ಗಂಗಾ ಗಂಗೇತಿ ಯೊ ಬ್ರೊಯಾತ್ |ಯೋಜನನಾಮ್ ಸತೈರಪಿ|
ಮುಚ್ಚತೇ ಸರ್ವ ಪಾಪಬ್ಯೊ ವಿಷ್ಣುರ್ಲೋಕಂ ಸ ಗಚ್ಚತಿ|
ಗಂಗಾ ಎಂದರೆ ಸಕಲ ಪಾಪ ನಾಶವಾಗುವುದಲ್ಲದೇ ವಿಷ್ಣುಲೋಕ ಪ್ರಾಪ್ತಿಯೂ ಉಂಟಾಗುತ್ತದೆ . ಹುಟ್ಟಿದ ಆರಂಭದಿಂದ ಸಾಯುವ ಕೊನೆಗಳಿಗೆಯ ವರೆಗೂ ನಮ್ಮ ಕೈ ಹಿಡಿದು ಕಾಪಾಡುವ ತಾಯಿ ಈ ಪವಿತ್ರ ಗಂಗೆ. ಗಂಗಾ, ಭಾಗೀರಥಿ , ಅಲಕಾನಂದ, ಜಾಹ್ನವಿ ಎಂದು ಹಲವು ಹೆಸರುಗಳಿಂದ ಕರೆಸಿ ಕೊಳ್ಳುತ್ತಾಳೆ ಇವಳು. ಜಹ್ನು ಋಷಿಗಳ ಮಗಳಾದ ಇವಳು ಹರಿಯ ಪಾದದಲ್ಲಿ ಹಾಗೂ ಶಿವನ ಜಟೆಯನ್ನು ಆಶ್ರಯಿಸಿದ್ದಾಳೆ. ಭಗೀರಥ ಮಹಾರಾಜನ ತಪ್ಪಸ್ಸಿಗೇ ಓಗೊಟ್ಟು ಧರೆಗೆ ಧುಮುಕಿದಳು.
ಗಂಗೆ ಎಲ್ಲಾ ಜೀವಿಗಳ ಜೀವನಾಧಾರವಾಗಿದ್ದಾಳೆ. ಅವಳು ಹರಿದಲೆಲ್ಲಾ ಹಸಿರು ಪಸರಿಸುತ್ತಾಳೆ. ಅವಳ ಬೋರ್ಗರೆತದ ಶಕ್ತಿಯನ್ನು ಬಳಸಿ ಬೆಳಕನ್ನು ತಯಾರಿಸಲು ಪ್ರೋತ್ಸಾಹಿಸುತ್ತಾಳೆ. ಪರಿಸರದ ಅವಿಭಾಜ್ಯ ಅಂಗವಾಗಿದ್ದಾಳೆ. ನೀರು ಜಗತ್ತಿನ ಅತೀ ಮುಖ್ಯ ಪಂಚಭೂತಗಳಲ್ಲಿ ಒಂದು. ಎಲ್ಲಾ ಜಲಚರ ಪ್ರಾಣಿಗಳು ಅಲ್ಲದೆ ಮರಗಿಡಗಳು ಸಹಾ ಜಲವನ್ನೇ ಅವಲಂಬಿಸಿದೆ. ನಮಗೂ ನೀರಿಲ್ಲದಿದ್ದರೆ ಬದುಕಲು ಸಾಧ್ಯವೆ ಇಲ್ಲ. ಏಕೆ ಗೊತ್ತೇ ?ನಮ್ಮ ದೇಹದ ಎಪ್ಪತೈದು ಭಾಗಕ್ಕಿಂತ ಹೆಚ್ಚಿನ ಭಾಗವು ಯಾವುದಾದರೊಂದು ರೂಪದಲ್ಲಿ ನೀರಿನಿಂದ ಕೊಡಿದೆ. ಅದಲ್ಲದೆ ನೀರಿನಲ್ಲಿರುವ ಜಲಜನಕ ಹಾಗೂ ಆಮ್ಲಜನಕವೂ ದೇಹದ ಎಲ್ಲಾ ರಾಸಾಯನಿಕ ಕ್ರಿಯೆಗಳಲ್ಲೂ ಭಾಗವಹಿಸುತ್ತದೆ.
ಇಷ್ಟೊಂದು ಉಪಕಾರ ಮಾಡುವ ಗಾಂಗೇಯನ ತಾಯಿಯು ಭೂಮಿಯಲ್ಲಿ ಸನ್ನಿಹಿತವಾಗುವ ದಿನವನ್ನು ''ಭಾಗೀರಥಿ ಹಬ್ಬ'' ಎಂದು ಪ್ರತಿ ಆಷಾಢದಲ್ಲಿ ಆಚರಿಸುತ್ತೇವೆ. ದಕ್ಷಿಣಾಯನ ಪುಣ್ಯಕಾಲದಂದು ಸೂರ್ಯನು ದಕ್ಷಿಣದಿಕ್ಕಿಗೆ ಪ್ರಯಾಣ ಮಾಡುತ್ತಾನೆ. ಈ ಸಂಕ್ರಮಣದ ದಿನ ಗಂಗೆ ನದಿಗಳಲ್ಲಿ , ಭಾವಿಗಳಲ್ಲಿ ಹೀಗೇ ಜಲಸಂಗ್ರಹಗಳಲ್ಲಿ ಆವಿರ್ಭವಿಸುತ್ತಾಳೆ. ಆದ್ದರಿಂದ ಈ ಪರ್ವ ಕಾಲವು ''ಭಾಗೀರಥಿ ಹಬ್ಬ'' ಎಂದು ಪರಿಚಿತವಾಗಿದೆ. ಗಂಗೆ ಭೂಮಿಗೆ ಆಗಮಿಸುವ ಈ ದಿನವನ್ನು ನಮ್ಮ ಹಿರಿಯರು ಅವಳ ಉಪಕಾರ ಸ್ಮರಣೆಯನ್ನು ನೆನೆಯುತ್ತಾ ಆಚರಿಸುತ್ತಿದರು. ಆಷಾಡದಲ್ಲಿ ಬರುವ ಆ ಜಿಟಿ ಜಿಟಿ ಮಳೆಗೆ ತುಂಬಿ ಹರಿಯುವ ಜಲಸಂಗ್ರಹಗಳಲ್ಲಿ ಉದ್ಬವಿಸುವ ಗಂಗೆಯನ್ನು ಕಳಸದಲ್ಲಿ ತುಂಬಿ. ಮಂತ್ರಾಕ್ಷತೆ, ಅಡಿಕೆ, ದಕ್ಷಿಣೆಯನ್ನು ಕಳಸದಲ್ಲಿ ಹಾಕಿ. ಕಳಸವನ್ನು ಸುಣ್ಣ, ಅರಿಸಿನ, ಕುಂಕುಮ, ಮಾವಿನ ಎಲೆಗಳಿಂದ ಹಾಗೂ ಹೂವು, ಗೆಜ್ಜೆವಸ್ತ್ರ ಗಳಿಂದ ಸಿಂಗರಿಸಿ ಗಂಗಾಹಬ್ಬವನ್ನು ಆಚರಿಸುತ್ತಿದ್ದರು. ಅಷ್ಟೇ ಅಲ್ಲದೇ ಗಂಗೆಗೇ ಬಾಗಿನ ಕೊಡುತ್ತಿದರು.ಗಂಗೆ ಭೀಷ್ಮನ ತಾಯಿ ಬಹಳ ವಯಸ್ಸಾದ ಮುತೈದೇ ಎಂದು ಅವಳಿಗೇ ಕುಚ್ಚಿದ ಕಡಬು, ಹಾಲುಬಾಯಿ, ಮೊಸರನ್ನಗಳನ್ನು ತಯಾರಿಸಿ ನೈವೇದ್ಯ ಸಮರ್ಪಿಸುತ್ತಿದ್ದರು.
ನೀರಿನ ಮಹತ್ವವನ್ನು ಅರಿತ ನಮ್ಮ ಪೂರ್ವಿಕರು ನೀರಿಗಾಗಿ ಒಂದು ವಿಶೇಷ ದಿನವನ್ನಾಗಿ ಮುಡಿಪಿಟ್ಟು ನಮಗೆ ಗಂಗೆಯ ಬಗ್ಗೆ ಅರಿವನ್ನು ಮೂಡಿಸಿ ಪರಿಸರ ಸಂರಕ್ಷಣೆಯ ಹೊಸ ಬುನಾದಿಯನ್ನು ರೂಡಿಸಿದ್ದರು. ಅವರ ಮುಂದಿನ ಪೀಳಿಗೆಯಾದ ನಾವು ಈ ಹಬ್ಬವನ್ನು ಮಿತವಾಗಿ ನೀರು ಬಳಸುವುದರ ಮೂಲಕ ಹಾಗೂ ನೀರಿನ ಪುನರ್ಬಳಕೆಯನ್ನು ಮಾಡಿ , ನೀರನ್ನು ಕಲುಷಿತ ಗೊಳಿಸದೇ, ಮಳೆನೀರನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಿ ಅಂತರ್ಜಲವನ್ನು ಹೆಚ್ಚಿಸುತ್ತಾ. ಈ ಹಬ್ಬವನ್ನು ಆಚರಿಸುವದಲ್ಲದೆ ಗಂಗೆಗೆ ನಮ್ಮ ಋಣವನ್ನು ತೀರಿಸುವ ಸಣ್ಣ ಹೆಜ್ಜೆ ಇಡೋಣ ಅಲ್ಲವೇ!
ಪ್ರತಿಕ್ರಿಯೆ (1)