ನಮ್ಮಂತೆ ದೇಹ, ಹೃದಯ ಮತ್ತು ಸೀಮಿತ ಶಕ್ತಿ ಇರುವ ಒಬ್ಬ ರಾಜಕೀಯ ನಾಯಕ. ಉದಾಹರಣೆಗೆ ಯಡಿಯೂರಪ್ಪ ಅನ್ನಿ.( ಇದಕ್ಕೆ ಬಿ.ಜೆ.ಪಿ ಜನ ದಯವಿಟ್ಟು ಸಿಟ್ಟಾಗಬಾರದು. ಯಾವುದೇ ಪಕ್ಷದ ಆಡಳಿತದವರನ್ನೂ ಕಲ್ಪಿಸಿಕೊಳ್ಳಲು ತೊಂದರೆಇಲ್ಲ) ಇವರಿಗೆ ಅದು ಹೇಗೆ ಅಷ್ಟು ಚೈತನ್ಯ ಇರುತ್ತದೆ ಎಂದು ಆಶ್ಚರ್ಯವಾಗುತ್ತದೆ. ಬೆಳೆಗಿನಿಂದಲೇ ಜನರ ಒಡನಾಟ. ಏಕಾಂತತೆಯೇ ಇಲ್ಲ. ತಡರಾತ್ರಿಯ ವರೆಗೂ ನಿರಂತರ ಚಟುವಟಿಕೆ. ಇಲ್ಲಿ ಆಡಳಿತ, ಸಮಸ್ಯೆಗಳ ನಿರ್ವಹಣೆ, ನಿರ್ದೇಶನ, ಕಲ್ಯಾಣದ ಕನಸುಗಾರಿಕೆ, ರಾಜಕೀಯ ತಂತ್ರ - ಕುತಂತ್ರ ಎಲ್ಲವನ್ನೂ ನಿಭಾಯಿಸಬೇಕು. ಸಲಹೆಗಾರರ, ಸಹವರ್ತಿಗಳ ಮಾತನ್ನು ಆಲಿಸಿ ಸೂಕ್ತವಾದ್ದನ್ನು ಆರಿಸಿಕೊಳ್ಳಬೇಕು. ಎಲ್ಲರಮೇಲೆ ಕಣ್ಣಿಟ್ಟಿರಬೇಕು. ೬೦-೭೦ ರ ಆಸುಪಾಸಿನ ಇಂಥ ರಾಜಕೀಯ ವ್ಯಕ್ತಿಗಳಿಗೆ ಅದೆಂಥಾ ಶಕ್ತಿಬೇಕು !!!
ಅವರಿಗೂ ಆ ವಯಸ್ಸಿನ ಅನೇಕ ರೋಗಗಳಿರುತ್ತವೆ. ಕುಟುಂಬ ಹಿಗ್ಗುತ್ತಾ( ಮಕ್ಕಳು, ಮರಿಗಳು, ಸೊಸೆಯಂದಿರು) ಅವರೆಲ್ಲರ ಭಾವನಾತ್ಮಕ ಮಿಡಿತ, ಸುಖ - ಕಷ್ಟ, ನೋವು -ನಲಿವು ಎಲ್ಲವೂ ತಟ್ಟುತ್ತಿರುತ್ತದೆ.ದೇಹದ ಆಲಸ್ಯ, ಸುಸ್ತು ಇವನ್ನೂ ಎದುರಿಸಬೇಕು..
ಎಲ್ಲಾ ಸಾಧಕರಿಗೆ ಇರುವಂತೆ ಕೈಯಿಟ್ಟ ಕೆಲಸದಲ್ಲಿ ತೃಪ್ತಿ ಕಾಣಬೇಕೆಂಬ ಹಂಬಲ, ಇನ್ನೂ ಸರಿಯಾಗಿ ಯೋಚಿಸಬೇಕಿತ್ತೆಂಬ ಕೊರಗು, ಸಾಮರ್ಥ್ಯ ಇದ್ದೂ ಸರಿಯಾಗಿ ನಿರ್ವಹಿಸಲಿಲ್ಲವೆಂಬ ವ್ಯಥೆ,...ಇನ್ನೇನು ತನಗೆ ಸಿಕ್ಕ ಅವಕಾಶ ಮುಗಿದುಹೋಗುತ್ತದೆ ಎಂಬ ಧಾವಂತದಲ್ಲಿ - ಆಡಳಿತದ ದಿನಗಳಲ್ಲಿ ಸಾಗಬೇಕು.
ಅನೇಕಸಾರಿ ಇಂಥವರು ಇಡುವ ಕಣ್ಣೀರು ಇವೆಲ್ಲದರ ಒಟ್ಟು ಮೊತ್ತವೇ ಆಗಿರುತ್ತದೆ. ದೇವೇಗೌಡರೂ ಇಂಥಾ ಅಸಾಮಿಯೇ. ಆದರೆ ದೇವೇಗೌಡರಿಗೆ ಇಂತಹ ಒತ್ತಡ ಇಲ್ಲದಿರಬಹುದು ಅಂದುಕೊಳ್ಳುತ್ತೀನಿ. ಏಕೆಂದರೆ ಇವರ ಪಕ್ಷ ಇವರದೇ ಪಕ್ಷ. ಯಾರೂ ಪ್ರಶ್ಣೆ ಮಾಡಲಾರರು ಇಲ್ಲಿ.
ಹೇಗಾದರೂ ಅಧಿಕಾರವನ್ನು ಕಳಕೊಳ್ಳಬಾರದು ಎಂಬ ನಿರ್ಧಾರವಿದ್ದಾಗ ಹಣಬಲದ ಅಗತ್ಯವೂ ಇದ್ದೇಇರಬೇಕು. ಅದಕ್ಕಾಗಿ ಎಲ್ಲ ವಿಧಾನಗಳನ್ನೂ ಉಪಾಯಗಳನ್ನೂ ಮಾಡಬೇಕು. ಸಂಚಯವಾದ ಹಣವನ್ನು ನಿರ್ವಹಿಸಲು ಆಪ್ತವೃಂದ ಬೇಕು. ನೈತಿಕವಾಗಿ ಎಸಗಿದ ತಪ್ಪನ್ನು - ಮಾಡಿಯೇ ಇಲ್ಲ ಎನ್ನುವಂತೆ ಸಾರಬೇಕು. ಆತ್ಮಘಾತಕತನವನ್ನು "ಒಳಗಡೆ" ಎದುರಿಸಿ ನಿಭಾಯಿಸಿಕೊಳ್ಳಬೇಕು.
ಇವನೆಲ್ಲ ಮಾಡುತ್ತ ನಮ್ಮ ಪರಂಪರೆಯ ಬುದ್ದ, ಬಸವ, ಮಹಾವೀರ, ಅಶೋಕ, ಗಾಂಧಿ, ತೇರೇಸಾ ಮುಂತಾದವರ ನೆನಪನ್ನು ನೆನೆಯುತ್ತಾ ಆಂತರಿಕ ಪ್ರಶ್ಣೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಕ್ಷಣಗಳನ್ನು ಎದುರಿಸಲೇಬೇಕಾಗುತ್ತದೆ. ಆ ಹೊರೆಯನ್ನೂ ಹೊರಬೇಕು.....
ಅಬ್ಬ. ಎಷ್ಟು ಯಾತನಾಮಯ ಈ ಅಧಿಕಾರ ಲೋಲುಪತನ ಅಲ್ಲವೇ? ಯಾತಕ್ಕಾಗಿ ಇಂಥಹವರು ಇದರಲ್ಲೇ ಬೇಯುತ್ತಾರೆ ಗೊತ್ತಾಗುವುದಿಲ್ಲ. ಅಧಿಕಾರದಲ್ಲಿ ಉಳಿಯಬೇಕೆಂದರೆ ನಿಜವಾಗಿ ಈ ತರಹ ಮಾಡಲೇಬೇಕೆಂದೇನೂ ಇಲ್ಲ. "ನಾನು" ಇಲ್ಲಿ ತೀರಾ ಅಗತ್ಯ - ಅನಿವಾರ್ಯ ಅನ್ನೋ ಭಾವನೆ ಇಲ್ಲದಿದ್ದರೆ ಇದು ತುಂಬ ಹಗುರವಾಗಿರುತಿತ್ತು. ಕನಸುಗಳಿಂದ ಆವೃತವಾಗಿ ನಿರಂತರ ಜೀವನ್ಮುಖಿ ಆಗಿರುತಿತ್ತು. ಅಸಹಜ ಯಾತನೆಯಿಂದ ಮುಕ್ತಿ ಪಡೆದಿರುತ್ತಿತ್ತು......
ನಮ್ಮ ಅಧಿಕಾರಸ್ಥ ಜನಗಳ ಬಗೆಗೆ ಹೀಗೊಂದು ಸಂತಾಪ.
ಪ್ರತಿಕ್ರಿಯೆ (1)