ಶಿಕ್ಷಕರ ದಿನಾಚಾರಣೆ ಅಂದರೆ ಏನಲಾ ಅಂದಾ ಗೌಡಪ್ಪ. ಮೇಸ್ಟ್ರುಗಳು ಯಾವತ್ತು ಕೆಲಸಕ್ಕೆ ಸೇರಿರುತ್ತಾರೋ ಅದುವೇ ಸಿಕ್ಷಕರ ದಿನಾಚರಣೆ ಅಂದಾ ಸುಬ್ಬ. ಉಗಿಯಲಾ ಮಖಕ್ಕೆ, ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟು ಹಬ್ಬದ ದಿನವೇ ಸಿಕ್ಸಕರ ದಿನಾಚರಣೆ ಅಂದೆ. ಅವರು ಮೇಸ್ಟ್ರುಗಳಿಗೋಸ್ಕರ ಸಾನೇ ದುಡಿದಿದಾರೆ ಕಲಾ ಅದಕ್ಕೆ ಅವರ ದಿನಾಚರಣೆ ಮಾಡೋದು. ಸರಿ ನಾವು ಮಾಡುವಾ ಕಲಾ ಅಂದಾ ಗೌಡಪ್ಪ. ನೀವೇನು ಸಿಕ್ಸಕರಾ. ಲೇ ಇವನು ನಮ್ಮನ್ನು ಹಾಳು ಮಾಡಿರುವ ಸಿಕ್ಸಕ ಅಂದಾ ಸುಬ್ಬ. ಸರಿ ಸಿದ್ದೇಸನ ಗುಡಿತಾವ ಮಾಡೋಣ ಎಲ್ಲಾ ರೆಡಿ ಮಾಡ್ರಲಾ, ಅಂಗೇ ಸಿಕ್ಸಣಾಧಿಕಾರಿ, ಹೆಡ್ ಮೇಸಟರು ಹಂಗೇ ಐಕ್ಳಿಗೂ ಬರಕ್ಕೆ ಹೇಳ್ರಲಾ ಅಂದು, ಎಡಗೈನಾಗೆ ಪಂಚೆ ಇಟ್ಕಂಡು ಕೆರಕಂತಾ ಮನೆಕಡೆ ಹೊಂಟ.
ಸರಿ ಸಾಲೆಗೆ ಹೋಗಿ ಐಕ್ಳಿಗೆ ಸಿಕ್ಸಕರ ದಿನಾಚರಣೆಗೆ ಬರಬೇಕ್ರಲಾ ಅಂದ್ವಿ. ಅಲ್ಲಿನ ಗಣಿತ ಮೇಸ್ಟ್ರು ಸಿಕ್ಸಕರ ದಿನಾಚಾರಣೆ ಅಂದ್ರೆ ಏನು ಅಂತು ಲೇ ಇವನೂ ಒಬ್ಬ ಮೇಸ್ಟ್ರು ಡಿ.ಡಿ.ಪಿ.ಐಗೆ ಬರೆಯಲಾ ಕಂಪ್ಲೇಂಟ್ ಅಂದಾ ಸುಬ್ಬ. ರೀ ನನಗೆ ಶಿಕ್ಷಕರ ದಿನಾಚರಣೆ ಅಂದ್ರೆ ಗೊತ್ತು. ಆದರೆ "ಸಿಕ್ಸ"ಕರು ದಿನಾಚರಣೆ ಅಂದ್ರಲಾ ನಾನೆಲ್ಲೋ ಕ್ರಿಕೆಟ್ ಯುವರಾಜ್ ದಿನಾಚರಣೆ ಮಾಡ್ತೀರಾ ಅಂದಕೊಂಡಿದ್ದೆ ಅಂತು ಮೇಸ್ಟ್ರು. ಸುಬ್ಬ ಯುವರಾಜ ಅಂದ್ರೆ  ಯಾರಲಾ ಅಂದ. ಮಹಾರಾಜನ ಮಗನೇ ಯುವರಾಜ ಕಲಾ ಅಂದ ನಿಂಗ. ಓಹೋ. ಸರಿ ಸಂಜೆ ಕಾರ್ಯಕ್ರಮಕ್ಕೆ ಅಂತಾ ತಳಿರು ತೋರಣ, ಗೂಟ, ಮೈಕ್ ಸೆಟ್ ಎಲ್ಲಾ ಹಾಕ್ಸಿದ್ದಾತು. ಕಟ್ಟಿಗೆ ಕಿಸ್ನಂದೇ ಎಲ್ಲಾ ಜಬಾದಾರಿ.

 

___LINK_OPEN_ href="http://2.bp.blogspot.com/_JufO3uU_KXE/TIMe501lMSI/AAAAAAAAADs/Tk55ktxspN4/s1600/1.JPG"___

ಸರಿ ಸಂಜೆ ಕಾರ್ಯಕ್ರಮ ಸುರುವಾತು. ಪಾಪ ಮೇಸ್ಟ್ರುಗಳು ಬೇರೆ ಊರಿಗೆ ಹೋಗಬೇಕಾಗಿತ್ತು. ನೀವೇನಾದ್ರೂ ಕಾರ್ಯಕ್ರಮ ಬಿಟ್ಟು ಹೋದರೆ ಸಿಕ್ಸಣಾಧಿಕಾರಿಗೆ ಕಂಪ್ಲೇಂಟ್ ಮಾತ್ತೀನಿ ಅಂದಿದ್ದಕ್ಕೆ ಎಲ್ಲಾವೂ ಬಂದಿದ್ವು. ಅವರನ್ನೆಲ್ಲಾ ಮುಂದುಗಡೆ ಲೈನಾಗೆ ಕೂರಿಸಿದ್ದ ಗೌಡಪ್ಪ. ಸ್ಟೇಜಿಗೆ ಬರೋವು ಎಲ್ಲಾ ತಲೆ ತಗ್ಗಿಸಿಕೊಂಡು ಗೂನು ಬೆನ್ನು ಮಾಡಿಕೊಂಡು ಬರಬೇಕಿತ್ತು.  ಬೊಂಬು, ಗೂಟದಾಗೆ ಇದ್ದ ಮಳೆ ಎಲ್ಲಿ ನೆಟ್ಕಂತದೋ ಅಂತಾ, ಮಗಾ ಕಿಸ್ನ ಯಾರೋ ಆರ್.ಸಿ.ಸಿಗೆ ಹಾಕಿದ್ದನ್ನ ಬಿಚ್ಕಂಡು ಬಂದಿದ್ದ. ಅವನ ಹಿಂದೆ ಮನೆ ಮೇಸ್ತ್ರಿನೂ ನಿಂತಿದ್ದ. ಕಾರ್ಯಕ್ರಮ ಮುಗಿದ ಮೇಲೆ ತಗೊಂಡು ಹೋಗಬೇಕು ಅಂತಾ. ಹಾರಹಾಕಬೇಕಾದ್ರೆ ಎಲ್ಲಾವೂ ಮಕ್ಕಂಡಂಗೆ ಕಾಣೋದು. ಸ್ಟೇಜ್ ಹೈಟ್ ಇದ್ದದ್ದೇ ಬರೀ 5 ಅಡಿ. ಮಳೆಗೆ ಭೂಮಿ ಹಸಿಯಾಗಿದ್ದಕ್ಕೆ 10ಅಡಿ ಗೂಟ 5ಅಡಿ ಆಗಿತ್ತು. ಸರೀ ಈಗ ಗೌಡಪ್ಪನ ಭಾಸಣ ಅಂತಿದ್ದಾಗೆನೇ ಐಕ್ಳು ಚಪ್ಪಾಳೆ ಹೊಡೆದ್ವು. ಮೇಸ್ಟ್ರುಗಳ ಮಾತ್ರ ಹಲ್ಲು ಕಡಿಯೋರು. ಟೂರ್ ಹೋಗದನ್ನು ಬಡ್ಡೆಐದ ಹಾಳು ಮಾಡಿದಾನೆ ಅಂತಾ.
ಗೌಡಪ್ಪ ಮೈಕ್ ಇಟ್ಕಂತಿದ್ದಾಗೆನೇ ನಡುಗೋನು ಬಿಟ್ಟರೆ ಮತ್ತೆ ಸರಿಯಾಗೋನು. ಯಾಕ್ರೀ ಗೌಡರೆ, ಲೇ ಮೈಕ್ನಾಗೆ ಕರೆಂಟ್ ಪಾಸಾಗ್ತಾ ಐತೆ ಕಲಾ. ಲೇ ಮೈಕ್ ರಂಗಂಗೆ ಹೇಳಲಾ.ಇಲ್ಲಾ ಅಂದ್ರೆ ರಾಧಾಕೃಸ್ಣನ್ ಜನ್ಮದಿನಾಚರಣೆ ದಿನ ನಂದು ವೈಕುಂಠದ ದಿನಾ ಆಯ್ತದೆ ಕಲಾ ಅಂದ. ನೋಡಿ ಮಕ್ಕಳೆ, ಅಂತಿದ್ದಾಗೆನೇ ಮೈಕಿನ ಹಾರ್ನ್, ಡೊಯ್್್್್್್್್್್ಅನ್ನೋದು. ಅದರಾಗೆ ನೀರು ಹೋಗಿ ಹಂಗಾಗಿತ್ತು.  ಗೌಡಪ್ಪ ಭಾಸಣ ಮಾಡೋದು ಪಕ್ಕದ ಹಳ್ಳಿಗೆ ಚೆನ್ನಾಗಿ ಕೇಳೋದು. ಮುಂದಿದ್ದವರಿಗೆ ಏನೂ ಕೇಳ್ತಾನೆ ಇರ್ಲಿಲ್ಲ. ಮಗಾ ಮೈಕ್ ಸೆಟ್ ರಂಗ ಹಳೇ ಬ್ಯಾಲೆನ್ಸ್ ಕೊಟ್ಟಿಲ್ಲಾ ಅಂತಾ ಸಿಟ್ಟಿಗೆ ಹಾರ್ನ್ ನ್ನ  ಹಳ್ಳಿ ಕಡೆಗೆ  ತಿರುಗಿಸಿದ್ದ. ಸರೀ ಗೌಡಪ್ಪ ಸುರು ಹಚ್ಕಂಡ. "ಗುರುವಿನ ಗುಲಾಮನು ಆಗುವ ತನಕ ದೊರೆಯದಣ್ಣ ಮುಕುತಿ" ವಾವ್, ವಾವ್, ನೋಡ್ರಲಾ. ಮಕ್ಕಳೆ ನೀವು ಸಂದಾಗಿ ಓದಬೇಕು. ಆಮ್ಯಾಕೆ ನಿಮ್ಮ ಮನೆಯವರನ್ನ ಸಂದಾಗಿ ಸಾಕಬೇಕು, ನೀವು ಸಂದಾಗಿ ಬಾಳಬೇಕು. ಲೇ ಇವನ ಮುಖಕ್ಕೆ ಹಳೇ ಕಲಗಚ್ಚು ಹುಯ್ಯಾ ಎಷ್ಟು ಸಾರಿ ಸಂದಾಗಿ ಅಂತಾನೆ ಕೇಳಲಾ ಅಂದಾ ನಿಂಗ. ಸುಮ್ಕಿರಲಾ ಗೌಡಪ್ಪ ಮೂಡ್ನಾಗೆ ಬಂದಾವ್ನೆ ಅಂದೆ. ಸರಿ ಮಕ್ಕಳೆ ನಿಮ್ಮ ಮೇಸಟರು ಚೆನ್ನಾಗಿ ಹೇಳಿ ಕೊಡ್ಲಿಲ್ಲಾ ಅಂದ್ರೆ ಅವರು ಕೆರೆತಾವ ಬಂದಾಗ ಎರಡು ಬಿಡಬೇಕು. ಮತ್ತೆ ಏನಾದ್ರೂ ಮಾಡಿದರೆ ಕೈ ಕಾಲು ತಪ್ಪಿಸಬೇಕು, ಹಂಗೇ ಚಟಕ್ಕೆ ದಾಸರಾಗಬೇಡಿ. ಅವಾಗ ಇವಾಗ ಅಂತಾ ಚಾ ಕುಡಿಯೋ ಬೇಕಾದ್ರೆ ಒಂದು ಬೀಡಿ ಮಾತ್ರ ಸೇದಿರಿ. ಅದೂ ಜನತಾ ಬೀಡಿಗಳನ್ನೇ ಅಂದ. ವಾಸನೆ ಹೋಗೋದಿಕ್ಕೆ ಪೆಪ್ಪರ್ ಮೆಂಟನ್ನೂ ತಿನ್ನಿ ಅಂತಿದ್ದಾಗೆನೇ ಸಿಕ್ಸಣಾಧಿಕಾರಿ ಲೇ ಇವನೇನು ಮಕ್ಕಳನ್ನು ನಕ್ಸಲರು ಮಾಡಬೇಕು ಅಂತಾ ಇದಾನಾ ಅಂದು ಎದ್ದರೆ ಹೊಡಿತು ನೋಡ್ರಿ ಬೊಂಬಿನ ಮಳೆ, ಅಮ್ಮಾ ಅಂತು. ಹಚ್ರಲಾ ಅರಿಸಿನ ಅಂದು ಗಾಳಿಹಾಕಿ ಮುಂದೆ ಕೂರಿಸಿದ್ವಿ. ಕಿಸ್ನ ಮಾವಿನ ಸೊಪ್ಪು ಯಾವ ಮಟ್ಟಕ್ಕೆ ಕಟ್ಟಿದ್ದ ಅಂದ್ರೆ, ಪೋಟೋ ತೆಗೆಯೋ ಬೇಕಾದ್ರೆ ಎಲ್ಲಾವೂ ಮಾವಿನ ಸೊಪ್ಪು ಸೈಡಿಗೆ ಸರಿಸಿ ಫೋಸ್ ಕೊಡೋವು. ಕಾಡು ಮನುಸ್ಯರು ತರಾ.
ಸರಿ ಬೆಳಗ್ಗೆನೇ ನಿಂಗನ ಅಂಗಡೀಲಿ ಚಾ ಕುಡಿಯೋಕ್ಕೆ ಅಂತಾ ಬೆಳಗ್ಗೆ ಸೇರಿದ್ವಿ. ಇಬ್ಬರು ಪೊಲೀಸ್ನೋರು ಬಂದು ಗೌಡಪ್ಪಂಗೆ ನಮ್ಮ ಸಾಹೇಬರು ಕರೀತಿದಾರೆ ಬರಬೇಕು ಅಂದು ಕರೆದುಕೊಂಡು ಹೋದರು. ಮಧ್ಯಾಹ್ನದ ಸಮಯಕ್ಕೆ ಗೌಡಪ್ಪ ಅರಳಿಮರದ ಕೆಳಗೆ ಕೂತಿದ್ದ. ಯಾಕ್ರೀ ಗೌಡರೆ, ಲೇ ಮಕ್ಕಳಿಗೆ ನಾನು ಕೆಟ್ಟದ್ದನ್ನು ಹೇಳಿದೀನಿ ಅಂತಾ ಸಿಕ್ಸಕರು ನನ್ ಮ್ಯಾಕಿನ ಸಿಟ್ಟಿಗೆ ಕಂಪ್ಲೇಂಟ್ ಕೊಟ್ಟಿದ್ರು. ಚೆನ್ನಾಗಿ ವರ್ಕ್ ಮಾಡಿದಾರಲಾ. ನಡಿಯೋಕ್ಕೂ ಆಯ್ತಾ ಇಲ್ಲಾ ಅಂದ. ಎಫ್.ಐ.ಆರ್ ನೋಡಿದ್ರೆ ಕಂಪ್ಲೇಟಿಂಗಿಂತ ಸೆಕ್ಸನ್ ಗಳೆ ಜಾಸ್ತಿ ಇತ್ತು. ಸಂವಿಧಾನದಾಗೆ ಇರೋ ಸೆಕ್ಸನ್ ಎಲ್ಲಾ ಹಾಕಿದ್ರು. ಈ ಕೇಸು ಬಗೆಹರಿಯೋಕ್ಕೆ 20ವರ್ಷ ಬೇಕಾಯ್ತದೆ ಅಂದೆ. ಈಗ ಸಿಕ್ಸಕರ ದಿನಾಚರಣೆಗೆ ಹೋಗುವಾ ಅಂದ್ರೆ. ಮಗಾ ಬತ್ತಾನೆ. ಆದ್ರೆ ಕಡೇ ಸಾಲ್ನಾಗೆ ತಲೆ ಮ್ಯಾಕೆ ಟವಲ್ ಹಾಕ್ಕಂಡ್ ಕೂರ್ತಾನೆ.
ಶಿಕ್ಷಕರ ದಿನಾಚರಣೆಯ ಶುಭಾಷಯಗಳು