ಎರಡೂವರೆ ಗಂಟೆಯ ಸಿನಿಮಾಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಸೆನ್ಸರ್ ಮಂಡಳಿಯ ಕತ್ತರಿ ಕಾದಿರುತ್ತದೆ, ಆದರೆ, ದಿನದ ಇಪ್ಪತ್ನಾಲ್ಕು ಗಂಟೆಯೂ ನಮ್ಮ ಮನೆಯೊಳಗೇ ಮೆರೆದಾಡುವ ಕಿರುತೆರೆಗೆ ಯಾವುದೇ ಕಡಿವಾಣವಿಲ್ಲ!
ಸಿನಿಮಾದಲ್ಲಾದರೆ ಆ ಪದ ಬಳಸಬಾರದು, ಈ ದೃಶ್ಯ ತೋರಿಸಬಾರದು ಎಂದು ಏನೇನೆಲ್ಲ ಕಟ್ಟುಪಾಡು, ಅದೇ, ಕಿರುತೆರೆಯಲ್ಲಾದರೆ ಏನು ಬೇಕಾದರೂ ಒದರಬಹುದು, ಏನು ಬೇಕಾದರೂ ತೋರಿಸಬಹುದು!
ಕಿರುತೆರೆಯ ಕ್ರೈಮ್ ರಿಪೋರ್ಟ್ಗಳಲ್ಲಿ ಮಾತ್ರವಲ್ಲ, ವಾರ್ತೆಗಳಲ್ಲೂ ಹಿಂಸೆ, ಕ್ರೌರ್ಯ, ಅನೀತಿ ಮತ್ತು ಅಪಘಾತಗಳ ಅಕರಾಳವಿಕರಾಳ ಮುಖಗಳನ್ನು ಎಳೆಯ ಮಕ್ಕಳಿಗೂ ತೋರಿಸಿ ವಿವರಿಸಲಡ್ಡಿಯಿಲ್ಲ!
ರಿಯಾಲಿಟಿ ಷೋಗಳ ಹೆಸರಿನಲ್ಲಿ ಎಳೆಯರು, ಗೆಳೆಯರು, ಪ್ರೌಢರು, ಮೂಢರು, (ಪುರುಷರು, ಸ್ತ್ರೀಯರು) ಎಲ್ಲರೂ ಕಿರುತೆರೆಯ ಪ್ರೇಕ್ಷಕರೆದುರು ಬಟ್ಟೆ ಕಳಚಿ ಕುಣಿಯಲಡ್ಡಿಯಿಲ್ಲ! ಪತಿ, ಪತ್ನಿ ಔರ್ ವೋ ಮೂವರೂ ತಮ್ಮ ಇತರ ಬಂಧುಬಾಂಧವರ ಸಮೇತ ಕ್ಯಾಮೆರಾದೆದುರು (ಮತ್ತು ಅಲ್ಲಿ ಕಾರ್ಯಕ್ರಮ ನಡೆಸಿಕೊಡುವ, ತಲೆಯಿಲ್ಲದ, ಅನಧಿಕೃತ ಅ-ನ್ಯಾಯಮೂರ್ತಿಯೆದುರು) ಮನಬಂದಂತೆ ಹೊಡೆದಾಡಲಡ್ಡಿಯಿಲ್ಲ!
ಎಂದೂ ಕೇಳಬಾರದಂತಹ ಡೈಲಾಗ್ಗಳನ್ನು ಎಂದೂ ಮುಗಿಯದ ಧಾರಾವಾಹಿಗಳ ಪಾತ್ರಗಳು ಆಡಲಡ್ಡಿಯಿಲ್ಲ! ಆ ಧಾರಾವಾಹಿಗಳು ಅನೈತಿಕ ಸಂಬಂಧಗಳ ವೈಭವೀಕರಣವನ್ನು ವೈಭವೋಪೇತವಾಗಿ ಮಾಡಲಡ್ಡಿಯಿಲ್ಲ!
ಹಾಸ್ಯದ ಹೆಸರಿನಲ್ಲಿ ಕಿರುತೆರೆಯ ತುಂಬ ಕಿರಿಕಿರಿ ನಗೆ(ಪಾಟಲು)ಗಾರರು ತುಂಬಿಕೊಂಡು ಗರಗಸದಂತೆ ಕೊರೆಯುತ್ತ, ಭರಭರನೆ ಆಕ್ಷೇಪಾರ್ಹ ಆಣಿಮುತ್ತುಗಳನ್ನುದುರಿಸುತ್ತ, ವೀಕ್ಷಕರಿಗೆ ಕರಕರೆ ಉಂಟುಮಾಡಲಡ್ಡಿಯಿಲ್ಲ!
ವಾರ್ತೆಯಲ್ಲಿ ಯಾವುದೋ ಜಾತ್ರೆಯ ಮೌಢ್ಯ ತೋರಿಸಿ ವೀಕ್ಷಕರನ್ನು ಎಚ್ಚರಿಸಿದ ಬೆನ್ನಿಗೇ ಅದೇ ವಾಹಿನಿಯು ವಾಸ್ತು, ಜ್ಯೋತಿಷ, ಪುನರ್ಜನ್ಮಗಳ ಹೆಸರಿನಲ್ಲಿ ಪರಮ ಮೌಢ್ಯವನ್ನು ವೀಕ್ಷಕರಲ್ಲಿ ಬಿತ್ತಲಡ್ಡಿಯಿಲ್ಲ!
ಕೊನೆಗೊಂದು ಮಾತು. ಸಿನಿಮಾಗಳಿಗಾದರೆ ಪತ್ರಿಕಾ ವಿಮರ್ಶೆಯ ಅಂಕೆಯಿದೆ; ಕಥೆಯು ಸ್ವಲ್ಪ ಹಿಂಜಲ್ಪಟ್ಟಿದ್ದರೆ ಅದು ಪತ್ರಿಕಾ ವಿಮರ್ಶೆಗಳಲ್ಲಿ ಟೀಕೆಗೆ ಗುರಿಯಾಗುತ್ತದೆ. ಅದೇ, ಕಿರುತೆರೆ ಧಾರಾವಾಹಿಗಳಿಗೆ (ಒಂದೆರಡು ಪತ್ರಿಕೆಗಳ ಅಂಕಣಗಳನ್ನು ಬಿಟ್ಟು) ಯಾವ ವಿಮರ್ಶೆಯೂ ಇಲ್ಲ; ಹತ್ತುಸಾವಿರದ ಒಂದನೇ ಕಂತಿನವರೆಗೂ ಕಥೆಯನ್ನು ಜಗ್ಗಿದರೂ ಹೇಳೋರಿಲ್ಲ, ಕೇಳೋರಿಲ್ಲ; ಬದಲಿಗೆ, ಟಿವಿ ಮಹಾತ್ಮರೇ ಕೊಟ್ಟುಕೊಳ್ಳುವ ಟಿಆರ್ಪಿ ರೇಟ್ ಏರುತ್ತಲೇ ಹೋಗುತ್ತದೆ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪಿಬಿಎಸ್ : ಅಚ್ಚರಿ ಕಾದಿದೆ
ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
’ಸಂಪದ ಸಮ್ಮಿಲನ # 4’ ಕುರಿತು
ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?
ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ, ಲಾಭ ಯಾರಿಗೆ?
ಕಬ್ಬು ಬೆಳೆಗಾರ: ರಾಜಕೀಯದ ದಾಳ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)