ಇದು ಮೂರ್ನಾಲ್ಕು ದಿನಗಳ ಹಿಂದೆಯೇ ಬರೆಯಬೇಕಿತ್ತು. ಸ್ವಲ್ಪ ತಡವಾಯ್ತು. ಹಾಗಾಗಿ ಬರೆಯಬೇಕೋ ಬೇಡವೋ ಎನ್ನುವ ದ್ವಂದ್ವದಲ್ಲಿದ್ದ ನಾನು ಕೊನೆಗೆ ಬರೆದೇ ಬಿಡೋಣ ಅಂತ ಡಿಸೈಡ್ ಮಾಡಿದೆ. ಹಾಗಾಗಿ, ಈ ಬಹಿರಂಗ ಪತ್ರವನ್ನು ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆಯವರಿಗೆ ಅವರ ಮರು ಆಗಮನಕ್ಕೆ ನನ್ನ ಹಾರೈಕೆಗಳನ್ನು ಸಲ್ಲಿಸುತ್ತಾ ಬರೆಯುತ್ತಿದ್ದೇನೆ.
ಅಂದು ನಾನು ಕಮರ್ಷಿಯಲ್ ಸ್ಟ್ರೀಟ್್ನ ಶೋರೂಂ ಒಂದರಲ್ಲಿ ಶರ್ಟು ಖರೀದಿಯಲ್ಲಿ ತೊಡಗಿದ್ದೆ. ಅದೇ ಸಂದರ್ಭದಲ್ಲಿ ನನ್ನ ಮೊಬೈಲಿಗೆ ಮೆಸೇಜ್ ಒಂದು ಬಂತು. ಅದು ನನ್ನ ಸಹೋದ್ಯೋಗಿ ರಶ್ಮಿ ಕಳಿಸಿದ್ದು. ಅದರಲ್ಲಿದ್ದುದ್ದು ಇಷ್ಟೇ..' ಕರ್ನಾಟಕ ಲೋಕಾಯುಕ್ತ ರಾಜೀನಾಮೆ ವಾಪಾಸ್ಸು ಪಡೆದಿದ್ದಾರೆ'. ಮೆಸೇಜ್ ಓದಿದ ನನ್ನ ಮೂಡ್ ಚೇಂಜ್ ಆಗಿಬಿಟ್ಟಿತು. ಮನಸ್ಸಿನಲ್ಲಿ ಏನೋ ಸಂತೋಷ. ತಕ್ಷಣ ನನ್ನ ಜೊತೆಯಲ್ಲಿದ್ದ ನನ್ನ ಗೆಳೆಯ ಪ್ರಭುಗೆ, 'ಹೇ..ಸಂತೋಷ್ ಹೆಗ್ಡೆ ರಾಜೀನಾಮೆ ವಾಪಾಸು ತೆಗೊಂಡ್ರಂತೆ..' ಎಂದು ಹೇಳಿದೆ.
ಹೀಗಂದಿದ್ದೇ ತಡ, ಆ ಷೋ ರೂಂನ ಸಿಬ್ಬಂದಿಯೆಲ್ಲಾ ನನ್ನತ್ತ ತಿರುಗಿ ನೋಡಿದರು. ಅವರಲ್ಲೊಬ್ಬ 'ಯಾರು ಸಾರ್ ? ಲೋಕಾಯುಕ್ತ ಸಂತೋಷ್ ಹೆಗ್ಡೆಯವರಾ ?' ಎಂದು ಕೇಳಿದ. ನಾನು 'ಹೌದು' ಎಂದೆ. ನನ್ನ ಮಾತನ್ನು ಕೇಳಿದ ಅಲ್ಲಿದ್ದವರ ಮೊಗದಲ್ಲಿ ಏನೋ ಆಸಕ್ತಿ, ಕೆಲವರ ಮೊಗದಲ್ಲಿ ಮಂದಹಾಸ. ಕೆಲವರು ಇದೇ ವಿಷಯವಾಗಿ ತಮ್ಮ ತಮ್ಮಲ್ಲೇ ಚರ್ಚೆ ಆರಂಭಿಸಿಯೇ ಬಿಟ್ಟರು.
ಹೌದು. ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ ದಿನದಿಂದ ಅವರೆಷ್ಟು ಸುದ್ದಿಯಲ್ಲಿದ್ದರು ಎಂದರೆ, ಯಾವುದೇ ರಾಜಕಾರಣಿಗಳು ಅಥವಾ ಸಿನಿಮಾ ನಟ ಬಯಸುವ ಪಾಪ್ಯುಲಾರಿಟಿ ಹಾಗೂ ರೆಕಾಗ್ನಿಷನ್ ಅವರಿಗೆ ಆ ಒಂದು ವಾರದಲ್ಲಿ ಸಿಕ್ಕಿತ್ತು..ಅದೂ ರಾಷ್ಟ್ರಮಟ್ಟದಲ್ಲಿ! ಒಬ್ಬ ಲೋಕಾಯುಕ್ತ ರಾಜೀನಾಮೆ ನೀಡಿದರೆ, ಇಷ್ಟೆಲ್ಲಾ ಕೋಲಾಹಲವಾಗುತ್ತಾ ಅಂತ ನೆರೆರಾಜ್ಯಗಳೂ ಸೇರಿದಂತೆ, ಇಡೀ ದೇಶವೇ ಕರ್ನಾಟಕದತ್ತ ಕಣ್ಣು ಹಾಯಿಸುವಂತಾಯಿತು. ನಮ್ಮ ಕನ್ನಡ ಮಾಧ್ಯಮಗಳು, ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅಥವಾ ಹೀಗಾಗಬಾರದಿತ್ತು ಎನ್ನುವ ರೀತಿಯಲ್ಲಿ ಬರೆದಿದ್ದರು. ಜನರೂ ಸಹಾ ಅವರು ರಾಜೀನಾಮೆ ವಾಪಾಸು ತೆಗೆದುಕೊಳ್ಳುವಂತಾಗಲಿ ಅಂತ ಹಾರೈಸುತ್ತಿದ್ದರು. 'ಅವರನ್ನು ಬಿಟ್ಟರೆ ಆ ಸ್ಥಾನವನ್ನು ಸಮರ್ಥವಾಗಿ ತುಂಬುವಂಥವರು ಯಾರು ?' ಎಂಬ ಬೃಹತ್ ಪ್ರಶ್ನೆ ಜನರಲ್ಲಿ. ಹೆಗ್ಡೆಯವರ ರಾಜೀನಾಮೆ, ವಿರೋಧಪಕ್ಷಗಳ ಕೂಗಾಟ, ಕರ್ನಾಟಕ ಸರ್ಕಾರದ ಮೌನ... ಈ ಎಲ್ಲದರ ಬಿಸಿ ಕೇಂದ್ರ ಸರ್ಕಾರಕ್ಕೂ ತಟ್ಟಿತ್ತು. ಸ್ವತಃ ಗೃಹ ಮಂತ್ರಿ ಪಿ. ಚಿದಂಬರಂ, ಸಂತೋಷ್ ಹೆಗ್ಡೆಯವರಿಗೆ ಫೊನಾಯಿಸಿ, 'ಕರ್ನಾಟಕದ ಜನರ ಹಿತಾಸಕ್ತಿ'ಯನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ವಾಪಾಸುಪಡೆಯುವಂತೆ ಕೇಳಿಕೊಂಡಿದ್ದರು. ಆದರೆ, ಚಿದಂಬರಂ, 'ನಾನು ಈ ಕುರಿತು ಯೋಚಿಸುತ್ತೇನೆ' ಎಂದಿದ್ದ ಹೆಗ್ಡೆ, ಸಂಜೆಯ ವೇಳೆಗೆ ತಾವು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಜನರಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದರು. ಕರ್ನಾಟಕದ ಜನತೆಯ ಕಾಳಜಿ ಅವರ ಮೇಲೆ ಯಾವ ಪರಿ ಇತ್ತು ಎಂಬುದಕ್ಕೆ ವಿವಿಧ ಊರುಗಳಲ್ಲಿ ಜನರು ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡಿದ್ದನ್ನು ಮಾಧ್ಯಮಗಳಲ್ಲಿ ಗಮನಿಸಿದ ಎಲ್ಲರಿಗೂ ತಿಳಿಯುತ್ತದೆ.
ಹಾಗಾಗಿ, ಸಂತೋಷ್ ಹೆಗ್ಡೆ, ಅದೊಂದು ದಿನ ಹಠಾತ್ತಾಗಿ ತಮ್ಮ ರಾಜೀನಾಮೆಯನ್ನು ವಾಪಾಸು ತೆಗೆದುಕೊಂಡರು ಎಂದರೆ, ಅದು ಕರ್ನಾಟಕದ ಜನತೆಗೆ ಒಂಥರಾ 'ಸರ್್ಪ್ರೈಸ್ ಗಿಫ್ಟ್್' ನೀಡಿದಂತಾಗಿತ್ತು. ನನಗೂ ಅದು ವೈಯುಕ್ತಿಕವಾಗಿ ಒಂದು 'ಸಂತೋಷ'ದ ಸಮಯ. ಆದರೆ.... ರಾಜೀನಾಮೆ ವಾಪಾಸುಪಡೆಯಲು ಸಂತೋಷ್ ಹೆಗ್ಡೆಯವರಿಗೆ ಪ್ರೇರಣೆ ಯಾವುದು? ಎಂದು ತಿಳಿದಾಗ ಮಾತ್ರ ಎಷ್ಟು ಸಂತಸಗೊಂಡಿದ್ದೆನೋ..ಅದರ ದುಪ್ಪಟ್ಟು ನಿರಾಸೆಯಾಯಿತು. ಏಕೆಂದರೆ, ಯಾವ ರಾಜಕೀಯ ಪಕ್ಷ ಹಾಗೂ ವ್ಯಕ್ತಿಗಳ ಕಿರುಕುಳದಿಂದ ಬೇಸರಪಟ್ಟು, ರಾಜೀನಾಮೆ ನೀಡಿದ್ದರೊ...ಅದೇ ರಾಜಕೀಯ ಪಕ್ಷದ ನಾಯಕ ಹಾಗೂ ವ್ಯಕ್ತಿಗಳ ಮಾತಿಗೆ ಓಗೊಟ್ಟು ಹೆಗ್ಡೆ ರಾಜೀನಾಮೆ ಹಿಂತೆಗೆದುಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಮರುದಿನ ಮುದ್ರಣ ಮಾಧ್ಯಮಗಳಲ್ಲಿ ಬಂದ ಅವರ ಹೇಳಿಕೆಗಳು ಕರ್ನಾಟಕದ ಜನತೆಯ ಪ್ರೀತಿಗೆ ಅಪಮಾನ ಮಾಡುವ ಹಾಗಿದ್ದವು. ಇವರು ರಾಜೀನಾಮೆ ಹಿಂಪಡೆದಿದ್ದನ್ನು ತಿಳಿದು ಎಷ್ಟು ಸಂತಸವಾಗಿತ್ತೊ, ಅದೆಲ್ಲಾ ಠುಸ್ಸೆಂದು ಒಂದೇ ಕ್ಷಣದಲ್ಲಿ ಇಳಿದುಹೊಯ್ತು. ಇದೇ ಮನಸ್ಥಿತಿಯಲ್ಲಿ, ನಾನು ಸಂತೋಷ್ ಹೆಗ್ಡೆಯವರಿಗೆ ನಾನು ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ. ಇವು ಪಕ್ಷಾತೀತವಾಗಿ, ಪೂರ್ವಾಗ್ರಹ ಪೀಡಿತರಾಗಿಲ್ಲದ ಒಬ್ಬ ಜನಸಾಮಾನ್ಯನಾದ ನನ್ನ ವೈಯುಕ್ತಿಕ ಪ್ರಶ್ನೆಗಳಿವು. ಶ್ರೀಯುತ ಸಂತೋಷ್ ಹೆಗ್ಡೆಯವರು, ಇವುಗಳಿಗೆ ವಿಶಾಲ ದೃಷ್ಠಿಕೋನದಿಂದ, ಪ್ರಾಮಾಣಿಕವಾಗಿ ಉತ್ತರಿಸಬಹುದು ಎಂದು ನಿರೀಕ್ಷಿಸುತ್ತೇನೆ.
ಮಾನ್ಯ ಸಂತೋಷ್ ಹೆಗ್ಡೆಯವರೇ,
1. ಹದಗೆಟ್ಟ ರಾಜಕೀಯ ಹಾಗೂ ಸರ್ಕಾರಿ ಅಧಿಕಾರವರ್ಗದ ಪರಿಸ್ಥಿತಿ, ಸರ್ಕಾರದ ಅಸಹಕಾರ ಮುಂತಾದ ವಿಚಾರಗಳಿಂದ ಬೇಸರಗೊಂಡು ತಾವು ರಾಜೀನಾಮೆ ನೀಡಿದ್ದು ಸರಿಯಷ್ಟೇ. ಇಡೀ ಕರ್ನಾಟಕದ ಜನತೆ ನೀವು ಮತ್ತೆ ಲೋಕಾಯುಕ್ತರಾಗಿ ಅಧಿಕಾರಕ್ಕೆ ವಾಪಾಸಾಗುವುದನ್ನು ಮನವಿ ಮಾಡಿಕೊಂಡರೂ ತಾವು ಜನತೆಯ ಮೇಲಿನ ಪ್ರೀತಿ ಅಥವಾ ಅವರ ಹಿತಾಸಕ್ತಿಯಿಂದಾದರೂ ರಾಜೀನಾಮೆ ಹಿಂಪಡೆಯಲಿಲ್ಲ.
ಹೆಗ್ಡೆಯವರೇ, ನಿಮ್ಮ ರಾಜೀನಾಮೆಯನ್ನು ಹಿಂಪಡೆಯಲು ಕೇಳಿದವರು, ಜನಸಾಮಾನ್ಯರು. ಸಾಮಾಜಿಕ ನ್ಯಾಯ, ದುಷ್ಟ ಶಿಕ್ಷೆ-ಶಿಷ್ಟ ರಕ್ಷೆ ಮುಂತಾದ ವಿಷಯಗಳಲ್ಲಿ ನಂಬಿಕೆ ಇಟ್ಟವರು. ಇವರು ಪರಿಪರಿಯಾಗಿ ಮಾಧ್ಯಮಗಳು ಆಯೋಜಿಸಿದ್ದ ಎಸ್್ಎಂಎಸ್ ಮುಂತಾದ ವಿಧಾನಗಳ ಮೂಲಕ, ಹೇಳಿಕೆಗಳ ಮೂಲಕ ನಿಮ್ಮ ಬಗ್ಗೆ ಒಲವು ವ್ಯಕ್ತಪಡಿಸಿದರೂ ಕೇಳದ ನೀವು, ಮತ್ತೆ ಕೇವಲ ಅವಕಾಶವಾದಿ ರಾಜಕಾರಣಿಗಳ ಮಾತಿಗೆ ಮರುಳಾಗಿಬಿಟ್ಟಿರಾ ?
2. ಹೆಗ್ಡೆಯವರೇ, ನಿಮ್ಮ ರಾಜೀನಾಮೆಯನ್ನು ವಾಪಾಸುಪಡೆಯುವಂತೆ ಕೋರಿದವರಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸಹಾ ಸೇರಿದ್ದರು. ಕೇಂದ್ರ ಗೃಹ ಸಚಿವ ಸ್ಥಾನಕ್ಕಿರುವ ಘನತೆ ಹಾಗೂ ವೈಯುಕ್ತಿಕವಾಗಿ ಚಿದಂಬರಂ ವ್ಯಕ್ತಿತ್ವದ ಬಗ್ಗೆ ಉನ್ನತ ಸ್ಥಾನದಲ್ಲಿರುವ ನಿಮಗೇ ಚೆನ್ನಾಗಿ ಗೊತ್ತು. ಅಂಥ ಸ್ಥಾನದಲ್ಲಿರುವವರು ಮನವಿ ಮಾಡಿದಾಗ ಅದನ್ನು ತಿರಸ್ಕರಿಸಿದರಲ್ಲ ? ಏಕೆ ? 'ಕ್ರೆಡಿಟ್ ಯುಪಿಎ ಸಲ್ಲುತ್ತದೆ ಅಂತಾನಾ' ?
3. ನೀವು ಹೇಳುತ್ತೀರಿ. ನಿಮ್ಮ ಮನವೊಲಿಸಿದ ಅಡ್ವಾಣಿಯವರು ನಿಮ್ಮ ತಂದೆಗೆ ಬೇಕಾದವರು. ಅದಕ್ಕೇ ಒಪ್ಪಿಕೊಂಡೆ ಅಂತ. ಹಾಗಾದ್ರೆ, ನಿಮಗೆ ಅಥವಾ ನಿಮ್ಮ ಕುಟುಂಬದವರಿಗೆ ಬೇಕಾದವರು ಹೇಳಿದರೆ ಮಾತ್ರ ಅದಕ್ಕೆ ಬೆಲೆ. ಇಡೀ ಕರ್ನಾಟಕದ ಜನತೆ ನಿಮ್ಮ ಮೇಲೆ ಇಟ್ಟಿರುವ ಅಭಿಮಾನ, ಮಾಧ್ಯಮಗಳ ಕಾಳಜಿ ಇವೆಲ್ಲವೂ ನಿಮ್ಮ ಪಾಲಿಗೆ ಏನೂ ಅಲ್ಲವಾ?
4. ಇಲ್ಲಿ ಇನ್ನೊಂದು ವಿಚಾರ ಹೆಗ್ಡೆಯವರೇ. ಈಗ ಅಡ್ವಾಣಿಯವರ ಒತ್ತಾಸೆಯ ಮೇರೆಗೆ ಮತ್ತೆ ಅಧಿಕಾರಕ್ಕೆ ಬಂದಿದ್ದೀರಿ. ಅಡ್ವಾಣಿಯವರು ಬಿಜೆಪಿಯ ಹಿರಿಯ ನಾಯಕರು. ಈಗ ನೀವು ಅಧಿಕಾರಕ್ಕೆ ಬಂದ ಮೇಲೆ, ಬಿಜೆಪಿಯ ಸಚಿವರನ್ನೋ, ಶಾಸಕರನ್ನೋ ಲಂಚ, ಅಕ್ರಮಗಳ ಪ್ರಕರಣಗಳಲ್ಲಿ ಹಿಡಿಯುತ್ತೀರಿ ಎಂದಿಟ್ಟುಕೊಳ್ಳಿ. ಆಗ, ಬಿಜೆಪಿಯ ನಾಯಕ ಅಡ್ವಾಣಿ ನಿಮ್ಮ ಮನೆಗೇ ಸೀದಾ ಬಂದು ನಿಮ್ಮನ್ನು ಕೇಳಿಕೊಂಡರೆ ಹಿಡಿದವರನ್ನು ಬಿಟ್ಟು ಬಿಡುತ್ತೀರಾ ? ಏಕೆಂದರೆ, ಎಷ್ಟಾದರೂ ಅಡ್ವಾಣಿಯವರು ನಿಮ್ಮ ತಂದೆಯವರಿಗೆ ಆತ್ಮೀಯರು ತಾನೇ? ಅವರ ಮಾತಿನ ಮುಂದೆ ಕರ್ನಾಟಕ, ಕರ್ನಾಟಕದ ಜನತೆಯ ಹಿತಾಸಕ್ತಿ ಯಾವ ಮಹಾ? ಅಲ್ಲವಾ ಹೆಗ್ಡೆಯವರೇ?
- ದಯವಿಟ್ಟು ಕ್ಷಮಿಸಿ. ಯಾವುದೇ ಪಕ್ಷವನ್ನು ಹೀಯಾಳಿಸಲು ಅಥವಾ ಲೋಕಾಯುಕ್ತರನ್ನು ಕೆಣಕಲು ಈ ಪ್ರಶ್ನೆಗಳನ್ನು ನಾನು ಕೇಳುತ್ತಿಲ್ಲ. ಆದರೆ, ನಮ್ಮೆಲ್ಲರ ಕಣ್ಮಣಿಯಂತಿರುವ ಲೋಕಾಯುಕ್ತರು ಕೇವಲ ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ಬಿಟ್ಟರಾ? ಅನ್ನುವ ಗೊಂದಲ ಕಾಡುತ್ತಿದೆ.
ಮಾನ್ಯ ಸಂತೋಷ್ ಹೆಗ್ಡೆಯವರೇ ಇದಕ್ಕೆ ಉತ್ತರಿಸಬೇಕು.
ಪ್ರತಿಕ್ರಿಯೆ (1)