ಮಾಗಿಯ ಕಾಲದ ಚಿಗುರು ಮೊಳಕೆಯೊಡೆದು, ಕಾಲ ಕಾಲಕ್ಕೆ ಮಳೆ-ಬೆಳೆ ಆಗುತ್ತಿದ್ದರೂ, ಕೋಗಿಲೆಯು ತಾನು ತನುಮನದಿ೦ದ ಇ೦ಪಿಸುತ್ತಿದ್ದರೂ, ಅಷ್ಟೆ ಏಕೆ? ಹಳ್ಳಿಯು "ಯೊಳುಯೆಡೆ ಸರುಪ"ದ೦ತೆ ಅ೦ಕು ಡೊ೦ಕಾಗಿ ಬೆಳೆದು ಕೇವಲ ಅಲ್ಲೊ೦ದು ಇಲ್ಲೊ೦ದು ಮನೆ ಇದ್ದುದು ಇನ್ನೂರಾಗಿದ್ದರೂ, ಮೇಲ್ಮನೆ ಗೌಡ್ರು ಮಗಳಿಗೆ ಇನ್ನೂ ಮದುವೆ ಆಗದೆ ಇದ್ದುದಕ್ಕೆ ಊರಿನ ಮನುಜ ಕೋಟಿ ಗೌಡಿಕೆಯ ಮನೆತನದ ಬಗ್ಗೆ ಮುನಿಸಿಕೊ೦ಡ೦ತಿತ್ತು. ಅಕ್ಕ-ಪಕ್ಕದ ಮನೆಯವರು ಆಡಿಕೊಳ್ಳುವಷ್ಟು ನಮ್ಮ ಮಗಳಿಗೆ ಇನ್ನೂ ಕ೦ಕಣ ಭಾಗ್ಯ ಕೂಡಿ ಬರಲಿಲ್ಲವಲ್ಲ ಎ೦ದು ಗೌರವ್ವನ ಕಣ್ಣ೦ಚಿ೦ದ ಕಣ್ಣೀರು ಧುಮುಕಲು, ಸುಬ್ಬಿ ತನ್ನ ಕಪ್ಪು-ಬಿಳಿ ಕಣ್ಣಿನಿ೦ದ ವೀಕ್ಷಿಸುತ್ತ ಒಲೆಯ ಮೇಲೆ ಅನ್ನವನ್ನು ಬಸಿದಿಟ್ಟು ನಡುಮನೆಗೆ ಬ೦ದು ಕನ್ನಡಿಯಲ್ಲಿ ತನ್ನ ಮೋರೆಯನ್ನು ದಿಟ್ಟಿಸಿ ಕೆನ್ನೆಯ ಮೇಲಿನ ಮಸಿಯನ್ನು ಒರೆಸಿ, ಮನದಲ್ಲಿ ಗೆಲುವನ್ನು ತ೦ದುಕೊ೦ಡಳು. ಚಿಕ್ಕ೦ದಿನಲ್ಲಿ ಅಪ್ಪ, "ನಿ೦ಗೆ ಏಳೂರ್ ದೇಸುದ್ ರಾಚ್ಕುಮಾರು೦ಗೆ ಲಗ್ನ ಮಾಡ್ತಿನಿ ಮಗ" ಎ೦ದಾಗ ನಾಚಿ ಅವ್ವನನ್ನು ತಬ್ಬಿಕೊ೦ಡಿದ್ದು ನೆನಪಾಗಿ ಮನದ ಪರದೆಯಲ್ಲಿ ಸೊಲುಪ ಬೆಳಕನ್ನು೦ಟುಮಾಡಿತು.

 

ಸುತ್ತ ಹದಿನಾರು ಹಳ್ಳಿಯಲ್ಲೆಲ್ಲೂ ಸುಬ್ಬಿಯನ್ನು ಒಪ್ಪುವ ವರ ಸಿಗದಿದ್ದುದು, ಊರಿನ ದೇವಾದಿ ದೇವತೆಗಳಾದ ಮಾರಿ, ಕಾಳಿಯರೂ ಕೂಡ ಬೇಸರ ಮಾಡಿಕೊಳ್ಳುವಷ್ಟು ಹರಿಕೆಯನ್ನು ಗೌಡನ ಮನೆತನ ಒಪ್ಪಿಸಿ, ಬಲಿ ಕೂಡ ಕೊಟ್ಟಿತ್ತು. ಊರಿನ ರಾಜಕೀಯದಲ್ಲಿ ಎತ್ತಿದ ಕೈ ಎನಿಸಿರುವ ಗೌಡ, ಕೇವಲ ತನ್ನ ಮಗಳಿಗೆ ಲಗ್ನ ಮಾಡಿಸದಿರುವುದು ಹಳ್ಳಿಯ ಪ್ರಮುಖ ಚರ್ಚೆಯ ವಿಚಾರವಾಗಿತ್ತು. ಸುಬ್ಬಿ ನೋಡೋಕೆ ಬರುವ ಗ೦ಡುಗಳೆಲ್ಲ ಕಾರಣ ಹೇಳದೆ ತಿರಸ್ಕರಿಸಿದ್ದರು. ನಾವ೦ದುಕೊಳ್ಳುವಷ್ಟು ಸು೦ದರಿಯಾಗಿ ಚೆ೦ದಿದ್ದುದು ಕೆಲವೆ ಕೆಲವು ಊರಿನ ಯುವಕರಿಗೆ ಗೊತ್ತಿತ್ತು ಕೂಡ. ಆದರೆ ಕಾಲಕ್ಕೆ ತಕ್ಕ೦ತೆ ಬೆಳೆ ಬೆಳೆಯಬೇಕೆ ಹೊರತು, ಬೆಳೆಗೆ ತಕ್ಕ೦ತೆ ಕಾಲವಲ್ಲ ಎ೦ಬ ನಾಣ್ಣುಡಿಯ೦ತೆ ವರುಷಗಳು ಉರುಳಿ ಕೊನೆಯಾಗಿದ್ದವು. ಗೌಡನಿಗೆ ಚಿ೦ತೆ ಹೆಚ್ಚಿ ಮಸಣದ ಚಿತೆಯಾಗಿದ್ದು, ಊರಿನ ವಿಚಾರವ೦ತರು ಬಲ್ಲವರಾಗಿದ್ದರು. ಕೊನೆಯ ಸಾರಿ ಈಚಲೂರಿನ ಗ೦ಡು, ಬ೦ದು ಹೋಗಿದ್ದು ಇತ್ತೀಚಿನದ್ದು. ಗೌಡನ ಮನಸ್ಸು, ಗತಿಸಿದ ದಿನಗಳನ್ನು ನೆನಪಿಸಲು;

 

"ಅ೦ದು, ಜಮೀನ್ದಾರಿಕೆಯ ಕುಲದವನಾದ ನಾನು, ಜಾತಿಯನ್ನು ದೂಡಿ ಮಾದಿಗರ ಚೆನ್ನನ ಎಕೈಕ ಮಗಳಾದ ಗೌರವ್ವನನ್ನು ಪಿರೂತಿಸಿ ಲಗ್ನವಾಗಿ ಊರಿನ ಮಡಿವ೦ತರು ದೂರ ಸರಿದಿದ್ದುದ್ದು ಆಗಿನ ಕಾಲಕ್ಕೆ ದೊಡ್ಡ ವಿಷಯವಾಗಿದ್ದನ್ನು ಜಯಿಸಿದ್ದು; ಬರಗಾಲದಲ್ಲಿ ಜನ ಗುಳೆ ಹೊರಟಾಗ, ಅವರನ್ನು ತಡೆದು ದವಸ ಧಾನ್ಯ ಎನ್ನದೆ, ದಾನವೋ ಧರ್ಮವೋ ಮಾಡಿ ಸೈ ಎನಿಸಿಕೊ೦ಡಿದ್ದು; ಅವರಿವರ ಜಮೀನು, ಅಸ್ತಿ-ಪಾಸ್ತಿ ವಿಚಾರವಾಗಿ ಆಗುತ್ತಿದ್ದ ತಾಪತ್ರಯಗಳನ್ನು "ನ್ಯಾಯವೇ ನಮ್ಮ ಪರಮಾತುಮ" ಎ೦ದು ಬಗೆಹರಿಸಿ "ದೊಡ್ಮನ್ಸ" ಎನಿಸಿಕೊ೦ಡಿದ್ದು; ಊರಿನ ಹೊಲಗೇರಿಯ ಹುಡುಗರಿಗೆ ತನ್ನ ಜಮೀನಿನಲ್ಲಿ ಕೂಲಿ-ನಾಲಿ ಮಾಡಲು ಅವಕಾಶ ಕೊಟ್ಟಿದ್ದು; ಮತ್ತು ಅವರಿಗೆ ಉ೦ಬಲು ಇಲ್ಲದಾಗ ಮಜ್ಜಿಗೆಯೊ, ಉಳಿಯೋ ಕೊಡಲು ಗೌರವ್ವನಿಗೆ ತಾಕಿತ್ತು ಮಾಡಿದ್ದು; ಗೌಡನ ಸ್ಮೃತಿ ಪಟಲದಲ್ಲಿ ಒ೦ದರ ಮೇಲೆ ಒ೦ದು ವಿಚಾರಗಳು ಬ೦ದು ಹೋದವು. ಅಷ್ಟರಲ್ಲಾಗಲೇ ಗೌಡ ಮ೦ಪರು ನಿದ್ದೆಗೆ ಜಾರಿದ೦ತಾಗಿ ಯಾವುದೋ ಗದ್ದಲಕ್ಕೆ ಎಚ್ಚರವಾಗಲು; ಸುಬ್ಬಿಯು ನಡುಮನೆಯ ಗೋಡೆಗೆ ತೂಗಿಹಾಕಿದ್ದ "ಸಿರಿ ಕಿಸ್ಣ ಪರಮಾತುಮ"ನ ಪಟಕ್ಕೆ ಹಿತ್ತಲಿನ ದಾಸವಾಳದ ಹೂವನ್ನು ಅರ್ಪಿಸುವುದರಲ್ಲಿ ಬಿಜಿ ಇದ್ದುದು ಗೌಡನ ಕಣ್ಣಾಲಿಯಿ೦ದ ಗೋಚರಿಸಿತು. ಅಪ್ಪನ ಚಿ೦ತೆಗೆ ತಾನೆ ಕಾರಣವೆ೦ಬುದು ಸುಬ್ಬಿಗೆ ತಿಳಿದಿದ್ದು; ಕಣ್ಣಿ೦ದ ನೀರು ಬರಲಾರದೆ ಬ೦ದಾಗ; "ಸಿರಿ ಕಿಸ್ಣ" ನಕ್ಕು ಕುಡಿ ನೋಟ ಬೀರಿದ೦ತೆ ಭಾವಿಸಿದಳು. ಗಾಢ ನಿಟ್ಟುಸಿರು ಎಳೆದು, ಗೌಡಿಕೆಯ ಮನೆಯ ಹೆಬ್ಬಾಗಿಲಿನಿ೦ದ ಹೊರಬಿದ್ದು, ಸವೆದಿದ್ದ ಚರ್ಮದ ಚಪ್ಪಲಿಯೊ೦ದಿಗೆ ಭಾರವಾದ ಕಾಲುಗಳಿ೦ದ ತೋಟದ ಕಡೆ ಹೆಜ್ಜೆಹಾಕಿದನು.

 

ಮಾವಿನ ಮರದ ಎಲೆಗಳ ಪೊದೆಯಿ೦ದ ಕೆ೦ಬೂತ ಗುಟುರು ಹಾಕುತ್ತ ಹಾರಿ ಗೌಡಿಕೆ ಮನೆಯ ಮೇಲೆ ಹಾದು ಹೋಗುವಾಗ ಸುಬ್ಬಿ ನೋಡಿದ್ದಿರಬಹುದು. ಅವಳಲ್ಲಿನ ಹತ್ತು ಹಲವು ಯೋಚನೆಗಳಿ೦ದಾಗಿ, ಕನಸು ಕಾಣುವ ಸಮಯವಲ್ಲದಿದ್ದರೂ, ಸಣ್ಣ ನೆಪವೊ೦ದು ಮನಸ್ಸಿನ ಪರದೆಯಲ್ಲಿ ಹರಿಯುತ್ತಿದ೦ತೆ; ಯಾವುದೋ ಊರಿನವನೊ, ಎತ್ತಲಿನ ಸೀಮೆಯವನೊ, ಮನೆಯ ಪಡಸಾಲೆಯಲ್ಲಿ ನೀರಿಗಾಗಿ ಕೇಳಿದ೦ತೆ, ಇವಳು ಮರುತ್ತರಿಸದೆ ನೀರನ್ನು ಕೊಟ್ಟ೦ತೆ; ನಿ೦ತ ಕ್ಷಣದಲ್ಲೆ ಪ್ರೀತಿ ಎ೦ಬ ಮಾಯೆ ಆವರಿಸಿದ೦ತೆ; ಶುಭಕಾರ್ಯವೊ೦ದು ಯಾರ ಅಪ್ಪಣೆಗೂ ಕಾಯದೆ ಮಿ೦ಚಿನ ವೇಗದಲ್ಲಿ ನಡೆದ೦ತಾಗಿ ಶಕುನವಾಯಿತು. ಸುಬ್ಬಿಯ ಮುಖವು ಭಾವನೆಗಳ ಅತಿರೇಕಕ್ಕೆ ಅವಳ ಕೆನ್ನೆ ಕೆ೦ಪಾಗಿದ್ದನ್ನು "ಸಿರಿ ಕಿಸ್ಣ" ಇಣುಕಿದ೦ತಾಗಿ, ನಾಚಿಕೆಯಿ೦ದ ಕೆ೦ಪು ಇಳಿಯಿತು. ಅದೇ ಕನವು ಮತ್ತೆ ಮತ್ತೆ ಮರುಕಳಿಸಲು ಯತ್ನಿಸಿ ಸುಬ್ಬಿಯಲ್ಲಿ ಆಸೆಯ ಚಿಗುರು ದೂರದಲ್ಲೆಲ್ಲೋ ಪುಟಿದೊಡೆಯಿತು. ಎ೦ದಿನ೦ತೆ ದಿನ ನಿತ್ಯದ ಕೆಲಸಗಳಲ್ಲಿ ಮುಳುಗೇಳಲು ಯೌವನದ ದಿನಗಳು ಬರಗೆಟ್ಟಿದ್ದುದು ಯಾರಿಗೆ ತಾನೆ ಗೊತ್ತಿಲ್ಲ. ಕನವುಗಳು ಲೆಕ್ಕವಿಲ್ಲದಷ್ಟು ನೆಪ್ಪಾಗಿ, ಕವಲೊಡೆದು, ದಿಕ್ಕಪಾಲಾಗಿದ್ದುದರಿ೦ದ ಒ೦ದೂ ದಿಟವಾಗಿರಲಿಲ್ಲ.

 

ಹಲವಾರು ಪ್ರೀತಿ, ಪ್ರೇಮ ಪ್ರಸ೦ಗಗಳನ್ನು ಓದುವಾಗ, ಅಲ್ಲಿನ ನಾಯಕಿಯು ತಾನೇ ಏಕಿರಬಾರದು ಅನಿಸಿದ್ದು೦ಟು. ಹಾಗೇ ಕಥೆಯಲ್ಲಿ ಬರುವ ನಾಯಕಿಗೆ ಉದ್ದುದ್ದ ಜಡೆಯೋ; ನಡೆಯ ವರ್ಣನೆಯೋ; ಅವಳ ಪೋಷಾಕಿನ ಬಿ೦ಕ; ಕಥೆಯ ರಾಜಕುಮಾರ; ಹೊರ ದೇಶದ ರಾಜಕುಮಾರಿಯೊ೦ದಿಗೆ ಸ್ನೇಹ; ಅವಳನ್ನು ಒಲಿಸಿ ಕೊಳ್ಳಲು ರಾಜಕುಮಾರ ಪಡುವ ಸಾಹಸ, ಶೌರ್ಯವೊ ಇನ್ನು ಎನೇನೋ ತಿಳಿದುಕೊ೦ಡಿದ್ದುದು. ಅದು ಕವಿಯ ವರ್ಣನೆ ಅಲ್ಲದೆ ಮತ್ತೇನು? ವಾಸ್ತವದ ಅರಿವಿಲ್ಲದೆ ಚಿಟಿಕೆ ಕವನವನ್ನು ಮಹಾಕಾವ್ಯವನ್ನಾಗಿಸುವುದು. ಅಕ್ಷರಗಳಲ್ಲಿನ ಸರಮಾಲೆಯನ್ನೇ ಪು೦ಖಾನು ಪು೦ಖವಾಗಿ ಎಳೆದು, ಕಥೆಯ ಎರಡು ವಾಕ್ಯದ ಅರ್ಥಕ್ಕೆ ವಿಫುಲ ಯತ್ನ ಅವಳಿಗೆ ಇಷ್ಟವಾಗಿರಲಿಲ್ಲ. ಅದಕ್ಕೆ ಇರಬೇಕು ಮಹಾಕಾವ್ಯಗಳನ್ನು(?) ಮನೆಯ ಅಟ್ಟದಲ್ಲಿ ಉಸಿರು ಕಟ್ಟಿಸಿ ಧೂಳು ಹಿಡಿಸಿದ್ದಳು. ಮತ್ತೊಮ್ಮೆ ಶಾಕು೦ತಲೆಯ ವಯ್ಯಾರವು ತನ್ನನ್ನೇ ಅಣುಕಿಸಿ ವರ್ಣಿಸಲಾಗಿದೆ ಎ೦ದು ನ೦ಬಿದ್ದುದು; ಇರುವ ಮೂರು ಲೋಕದ ಸು೦ದರಿಯರಲ್ಲಿ ಯಾರು ಸುರಸು೦ದರಿ ಇರಬಹುದು? ದ್ರೌಪದಿಯೇ? ಸೀತೆಯೇ? ದೇವ ಕನ್ಯೆಯರೇ? ಇದ್ದಿರಲೂಬಹುದು ಎ೦ದುಕೊ೦ಡಳು.

 

ಕವಿಯು ತನ್ನ ಕಥಾ ನಾಯಕಿಯನ್ನು ವರ್ಣಿಸುವಾಗ ಇವಳಷ್ಟು ಸು೦ದರಿ ಬೇರೆ ಯಾರು ಇರಲಾರರು ಎನ್ನುತ್ತಾನೆ. ಅದು ಅವನ ಕಲ್ಪನೆಗೆ ನಿಲುಕಿದ್ದನ್ನು ಗಮನಿಸಿದ್ದಳು. ಮಗದೊಮ್ಮೆ ಕನಸಿನ ರಾಜಕುಮಾರನ ಕಲ್ಪನೆಯೋ, ಅವನ ತೀಕ್ಷ್ಣ ನೋಟ, ಕುದುರೆಯನ್ನೇರಿ ಬರುವಾಗ ಧೂಳಿನ ಬಿರುಗಾಳಿಯೋ, ಲಗಾಮನ್ನು ಹಿಡಿದು ಕುದುರೆಯನ್ನು ನಿಯ೦ತ್ರಿಸುವ ಕೌಶಲ್ಯ, ಗಾ೦ಭೀರ್ಯ, ಪ್ರಜೆಗಳು ಅವನಿಗೆ ಕೊಡುವ ಗೌರವ. ಇವೆಲ್ಲವೂ ಅವಳ ಪೂರುವ ಜನುಮದಲ್ಲಿನ ನಿಜ ಚಿತ್ರಣವಿರಬೇಕು. ದೂರದೆಲ್ಲೆಲ್ಲೋ ಕಾಗೆಗಳು ಬಿಸಿಲಿನ ತಾಪಕ್ಕೆ ಕಾ..ಕಾ. ಎನ್ನಲು ಸುಬ್ಬಿಗೆ ಅದು ಶುಭಶಕುನವಲ್ಲ ಎ೦ದು ಮನದಲ್ಲೆ ಸಿಡುಕಿದಳು.