
ಪುನರ್ವಸತಿ ಕಲ್ಪಿಸಲಾದ ಲೈಂಗಿಕ ಕಾರ್ಯಕರ್ತೆಯರು ಮೈಸೂರಿನಲ್ಲಿ ಆಶೋದಯಾ ಸಮಿತಿ ಹೆಸರಿನಲ್ಲಿ ‘ಸಮುದಾಯ ಅಡುಗೆಮನೆ’ ನಡೆಸುತ್ತ, ಸಮಾಜದ ವಿವಿಧ ಸ್ಥರದ ಜನರಿಗೆ ಯೋಗ್ಯದರದಲ್ಲಿ ಊಟ ಉಣಬಡಿಸುತ್ತಿರುವ ಸುದ್ದಿ ‘ವರ್ಲ್ಡ್ ಬ್ಯಾಂಕ್ ಇಂಡಿಯಾ ನ್ಯೂಸ್ ಲೆಟರ್’ ನ ಮುಖಪುಟದಲ್ಲಿ ಪ್ರಕಟಗೊಂಡಿದೆ.
"ಮೈಸೂರಿನ ವೈಭವಯುತ ಅರಮನೆಯ ಹಿಂಬದಿಯ ರಸ್ತೆಯ ಅಂತಿಮ ತಿರುವಿನಲ್ಲಿ ಅತ್ಯಂತ ಸರಳವಾಗಿ ಕರ್ನಾಟಕದ ಇತರೆ ಸಾಮಾನ್ಯ ಹೋಟೆಲ್ ಗಳಂತೆ ಕಾರ್ಯನಿರ್ವಹಿಸುತ್ತಿದೆ. ಆದರೆ ಇದು ಸಾಮಾನ್ಯವಾದ ಉಪಹಾರ ಗೃಹವಲ್ಲ. ಅತ್ಯಂತ ಧೈರ್ಯ-ಸ್ಥೈರ್ಯ ಹಾಗೂ ಅಸಾಮಾನ್ಯ ಪ್ರಯತ್ನದೊಂದಿಗೆ; ಸಮಾಜದಿಂದ ದೂರತಳ್ಳಲ್ಪಟ್ಟು, ನಿಕೃಷ್ಠವಾಗಿ ನಡೆಸಿಕೊಳ್ಳಲ್ಪಟ್ಟ ಹಾಗೂ ಕೀಳಾಗಿ ಗುರುತಿಸಲ್ಪಡುವ ವ್ಯಭಿಚಾರಕ್ಕೆ ನೂಕಲಾದ, ಮಹಿಳೆಯರು, ಉಭಯ ಲಿಂಗಿಗಳು, ಹಿಜಡಾಗಳು, ಪುರುಷರು ಹಾಗೂ ಅವರಲ್ಲಿ ಬಹುತೇಕರು ಎಚ್.ಆಯ್.ವಿ ಯೊಂದಿಗೆ ಬದುಕು ಸವೆಸುತ್ತಿರುವವರು ಈ ಐತಿಹಾಸಿಕ ನಗರಿಯಲ್ಲಿ ಹೋಟೆಲ್ ನಡೆಸುತ್ತಿರುವುದು ಶ್ಲಾಘನೀಯ" ಎಂದು ಸುದ್ದಿ ಪತ್ರ ಅಭಿಮಾನ ವ್ಯಕ್ತಪಡಿಸಿದೆ. 'Sex-workers run restaurant fights stigma and discrimination in Mysore' ಶೀರ್ಷಿಕೆಯ ಅಡಿಯಲ್ಲಿ ಈ ಲೇಖನ ಪ್ರಕಟವಾಗಿದೆ.
ಈ ರೀತಿಯ ಹೊಟೇಲ್ ಪ್ರಾರಂಭಿಸಿ, ಗೌರವಯುತವಾದ ಬದುಕು ನಡೆಸುವ ಇಂಗಿತ ವ್ಯಕ್ತ ಪಡಿಸಿ, ಯೋಜನೆ ಸಿದ್ಧಪಡಿಸಿ ಕಳುಹಿಸಿದ ಆಶೋದಯ ಸಮಿತಿಗೆ ಆಚ್ಚರಿ ಕಾಯ್ದಿತ್ತು! ನಿಜಕ್ಕೂ ಭಿನ್ನವಾಗಿ ಯೋಚಿಸಿ, Out of Sand Box ಯೋಜನೆ-ಯೋಚನೆ ಕಾರ್ಯಗತಗೊಳಿಸುವ ಪ್ರಾಮಾಣಿಕ ಮನಸ್ಸು ಗುರುತಿಸಿದ ವರ್ಲ್ಡ್ ಬ್ಯಾಂಕ್ ೧೬ ಲಕ್ಷ ರೂಪಾಯಿಗಳ ಸಹಾಯ ಧನ ಒದಗಿಸಲು ಮುಂದೆ ಬಂತು. ಈ ತರಹದ ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ, ಸಮಾಜದ ಮೇಲು-ಕೀಳು, ಲಿಂಗ ತಾರತಮ್ಯ, ಬದುಕಿನ ಹಕ್ಕನ್ನು ಪ್ರಶ್ನಿಸುವ ಕಟ್ಟಳೆಗಳ ವಿರುದ್ಧದ ಹೋರಾಟ ಅಥವಾ ತಾತ್ಸಾರದ ನೋಟವನ್ನು ಹೆಮ್ಮೆಯ ನೋಟವಾಗಿ ಬದಲಿಸುವ ಪ್ರಯೋಗಕ್ಕೆ ಆಧಾರವಾಗಲು ವರ್ಲ್ಡ್ ಬ್ಯಾಂಕ್ ಹೊಸ ಯೋಜನೆಯನ್ನೇ ಹೊಂದಿದೆ.
"ಕೇವಲ ಒಂದು ವರ್ಷದ ಕೆಳಗೆ ಆರಂಭವಾಗಿ, ಮೈಸೂರಿನ ಕೆಲವೇ ವರ್ಗದ ಜನರನ್ನು ಗ್ರಾಹಕರನ್ನಾಗಿ ಹೊಂದಿ, ಅನೇಕ ಏಳು-ಬೀಳುಗಳನ್ನು ಸಹಿಸಿದ ಹೊಟೇಲ್, ಸದ್ಯ ದಿನವೊಂದಕ್ಕೆ ರೂಪಾಯಿ ೩,೦೦೦/- ದಿಂದ ೪೦೦೦/- ರೂಪಾಯಿಗಳ ವರೆಗೆ ವ್ಯವಹಾರ ಕುದುರಿಸಿದೆ!" ಎಂದು ಹೆಮ್ಮೆಯಿಂದ ಹೇಳುತ್ತಾರೆ ಆಶೋದಯ ಸಮಿತಿಯ ಸಹ ಸದಸ್ಯೆ ಹಾಗೂ ದಿಶಾ ಯೋಜನಾಧಿಕಾರಿ ಫಾತಿಮಾ ಮೇರಿ.
ವರ್ಲ್ಡ್ ಬ್ಯಾಂಕ್ ಪ್ರಕಟಿಸಿದ ಜನೇವರಿ-ಫೆಬ್ರುವರಿ ೨೦೧೦ ರ ಸಂಚಿಕೆಯ ೪ ಪುಟದ ಲೇಖನದಲ್ಲಿ "ಲೈಂಗಿಕ ಕಾರ್ಯಕರ್ತ/ಕರ್ತೆಯರ ಸಮುದಾಯದಲ್ಲಿ ಈ ಪ್ರಯೋಗ ಒಂದು ಆಶಾದೀಪ" ಎಂದು ಅಭಿಪ್ರಾಯಪಟ್ಟಿದೆ. ಸದ್ಯ ಸಮಾಜದ ಎಲ್ಲ ವರ್ಗದ ಜನ ಈ ಉಪಹಾರ ಗೃಹಕ್ಕೆ ಭೇಟಿ ನೀಡುತ್ತಿದ್ದಾರೆ. ‘ಥಾಲಿ’ ಮಾದರಿಯಲ್ಲಿ ಮಧ್ಯಾಹ್ನದ ಸುಗ್ರಾಸ ಭೋಜನ ಹಾಗೂ ಖಡಕ್ ಕಾಫಿ ಈ ಪುನರ್ವಸಿತ ಲೈಂಗಿಕ ಕಾರ್ಯಕರ್ತೆಯರು ಸರಬರಾಜು ಮಾಡುತ್ತಿದ್ದಾರೆ. "ಬ್ಯಾಂಕ್ ಅಧಿಕಾರಿಗಳು, ಪ್ರವಾಸಿಗರು ಹಾಗೂ ಪೊಲೀಸರು -(ಒಂದು ಕಾಲದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ದು:ಸ್ವಪ್ನವಾಗಿ ಕಾಡಿದ್ದ, ವಯಕ್ತಿಕ ತೃಷೆಗೂ ಬಳಸಿದ್ದವರು) ಸಹ ಏಳಿಗೆ ಹೊಂದುತ್ತಿರುವ ಆಶೋದಯಾ ಸಮಿತಿ ಹೊಟೇಲ್ ಪರಮಾಪ್ತ ಗಿರಾಕಿಗಳಲ್ಲಿ ಒಬ್ಬರಾಗಿದ್ದಾರೆ ಎನ್ನುವುದು ಗಮನಾರ್ಹ" ಎಂದು ಲೇಖನ ಹೇಳುತ್ತದೆ.
ಶ್ರೀಮತಿ ಮೇರಿ ಈಗಾಗಲೇ ಯೋಜನೆ ಸಿದ್ಧಪಡಿಸಿದ್ದಾರೆ. ಸಮಿತಿ ನಿರ್ಧರಿಸಿದಂತೆ ಸದ್ಯದ ಹೊಟೇಲ್ ವ್ಯವಹಾರ ವಾಢಾಯಿಸಿ, ಕೇಟರಿಂಗ್ ವ್ಯವಸಾಯಕ್ಕೂ ಮುಂದಾಗಲು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದಾರೆ. ಶ್ರೀಮತಿ ಮೇರಿ ಹೇಳುತ್ತಾರೆ.."ಹೇಗಾದರೂ..ಈ ಹೊಟೇಲ್ ಈ ಭಾಗದ ಶೈಕ್ಷಣಿಕ ಸಂಸ್ಥೆಗಳಿಗೆ ಅತ್ಯಂತ ಹತ್ತಿರದಲ್ಲಿದೆ; ಜತೆಗೆ ಮಹಾನಗರ ಪಾಲಿಕೆಯ ಕಚೇರಿಗೂ ಕೂಡ ಕೂಗಳತೆಯ ದೂರದಲ್ಲಿದೆ, ಹಾಗಾಗಿ ನಾವು ಕೇಟರಿಂಗ್ ಸೇವೆ ಆರಂಭಿಸಲು ಮನಸ್ಸು ಮಾಡಿದ್ದೇವೆ".
ಈಗಾಗಲೇ ಸುತ್ತಲಿನ ಕೆಲ ಕಾಲೇಜು, ಶಾಲೆ ಹಾಗೂ ಮಹಾವಿದ್ಯಾಲಯಗಳು ಕಾಫಿ, ಉಪಹಾರ ಹಾಗೂ ಅಲ್ಪೋಪಹಾರಕ್ಕಾಗಿ ಈ ವಿಶೇಷ ಉಪಹಾರ ಗೃಹಕ್ಕೆ ನಿವೇದನೆ ಕಳುಹಿಸುತ್ತಿವೆ. ಹಾಗೆಯೇ, ಈ ಹೊಟೇಲಿನಲ್ಲಿ ಕೆಲಸ ಮಾಡುತ್ತಿರುವ ಬಾಣಸಿಗರಿಗೆ ಉತ್ತರ ಭಾರತದ ಬಹುಬೇಡಿಕೆಯ ಖಾದ್ಯಗಳನ್ನು ತಯಾರಿಸಲು ಸಹ ಯೋಗ್ಯ ತರಬೇತಿ ನೀಡಲಾಗಿದ್ದು, ತನ್ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ಯೋಜಿಸಲಾಗಿದೆ ಎನ್ನುತ್ತಾರೆ ಶ್ರೀಮತಿ ಮೇರಿ.
ಆಶೋದಯ ಹೊಟೇಲ್ ತನ್ನ ಲಾಭದ ಗಣನೀಯ ಭಾಗವನ್ನು ಎಚ್.ಐ.ವಿ ಅಥವಾ ಏಡ್ಸ್ ರೋಗದಿಂದ ಅತ್ಯಂತ ಗಂಭೀರವಾಗಿ ಬಳಲುತ್ತಿರುವ ರೋಗಿಗಳ ಆರೈಕೆಗಾಗಿ, ಮೈಸೂರು ನಗರದಲ್ಲಿ ಅಲ್ಲಲ್ಲಿ ರಸ್ತೆ ಬದಿಗೆ ಅನಾಥವಾಗಿ ಬಿದ್ದ, ವಾರಸುದಾರರಿಲ್ಲದ ಶವಗಳಿಗೆ ಮುಕ್ತಿ ಕರುಣಿಸಲು ಬಳಸುತ್ತದೆ. ಇತ್ತೀಚೆಗೆ ಉತ್ತರ ಕರ್ನಾಟಕದ ಹಸಿ ಬರದಿಂದ ತತ್ತರಿಸಿ ಹೋದ ಅನ್ನದಾತನ ಸೂರು-ಅನ್ನಕ್ಕಾಗಿ ಆಶೋದಯ ಕಾರ್ಯಕರ್ತೆಯರು ೫೦,೦೦೦/- ರೂಪಾಯಿಗಳನ್ನು ಮುಖ್ಯಮಂತ್ರಿಗಳ ಬರಪರಿಹಾರ ನಿಧಿಗೆ ನೀಡಿ, ಮಾನವೀಯತೆ ಮೆರೆದಿದ್ದಾರೆ; ಅಂತ:ಕರಣ ಮಿಡಿದಿದ್ದಾರೆ. ಯಾವ ಸಮಾಜ ಅವರನ್ನು ತಿರಸ್ಕಾರದಿಂದ ನೋಡಿತೋ, ಯಾವ ಸಮಾಜದ ಜನ ಅವರನ್ನು ತನ್ನ ತೃಷೆಗಾಗಿ ಈ ಪಾಪ ಕೂಪಕ್ಕೆ ತಳ್ಳಿತೋ, ಆ ಸಮಾಜದ ಪ್ರತಿ ಈ ಪರಿಯ ಕಾಳಜಿ, ಸಾಮಾಜಿಕ ಬದ್ಧತೆ! ಆ ಮಾತೆಯರ ಕ್ಷಮಾ ಗುಣ ಬಹುಶ: ಭಗವಂತನಲ್ಲಿ ಕಾಣಬಹುದೇನೋ?
ದಿಶಾ ಕಾರ್ಯಕರ್ತೆಯರು ನಡೆಸುವ ಆಶೋದಯ ಹೊಟೇಲ್ ಬಹು ಮುಖ್ಯವಾದ ಧ್ಯೇಯ ಹೊಂದಿದೆ. ಯಾವುದೇ ಮಹಿಳೆಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ದೇಹ ಮಾರಾಟಕ್ಕೆ ಅರ್ಥಾತ್ ವ್ಯಭಿಚಾರಕ್ಕೆ ನೂಕುವುದನ್ನು ಹಾಗೂ ಮಕ್ಕಳ ಮಾರಾಟ ಮತ್ತು ಸಾಗಣೆಯ ವಿರುದ್ಧ ಬಲವಾಗಿ ದನಿ ಎತ್ತುತ್ತದೆ. ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವಲ್ಲಿ ಅವರ ಶ್ರಮ ಅಪ್ರತಿಮವಾದದ್ದು. ದಸರಾ ಸೇರಿದಂತೆ ಮೈಸೂರಿನ ಅನೇಕ ಹಬ್ಬಗಳಲ್ಲಿ ತಪ್ಪಿಸಿಕೊಳ್ಳುವ, ಪಾಲಕರಿಂದ ಬೇರ್ಪಡುವ ಅಥವಾ ಮನೆಯಿಂದ ಓಡಿಬರುವ ಮಕ್ಕಳನ್ನು ಗುರುತಿಸಿ, ಉಪಚರಿಸಿ ಮನವೊಲಿಸಿ ಅವರ ಪಾಲಕರಿಗೆ ಸುದ್ದಿ ತಿಳಿಸಿ, ಸಮೀಪದ ಪೊಲೀಸ್ ಠಾಣೆಗೂ ವಿವರ ತಿಳಿಸಿ ಮರಳಿ ಗೂಡು ಸೇರಲು ದಿಶಾ ಕಾರ್ಯಕರ್ತೆಯರು ಕಾರಣೀಭೂತರಾಗಿದ್ದಾರೆ.
ಇಂತಹ ಎಲೆ ಮರೆಯ, ನಮ್ಮ ಲೋಕ ಸಂಸಾರದ ನಿಜ ದೀಪಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಧ್ಯಮ ಮಾಡಬೇಕು; ಮಾಧ್ಯಮದಲ್ಲಿರುವವರು ಮಾಡಬೇಕು..ಹರತಾಳು ಹಾಲಪ್ಪ, ರೇಣುಕಾಚಾರ್ಯ...ಈ ನೈತಿಕವಾಗಿ ಅಧ:ಪತನ ಹೊಂದಿದ ಕಳ್ಳರಿಗಿಂತ ಸ್ವ ಪ್ರಯತ್ನ ಹಾಗೂ ಸ್ವಾಭಿಮಾನದಿಂದ ಬದುಕುಕಟ್ಟಿಕೊಂಡಿರುವ, ಬದುಕಿಗೆ ‘ದಿಶೆ’, ಸಮಾಜಕ್ಕೆ ‘ಆಶೋದಯ’ ವಾಗಿರುವ ಈ ಅಮ್ಮಂದಿರು ಸಮಾಜದ ಹೊಲಸು ತೊಳೆಯುವ, ಕಳೆ ತೆಗೆಯುವ ಕೃಷಿ ಮಾಡುತ್ತಿದ್ದಾರೆ.
ಬಟ್ಟಲು ದೊಡ್ಡದಾಗುತ್ತಿದೆ, ಆದರೆ ತುತ್ತು ಸಣ್ಣದಾಗುತ್ತಿದೆ..ಈ ಅಮ್ಮಂದಿರ ಮನಸ್ಸು ಮಾತ್ರ ನಿಷ್ಕಲ್ಮಷವಾಗಿದೆ..
Hats off and Congratulations to DISHA.
ಪ್ರತಿಕ್ರಿಯೆ (3)