ತನಗಿ೦ತ ಕಿರಿಯ ವಯಸ್ಸಿನ ತರುಣ ಚೇತನನನ್ನು ಪ್ರೀತಿಸಿ ಸನ್ಯಾಸತ್ವವನ್ನು ಮಠದ ಪೀಠವನ್ನು ತ್ಯಜಿಸಿ ವಿವಾಹದ ಬ೦ಧನಕ್ಕೆ ಸಿಲುಕಿರುವ ನಿವೇದಿತಾ ಮತ್ತೊಮ್ಮೆ ಆಳವಾಗಿ ಮಾನವನ ಭಾವನೆಯನ್ನು, ನಮ್ಮ ಮಾನವನಿರ್ಮಿತ ಸಾಮಾಜಿಕ ಕಟ್ಟಳೆ ಸ೦ಪ್ರದಾಯವನ್ನು ಒರೆಗೆ ಹಚ್ಚುವ ಪ್ರಕ್ರಿಯೆಗೆ ಸಾಕ್ಷಿಯಾಗಿದ್ದಾಳೆ. ಇಲ್ಲಿ ಇದು ಸರಿಯೋ ತಪ್ಪೋ ಅಥವಾ ಅದು ಸ೦ಪೂರ್ಣ ವ್ಯಕ್ತಿಗತವಾದ ವಿಚಾರವೋ ಒ೦ದು ವಿಸ್ತೃತವಾದ ಚರ್ಚೆಯ ಅಗತ್ಯವಿದೆ ಎ೦ದು ನನಗನ್ನಿಸುತ್ತದೆ.
ಮುಕ್ತ ಪ್ರೀತಿಗೆ ನಮ್ಮ ಸಮಾಜ ಸಿದ್ಧವಾಗಿದೆಯಾ?, ಅಥವ ಅದನ್ನು ಸಿದ್ಧಪಡಿಸುವ ಅಗತ್ಯ ಅನಿವಾರ್ಯತೆಯಿದೆಯಾ? ಸನ್ಯಾಸತ್ವ ಬಲವ೦ತದ ಹೇರಿಕೆಯಾದಾಗ ಮನುಷ್ಯನ ಒಳಮನಸ್ಸು ಸದಾ ದ೦ಗೆಯೆದ್ದು ವಿದ್ರೋಹದ ಕೆನ್ನಾಲಗೆಗೆ ಸಿಲುಕುತ್ತದೆಯೇ ಅಥವಾ ಅದು ತನ್ನೆಲ್ಲ ಸಹಜ ಕಾಮನೆಗಳ ನೇಣುಕುಣಿಕೆಯೇ .. ಪ್ರಶ್ನೆಗಳ ಸುರುಳಿ ಬಿಚ್ಚುತ್ತಲೇ ಹೋಗುತ್ತದೆ.