ಮೈಸೂರಿನ ಬಳಿ ಮೂಗೂರಿನಲ್ಲಿ ತಿಬ್ಬಾದೇವಿ ಗುಡಿಯಿದೆ.

 

     ಗುಡಿಗೆ ತನ್ನದೇ ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳಿದ್ದು ಅವುಗಳಲ್ಲಿ ಇಂದಿಗೂ ಪಾಲನೆಯಘುತ್ತಿರುವ ಪವಾಡಗಳು ಅಚ್ಚರಿ ಹುಟ್ಟಿಸುತ್ತವೆ. ಗುಡಿಯನ್ನು ನವಾಬನೊಬ್ಬ ಕಟ್ಟಿಸಿದನಂತೆ.

    ಮೂಗೂರಿನ ನೇರಳೆಮರದ ಕೆಳಗೆ ವಿಶ್ರಾಂತಿಗಾಗಿ ಮಲಗಿದ್ದ ನವಾಬನಿಗೆ ದೇವಿ ಕನಸಲ್ಲಿ ಕಾಣಿಸಿಕೊಂಡು ಗುಡಿಕಟ್ಟಿಸಲು ಅಪ್ಪಣೆ ನೀಡಿದಳಂತೆ. ಕನಸಲ್ಲಿಯೇ ನವಾಬನು ದೇವಿಗೆ ನೀನು ನಿಜವಾದ ಮಹಿಮೆಯೇ ಆಗಿದ್ದರೆ ತಲೆಕೆಳಗಾಗಿ ಹೂತಿಟ್ಟ ಕೊರಡು ಜೋಳವನ್ನು ಚಿಗುರಿಸು ಎಂದು ಸವಾಲು ಹಾಕಿದನಂತೆ.

 ಬೆಳಿಗ್ಗೆ ನಿದ್ದೆಯಿಂದ ತಿಳಿದು ನೋಡಿದಾಗ ಜೋಳದ ತೆನೆ ಚಿಗುರೊಡೆದಿತ್ತಂದೆ. ಆಗ ನವಾಬನು ದೇವಿಯ ಗುಡಿಯನ್ನು ಕಟ್ಟಿಸಿದನಂತೆ.

 

 ಈಗಲೂ ಜಾತ್ರೆಯ ಹಿಂದಿನ ರಾತ್ರಿ ಒಬ್ಬ ಗುಡಿಯ ಹಿಂದಿನ ನೇರಳೆ ಮರವನ್ನು ಹತ್ತಿ ಎಲೆಗಳನ್ನೆಲ್ಲ ಸವರಿ ಬರುತ್ತಾನಂತೆ. ಮರುದಿನ ಬೆಳಗ್ಗೆಯ ಹೊತ್ತಿಗೆ ಎಲೆಗಳು ಚಿಗುರೊಡೆದಿರುತ್ತವಂತೆ.

 

 ಇರಲಿ. ತಿಬ್ಬಾದೇವಿ ಎಂಬ ಹೆಸರು ಹೇಗೆಬಂತು ಎಂಬ ಹಿನ್ನೆಲೆಯನ್ನು ಹುಡುಕಿದಾಗ ಒಂದೆರಡು ಉತ್ತರಗಳು ದೊರಕಿದವು.

 

 ತಮ್ಮ ಅವಧೇಶ್ವರಿ ಕಾದಂಬರಿಯ ಮುನ್ನುಡಿಯಲ್ಲಿ ಶಂಕರ ಮೊಕಾಶಿ ಪುಣೇಕರ್ ತಿಬ್ಬಾದೇವಿಯು ಗ್ರೀಕ್ ದೇವತೆ ’ಥೀಬ್ಸ್’ ನ ಭಾರತೀಯ ರೂಪ ಎನ್ನುತ್ತಾರೆ. ಮಾರಿಯಮ್ಮ  ಮೇರಿಯಮ್ಮನ ರೂಪವಾಗಿರಬಹುದು ಎಂದು ಅಭಿಪ್ರಾಯಪಡುತ್ತಾರೆ. ಹಿಂದೊಂದು ಕಾಲದಲ್ಲಿ ಯುರೋಪಿಯನ್ ನೆಲದ ಕಡೆಯಿಂದ ವಲಸೆ ಬಂದವರು ಭಾರತದಲ್ಲಿ ನೆಲೆಸಿ ತಮ್ಮ ದೇವತೆಗಳನ್ನು ಪೂಜಿಸತೊಡಗಿ ಅವು ಭಾರತೀಯ ರೂಪ ಪಡೆದುಕೊಂಡಿರಬಹುದು ಎಂಬ ತರ್ಕವನ್ನು ಮುಂದಿಡುತ್ತಾರೆ.

 

    ಈ ಬಗ್ಗೆ ಗೆಳೆಯರಾದ ಬರತ್ ಅವರೊಡನೆ ಮಾತ್ಸರಕ್ಕೆ ತೊಡಗಿದಾಗ ತಿಪ್ಪೆ>ದಿಬ್ಬ>ತಿಬ್ಬಾ ಇದರಿಂದ ತಿಬ್ಬಾದೇವಿ ಎಂದಾಗಿರಬಹುದು ಎಂಬ ಯೋಚನೆಯನ್ನು ಮುಂದಿಟ್ಟರು. ತಿಪ್ಪೆ ಎಂದರೆ ಎತ್ತರದ ಜಾಗ, ಎತ್ತರದ ಜಾಗೆಯಲ್ಲಿ ಕುಳಿತಿರುವ ದೇವಿ ತಿಬ್ಬಾದೇವಿ ಅಂತ ಆಗಿರಬಹುದು.

 ಆದರೆ ಮೂಗೂರಿನ ತಿಬ್ಬಾದೇವಿ ಬೆಟ್ಟದ ಮೇಲೆ ಕುಳಿತಿಲ್ಲ. ಚಾಮುಂಡಿಯು ಬೆಟ್ಟದ ಮೇಲೆ ಕುಳಿತಿದ್ದಾಳೆ . ಚಾಮುಂಡಿಯನ್ನೇ ಇಲ್ಲಿ ಪ್ರತಿಷ್ಟಾಪಿಸಿ ತಿಬ್ಬಾದೇವಿ ಎಂದು ಕರೆದಿರಬಹುದು.

 

 ಅಲ್ಲದೇ ತಿಮ್ಮಪ್ಪ ಮತ್ತು ತಿಪ್ಪಣ್ಣ ಹೆಸರಿನ ತಿಳಿಮೆಯೂ ಇದೇ ಆಗುತ್ತದೆ. ಎತ್ತರದ ಬೆಟ್ಟದ ಮೇಲೆ ಕುಳಿತಿರುವವನು ತಿಪ್ಪ ಅಥವಾ ತಿಮ್ಮ. ತಿಪ್ಪ ಕಾಲಾಂತರದಲ್ಲಿ ತಿಮ್ಮ ಆಗಿದೆ.

 

 ತಿಬ್ಬಾದೇವಿಯ ಬಗ್ಗೆ ಬಲ್ಲವರು ಹೆಚ್ಚಿನ ಬೆಳಕು ಚೆಲ್ಲಬೇಕೆಂದು ವಿನಂತಿ.