ಸ್ಪೇನ್ ನೆದರ್ಲ್ಯಾಂಡ್  ವಿರುದ್ಧ  ವಿಜಯಗಳಿಸಿದಾಗ, ಸ್ಪಾನಿಷ್ ಬೆಂಬಲಿಗರು.

- ಪ್ರಜಾವಾಣಿ ಫೊಟೊ ಗ್ಯಾಲರಿಯ ಕೃಪೆಯಿಂದ.

 

ದಕ್ಷಿಣ ಆಫ್ರಿಕ ಇಂದು, ಅಂತಾರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸುವಲ್ಲಿ ಒಂದು ಸಮರ್ಥ ಸ್ಥಾನವಾಗಿ ಪರಿಣಮಿಸಿದೆ. ಆಟವನ್ನಾಯೋಜಿಸುವ ಸಂಸ್ಥೆಗೆ ಎಲ್ಲಾ ವಿಧದ ಸೌಲತ್ತುಗಳೂ ಲಭ್ಯವಿರುವ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿ ಸಜ್ಜಾಗಿ ನಿಂತಿರುವ ಸ್ಟೇಡಿಯಮ್ ಗಳನ್ನು ಕಂಡಾಗ ಎಂತಹವರಿಗೂ ಅಲ್ಲಿ ಕ್ರೀಡೆಗಳನ್ನು ಜೀವನದಲ್ಲಿ ಒಮ್ಮೆಯಾದರೂ ಆಯೋಜಿಸುವ ಆಸೆ ಬರುವುದರಲ್ಲಿ ಅಶ್ಚರ್ಯವಿಲ್ಲ. ಈಗಲಂತೂ ವಿಶ್ವದ ನಾನಾಕಡೆಗಳಿಂದ ಜನರ ಹಿಂಡು ಹಿಂಡೇ ಪರ್ಯಟಕರಂತೆ ಕಾನವಿಲ್ಲಿನವರ್ಣದ ದಕ್ಷಿಣಆಫ್ರಿಕವನ್ನು ಕಾಣಲು ಲಗ್ಗೆಹಾಕುತ್ತಿದೆ. ಫುಟ್ಬಾಲ್ ಆಟ ಈಗ ನಿಜವಾಗಿ ವಿಶ್ವದ ಪ್ರೀತಿಯ ಆಟಗಳೊಂದಾಗಿದೆ.


ದಕ್ಷಿಣ ಆಫ್ರಿಕದ  ಜೋಹಾನ್ಸ್‌ಬರ್ಗ್ ನ, ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ೧೧, ಜುಲೈ, ೨೦೧೦ ರ, ರವಿವಾರ, ಮಧ್ಯ-ರಾತ್ರಿ ಸ್ಪೇನ್ ಫುಟ್‌ಬಾಲ್‌ ಮುದುಡಿದ  ಮನದ ಕನಸಿನ ಮೊಗ್ಗೊಂದು ಅರಳಿ ಚೆಂದದ ಕುಸುಮವಾಗಿ, ತನ್ನ ಸೌರಭ, ಹಾಗೂ ಸೌಂದರ್ಯದಿಂದ ವಿಶ್ವದ ಕಾಲ್ಚೆಂಡಾಟದ  ಮುಗಿಲಿನಲ್ಲಿ ಇಂದು ಶೋಭಿಸುತ್ತಿದೆ.  ದಕ್ಷಿಣ ಆಫ್ರಿಕಾ ಜೋಹಾನ್ಸ್‌ಬರ್ಗ್ ನಲ್ಲಿ, ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ರವರು ಭಾನುವಾರ ಫುಟ್‌ಬಾಲ್ ವಿಶ್ವಕಪ್‌ನ ಫೈನಲ್ ಪಂದ್ಯ ನಡೆದ ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದು ಚಾಂಪಿಯನ್‌ಷಿಪ್‌ಗೆ ಮತ್ತಷ್ಟು ಮೆರುಗು ನೀಡಿತು.


ಹಾಲೆಂಡ್ ಹಾಗೂ ಸ್ಪೇನ್ ತಂಡಗಳ ನಡುವಣ ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲು ಮಂಡೇಲಾ ತಮ್ಮ ಪತ್ನಿ ಗಾರ್ಕಾ ಮಕೇಲ್ ಅವರೊಂದಿಗೆ ತೆರೆದ ವಾಹನ ಏರಿದರಲ್ಲದೆ ಕ್ರೀಡಾಂಗಣದ ಒಂದು ಸುತ್ತು ಸುತ್ತಿ ನೆರೆದಿದ್ದ ೮೦ ಸಾವಿರಕ್ಕೂ ಹೆಚ್ಚು ಅಭಿಮಾನಿಗಳತ್ತ ಕೈಬೀಸಿ ಮುಗುಳ್ನಗೆ ಬೀರಿದರು. ಮಂಡೇಲಾಗೆ ಅಭಿಮಾನಿಗಳು ನೆಚ್ಚಿನ ಹೆಸರಾದ "ಮಬಿಡಾ" ಎಂದು ಆನಂದದಿಂದ ಕೂಗುತ್ತಾ ಸ್ವಾಗತಿಸಿದ್ದು, ಮುಕ್ತಾಯ ಸಮಾರಂಭದಲ್ಲಿ ಸಿಡಿಸಲಾದ ಸಿಡಿಮದ್ದಿಗಿಂತ ಹೆಚ್ಚು ಸದ್ದು ಮಾಡಿತು.ಫುಟ್ಬಾಲ್ ಮುಕ್ತಾಯ ಸಮಾರಂಭಕ್ಕೆ ಬರಲು, ಕೇವಲ  ಎರಡು ಗಂಟೆ ಮೊದಲೇ  ಮಂಡೇಲಾ ನಿರ್ಧರಿಸಿದ್ದರು. ಅವರ ಜೊತೆಯಲ್ಲಿ ವಿಶ್ವದ ೧೭  ದೇಶದ ಮುಖ್ಯಸ್ಥರು ಹಾಗೂ ಹಾಲಿವುಡ್ ತಾರೆಯರು ಪಾಲ್ಗೊಂಡಿದ್ದರು.


ಬದಲಿ ಆಟಗಾರನೆಂದೇ ಆಗಾಗ ರೀಡಾ-ರಂಗಪ್ರವೇಶಿಸುತ್ತಿದ್ದ,  ಆಂಡ್ರೆ ಇನೀಸ್ತಾ ಅವರು ಪಂದ್ಯದ ಹೆಚ್ಚುವರಿ ಅವಧಿಯಲ್ಲಿ (೧೧೬ ನೇ ನಿಮಿಷ) ಬಾರಿಸಿದ ಗೋಲೊಂದು  ಸ್ಪೇನ್ ತಂಡವನ್ನು ವಿಶ್ವಕಪ್ ಪ್ರಶಸ್ತಿಯ ಮುಕುಟವನ್ನು ಧರಿಸಲು ಅನುವುಮಾಡಿಕೊಟ್ಟಿತು. ಸ್ಪೇನ್ ಅದೇ ಒಂದು ಗೋಲಿನ ಸಹಾಯದಿಂದ ಅಂತಿಮ ಸೆಣಸಾಟದಲ್ಲಿ ನೆದರ್ಲ್ಯಾಂಡ್  ತಂಡವನ್ನು ಧೃತಿಗೆಡಿಸಿ, ಸದೆಬಡಿದುರುಳಿಸಿ, ತನ್ನ ವಿಜಯ ಪತಾಕೆಯನ್ನು ದಕ್ಷಿಣ ಆಫ್ರಿಕದ ಭವ್ಯ ಹಾಗೂ ಅತ್ಯಾಧುನಿಕ ಸಭಾಂಗಣದಲ್ಲಿ ತನ್ನ ಛಾಪನ್ನು ಮೂಡಿಸಿತು. ಮೊಟ್ಟಮೊದಲ ಬಾರಿಗೆ ವಿಶ್ವಕಪ್ ವಿಜೇತರಾಗಿ ಸಂಭ್ರಮಿಸುತ್ತಿರುವ  ಸ್ಪೇನ್ ಆ ಮಟ್ಟಕ್ಕೆ ಬರಲು ಪಟ್ಟ ಶ್ರಮದ ಕಥೆಯನ್ನು ಕಾಣಲು ಒಂದು ತಿಂಗಳ ಹಿಂದಿನ ದಿನಗಳನ್ನು ನೆನೆಪಿಸಿಕೊಳ್ಳಬೇಕಾಗುತ್ತದೆ.

ಬ್ರೆಜಿಲ್, ಇಟಲಿ, ಜರ್ಮನಿ, ಅರ್ಜೆಂಟೀನಾ, ಉರುಗ್ವೆ, ಇಂಗ್ಲೆಂಡ್ ಮತ್ತು ಫ್ರಾನ್ಸ್ ರಾಷ್ಟ್ರಗಳ ವಿಶ್ವಕಪ್ ಗೆಲ್ಲುವ ಎಂಟನೇ ದೇಶ ಎನಿಸಿದ ಸ್ಪೇನ್, ಈಗ ವಿಶ್ವಪ್ರಸಿದ್ಧರ ಗುಂಪಿಗೆ ಸೇರಿದೆ. ೧೯೫೦ ರಲ್ಲಿ ಪಡೆದ ನಾಲ್ಕನೇ ಸ್ಥಾನದಿಂದ  ಸ್ಪೇನ್ ತಂಡ, ಇದುವರೆವಿಗೆ ಸಾಗಿಬಂದು,  ೧೯ ನೆಯ  ವಿಶ್ವಕಪ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನ, ಕಾಲ್ಚೆಂಡಿನ ಇತಿಹಾಸದಲ್ಲಿ ದಾಖಲಿಸಲು ಯೋಗ್ಯವಾಗಿತ್ತು. ನಿಧಾನವಾಗಿ ಪಾಸ್ ಕೊಟ್ಟು ಕೊಟ್ಟು ಚೆಂಡನ್ನು ಲೆಕ್ಕಾಚಾರವಗಿ ಮುಂದೋಡಿಸಿಕೊಂಡು ಹೋಗುವ ರೀತಿ ಸ್ಪೇನ್ ಆಟಗಾರರದಾದರೆ, ದಿಧೀರನೆ ಒದ್ದು, ಚೆಂಡನ್ನು ರಭಸದಿಂದ ಎಲ್ಲರ ಮಧ್ಯೆ ನುಗ್ಗಿಸಿಕೊಂಡು ಸೆಣಸುವುದು ಡಚ್ ಆಟದ ವೈಖರಿಯಾಗಿತ್ತು.

 

ಫೈನಲ್ ಆಟದಲ್ಲಿ ಸ್ವಾಭಾವಿಕವಾಗಿ ಮಾನಸಿಕ ದಬಾವ್ ಇಬ್ಬರ ಮಧ್ಯೆಯೂ ಇತ್ತು. ಆಯಾ ಪಂಗಡಗಳ ಅನುಮೋದಕರ ಕಿರಿಚಾಟ, "ಪೀಪಿಯೂದಾಟ" ಅಲ್ಲಿನ ಕ್ರೀಡಾಂಗಣದ ಇರುವಷ್ಟೇ ಚಿಕ್ಕ ಛಾವಣಿ ಮೇಲೆಗರುವಷ್ಟು  ಬಿರುಸಾಗಿತ್ತು.  ಆಟದಲ್ಲಿ ಏಳುವುದು, ಬೀಳುವುದು, ಎದೆಗೆ ಕಾಲಿನಲ್ಲಿ ಝಾಡಿಸಿ ಹೊಡೆದು ಮಾಡಿದ ಗುದ್ದಾಟ, ಬೈದಾಟ, ಕಿರಿಚಾಟ, ಮತ್ತು ಕಿರಿಕಿರಿ ಸನ್ನಿವೇಶಗಳು ಸಭಿಕರು ಊದುವ ಗಿಂತ ತೀಕ್ಷ್ಣವಾಗಿ ಕಂಡವು.

 

ರೆಫ್ರಿಗಂತೂ ಆಟಗಾರರನ್ನು ಸಮಝಾಯಿಸುವುದು, "ಯೆಲ್ಲೊ ಕಾರ್ಡ್" ಬರೆದು ತೋರಿಸುವುದರಲ್ಲೇ ಹೆಚ್ಚಿನ ಸಮಯ ವ್ಯಯವಾಗಿತ್ತು. (೧೪, ಯೆಲ್ಲೊ, ೧ ರೆಡ್ ಸಹಿತ)  ಸಾಕಷ್ಟು ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾದ ಪಂದ್ಯದ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲುಗಳಿಸಲು ವಿಫಲವಾದವು. ಸಹಜವಾಗಿ, ವಿಶ್ವ ಚಾಂಪಿಯನ್ನರ ನಿರ್ಣಯಕ್ಕೆ ಹೆಚ್ಚುವರಿ ಅವಧಿಯ ಮೊರೆಹೋಗಲಾಯಿತು.  ಅದು ೧೧೬ ನೆ ನಿಮಿಷ. ೧೯ ನೇ ವಿಶ್ವಕಪ್ ಪ್ರಶಸ್ತಿಯನ್ನು ಯೂರೋಪಿಯನ್ ಚಾಂಪಿಯನ್ನಾಗಿರುವ  ಸ್ಪೇನ್‌ ಟೀಮ್  ಗೆ ವಿಶ್ವಕಪ್ ನಲ್ಲಿ  ಗೋಲು ದಾಖಲಾದ ಅತಿಸುಂದರ ಕ್ಷಣ. ಆ ಗೋಲಿಗೆ ಹಾದಿಯೊದಗಿಸಿದ್ದು ಸೆಸ್ ಫ್ಯಾಬ್ರೆಗಾಸ್. ಅದುವರೆಗೂ ಒಂದಲ್ಲ ಒಂದು ರೀತಿಯಲ್ಲಿ ತಡೆಯೊಡುತ್ತಿದ್ದ ಹಾಲೆಂಡ್ ಡಿಫೆಂಡರ್‌ಗಳನ್ನು ಸಮರ್ಥವಾಗಿ ತಪ್ಪಿಸಿದ ಬದಲಿ ಆಟಗಾರನಾಗಿ ಕ್ರೀಡಾಂಗಣಕ್ಕೆ ಆಗಮಿಸಿದ್ದ  ಫ್ಯಾಬ್ರೆಗಾಸ್ ಚೆಂಡನ್ನು ಇನೀಸ್ತಾಗೆ ಪಾಸ್ ಮಾಡಿದರು. 


ಬಲಗಾಲಲ್ಲಿ ಝಾಡಿಸಿ ಒದ್ದ ಇನೀಸ್ತಾ ರ,  ಚೆಂಡು ಡಚ್ ಗೋಲ್‌ಕೀಪರ್ ಮಾರ್ಟಿನ್ ಸ್ಟೆಕೆಲೆನ್‌ಬರ್ಗ್ ಅವರನ್ನು ದಾಟಿ ನೇರವಾಗಿ ಗೋಲ್‌ಪೋಸ್ಟ್ ಸೇರಿತು. ಸ್ಪೇನ್ ಆಟಗಾರರ, ಸಮರ್ಥಕರ, ಮತ್ತು ಅಭಿಮಾನಿಗಳ ಸಂಭ್ರಮೋಲ್ಲಾಸಗಳ ಕೆರೆಯ ಕಟ್ಟೆಯೊಡೆದ ಮಿಂಚಿನ ನಿಮಿಷವಾಗಿತ್ತು. ಅದಾದ ನಾಲ್ಕು ನಿಮಿಷಗಳ ಬಳಿಕ ಇಂಗ್ಲೆಂಡ್‌ನ ರೆಫರಿ ಹಾವರ್ಡ್ ವೆಬ್ ಅಂತಿಮ ವಿಷಲ್ ಮೊಳಗಿಸಿದರು. ಸ್ಪೇನ್ ಆಟಗಾರರು ಪರಸ್ಪರ ಒಬ್ಬರನ್ನೊಬ್ಬರು, ಆಲಿಂಗಿಸಿ, ಮುತ್ತಿ, ಸಂಭ್ರಮಿಸಿದರೆ, ನೆದರ್ಲ್ಯಾಂಡ್ ತಂಡದವರು ಉದ್ವೇಗ ಸೋಲಿನ ಅವಮಾನದಿಂದ ಕಂಗೆಟ್ಟು ರೋಸಿಹೋಗಿದ್ದರು.

 
ಇನೀಸ್ತಾ ಒಂದೇ ರಾತ್ರಿಯಲ್ಲಿ  ತಾವು ಬಾರಿಸಿದ ಒಂದೇ ಒಂದು ಗೋಲಿನಿಂದ ವಿಶ್ವಕಪ್ ಸ್ಟೇಡಿಯಂ ನಿಂದ ಹೊರಬಂದಾಗ ಒಬ್ಬ ಪ್ರವಾದಿ, ಅಥವಾ ವಿಶ್ವ ಹೀರೊನಂತೆ ಜನರಿಗೆ ಕಂಡರು. "ಪಂದ್ಯಶ್ರೇಷ್ಠ" ಎನಿಸಿಕೊಂಡ ಸ್ಪೇನ್ ಫುಟ್‌ಬಾಲ್‌ನ ದಂತಕತೆಯಾಗಿ ಬದಲಾದರು.


ಸ್ಪೇನ್ ನಾಯಕ ಹಾಗೂ ಗೋಲ್‌ಕೀಪರ್ ಇಕರ್ ಕ್ಯಾಸಿಲಾಸ್, ರವರು  ೮೪ ಸಾವಿರ ಪ್ರೇಕ್ಷಕರ ಮುಂದೆ ಬಂಗಾರದ ಮಿಂಚುವ ಟ್ರೋಫಿಯನ್ನು ಮೇಲೆತ್ತಿ ಹಿಡಿದು ತಮ್ಮಲ್ಲೆ ಬಣದ ಆಟಗಾರ ಮಿತ್ರರೊಡನೆ ಕ್ರೀಡಾಂಗಣದಲ್ಲಿ ಸ್ವಲ್ಪದೂರಸಾಗಿ  ತಮ್ಮ ಟೀಮಿನ ಅತಿಶಯ ಸಂತೋಷವನ್ನು ವ್ಯಕ್ತಪಡಿಸಿದರು.. ಆ ಕ್ಷಣ ಮ್ಯಾಡ್ರಿಡ್ ಒಳಗೊಂಡಂತೆ ಸ್ಪೇನ್‌ನ ಪ್ರಮುಖ ನಗರಗಳು ಸಂಭ್ರಮದ ಅಲೆಯಲ್ಲಿ ತೇಲಿದವು. ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ಮತ್ತು ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಅವರು ವಿಜೇತ ತಂಡಕ್ಕೆ ಟ್ರೋಫಿ ನೀಡಿದರು.

 

ಹಿಂದೆ,  ಹಾಲೆಂಡ್‌ಗೆ ೩ ನೇ ವಿಶ್ವಕಪ್ ಫೈನಲ್‌ನಲ್ಲೂ ಸೋಲಿನೊಂದಿಗೆ ನಿರ್ಗಮಿಸಬೇಕಾಗಿ ಬಂದಿತ್ತು. . ೧೯೭೪  ಮತ್ತು ೧೯೭೮ ರ ಫೈನಲ್‌ನಲ್ಲಿ ಅನುಭವಿಸಿದ ದುರದೃಷ್ಟವನ್ನು ಮೆಟ್ಟಿನಿಲ್ಲಲು ಅರ್ಜೆನ್ ರಾಬೆನ್ ಮತ್ತು ಸ್ಲೈಡರ್ ಅವರನ್ನೊಳಗೊಂಡ ತಂಡ ಮಾಡಿದ ಪ್ರಯತ್ನಗಳೆಲ್ಲಾ ನೀರಿನಪಾಲಾದವು.


ಹಾಲೆಂಡ್ ತಂಡದ  ಒರಟಾಟ, ೯ ಯೆಲ್ಲೊ  ಕಾರ್ಡ್‌ಗಳಲ್ಲದೆ ಒಂದು ರೆಡ್ ಕಾರ್ಡ್ ಸಹಿತ !ಪಂದ್ಯದ ೧೦೯ ನೇ ನಿಮಿಷದಲ್ಲಿ ಹಾಲೆಂಡ್‌ನ ಜಾನ್ ಹೆಟಿಂಗಾ ಅವರು ಕೆಂಪುಕಾರ್ಡ್ ಪಡೆದು ಹೊರನಡೆದದ್ದು ತಂಡಕ್ಕೆ ದೊಡ್ಡ  ಆಘಾತವಾಗಿ ಪರಿಣಮಿಸಿತ್ತು. ಹಾಲೆಂಡಿನ ಒರಟಾದ ಆಟವೆಂದು ಈಗಾಗಲೆ ಮೀಡಿಯಾಗಳು ವರ್ಣಿಸಿರುವ ೧೪ ಯೆಲ್ಲೊ ಕಾರ್ಡ್ ಗಳಲ್ಲಿ,   ೯ ಯೆಲ್ಲೊ ಕಾರ್ಡ್ ಗಳನ್ನು ಪಡೆದ  ಹೀನಾದೃಷ್ಟವಂತರಾದರು.  ಆ ಬಳಿಕ ಕೇವಲ, ಹತ್ತುಮಂದಿಯೊಂದಿಗೆ ಆಡಿದ ತಂಡ ಅಂತಿಮವಾಗಿ ಸೆಣಸಾಟದಲ್ಲಿ ವಿಫಲವಾಗಿ ಸೋಲಿನ ಶಿಕಾರಿಯಾಯಿತು.


ವಿಶ್ವದಾದ್ಯಂತ ಮಿಲಿಯನ್ ಆಟಗಾರರು ಎವೆಇಕ್ಕದೆ ವೀಕ್ಷಿಸುತ್ತಿದ್ದ ಕಾಲ್ಚೆಂಡಾಟದ  ಹೋರಾಟಕ್ಕೆ ಫೈನಲ್ ಪಂದ್ಯದ ಕೊನೆಯಲ್ಲಿ, ನಿಜವಾದ ಸೌಂದರ್ಯದ ಕಳೆ ಇರಲಿಲ್ಲ. ಒಂದೊಂದೇ ನಿಮಿಷ ಕಳೆಯುತ್ತಿದ್ದಂತೆ ಅಂಗಳದಲ್ಲಿ ಹೋರಾಟದ ಕಾವು ಹೆಚ್ಚುತ್ತಿತ್ತು. ಅಪಾಯಕಾರಿ ಟ್ಯಾಕ್ಲಿಂಗ್ ಹಾಗೂ ಆಟಗಾರರ ನಡುವಿನ ಮಾತಿನ ಚಕಮಕಿಯ ಕಾರ್ಮುಗಿಲಿನ ಕಗ್ಗತ್ತಲು,ಸಾಕರ್ ಸಿಟಿ ಕ್ರೀಡಾಂಗಣದ   ಅತ್ಯಂತ ಪ್ರಭಾವಿ ಬೆಳಕಿನ ಸಾಗರದ ಮಧ್ಯೆಯೂ ಕಗ್ಗತ್ತಲನ್ನು ತಂದಿತ್ತು. ಅಲ್ಲಿನ ಎಷ್ಟೋಜನರಿಗೆ ಹಲವಾರು     ಕಾರಣಗಳಿಂದ ಬೇಡವಾಗಿದ್ದ  ಬ್ರಿಟಿಷ್  ರೆಫರಿ ’ವೆಬ್ ”  ರವರು, ಕ್ರೀಡಾಳುಗಳನ್ನು ಒಪ್ಪಿಸುವುದರಲ್ಲಿ, ಒಂದು ದಾಖಲೆಯನ್ನು ಸೃಷ್ಟಿಸಿದರು.  ಒಟ್ಟು ೧೩ ಸಲ ಹಳದಿ ಕಾರ್ಡ್‌ನ್ನು ಹೊರತೆಗೆದ ಅವರು ಹೊಸ ದಾಖಲೆ ಮಾಡಿದರು. ಹಾಲೆಂಡ್‌ನ ಎಂಟು ಆಟಗಾರರು ಹಳದಿ ಕಾರ್ಡ್ ಪಡೆದರು. (೭ ಹಳದಿ ೧ ರೆಡ್ ಕಾರ್ಡ್)


ಹಾಲೆಂಡ್‌ನ ಸ್ವಭಾವತಃ ಆಡುತ್ತಿದ್ದ ಒರಟು-ಒರಟಾಟಕ್ಕೆ ಯೂರೋಪಿಯನ್ ಚಾಂಪಿಯನ್ ಸ್ಪೇನ್ ತಾಳ್ಮೆಯಿಂದ ತಮ್ಮ ಆಟದ ವೈಖರಿಯನ್ನು ಬದಲಾಯಿಸದೆ ಸಮಯಬಂದಾಗ ಸರಿಯಾದ  ಉತ್ತರ ನೀಡಿತು. ಆಟ ಪ್ರಾರಂಭವಾದ ಮೊದಲ ೧೫ ನಿಮಿಷಗಳಲ್ಲಿ ಸ್ಪೇನ್ ಗೋಲುಸಿಡಿಸುವ  ಅವಕಾಶಗಳೆರಡನ್ನು ಸೃಷ್ಟಿಸಿತು. ೫ ನೇ ನಿಮಿಷದಲ್ಲಿ ಸೆರ್ಜಿಯೊ ರಾಮೋಸ್ ಹೆಡ್ ಮಾಡಿದ ಚೆಂಡನ್ನು ಸ್ಟೆಕೆಲೆನ್‌ಬರ್ಗ್ ಡೈವ್ ಮಾಡಿ ತಡೆದರು.


ಹಾಲೆಂಡ್ ೨೮ ನೇ ನಿಮಿಷದಲ್ಲಿ ತನ್ನ ಒಬ್ಬ ಆಟಗಾರನ ಸೇವೆ ಕಳೆದುಕೊಳ್ಳಬೇಕಿತ್ತು. ತಂಡದ ಡೆ ಜಾಂಗ್ ಸ್ಪೇನ್‌ನ ಕ್ಸಾಬಿ ಅಲೋನ್ಸೊ ಅವರ ಎದೆಗೆ ಬಲವಾಗಿ ಒದ್ದರು. ಅದು "ಕರಾಟೆ ಕಿಕ್" ತರಹ  ಆಗಿದ್ದರೂ ರೆಫರಿ ಕೆಂಪು ಕಾರ್ಡ್ ತೋರಿಸಲಿಲ್ಲ. ಬಿರುಸಿನಾಟದ ಮಧ್ಯೆ ಇಂತಹ ಪ್ರಸಂಗ ಬರುವುದು ಸಾಮಾನ್ಯ. ಅದಕ್ಕಾಗಿ ರೆಫರಿಯವರು,  ಹಳದಿ ಕಾರ್ಡ್ ಮೂಲಕ ಜಾಂಗ್‌ಗೆ ಎಚ್ಚರಿಕೆ ನೀಡಿದರು. 


ಗೋಲು ಜಡಿಯುವ ಅವಕಾಶಗಳಲ್ಲಿ ಎರಡು ತಂಡಗಳೂ ಹಿಂದೆಬಿದ್ದರು


ಗೋಲುಗಳಿಸುವ ಅವಕಾಶವನ್ನು ಹಾಳುಮಾಡುವಲ್ಲಿ ಉಭಯ ತಂಡಗಳು ಪೈಪೋಟಿಗೆ  ಇಳಿದಿವೆಯೇನೊ ಎನ್ನುವ ಸಂಶಯ ಅಲ್ಲಿ ನೆರೆದಿದ್ದ ಸಭಿಕರಿಗೆ ಉಂಟಾಯಿತು.  ಎರಡೂ ತಂಡಗಳ ಗೋಲ್‌ಕೀಪರ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ದದ್ದೇ ಪಂದ್ಯ ಹೆಚ್ಚುವರಿ ಅವಧಿಗೆ ಮುಂದುವರಿಯಲು ಕಾರಣ. 


ಗೆಲುವಿನ ದಾರಿ ದುರ್ಗಮವಾಗಿರುವುದು ಹಾಲೆಂಡಿಗರಿಗೆ ಮನವರಿಕೆಯಾಗುತ್ತಾಬಂತು.  ಸೋಲಲು ಮನಸ್ಸಿಲ್ಲ ಎಂಬ ರೀತಿಯಲ್ಲಿತ್ತು ಹಾಲೆಂಡ್ ತಂಡದ ಮಾನಸಿಕ ಸ್ಥಿತಿಯ ಹೋರಾಟದ ವೈಖರಿ !  ೬೨  ಮತ್ತು ೮೩ ನೇ ನಿಮಿಷದಲ್ಲಿ ಗೋಲು ಗಳಿಸಲು ಲಭಿಸಿದ ಸೊಗಸಾದ  ಅವಕಾಶವನ್ನು ಹಾಲೆಂಡ್‌ನ ಸ್ಟಾರ್ ಆಟಗಾರ,  ಅರ್ಜೆನ್ ರಾಬೆನ್ ಹಾಳುಮಾಡಿಕೊಂಡರು. ೬೨ ನೇ ನಿಮಿಷದಲ್ಲಿ ಸ್ಪೇನ್ ಡಿಫೆಂಡರ್‌ಗಳನ್ನು ತಪ್ಪಿಸಿ ಚೆಂಡಿನೊಂದಿಗೆ ಮುನ್ನುಗ್ಗಿದ ರಾಬೆನ್ ಮುಂದೆ ತಡೆಯಲು ಆಟಗಾರರಿರಲಿಲ್ಲ. ಎಲ್ಲ ಚದುರಿ ದೂರದಲ್ಲಿದ್ದರು. ಗೋಲ್ ಕೀಪರ್  ಕ್ಯಾಸಿಲಾಸ್ ಮಾತ್ರ ಆ ಕ್ಷಣವನ್ನು ಧರ್ಯದಿಂದ ಎದುರಿಸಬೇಕಾಯಿತು.

 

ಆದರೆ ರಾಬೆನ್ ಒದ್ದ ಚೆಂಡು ಕ್ಯಾಸಿಲಾಸ್ ಕಾಲಿಗೆ ತಾಗಿ ಗುರಿ ತಪ್ಪಿತು. ಡಚ್ ತಂಡದ ಅದೃಷ್ಟ ದೇವತೆ ಅವರಿಗೆ ಒಲಿಯಲಿಲ್ಲವೇನೋ ಎನ್ನುವುದು ಅಲ್ಲಿದ್ದ ಪ್ರೇಕ್ಷಕವರ್ಗೆಕ್ಕೆ ತಿಳಿದು, ಮುಂದಿನ ಆಟದ ಸಮಯದಲ್ಲಿ ಮನವರಿಕೆಯಾಗುತ್ತಾ ಹೋಯಿತು.


ಸ್ಪೇನ್ ತಂಡ ಈ ಹಿಂದಿನ ಪಂದ್ಯಗಳಲ್ಲಿ ಮಾಡಿದಂತೆ ಚೆಂಡನ್ನು ಅಧಿಕ ಸಮಯವೂ ನಿಯಂತ್ರಣದಲ್ಲಿಟ್ಟು ಗೋಲು ಗಳಿಸುವ ಅವಕಾಶಕ್ಕಾಗಿ ಕಾಯುವ ತಂತ್ರ ಅನುಸರಿಸಿತು. ಹಾಲೆಂಡ್‌ನ ರಕ್ಷಣಾ ವಿಭಾಗ ಬಲಿಷ್ಠವಾಗಿದ್ದ ಕಾರಣ ನಿಗದಿತ ಅವಧಿಯಲ್ಲಿ ಸ್ಪೇನ್‌ಗೆ ಗೋಲು ಬರಲಿಲ್ಲ. ಆದರೆ ಹೆಚ್ಚುವರಿ ಅವಧಿಯಲ್ಲಿ ಇನೀಸ್ತಾ ಕೊನೆಗೂ ಗುರಿ ಕಂಡುಕೊಂಡುವಲ್ಲಿ ಯಶಸ್ವಿಯಾದರು.


ರೆಫರಿ ವೆಬ್  ಮೇಲೆ ರಾಬೆನ್ ಮುನಿಸಿಕೊಂಡಿದ್ದರು :

 
ಹಾಲೆಂಡ್ ತಂಡದ ಅರ್ಜೆನ್ ರಾಬೆನ್ ಮತ್ತು ನೈಜೆಲ್ ಡೆ ಜಾಂಗ್ ಫೈನಲ್ ಪಂದ್ಯವನ್ನು ನಿಯಂತ್ರಿಸಿದ ಇಂಗ್ಲೆಂಡ್‌ನ ರೆಫರಿ ಹಾವರ್ಡ್ ವೆಬ್ ಮೇಲೆ ಬೇಸರಗೊಂಡಿದ್ದಾರೆ. ಜೋಹಾನ್ಸ್‌ಬರ್ಗ್ ನಲ್ಲಿ ನಡೆದ  ೧೯ ನೆಯ ವಿಶ್ವಕಪ್ ಫೈನಲ್: ಪಂದ್ಯದ ೮೩ ನೇ ನಿಮಿಷದಲ್ಲಿ ರಾಬೆನ್ ಅವರು ಚೆಂಡಿನೊಂದಿಗೆ ಮುನ್ನುಗ್ಗುವುದನ್ನು ತಡೆಯಲು ಸ್ಪೇನ್‌ನ ಕಾರ್ಲ್ಸ್ ಪುಯೊಲ್ ಪ್ರಯತ್ನಿಸಿದ್ದರು. ರೆಫರಿ ಈ ವೇಳೆ ಪುಯೊಲ್‌ಗೆ ಯಾವುದೇ ಶಿಕ್ಷೆ ವಿಧಿಸದ್ದು ರಾಬೆನ್ ಕೋಪಕ್ಕೆ ಕಾರಣವಾಗಿದೆ. ಹೀಗೆಯೇ  ಹಾಲೆಂಡ್‌ಗೆ ಕಾನೂನು ಪ್ರಕಾರ ಅರ್ಹವಾಗಿದ್ದ ಫ್ರೀ ಕಿಕ್‌ ನ್ನು ರೆಫರಿ ನೀಡಿಲ್ಲ,  ಎಂಬುದು ಜಾಂಗ್ ಅವರ ಮತ್ತೊಂದು ಆರೋಪ.ಅತಿ ಕಡಿಮೆ ಗೋಲಿನ ದಾಖಲೆಚಾಂಪಿಯನ್ ಸ್ಪೇನ್ ತಂಡ ಅತಿಕಡಿಮೆ ಗೋಲು ಗಳಿಸಿ ಒಂದು ದಾಖಲೆಯನ್ನು ತನ್ನದಾಗಿಸಿದೆ. ಸ್ಪೇನ್ ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಗಳಿಸಿದ್ದು ಒಟ್ಟು ಕೇವಲ ಎಂಟು ಗೋಲುಗಳು ಮಾತ್ರ. ಇದನ್ನು ಬೇರೆ ರೀತಿ ಯೋಚಿಸಿದರೆ, ಆಟದಲ್ಲಿ ಕಾವಿತ್ತು. ಇದೇನು ನಾವು ಭಾವಿಸಿದಷ್ಟು ಕೆಟ್ಟ ರೆಕಾರ್ಡ್ ಅಲ್ಲ.  ಯಾರೂ ಸುಲಭವಾಗಿ ತಪ್ಪುಗಳನ್ನು ಮಾಡದೆ ಬಿರುಸಿನ ಆಟವಾಡಿ ಮುಂದುವರೆದಿರುವುದನ್ನು ನಾವು ಕಾಣಬಹುದು.

 

ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇಷ್ಟು ಕಡಿಮೆ ಗೋಲುಗಳಿಸಿ ಯಾವುದೇ ತಂಡ ಕಪ್ ಜಯಿಸಿಲ್ಲ! 

 

* ಇಟಲಿ (೧೯೩೮), * ಇಂಗ್ಲೆಂಡ್ (೧೯೬೬) * ಬ್ರೆಜಿಲ್ (೧೯೪೪) ತಂಡಗಳು ೧೧  ಗೋಲುಗಳಿಸಿ ಚಾಂಪಿಯನ್ ಆದದ್ದು ಇದುವರೆಗಿನ ದಾಖಲೆಯಾಗಿತ್ತು.


"ಟೀಕೆಗೆ ಒಳಗಾದ ನೆದರ್ಲ್ಯಾಂಡ್ ತಂಡ" :

 
* ಹೆಚ್ಚಿನ ಸುದ್ದಿ-ಮಾಧ್ಯಮಗಳು ವಿಶ್ವಕಪ್ ಗೆದ್ದ ಸ್ಪೇನ್ ತಂಡವನ್ನು ಹೊಗಳಿ ಕೊಂಡಾಡಿದರೆ, ಒರಟಾಟ ಪ್ರದರ್ಶಿಸಿದ ಹಾಲೆಂಡ್ ತಂಡವನ್ನು ಟೀಕಿಸಿದ ಸುದ್ದಿ ಮಾಧ್ಯಮಗಳಿಗೆ ಕಡಿಮೆಯೇನಿಲ್ಲ .!

 

*  " ದಿ ಡೈಲಿ ಟೆಲೆಗ್ರಾಫ್" ದಿನಪತ್ರಿಕೆ, "  ಹಾಲೆಂಡ್‌ನ,  ವಾನ್ ಬೊಮೆಲ್ ಮತ್ತು ಡೆ ಜಾಂಗ್ ಅವರು ಸ್ಪೇನ್‌ನ ಕಲಾತ್ಮಕ ಆಟದ ಮೇಲೆ ಮಾರಕ ಹಲ್ಲೆ ನಡೆಸಿದರು" ಎಂದು ಹೇಳಿದೆ.

 

*  " ದಿ ಗಾರ್ಡಿಯನ್ ಪತ್ರಿಕೆ "  ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟಿರುವ ಟೂರ್ನಿಯಲ್ಲಿ ಒಟ್ಟು ೨೨ ಹಳದಿ ಕಾರ್ಡ್ ಪಡೆದ ಹಾಲೆಂಡ್ ತಂಡದ ವಿರುದ್ಧ, " ಫಿಫಾ " ಏನಾದರೂ ಕ್ರಮ ಕೈಗೊಳ್ಳಬೇಕು ಎಂದಿದೆ.

 

ಬಹುಚರ್ಚಿತ,  "ಗೋಲ್ಡನ್ ಬೂಟ್  ಪ್ರಶಸ್ತಿ,"

 

ಜರ್ಮನಿಯ ಯುವ ಆಟಗಾರ,  ಥಾಮಸ್ ಮುಲ್ಲರ್‌ಗೆ  :


ವಿಶ್ವಕಪ್ ಶುರುವಾದಂದಿನಿಂದ ದಿನಪ್ರತಿಯೂ "ಗೋಲ್ಡನ್ ಶೂ" ಸಿಗುವುದ್ಯಾರಿಗೆ ಎಂಬ ಪ್ರಶ್ನಾರ್ಥಕ ವರದಿ ಪ್ರತಿ ದೈನಿಕಗಳಲ್ಲಿ ಪ್ರಕಟವಾಗುತ್ತಾ ಬಂತು. ಅಲ್ಲಿದ್ದ ಅರ್ಥ ಅಭ್ಯರ್ಥಿಗಳ ಹೆಸರುಗಳೆಂದರೆ,  ಕ್ಲೋಸ್, ವಿಲ್ಲಾ, ನಂತರ, ಇತ್ಯಾದಿ. ಆದರೆ ಕೊನೆಯಲ್ಲಿ ಸಿಕ್ಕಿದ್ದು ಥಾಮಸ್ ಮುಲ್ಲರ್   ರವರಿಗೆ. ಇದೇ ತರಹ ಅನೇಕ ಹಳೆಯ ವಿಚಾರಳು ಬದಲಾಗಿ ಹೊಸಗಾಳಿಯ ನೆರವಿನಲ್ಲಿ ಅನೇಕ ಹೊಸ ಸತ್ಯಗಳು ಹೊರಬಿದ್ದಿವೆ. ಅದರಲ್ಲಿ ಮುಖ್ಯವಾದದ್ದು :


ಕಗ್ಗತ್ತಲ ಖಂಡ. ಅದೇನು ಇಂತಹ ಮೆಗಾ ಇವೆಂಟ್ ಗಳನ್ನು ಆಯೋಜಿಸೀತು ಎನ್ನುವ ಭ್ರಮೆ ನಿವಾರಣೆಯಾಯಿತು. ಎಲ್ಲರಿಗಿಂತಾ ಅಚ್ಚುಕಟ್ಟಾಗಿ ಅತಿ ಹೆಚ್ಚು ವಿವಾದಗಳು, ನಾವೆಣಿಸಿದ್ದ, ಕಗ್ಗೊಲೆ, ಕಳ್ಳತನ, ಇತ್ಯಾದಿಗಳಿಲ್ಲದೆ ಅತ್ಯಂತ ಶಾಂತಿಯುತವಾಗಿ, ಸಮರ್ಥವಾಗಿ ನೆರೆವೇರಿದ ಈ ೧೯ ನೆಯ ವಿಶ್ವಕಪ್ ಹಲವಾರು ಪೂರ್ವಸಿದ್ಧ-ಮಾನಸಿಕ ಗೊಂದಲಗಳ ಅನಿಸಿಕೆಗಳನ್ನು ನಿವಾರಿಸಿ, ಧನಾತ್ಮಕ ಬೆಳವಣಿಗೆಗೆ ಪೋಷಣೆ ನೀಡಿದೆ.

 

೫ ಬಾರಿ ಗೆದ್ದ ಬ್ರೆಝಿಲ್ ಮುಂದೆ ನಿಲ್ಲಲು ಯಾರಿಗೆ ಸಾಧ್ಯವೆನ್ನುವ ಮಾತಿನಲ್ಲಿ ಸತ್ಯವೆಷ್ಟು ಎನ್ನುವುದನ್ನು ನಾವೀಗ ಮನಗಂಡೆವು. ಹಾಗೆಯೇ,ಜರ್ಮನಿ,ಇಟಲಿ, ಹಾಗೂ ಇಂಗ್ಲೆಂಡ್, ಫ್ರಾನ್ಸ್ ಗಳ ಪರಿಸ್ಥಿತಿಯೂ ವಿವಾದಗಳಿಗೆ ಒಳಗಾಗಿದ್ದು. ಸೋತಬಳಿಕ ಒಳವಿಚಾರಗಳು ಬೆಳಕಿಗೆ ಬಂದವು.


ಜರ್ಮನಿಯ ಮಿಡ್‌ಫೀಲ್ಡರ್ ಥಾಮಸ್ ಮುಲ್ಲರ್ ರವರು ೧೯ ನೇ ವಿಶ್ವಕಪ್ ಟೂರ್ನಿಯ "ಗೋಲ್ಡನ್ ಬೂಟ್" ಹಾಗೂ "ಶ್ರೇಷ್ಠ ಯುವ ಆಟಗಾರ" ಪ್ರಶಸ್ತಿಯನ್ನು ಪಡೆದರು.


ಶ್ರೇಷ್ಠ ಆಟಗಾರನಿಗೆ ಸಲ್ಲುವ "ಗೋಲ್ಡನ್ ಬಾಲ್" ಗೌರವವನ್ನು ಉರುಗ್ವೆಯ ಡಿಯಾಗೊ ಫೋರ್ಲಾನ್ ಪಡೆದರೆ, ವಿಶ್ವಕಪ್ ಎತ್ತಿಹಿಡಿದ ಸ್ಪೇನ್ ನಾಯಕ ಇಕರ್ ಕ್ಯಾಸಿಲಾಸ್ ಅವರು " ವಿಶ್ವಕಪ್  ಟೂರ್ನಿಯ ಶ್ರೇಷ್ಠ ಗೋಲ್‌ಕೀಪರ್" ಎಂದು ಗುರುತಿಸಿಕೊಂಡರು. 


ಉರುಗ್ವೆಯ ಫೋರ್ಲಾನ್, ಸ್ಪೇನ್‌ನ ಡೇವಿಡ್ ವಿಲ್ಲಾ, ಮತ್ತು ಹಾಲೆಂಡ್‌ನ ವೆಸ್ಲಿ ಸ್ನೈಡರ್ ಅವರು ತಲಾ ಐದು ಗೋಲು ಗಳಿಸಿದ ಹಿರಿಯ ಆಟಗಾರರಿದ್ದಾಗಲೂ ಟೂರ್ನಿಯ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ "ಚಿನ್ನದ ಬೂಟ್" ಪ್ರಶಸ್ತಿಯನ್ನು ಮುಲ್ಲರ್ ಅದೃಷ್ಟದ ನೆರವಿನೊಂದಿಗೆ ತಮ್ಮದಾಗಿಸಿಕೊಂಡರು  ಮುಲ್ಲರ್ ಐದು ಬಾರಿ ಚೆಂಡನ್ನು ಗುರಿ ಸೇರಿಸುವ ಜೊತೆಗೆ ಮೂರು ಸಲ ಗೋಲಿಗೆ ಹಾದಿಯೊದಗಿಸಿದ್ದಾರೆ. ಇದರಿಂದ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನದ ಬೂಟ್ ತಮ್ಮದಾಗಿಸಿಕೊಂಡರು. ೨೦ ರ ಹರೆಯದ ಮುಲ್ಲರ್ "ಶ್ರೇಷ್ಠ ಯುವ ಆಟಗಾರ" ಎಂಬ ಗೌರವವನ್ನೂ ಪಡೆದರು. ಉರುಗ್ವೆಯ ೩೧ ರ ಹರೆಯದ ಸ್ಟೈಕರ್ ಫೋರ್ಲಾನ್ "ಗೋಲ್ಡನ್ ಬಾಲ್" ಗೌರವ ಪಡೆದರು. 


ಶ್ರೇಷ್ಠ ಗೋಲಿಗೆ ನೀಡುವ "ಗೋಲ್ಡನ್ ಗ್ಲೋವ್"  ಪ್ರಶಸ್ತಿ ಕ್ಯಾಸಿಲಾಸ್ ಪಾಲಾಯಿತು. ಫಿಫಾ ತಾಂತ್ರಿಕ ಅಧ್ಯಯನ ಸಮಿತಿಯು ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. 29ರ ಹರೆಯದ ಕ್ಯಾಸಿಲಾಸ್ ಭಾನುವಾರ ನಡೆದ ಫೈನಲ್‌ನಲ್ಲಿ ಕೆಲವು ಸೊಗಸಾದ ಸೇವ್‌ಗಳ ಮೂಲಕ ಹಾಲೆಂಡ್‌ಗೆ ಗೆಲುವನ್ನು ನಿರಾಕರಿಸಿದ್ದರು.
ಪೆರುಗ್ವೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ಯಾಸಿಲಾಸ್ ಪೆನಾಲ್ಟಿಯನ್ನು ತಡೆದಿದ್ದರು. ಪಂದ್ಯವನ್ನು ೨-೧ ರಲ್ಲಿ ಜಯಿಸಿದ ಸ್ಪೇನ್ ಸೆಮಿಫೈನಲ್ ಪ್ರವೇಶಿಸಿತ್ತು.


ಈಗಾಗಲೇ ನಿವೃತ್ತಿಯ ವಯಸ್ಸಾಗುತ್ತಿರುವ  ಆಕ್ಟೋಪಸ್ "ಪಾಲ್" ಹಿಂದೆ ಸರಿಯುವುದೊಳ್ಳೆಯದು.

 
ದಕ್ಷಿಣ ಆಫ್ರಿಕಾದಲ್ಲಿ ನಡೆದ ೧೯ ನೇ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಎಂಟು ಪಂದ್ಯಗಳ ನಿಖರ ಭವಿಷ್ಯ ಹೇಳಿ "ಸ್ಟಾರ್" ಪಟ್ಟ ಪಡೆದಿರುವ ಆಕ್ಟೋಪಸ್ "ಪಾಲ್" ನಿವೃತ್ತಿಯಾಗಲಿದೆಯಂತೆ !
ಜರ್ಮನಿಯ ೭  ಪಂದ್ಯಗಳು ಹಾಗೂ ಸ್ಪೇನ್-ಹಾಲೆಂಡ್ ನಡುವಿನ ಫೈನಲ್ ಪಂದ್ಯದ ಭವಿಷ್ಯ ಸರಿಯಾಗಿತ್ತು. ಆದರೆ ಇನ್ನು ಮುಂದೆ ವಿಶ್ವಕಪ್ ಪಂದ್ಯಗಳ ಭವಿಷ್ಯ ಹೇಳುವುದಿಲ್ಲವಂತೆ. 


"ಪಾಲ್ ಇನ್ನು ಭವಿಷ್ಯ ಹೇಳುವುದಿಲ್ಲ. ಅದು ನಿವೃತ್ತಿ ಹೇಳಲಿದೆ. ಅದು ಇನ್ಮುಂದೆ ತನಗೆ ಇಷ್ಟವಾಗಿದ್ದನ್ನು ಮಾಡಲಿದೆ. ತನ್ನ ಸಾಕುದಾರರೊಂದಿಗೆ ಆಟವಾಡಲಿದೆ. ತನ್ನನ್ನು ನೋಡಲು ಬರುವ ಮಕ್ಕಳಿಗೆ ಮುದ ನೀಡಲಿದೆ" ಎಂದು ಓಬೆರ್ಹಾಸೆನ್‌ನ ಅಕ್ವೇರಿಯಂನ ವಕ್ತಾರೆ ತಾನ್ಜಾ ಮುಂಜಿಗ್ ಹೇಳಿದ್ದಾರೆ.


ಈ ಬಾರಿ ಪಾಲ್ ಹೇಳಿದ ಎಲ್ಲಾ ಭವಿಷ್ಯ ಸರಿಯಿದ್ದ ಕಾರಣ ಅದಕ್ಕೆ ಅಕ್ವೇರಿಯಂನ ಸಿಬ್ಬಂದಿ ವಿಶ್ವಕಪ್ ಟ್ರೋಫಿ ಹೋಲುವ ಚಿನ್ನದ ಕಪ್‌ನ್ನು ಉಡುಗೊರೆಯಾಗಿ ನೀಡಿದರು. ಆದರೆ ಅದನ್ನು ಆಕ್ಟೋಪಸ್ ಸ್ವೀಕರಿಸಲಿಲ್ಲ.

 

ವಿಶ್ವಕಪ್ ನಲ್ಲಿ ಭಾಗವಹಿಸಿದ ತಂಡಗಳು ಗಳಿಸಿದ ಪ್ರಶಸ್ತಿಯ ಹಣದ ವಿವರಗಳು : (ಸೋತವರು/ಗೆದ್ದವರು)
 
೧. ಫುಟ್ಬಾಲ್  ವಿಶ್ವಕಪ್ ನಲ್ಲಿ,   ಜಯಗಳಿಸಿದ ತಂಡ : * (ಸ್ಪೇನ್) ೩೦ ಮಿ. ಡಾಲರ್ 

 

* ಡಚ್  ರನ್ನರ್ ಅಪ್-೨೪ ಮಿ. ಡಾಲರ್ ಗಳು 

 


೨. ಸೆಮಿಫೈನಲ್ ಗೆ ಬಂದವರು :

 

ಜರ್ಮನಿ ಹಾಗೂ ಉರುಗ್ವೆ--೨೦ಮಿ. ಡಾಲರ್ ಗಳು.  


೩. ಕ್ವಾರ್ಟರ್ ಫೈನಲ್ ಗೆ ಬಂದವರು :

 

ಅರ್ಜೆಂಟೀನ, ಬ್ರೆಝಿಲ್, ಘಾನ, ಪರಗ್ವೆ,-೧೮ ಮಿ. ಡಾಲರ್ ಗಳು.


೪. ೨ನೇ ರೌಂಡ್ ನಲ್ಲಿ ಸೋತವರು :

 

ಚಿಲಿ, ಇಂಗ್ಲೆಂಡ್, ಜಪಾನ್ ಮೆಕ್ಸಿಕೊ, ಪೋರ್ಚುಗಲ್,ಸ್ಲೊವಾಕಿಯ, ದ. ಕೊರಿಯ, ಅಮೆರಿಕ ಸಂಯುಕ್ತಸಂಸ್ಥಾನಗಳು,  ೯ ಮಿ. ಡಾಲರ್ ಗಳು.


೫. ಪ್ರಥಮ ರೌಂಡ್ ನಲ್ಲಿ ಸೋತವರು :

 

ಆಲ್ಜಿರಿಯಾ, ಆಸ್ಟ್ರೇಲಿಯ, ಕ್ಯಾಮರೂನ್, ಡೆನ್ಮಾರ್ಕ್, ಫ್ರಾನ್ಸ್ ಗ್ರೀಸ್, ಹಾಂಡುರಾಸ್, ಇಟಲಿ, ಐವರಿ ಕೋಸ್ಟ್, ನ್ಯೂಝಿಲ್ಯಾಂಡ್,  ನೈಜಿರಿಯ, ಉತ್ತರ ಕೊರಿಯ, ಸರ್ಬಿಯ, ಸ್ಲೊವೆನಿಯ, ದ. ಆಫ್ರಿಕ, ಸ್ವಿಟ್ಸರ್ ಲ್ಯಾಂಡ್  ೮ ಮಿ. ಡಾಲರ್ ಗಳು.


ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ, ಕಾಲ್ಚೆಂಡಿನಾಟದ ಶಕ್ತಿಕೇಂದ್ರಗಳಲ್ಲಿ ಸ್ಪೇನ್ ದೇಶವೂ ಒಂದು. ಇಲ್ಲಿನ ಜನ ಈ ಕ್ರೀಡೆಯನ್ನು ತಮ್ಮ ಸಂಸ್ಕೃತಿ, ಅಥವಾ ಜೀವನಶೈಲಿಯ ಅಂಗವೆಂದು ಪರಿಗಣಿಸುತ್ತಾರೆ. ೧೯೬೪ ಮತ್ತು, ೨೦೦೮ ರಲ್ಲೂ ಯೂರೋಪಿನ ಕಾಲ್ಚೆಂಡಾಟದ ಸಾಮ್ರಾಟನೆಂಬ ಹೆಗ್ಗಳಿಕೆಯನ್ನು ಸಂಪಾದಿಸಿದ, ಸ್ಪೇನ್ ಜಾಗತಿಕ ನೆಲೆಯಲ್ಲಿ ವಿಜಯಗಳಿಸಿದ್ದು ಕಡಿಮೆಯೇ.

 

ಸಂಕಟ ನೋವು ಅದರ ಮೈಮನಗಳಲ್ಲಿ ಮನೆಮಾಡಿತ್ತು. ೮ ದಶಕಗಳಿಂದ ಯಾರನ್ನು ವಿಚಾರಿಸಿದರೂ ಅದೊಂದು ಅತ್ಯಂತ ಶ್ರೇಷ್ಟ ಟೀಮ್ ಗಳಲ್ಲಿ ಇದೊಂದೆಂದು, ಪರಿಗಣಿಸಲ್ಪಟ್ಟು, ನಿರ್ಣಾಯಕ ಪಂದ್ಯಗಳಲ್ಲಿ ಮಾತ್ರ  ವಿಫಲವಾಗುವ ಅರೆ-ಸಾಧಕ ಬಣವೆಂದೇ ಪರಿಗಣಿಸಲ್ಪಟ್ಟಿತ್ತು.  ಆದರೆ ವಿಶ್ವಕಪ್ ಗೆಲ್ಲುವ ಹಣೆಬರಹವಿಲ್ಲ. ಈ ಮಾನಸಿಕ ವಿಚಾರಧಾರೆಗಳು,  ೨೦೧೦ ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಜರುಗಿದ  ವಿಶ್ವಕಪ್ ಪ್ರತಿಯೋಗಿತೆಯಲ್ಲಿ ಸಾಕಾರವಾಗುವ ಕಾಲಬಂದೊದಗಿತು. ಬ್ರೆಝಿಲ್ (೫), ಇಟಲಿ (೪)ಜರ್ಮನಿ(೩), ಅರ್ಜೆಂಟೀನ(೨), ಇಂಗ್ಲೆಂಡ್, ಪ್ರಾನ್ಸ್ ನಂತಹ, ಭಾರಿ ತಂಡಗಳ ಜೊತೆಗೆ  ಸ್ಪೇನ್ ಸಹಿತ ಫೇವರೈಟ್

ತಂಡಗಳಲ್ಲೊಂದಾಗಿತ್ತು.

 

೨೦೧೦ ರ "ಫುಟ್ಬಾಲ್  ವಿಶ್ವಕಪ್ ಪ್ರತಿಯೋಗಿತೆ " :


ಸ್ಪರ್ಧೆಯಲ್ಲಿ ಸ್ಪೇನ್ ನ ಆಟದ ವೈಖರಿ, ಅನುಕರಣೀಯವಾಗಿತ್ತು. ಯಾವ ಅಬ್ಬರ, ಆರ್ಭಟವಿಲ್ಲದ ತಂಡ ಸ್ವಿಟ್ಝರ್ ಲ್ಯಾಂಡ್ ವಿರುದ್ಧದ  ತನ್ನ ಆರಂಭಿಕ ಮ್ಯಾಚ್ ನಲ್ಲೇ ಪರಾಜಯವಾಯಿತು. ನಿಯಮಕ್ಕನುಸಾರವಾಗಿ, ಆಡಿದ ಸಭ್ಯಆಟವೇ ಸ್ಪೇನ್ ತಂಡದ "ಟ್ರಂಪ್ ಕಾರ್ಡಾಗಿತ್ತು."ಹೀಗೆ ವಿಜಯ ಪತಾಕೆ ಹಾರಿಸಿದ ಸ್ಪೇನ್, ಜಾಗತಿಕ ಫುಟ್ಬಾಲ್ ಇತಿಹಾಸದಲ್ಲಿ ಅನೇಕ ಪ್ರಥಮಗಳಿಗೆ ನಾಂದಿಹಾಡಿತು. ಇದುವರೆಗೆ ಕೇವಲ ೭ ರಾಷ್ಟ್ರಗಳು ೧೮ ಆವರ್ತಿಗಳಲ್ಲಿ ಗೆಲ್ಲುವ ಕುದುರೆಗಳಾಗಿದ್ದರು. ಇಂದು ಆ ಪರಂಪರೆಯನ್ನು ಮುರಿದ ೮ ನೇ ಕೀರ್ತಿವಂತ ಟೀಮೆಂಬ ಹೆಗ್ಗಳಿಕೆ  ಇದರದಾಗಿದೆ. ಇದುವರೆಗೆ ನಡೆದ ಟೂರ್ನಿಗಳಲ್ಲಿ  ೩ ತಂಡಗಳು,  ಕೇವಲ ಯೂರೋಪ್ ನಲ್ಲಿ ಮಾತ್ರ ೫ ಬಾರಿ  ಗೆದ್ದು, ವಿಶ್ವಕಪ್ ನ್ನು ಹಾಸಲ್ ಮಾಡಿಕೊಂಡಿದ್ದಾರೆ.

 

ಆದರೆ, ಯೂರೋಪಿನ ಹೊರಗೆ ಸ್ಪೇನ್ ತಂಡ ಗೆದ್ದು,  ಒಂದು ಹೊಸ ವಿಕ್ರಮವನ್ನು ಸ್ಥಾಪಿಸಿದೆ. ಕ್ರಿಕೆಟ್ ಅಲ್ಲದೆ ಫುಟ್ಬಾಲ್ ನಲ್ಲೂ ಅತಿ ಹೆಚ್ಚಿನ ಹಣದ ಹೊಳೆಯೇ ಹರಿಯುತ್ತದೆ. ಯೂರೋಪಿನ ಪ್ರಥಮ ದರ್ಜೆಯ ಕ್ಲಬ್ ಗಳಲ್ಲಿ ಅಡುವ ಆಟಗಾರರು ಸಹಿತಾ, ಕೋಟ್ಯಾಧಿಪತಿಗಳಾಗಿದ್ದಾರೆ. ಈ ಆಟದ ವಿಶ್ವ ಆಡಳಿತ ಸಂಸ್ಥೆ ಫಿಫಾ ವಿಶ್ವಕಪ್ ನ ಆತಿಥ್ಯವನ್ನು ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ನೀಡುವ ಆಟದ ವನ್ನು ಜನಸಾಮಾನ್ಯರಿಂದ ದೂರ ಕೊಂಡುಯ್ಯುತ್ತಿದೆಯೆಂಬ ಆರೋಪ ಈಗ ಸುಳ್ಳಾಗಿ ಸಾಬೀತಾಗಿದೆ. ೩೦ ದಿನಗಳ ಸತತ ಪಂದ್ಯಗಳನ್ನು ಆಯೋಜಿಸಿದ ವಿಧಿ-ವಿಧಾನಗಳು, ನಿಯೋಜಕರ ಶ್ರದ್ಧೆ, ಕಾರ್ಯಚಟುವಟಿಕೆಗಳಿಂದ ಎಲ್ಲರೂ ಸಂತೃಪ್ತರಾಗಿದ್ದಾರೆ. ಆರ್ಥಿಕವಾಗಿ ನೋಡಿದರೆ, ಸಂಘಟಕರು ನಿರೀಕ್ಷಿಸಿದ್ದಕ್ಕಿಂತಾ ಮಿತಿಮೀರಿ ಹೆಚ್ಚಿನ ಲಾಭಸಂದಾಯವಾಗಿದೆ. "ಕಾಲ್ಚೆಂಡಿನಾಟದ ನವೋದಯ"ದ ಕಾಲ  ಆರಂಭವಾಗಿದೆ. ಸನ್ ೨೦೧೪ ರ ವಿಶ್ವಕಪ್ ಪಂದ್ಯಗಳು ಬ್ರೆಝಿಲ್ ದೇಶದಲ್ಲಿ ನಡೆಯಲಿವೆ. ಅಲ್ಲಿ ಬಳಸುವ ಚೆಂಡು ಖಂಡಿತ "ಜಬುಲಾನಿ" ಯಂತೂ ಅಲ್ಲ ! ಇನ್ನು ದಕ್ಷಿಣ ಆಫ್ರಿಕದ ಭವ್ಯ,ಸುಸಜ್ಜಿತ ಫುಟ್ಬಾಲ್ ಸ್ಟೇಡಿಯಮ್ ಒಳಗೆ, ದರ್ಶಕರು ಉತ್ಸಾಹದಿಂದ ಊದುತ್ತಿದ್ದ, "ವುವುಝೇಲಾ ಪೀಪಿಯೂ  " ಸಹಿತ ; ಮತ್ತೆ ನಾವು ಕಾಣಲಾರೆವು !