ಸಾವಿರಾರು ಸಂಖ್ಯೆಯಲ್ಲಿ ಸಂತ್ರಸ್ತರು ಬೀದಿಗೆ ಬಂದಿದ್ದಾರೆ. ಇವರಿಗೆ ಸರ್ಕಾರ ಮನೆ ಕಟ್ಟಿಕೊಡುವ ಕಾರ್ಯಕ್ಕೆ ಮುಂದಾಗಿದೆ ಅಂತ ಸುಬ್ಬ ಪೇಪರ್ನಾಗೆ ಓದುತ್ತಿದ್ದಂಗೆನೇ, ನಮ್ಮೂರ ಹಳಸೋದ ಫಲಾವು ವಾಸನೆ ಗೌಡರು ನಾವು ಏನಾದರೂ ಸಹಾಯ ಮಾಡಲೇಬೇಕು. ಆದರೆ ಸರ್ಕಾರದೋರು ತರಾ ಭಿಕ್ಸೆ ಎತ್ತೋದು ಬೇಡ. ಜನರಿಗೆ ಮನರಂಜನೆ ನೀಡಿ ಹಣ ಪಡೆಯುವಾ ಅಂದ. ಗೌಡ್ರೆ ಆರ್ಕೆಸ್ಟ್ರಾ,ಯಕ್ಸಗಾವ ಯಾವುದೂ ಬೇಡ ಕನ್ರಲಾ "ದೊಂಬರಾಟ" ಆಡವಾ ಅಂದ. ಗೌಡ್ರೆ ಅದಕ್ಕೆಲ್ಲಾ ಪಲ್ಟಿ ಹೊಡಿಬೇಕು, ಮಂಗ,ಹಾವು ತರಬೇಕು, ಹಲಗೆ ಬಾರಿಸ್ಬೇಕು ಅಂದೆ. ಅದಕ್ಕೆಲ್ಲಾ ಟ್ರೈನಿಂಗ್ ತೊಗಳವಾ ಅಂದ.

ಸರಿ ಪ್ರಾಕ್ಟೀಸ್ ಸುರುವಾಯ್ತು. ಸುಬ್ಬ ಓಡಿ ಬಂದು ಪಲ್ಟಿ ಹೊಡೆದ. ಮಗಂದು ಗಾರೆ ನೆಲ ಮುಖ ಅನ್ನೋದು ತಿರುಗಿ ಹೋಗಿತ್ತು. ಕಟ್ಟಿಗೆ ಒಡಿಯೋ ಕಿಸ್ನ ಚಾಟಿಲ್ಲಿ ಹೊಡ್ಕೊಂಡು ಮೈಯೆಲ್ಲಾ ಬಾರು. ಒಂದು ಕೆಜಿ ಅರಿಸಿನ ಅವನಿಗೇ ಹಚ್ಚಿದ್ವಿ. ಇನ್ನು ನಿಂಗ ಉಲ್ಟಾ ಪಲ್ಟಿ ಹೊಡಿತೀನಿ ಅಂತಾ ಕಿಸ್ಕಂಡಿದ್ದ. ಎಲ್ಲಾವೂ ಒಂದು ವಾರ ಆಸ್ಪತ್ರಾಗೆ ಇದ್ವು. ಗೌಡಪ್ಪ ಹಾವು ಮತ್ತು ಮಂಗ ಸಾವಿರ ರೂಪಾಯಿ ಕೊಟ್ಟು ತಂದಿದ್ದ, ಅದನ್ನ ಆಡಿಸೋದು, ನಾನು ಹಾಡು ಹೇಳೋದು (ಕವನ ಹೇಳೋದ್ರಾಗೆ ಸಾನೆ ಫೇಮಸ್ ನೋಡಿ), ದುಡ್ಡು ಎತ್ತೋದು ಅಂತಾ ಆತು. ಮೊದಲನೆ ಷೋ ಮಂಡ್ಯ ಬಸ್ಟಾಂಡ್ ಮುಂದೆ ಮಡಗವಾ ಅಂದ ಗೌಡಪ್ಪ. ಎಲ್ಲರೂ ಅಂಗಿ, ಚಡ್ಡಿ ಬಿಟ್ಟು ಹುಲಿ ಚರ್ಮ ಉಟ್ಕಂಡು ಹೋಗಿದ್ವಿ. ಅರಣ್ಯ ಇಲಾಖೆಯವರು ನಮ್ಮನ್ನ ನೋಡ್ತಿದ್ದಾಗೆನೇ ಜೀಪ್ನಾಗೆ ಎತ್ತಾಕಂಡ್ ಹೋಗಿ ವರ್ಕ್ ಮಾಡಿದ್ರು. ಸಾರ್ ಕುರಿ ಚರ್ಮಕ್ಕೆ ಬಣ್ಣ ಬಳಿದಿರೋದು ಅಂದ್ ಮ್ಯಾಕೆ ಪಿಟ್ಟಿ ಕೇಸ್ ಹಾಕಿ ಹೊರಗೆ ಅಟ್ಟಿದ್ರು. ಸುಬ್ಬಂಗೆ ಸಣ್ಣ ಕುರಿ ಚರ್ಮ ಕೊಟ್ಟಿದ್ವಿ. ಅದನ್ನ ಎಳೆದು ಪಿನ್ ಹಾಕ್ಕೊಂಡಿದ್ದ. ಲೇ ಸುಬ್ಬ ಒಳಗೆ ಚಡ್ಡಿ ಹಾಕಿದ್ಯೇನ್ಲಾ ಅಂದ್ರೆ ಹೊಡಿಯೋಕ್ಕೆ ಬರೋನು.

ಸರಿ ಮಧ್ಯಾಹ್ನದಷ್ಟೊತ್ತಿಗೆ ಆಟ ಸುರುವಾತು. ಹಲಗೆ ಬಾರಸಕ್ಕೆ ಸುರು ಮಾಡ್ದೆ. " ಕೇಳ್ರಣ್ಣಾ, ಯಾರಿಗಾದರೂ ತುರಿಕೆ ಇದೆಯಾ, ಮನ್ಯಾಗೆ ಹಾವು ಬಂದೈತಾ, ಹಾವು ಕಚ್ಚಿದರೆ ನೋಡಿ ಸ್ವಾಮಿ, ಕೆಂಪು ಔಸಧಿಗೆ ಈ ಬೇರು ತೇಯ್ದು ಕುಡಿಸಿದರೆ ಎಲ್ಲಾ ವಾಸಿ ಆಯ್ತದೆ. ಇದ್ರಾಗೆ ನಮ್ಮ ಗೌಡರು ಸಾನೇ ತಿಳ್ಕೊಂಡ್ಯಾರೆ ಅಂತಿದ್ದಾಗೆನೇ ಏನ್ಲಾ ಇದು. ಸುಮ್ಕೆ ಗೌಡ್ರೆ. ತಂದಿದ್ದು ಬೇವಿನ ಕಡ್ಡಿ, ಒಂದು ಚೀಲದ ತುಂಬ ತುಳಸಿ ಸೊಪ್ಪ ಆಟೆಯಾ. ಸತ್ಯ ಗೊತ್ತಾದ್ರೆ ಎಲ್ಲಿ ಜನಾ ಹೊಡಿತಾರೆ ಅನ್ನೋ ಭಯ ಗೌಡಂಗೆ. ಗೌಡಪ್ಪ ಇಲ್ಲಿ ನೋಡಿ ಅಂತಾ ಹಾವು ತೆಗೆದ. ಮಗಂದು ಬುಸ್ ಅನ್ನೋದು. ಪುಂಗಿ ಊದಲಾ ಗೌಡರೆ. ಯಾಕೆ ಹೇಳು ನನ್ನ ಕಚ್ಚಲಿ ಅಂತಾನಾ, ಅಂತಿದ್ದಾಗೆನೇ ಹಾವು ತಪ್ಪಿಸ್ಕೊಂಡು ಅಲ್ಲೇ ಇದ್ದ ಬಟ್ಟೆ ಅಂಗಡಿ ಸೇರ್ಕಂತು. ಎಲ್ಲಲಾ ಹಾವು ಅಂದ್ರೆ. ಅಂಗಡೀಲಿ ಕಿರುಚಾಡ್ತಾರೆ. ಗೌಡ ಕೆರಳಿದ ಸರ್ಪ ಅಂತಾ ಹೋದವನೇ ಹಾವನ್ನು ಕೊರಳಿಗೆ ಸುತ್ಕೊಂಡು ಬಂದ. ಏ ನೋಡ್ರಲಾ ಸಿದ್ದೇಸ ಅಂತಾ, ಜನ ಬಿಸಿಲಾಗೆ ಒಂದು ಗಂಟೆ ನಿಲ್ಲಿಸಿ ಪೂಜೆ ಮಾಡಿದ್ದು ಮಾಡಿದ್ದೇ. ಗೌಡಪ್ಪನ ಕಾಲ್ನಾಗೆಲ್ಲಾ ಬೊಬ್ಬೆ. ಬರ್ನಾಲ್ ಬಳಿದು ಕೂರಿಸಿದ್ವಿ. ಈಗ ನೋಡಿ ಮಂಗನ ಆಟ ಅಂತಿದ್ದಾಗೆನೇ, ಮಂಗ ಸುಬ್ಬ ಉಟ್ಕಂಡಿದ್ದ ಚರ್ಮ ಎಳೆದೇ ಬಿಡ್ತು. ಏ ಥೂ. ನಿಂಗನ ಮುಖ, ಗೌಡಪ್ಪನ ಮುಖ ಪರಚಿ ಮಂಗ ಮಂಗಮಾಯವಾಗಿತ್ತು. ಎಲ್ಲರಿಗೂ ಮತ್ತೆ ಅರಿಸಿನ ಸೇವೆ. ಎಲ್ಲರೂ ಯಲ್ಲಮ್ಮನ ಒಕ್ಕಲೋರು ಆದಂಗೆ ಆಗಿದ್ರು.

ಹಗ್ಗದ ಮೇಲೆ ನಡೆಯಕ್ಕೆ ಕಟ್ಟಿಗೆ ಒಡೆಯೋ ಕಿಸ್ನ ರೆಡಿಯಾಗಿದ್ದ. ಕೋಲು ಕಟ್ಟಿ ಹತ್ತಿಸಿದ್ವಿ. ಕೈನಾಗೊಂದು ದೊಡ್ಡ ಬಿದಿರು ಬೊಂಬು. ಒಂದು ಎರಡು ಹೆಜ್ಜೆ ಇಟ್ಟ ಬ್ಯಾಲೆನ್ಸ್ ಹೋಯ್ತದಲ್ಲಾ ಅಂತಾ ಬೊಂಬನ್ನ ನೆಲ್ಲಕ್ಕೆ ಜೋರಾಗಿ ಒತ್ತುತ್ತಿದ್ದಾಗೆನೇ ಮೇಲೆ ಹಾರಿದ್ದ. ಅಷ್ಟೊತ್ತಿಗೆ ಬಂದ ಬಸ್ ಮ್ಯಾಗೆ ಕುಂತಿದ್ದ. ಎಲ್ಡು ದಿನ ಆದ್ ಮ್ಯಾಕೆ ಊರಿಗೆ ಬಂದ. ಯಾಕಲಾ. ಬಡ್ಡೆ ಐಕ್ಳು ಶ್ರೀರಂಗಪಟ್ಟಣದಾಗೆ ಇಳಿಸಿದ್ರು ಕನ್ಲಾ. ಸರಿ ಆಟ ಮುಗೀತು. ಈಗ ಔಷಧಿ ವಿತರಣೆ ಅಂತಾ 20ರೂ ಇಸ್ಕಂಡ್ವಿ. ಗೌಡಪ್ಪ ಅದೇನೋ ಠುಸ್ ಪುಸ್ ಅಂತ ಮಂತ್ರ ಹೇಳಿ ಕೊಡ್ತಾ ಇದ್ದ. ಅದೇ ಟೇಮಿಗೆ ಪೊಲೀಸಪ್ಪ ಬಂದು ನಮ್ಮ ಸಾಹೇಬರಿಗೆ ಹಾವು ಕಚ್ಚೈತೆ ಬನ್ರೀ ಅಂತಾ ರಿಸರ್ವ್ ವ್ಯಾನ್ನಾಗೆ ಎತ್ತಾಕಂಡ್ ಹೋದ್ರು. ಹಾವು ಮಂಗನ್ನ ಅಲ್ಲೇ ಬಿಟ್ಟು ಹೋದ್ವಿ. ಯಾವನಿಗೆ ಬೇಕು ಯಾರದಾದರೂ ಚಡ್ಡ್ಯಾಗೆ ಸೇರ್ಕಂಡ್ರೆ ಅಂತಾ. ನಿಜ ಗೊತ್ತಾಗುತ್ತಿದ್ದಾಗೆನೇ ಯಾವ ಮಟ್ಟಕ್ಕೆ ಹೊಡೆದಿದ್ರು ಅಂದ್ರೆ. ಅಂಗವಿಕಲರಿಗಿಂತ ಕಡೆಯಾಗಿದ್ವಿ. ಅಂತೂ ಊರ್ ತಲುಪಿದ್ದು ಆತು. ಬಂದಿದ್ದ ಹಣ ಎಲ್ಲಾ ಕಳಿಸಿದ್ವಿ. ಗೌಡ್ರೆ ಸಂತ್ರಸ್ತರ ನಿಧಿ ಅಂದ್ರೆ ಸಾಕು ಎಲ್ಲಲಾ ಹಾವು ಅಂತಾ ಗಾಬರಿಯಾಗ್ತಾನೆ ಗೌಡಪ್ಪ.