ಮುಸ್ಸಂಜೆ ಮುಸುಕು

ಈ ಸಂಜೆಯ ಬಾನೇಕೊ ಕದಡುತಿದೆ

ನೆನಪಿನಾಳಕೆ ಮನವ ದೂಡುತಿದೆ

ಜಾರುತಿರೆ ಬಾನ ಕೆಂದಾವರೆ ಕಡಲಿಗೆ

ಸೆಳೆದಿದೆ ಮನವ ಭೂತಕಾಲದ ಮಡಿಲಿಗೆ

 

ಮಧುರ ನೆನಪುಗಳ ನೆರಳಿನಲವಿತಿರುವ

ಸಹಿಸಲಾರದ ನೋವು ಹಿಂಡುತಿದೆ ಜೀವವ

ತಡೆದಷ್ಟು ಚಿಮ್ಮುವ ಕಣ್ಣೀರಿನ ದ್ರವ

ಚುಂಬಿಸಿ ಕೆನ್ನೆಯ, ತಲಪುತಿದೆ ಎದೆಯಂಗಳವ

 

ಜೀವಿತದಿ ಬಂದು ಹೋಗುವ ಮಂದಿ ಅದೆಷ್ಟೋ !

ಕೊನೆವರೆಗು ಮನದಾಳದಿ ಉಳಿವವರದೆಷ್ಟೋ !

ಮರೆತು ಮರೆಯೆನು ಹೆಗಲೇರಿ ಕುಣಿದಾ ಗಮ್ಮತ್ತು

ಹಸಿಯಾಗಿದೆಯಿನ್ನೂ ಹಣೆಗಿಟ್ಟ ಆ ಸಿಹಿ ಮುತ್ತು

 

ನಿನ್ನ ಕಾಣದೆ ಇರುವ ದಿನವಿರಲಿಲ್ಲವೊಂದು

ಕಾಣ ಬಯಸಿದರೂ ನೀ ಸಿಗಲೊಲ್ಲೆ ಇಂದು

ಬರಬೇಕೆನಿಸುವುದಲ್ಲಿಗೇ ನೀ ಕರೆದಾಗ ಚಿನ್ನು

ಕ್ಷಮೆ ಇರಲಿ, ಶಿವನಿಟ್ಟ ಆಯಷ್ಯು ಮುಗಿದಿಲ್ಲವಿನ್ನು

 

ನಿತ್ಯ ಕಾದಿರುವೆ ತಂದೆ ನಿನ್ನ ಬರುವಿಕೆಗಾಗಿ

ಕೈ ಮುಗಿವೆ ಬಾ ಧರೆಗೆ ನನ್ನ ಕಂದನಾಗಿ.

 

                                                -- ರವಿ ಪೂಜಾರಿ

 

ಸ್ವಲ್ಪ ವಿಚಾರ:

ಈ ಕವನದ ಸಂದರ್ಭ - ಸಂಜೆ ಸೂರ್ಯ ಮುಳುಗುವ ಸಮಯ ಆಗಸವೆಲ್ಲ ಕೆಂಪು ಕೆಂಪಾಗಿರಲು, ಅಲ್ಲೇ ನದಿಯ ದಡದಲ್ಲಿ ಆಗಸವ ಕಾಣುತ್ತ ಕುಳಿತ ಒಂದು ಮುದ್ದಾದ ಹುಡುಗಿಯ (ಕುಮಾರಿ) ನೆನಪುಗಳು, ನೆನಪಿನ ಹಿಂದಿರುವ ದುಖಃದ ಆಳ, ತಂದೆಯ ಮೇಲೆ ಆಕೆಗಿದ್ದ ಪ್ರೀತಿ ಮತ್ತು ಅದರ ಅಗಲಿಕೆಯನ್ನು ತಿಳಿಸುವ ಒಂದು ಕವನ, ಮುಸ್ಸಂಜೆ ಮುಸುಕು. ಮೊದಲ ಎರಡು ಸಾಲುಗಳು ಯಾರೋ ಒಬ್ಬಾಕೆ ತನ್ನ ಪ್ರಿಯತಮನನ್ನು ನೆನೆಯುತ್ತಿರಬಹುದು ಎನಿಸುವುದಾದರೂ, ಮುಂದೆ ಹೋದಂತೆ ಅದು ಹುಸಿಯಾಗುತ್ತದೆ. - ನಿಮ್ಮ ಅಭಿಪ್ರಾಯ ತಿಳಿಸಿ.