ್ದೆನಮ್ಮ, ಎಲ್ಲಿಂದ ನನ್ನ ಕರೆತಂದೆ?" ಎಂದು ಮಗುವು ತನ್ನ ತಾಯ ಕೇಳಿತು.
"ನೀನೆನ್ನ ಎದೆಯಲಿ ಬಯಕೆಯಾಗಿದ್ದೆ ಕಂದಾ" ಎಂದು ಅರೆ ಅಳುನಗುವಿನಲಿ ತಾಯಿ ಮಗುವ ಎದೆಗಪ್ಪಿದಳು.
ಕಂದಾ,
ನೀನೆನ್ನ ಬಾಲ್ಯದಾ ಆಟದ ಗೊಂಬೆಗಳಲ್ಲಿದ್ದೆ.
ನಿತ್ಯ ನಾ ಮಣ್ಣಲಿ ನನ್ನ ದೇವರ ಮೂರುತಿ ಮಾಡುತ್ತಿದ್ದೆ. ಆಗ ನಿನ್ನ ಮೂರುತಿಯನೂ ಮಾಡಿ ಕೆಡವುತ್ತಿದ್ದೆ.
ನೀನೆನ್ನ ಮನೆದೇವರೊಂದಿಗೆ ಮನೆ ಮಾಡಿದ್ದೆ, ಆ ದೇವರೊಂದಿಗೆ ನಿನ್ನನೂ ಪೂಜಿಸುತ್ತಿದ್ದೆ.
ನನ್ನ ಜೀವನದೆಲ್ಲ ಭರವಸೆ, ಪ್ರೀತಿಗಳಲಿ, ನನ್ನ ತಾಯಿಜೀವನದಲಿ ನೀನು ಜೀವಿಸಿದ್ದೆ.
ನನ್ನ ಮನೆಯಾಳುವ ಅಮರ ಚೇತನದ ಮಡಿಲಲಿ ನೀ ಕಾಲದಿಂದಲೂ ಬೆಚ್ಚಗಿದ್ದೆ.
ನನ್ನ ಮನವು ಹುಡುಗಿತನದಿ ತನ್ನ ದಳಗಳನರಳಿಸಿ ನಗುವಾಗ, ನೀನದರಿಂದ ಸುಗಂಧವಾಗಿ ಹೊಮ್ಮಿದ್ದೆ.
ನನ್ನ ತರುಣ ಕೈಕಾಲ್ಗಳಲಿ ನಿನ್ನ ನಸುಕೋಮಲತೆ ಅರಳಿತ್ತು, ನೇಸರನುದಯಕೆ ಮುನ್ನ ಆಗಸವು ಹೊಳೆವಂತೆ.
ನಾಕದಾ ಮೊದಲ ಪ್ರೇಮವೆ ನೀನು ,
ಬೆಳಗಿನಾ ಬೆಳಕಿನೊಂದಿಗೆ ಮರಮರಳಿ ಹುಟ್ಟಿರುವೆ ನೀನು,
ಜಗದ ಜೀವದ ಝರಿಯಲಿ ಹರಿದಿರುವೆ ನೀನು,
ಕಡೆಗಿಂದು ಬಂದು ನನ್ನೆದೆಯಲಿ ನೆಲೆಸಿರುವೆ.
ನಿನ್ನ ಮೊಗವನು ದಿಟ್ಟಿಸುವಾಗ, ನೀನು ಎಂಥದೋ ರಹಸ್ಯವಾಗಿ ಕಾಡುವೆ.
ಎಲ್ಲರಿಗೂ ಸೇರಿದ ನೀನು ಇಂದು ನನ್ನದಾಗಿರುವೆ.
ನಿನ್ನ ಕಳೆದುಕೊಳ್ಳುವೆನೆಂಬ ಭಯದಿ ನನ್ನೆದೆಗೆ ಬಿಗಿದಪ್ಪಿರುವೆ.
ನನ್ನ ಸಣ್ಣ ತೋಳಿನಲಿ ಜಗದ ಈ ನಿಧಿಯನು ಹಿಡಿದಿಟ್ಟ ಆ ಮಾಯೆ ಯಾವುದು?
ಪ್ರತಿಕ್ರಿಯೆ (3)