___LINK_OPEN_href="http://lh4.ggpht.com/_0unvbAJuW0I/TErVmoGDP7I/AAAAAAAAAfM/0nes2sbRu1o/s512/p%20052.jpg"___
ಢಣ್..ಢಣ್... ಎಂದು ಹಾಲಿನಲ್ಲಿ ಗಡಿಯಾರ ಎರಡು ಬಡಿದಾಗ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದ ಮೈತ್ರಿ ಮತ್ತೊಮ್ಮೆ ಮಗ್ಗಲು ಬದಲಿಸಿದಳು. ಪ್ರತಿವರ್ಷವೂ ಈ ದಿನ ಬೆಳಗಿನಜಾವ ನಾಲ್ಕಕ್ಕೇ ಎದ್ದು ಸ್ನಾನ ಮುಗಿಸಿ ಸಂಭ್ರಮದಿಂದ ಗೌರಿಪೂಜೆಗೆ ಕೂರುತ್ತಿದ್ದದ್ದು ಅವಳಿಗೆ ನೆನಪಿಗೆ ಬಂತು.ಆದರೆ ಈಬಾರಿಯ ಗೌರಿಹಬ್ಬದಲ್ಲಿ ಏನೋ ಕೊರತೆಯಾದ ಅನುಭವ.ಇದಕ್ಕೆಲ್ಲ ಕಾರಣ ತನ್ನ ತವರಿನ ವ್ಯಾಮೋಹವೇ ಎನಿಸಿದರೂ ಮೈತ್ರಿಯ ಕಣ್ಣಾಲಿಗಳು ಮತ್ತೊಮ್ಮೆ ತುಂಬಿ ಬಂದವು. ದುಃಖ ಒತ್ತರಿಸಿ ಬಂದಾಗ ಪಕ್ಕದಲ್ಲಿದ್ದ ತನ್ನ ಪತಿಗೆ ತಿಳಿಯದಿರಲೆಂದು ಸೆರಗನ್ನು ಬಾಯಿಗಿಟ್ಟು ಉಮ್ಮಳಿಕೆಯನ್ನು ತಡೆದಳು.
ತನ್ನನ್ನು ತುಂಬು ಮನದಿಂದ ಪ್ರೀತಿಸುವ ತನ್ನಿನಿಯನಿಗೆ ತನ್ನ ಮನದುಮ್ಮಳ ತಿಳಿಯದಿರಲೆಂದು ಈ ಒಂದು ವಾರದಿಂದ ಮಾಡುತ್ತಿದ್ದ ಪ್ರಯತ್ನ ಕೆಲವೊಮ್ಮೆ ವ್ಯರ್ಥವೆನಿಸುತ್ತಿತ್ತು. ಆಗೆಲ್ಲಾ ಮೈತ್ರಿ ’ತನ್ನ ಮನಸ್ಸಿನ ನೋವು ಅವರಿಗೆ ತಿಳಿದರೂ ಸರಿ ತನಗೆ ತಿಳಿಯದೆಂದು ನಟಿಸಿದರೆ ಸಾಕು’ ಎಂದುಕೊಳ್ಳುವಳು. ಮಧುವೂ ಜಾಣನೇ. ತನ್ನ ಮಡದಿಯ ಮನಸ್ಸಿನ ತಳಮಳ ಅರ್ಥವಾಗಿದ್ದರೂ ತನಗೆ ತಿಳಿಯದಂತಿದ್ದ. ಕೆದಕಿದರೆ ಮೈತ್ರಿ ಇನ್ನೊಂದಿಷ್ಟು ನೊಂದಾಳು ಎಂಬ ಅರಿವು ಮಧುವಿಗಿತ್ತು. ತನ್ನ ತವರಿನ ವಿಷಯ ಬಂದಾಗಲೆಲ್ಲಾ ತನ್ನ ಮಧು ಈ ರೀತಿ ಮೌನವಹಿಸುವುದು ಮೈತ್ರಿಗೂ ಒಂದು ರೀತಿ ಸಂತಸದ ಜೊತೆಗೆ ಹೆಮ್ಮೆ ಎನಿಸುತ್ತಿತ್ತು. ತನ್ನನ್ನು ಆರಾಧಿಸುವ ಪತಿ, ಮುದ್ದುಮಗಳು ಮೈನಾ ಜೊತೆಗಿದ್ದರೂ ತನಗೇಕೆ ಇಲ್ಲದ ಚಿಂತೆ ಎನ್ನಿಸಿತು.
ಪಕ್ಕದಲ್ಲಿದ್ದ ಮೈನಾ ನಿದ್ದೆಗಣ್ಣಲ್ಲಿ ಅಮ್ಮಾ.... ಎಂದು ಹೊರಳಿದಾಗ ತನ್ನ ಯೋಚನೆಯಿಂದ ಹೊರ ಬಂದ ಮೈತ್ರಿ ಮಗಳ ನಿದ್ದೆಗೆ ಭಂಗ ಬರದಂತೆ ತಬ್ಬಿ,ತಟ್ಟಿ ಮಲಗಿಸಿದಳು. ಗಡಿಯಾರ ಡಣ್... ಎಂದು ಬಡಿದು ಆಗಲೇ ಎರಡೂವರೆಯಾಯಿತೆಂದು ಎಚ್ಚರಿಸಿತು.
ನಿದ್ದೆ ಬಾರದ ಮೈತ್ರಿ ತನ್ನ ಮಗಳು, ಪತಿಯ ನಿದ್ದೆಗೆ ಅಡ್ಡಿಯಾಗದಂತೆ ನಿಧಾನವಾಗಿ ಎದ್ದು ರೂಮಿನಿಂದ ಹೊರಬಂದಳು. ಬಾಯಾರಿಕೆ ಎನಿಸಿದ್ದರಿಂದ ಒಂದು ಲೋಟ ನೀರು ಕುಡಿದು ಬಂದು ವರಾಂಡದಲ್ಲಿದ್ದ ಜೋಕಾಲಿಯಲ್ಲಿ ಕುಳಿತು ನಿಧಾನವಾಗಿ ತೂಗಿಕೊಳ್ಳತೊಡಗಿದಳು. ಜೋಕಾಲಿ ಒಂದೇ ಗತಿಯಲ್ಲಿ ತೂಗುತ್ತಾ ಹೋದಂತೆ ಮೈತ್ರಿ ಕಣ್ಣು ಮುಚ್ಚಿ ಕುಳಿತಳು. ಹಿಂದಿನ ಹತ್ತು ವರ್ಷಗಳ ಚಿತ್ರಗಳೂ ಒಂದೊಂದರಂತೆ ಕಣ್ಮುಂದೆ ಬಂದು ನರ್ತಿಸತೊಡಗಿದವು.
ಮದುವೆಯಾದ ಹೊಸದರಲ್ಲಿ ಕಳೆದ ಆ ದಿನಗಳು ಮಧುರವಾಗಿದ್ದವು. ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪತಿ, ತನ್ನ ಬೇಕು-ಬೇಡಗಳನ್ನು ತಿಳಿದು ಈಡೇರಿಸುತ್ತಿದ್ದ. ಬೇಕೆನಿಸಿದಾಗ ತನ್ನ ಪತಿಯೊಂದಿಗೆ ಹಳ್ಳಿಯ ತನ್ನ ತವರಿಗೆ ಓಡುತ್ತಿದ್ದಳು. ಅಲ್ಲಿ ತನ್ನ ತಂದೆ-ತಾಯಿಯರ ಆತ್ಮೀಯ ಸ್ವಾಗತ, ಉಪಚಾರಗಳನ್ನು ಮರೆಯಲು ಸಾಧ್ಯವೇ...? ಒಂದೆರಡು ದಿನವಿದ್ದು ಮತ್ತೆ ಗಂಡನ ಮನೆಗೆ ಬರುತ್ತಿದ್ದಳು. ಕಾಲೇಜಿನ ರಜಾ ದಿನಗಳಲ್ಲಿ ಹಳ್ಳಿಗೆ ಹೋದರೆ ತನ್ನಣ್ಣನೂ ಅಲ್ಲಿ ಹಾಜರಿರುತ್ತಿದ್ದ. ತಾವೆಲ್ಲರೂ ಒಟ್ಟಿಗೆ ಕಲೆತು , ಮಾತು... ನಗು... ಹರಟೆಗಳಲ್ಲಿ ದಿನ ಜಾರುತ್ತಿದ್ದುದೇ ತಿಳಿಯುತ್ತಿರಲ್ಲಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ಬರುತ್ತಿದ್ದ ಇಂಥಾ ದಿನಗಳು ಮೈತ್ರಿಗೆ ಹಿತವೆನ್ನಿಸುತ್ತಿತ್ತು.
ಇನ್ನು ಗೌರಿಯ ಹಬ್ಬಕ್ಕಂತೂ ತನ್ನಮ್ಮನ ಸಡಗರ ಹೇಳತೀರದು. ವಾರ ಮುಂಚಿನಿಂದಲೇ ಮಗಳಿಗೆ ಗೌರಿ ಬಾಗಿನ ಕೊಡುವ ಸಂಭ್ರಮ ಮೈತ್ರಿಯ ನೆನಪಿನಿಂದ ಅಳಿಸಲಾಗುತ್ತಿಲ್ಲ.
ಈ ಐದು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳಾದವು. ತನ್ನಣ್ಣನಿಗೆ ಕೆಲಸ ಸಿಕ್ಕು ಬೆಂಗಳೂರು ಸೇರಿದ್ದ. ಕೆಲಸ ಸಿಕ್ಕ ಆರು ತಿಂಗಳಲ್ಲಿಯೇ ಅವನೇ ಒಪ್ಪಿ ಆರಿಸಿದ ಹುಡುಗಿಯೊಂದಿಗೆ ಮದುವೆಯಾಗಿ ಅಲ್ಲೇ ಮನೆ ಮಾಡಿದ್ದ. ಅಣ್ಣನ ಮದುವೆಯಾಗಿ ಮರುವರ್ಷವೇ ಖಾಯಿಲೆಯೆಂದು ಹಾಸಿಗೆ ಹಿಡಿದ ತಂದೆ ಮತ್ತೆ ಮೇಲೇಳಲೇ ಇಲ್ಲ. ಇನ್ನು ಹಳ್ಳಿಯಲ್ಲಿ ತಾಯಿಯೊಬ್ಬರೇ ಇದ್ದರೆ ಕೊರಗುವರೆಂದು ತಿಳಿದು ತನ್ನೊಡನೆ ಬರಲೊಪ್ಪದ ತಾಯಿಯನ್ನು ತಾನೇ ಅಣ್ಣನೊಂದಿಗೆ ಹೋಗಿರುವಂತೆ ಒತ್ತಾಯಿಸಿದ್ದಳು. ಆದರೆ ತೋಟದ ವಿಷಯ ಬಂದಾಗ ತಾಯಿ ಹಳ್ಳಿ ಬಿಡಲು ಸುತಾರಾಂ ಒಪ್ಪಿರಲಿಲ್ಲ. ಮನೆಯ ನಂಬಿಕಸ್ಥನಾದ ಆಳು ರಂಗ ತಾನು ಮನೆ ತೋಟವನ್ನೆಲ್ಲಾ ನೋಡಿಕೊಳ್ಳುವುದಾಗಿ ಭರವಸೆಯಿತ್ತಾಗ ತಾಯಿ ಒಪ್ಪಲೇ ಬೇಕಾಯಿತು. ಅಣ್ಣ ಹಳ್ಳಿಯಲ್ಲಿ ತೋಟದ ವ್ಯವಸ್ಥೆಯನ್ನೆಲ್ಲ ಮಾಡಿ ತಾಯಿಯೊಡನೆ ಬೆಂಗಳೂರು ಸೇರಿದ್ದ.
ನಗರದ ಆಧುನಿಕ ಮತ್ತು ಯಾಂತ್ರಿಕ ಜೀವನ ತಾಯಿಗೆ ಹೊಂದಿಕೆಯಾಗಿರಲಿಲ್ಲ. ಅಲ್ಲದೆ ಮಗ-ಸೊಸೆಯರ ಆಧುನಿಕ ನಡೆ-ನುಡಿಗಳಿಗೆ ಹೊಂದಿಕೊಳ್ಳಲಾರದೆ ಬೇಸರಿಸುತ್ತಿದ್ದರು. ತನ್ನ ಗಂಡನನ್ನು ಕಳೆದುಕೊಂಡ ದುಃಖದ ಜೊತೆಗೆ ತಾನು ಚಿಕ್ಕಂದಿನಿಂದ ಬೆಳೆದ ಹಳ್ಳಿಯಿಂದ ದೂರವಾದ ಕೊರಗನ್ನು ಹಚ್ಚಿಕೊಂಡು ಸ್ವಲ್ಪ ಕಾಲದಲ್ಲಿಯೇ ಇಹಲೋಕಯಾತ್ರೆ ಮುಗಿಸಿದ್ದರು.
ತಂದೆ-ತಾಯಿಯರನ್ನು ಕಳೆದುಕೊಂಡ ನಂತರ ತನ್ನ ಮತ್ತು ಅಣ್ಣನ ಕುಟುಂಬಗಳು ಒಟ್ಟಾಗಿ ಸೇರುವುದು ಅಪರೂಪವಾಗತೊಡಗಿತು. ಇದಕ್ಕೆ ಕೆಲಸದ ಒತ್ತಡ ಒಂದು ನೆಪವಷ್ಟೆ. ಗೌರಿ ಬಾಗಿನ ಕೊಡುವ ನೆಪದಲ್ಲಾದರೂ ಅಣ್ಣ-ಅತ್ತಿಗೆ ತನ್ನೂರಿಗೆ ಬರುವರೇನೋ ಎಂಬ ಕಾತರ ಮೈತ್ರಿಗೆ. ಆದರೆ ಅವನ ಸುಳಿವಿಲ್ಲ.
ಹಿಂದಿನವರು ಮಾಡಿಕೊಂಡಿರುವ ಕೆಲವು ಸಂಪ್ರದಾಯಗಳಲ್ಲಿ ಹುರುಳಿಲ್ಲ ಎನ್ನುವುದನ್ನು ಮೈತ್ರಿ ಒಪ್ಪುವುದಿಲ್ಲ. ಎಲ್ಲಾ ಶಾಸ್ತ್ರ- ಸಂಪ್ರದಾಯಗಳಿಗೂ ಅರ್ಥವಿದೆಯೆಂದೇ ಅವಳ ನಂಬಿಕೆ. ಗೌರಿಬಾಗಿನದ ನೆಪದಲ್ಲಿ ತನ್ನಣ್ಣ-ಅತ್ತಿಗೆ ತನ್ನ ಮನೆಗೆ ಬಂದಿದ್ದರೆ ಎಷ್ಟು ಚೆನ್ನಿತ್ತು. ಇದರಿಂದ ಒಡಹುಟ್ಟಿದವರ ನಡುವಿನ ಮಮತೆಯ ಸಂಕೋಲೆ ಇನ್ನಷ್ಟು ಗಟ್ಟಿಯಾಗುತ್ತಿತ್ತು. ಆದರೆ ತಂಗಿಯ ಈ ಸೂಕ್ಷ್ಮ ಮನವನ್ನು ಅರಿತಿಲ್ಲವಲ್ಲ ಎಂಬ ತಳಮಳ ಮೈತ್ರಿಗೆ. ವಾರದಿಂದಲೂ ಆಣ್ಣನ ಬರುವಿಕೆಗಾಗಿ ಕಾದಿದ್ದಾಳೆ. ಇನ್ನು ಬೆಳಗಾದರೆ ಗೌರಿಹಬ್ಬ. ತನ್ನ ಸಂಸಾರದ ಜಂಜಾಟದಲ್ಲಿ ಅಣ್ಣ ತನ್ನ ನಿರೀಕ್ಷೆ ಸುಳ್ಳಾಗಿಸಿದನಲ್ಲ ಎಂಬುದೇ ಮೈತ್ರಿಯ ಕೊರಗು.
ಈ ರೀತಿಯ ಯೋಚನೆಯಲ್ಲೇ ಕುಳಿತವಳಿಗೆ ಹಾಗೇ ಜೊಂಪು ಹತ್ತಿದುದು ತಿಳಿಯಲಿಲ್ಲ. ಹೊರಗೆ ಆಟೋ ನಿಂತ ಶಬ್ದ ಕೇಳಿದಾಗ ನಿದ್ದೆಯ ಜೊಂಪಿನಿಂದ ಈ ಲೋಕಕ್ಕೆ ಬಂದಿಳಿದಳು. ಗಡಿಯಾರದ ಕಡೆ ನೋಡಿದಾಗ ಆಗಲೇ ಬೆಳಗಿನಜಾವ ಐದು ಗಂಟೆಯಾಗುತ್ತಾ ಬಂದಿತ್ತು. ಅಣ್ಣನೇನಾದರೂ ಬಂದಿರಬಹುದೆ ಎಂದು ಒಂದು ಕ್ಷಣ ಅನ್ನಿಸಿತು. ಮೈತ್ರಿ ಚಕ್ಕನೆದ್ದು ಹೊರಗಡೆಯ ದೀಪ ಬೆಳಗಿಸಿದಳು. ಆಟೋದಿಂದ ತಮ್ಮ ಹಳ್ಳಿಯಲ್ಲಿ ತೋಟ ನೋಡಿಕೊಳ್ಳುತ್ತಿದ್ದ ರಂಗ ಸಾಮಾನುಗಳನ್ನು ಕೆಳಗಿಳಿಸುತ್ತಿದ್ದುದ್ದನ್ನು ನೋಡಿ ಅಚ್ಚರಿಯಿಂದ ಬಾಗಿಲು ತೆಗೆದಳು.
ಮೈತ್ರಿಯನ್ನು ಕಂಡ ರಂಗ ’ಚನ್ನಾಗಿದ್ದೀಯಾ ಮೈತ್ರವ್ವ, ಮೊನ್ನೆನೇ ಬರೋಣ ಅಂತಿದ್ದೆ. ತೋಟದ ಕೆಲಸದಲ್ಲಿ ಬಿಡುವಿಲ್ಲ ಕಣವ್ವ. ಅದಕ್ಕೆ ರಾತ್ರಿ ರೈಲ್ನಾಗೆ ಹೊಂಟ್ ಬಂದೆ’ ಎನ್ನುತ್ತಾ ಗೇಟು ತೆಗೆದು ಒಳಗೆ ಬಂದ. ’ಬಾ ರಂಗ.... ಚೆನ್ನಾಗಿದ್ದೀಯಾ....’ ಎಂದು ಆತ್ಮೀಯವಾಗಿ ಅವನನ್ನು ಕರೆದು ಕೂರಿಸಿದಳು. ರಂಗನಿಗೆ ಕಾಫಿ ಮಾಡುತ್ತಾ ಹಳ್ಳಿಯ ವಿಷಯವನ್ನೆಲ್ಲಾ ಕೇಳಿ ತಿಳಿದುಕೊಂಡಳು.
ಲೋಟದಲ್ಲಿ ಕಾಫಿ ಹಿಡಿದು ಬಂದ ಮೈತ್ರಿ ಗೋಡೆಗೆ ಒರಗಿಸಿದ್ದ ಚೀಲವನ್ನು ನೋಡಿ ’ಇದೇನ್ ರಂಗಾ.... ಇದೇನೋ ತಂದಿರೋ ಹಾಗಿದೆ...’ ಎಂದಳು. ಇವತ್ತು ಗೌರಿಹಬ್ಬ ಅಲ್ವೇನ್ರವ್ವ...? ಅದಕ್ಕೆ ತೋಟದಲ್ಲಿ ಬಿಟ್ಟಿದ್ದ ತೆಂಗಿನಕಾಯಿ, ಬಾಳೆಹಣ್ಣು,ವೀಳ್ಯದೆಲೆ ತಂದೀನ್ರೀ ಕಣ್ರವ್ವ. ದೊಡ್ಡಮ್ಮಾವ್ರಿದ್ದಾಗ ನಿಮಗೆ ಬಾಗಿನ ತರೋರು. ಅನಾಥನಾದ ನನ್ನನ್ನು ದೊಡ್ಡಮ್ಮಾವ್ರು ತಮ್ಮ ಮಗನಂತೆ ನೋಡಿಕೊಂಡ್ರು. ಆ ತಾಯಿ ಋಣ ಹಿಂಗಾದ್ರು ತೀರಿಸೋಣ ಅಂತ ಕಣವ್ವ. ಸುಖದಾಗೆ, ದುಃಖದಾಗೆ ನಮಗೆ ನಮ್ಮೋರು ಅಂತ ಇರಬೇಕು ಕಣವ್ವ.’ ಎಂದು ರಂಗ ನುಡಿದಾಗ ಅವನ ಹೃದಯ ವೈಶಾಲ್ಯತೆಗೆ ಮೈತ್ರಿ ಮೂಕಳಾದಳು.
ಆಧುನೀಕತೆಯ ಹೆಸರಿನಲ್ಲಿ ಸಂಪ್ರದಾಯಗಳೆಲ್ಲಾ ಗೊಡ್ಡೆಂದು ಜರಿದು ವರ್ಷಕ್ಕೊಮ್ಮೆಯಾದರೂ ತಂಗಿಯ ಮನೆಗೆ ಬರಲು ತಪ್ಪಿಸುವ ತನ್ನಣ್ಣನೊಂದಿಗೆ, ಇಲ್ಲದ ಭಾಂಧವ್ಯ ವನ್ನು ಹುಡುಕಿ ಬಂದ ಈ ರಂಗನನ್ನು ತೂಗಿ ನೋಡಿತು ಮೈತ್ರಿಯ ಮನ. ಅಣ್ಣ ಬಂದರೆ ಆಗುತ್ತಿದ್ದ ಸಂತೋಷವನ್ನು ಮೀರಿದ ಅನುಭವ ಮೈತ್ರಿಗಾಯಿತು. ಭಾಂಧವ್ಯವೆಂದರೆ ರಕ್ತ ಸಂಬಂಧವೆಂದೇಕೆ ತಾನು ತಪ್ಪು ತಿಳಿದೆ ಎನ್ನಿಸಿತು.ಸಂಬಂಧಗಳು ನಮ್ಮ ಮನಸ್ಸಿಗೆ, ಭಾವನೆಗಳಿಗೆ ಒಳಪಟ್ಟಿದ್ದು.ಬಲವಂತದ ಕಟ್ಟುಪಾಡುಗಳು ಆತ್ಮೀಯತೆಯ ಮಧುರತೆಯನ್ನು ಮಂಕಾಗಿಸುತ್ತಿದೆಯೇನೋ ಎಂಬ ಒಂದು ಸಣ್ಣ ಅನುಮಾನ ಅವಳನ್ನು ಕಾಡದೇ ಬಿಡಲಿಲ್ಲ. ಆತ್ಮೀಯತೆಯೇ ನಿಜವಾದ ಸಂಬಂಧ ಎಂಬ ಅರಿವು ಮೈತ್ರಿಗಾಯಿತು.
ಹಣ್ಣುಕಾಯಿಯ ಚೀಲವನ್ನು ಕೈಗೆತ್ತಿಕೊಂಡ ಮೈತ್ರಿ ’ ನಡೀ ರಂಗಾ..... ಇವತ್ತು ಇಲ್ಲೇ ಇದ್ದು ಹಬ್ಬ ಮುಗಿಸಿ ಹೋಗಬೇಕು ನೋಡು. ಮತ್ತೇನು ಸಬೂಬು ಹೇಳೋ ಹಾಗಿಲ್ಲ ತಿಳೀತಾ.....’ಎಂದು ರಂಗನಿಗೆ ತಾಕೀತು ಮಾಡಿ, ಸ್ನಾನಕ್ಕೆ ನೀರು ಕಾಯಿಸಲು ಬಾತ್ ರೂಂಗೆ ನಡೆದಳು.
ಈ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಮಲಗಿದ್ದ ಮಧು, ಮೈತ್ರಿ ಸ್ನಾನ ಮುಗಿಸಿ ಬರುತ್ತಿದ್ಡಂತೆಯೇ ’ ಆಗಲೇ ಯಾರೋ ಬಂದಹಾಗಿತ್ತಲ್ಲ ಮೈತ್ರಿ’ ಎಂದು ಮಲಗಿದ್ದಲ್ಲಿಂದಲೆ ಕೇಳಿದ. ಉತ್ಸಾಹದ ಹೆಜ್ಜೆಗಳನ್ನಿಡುತ್ತಾ ಬಂದ ಮೈತ್ರಿ ’ಹಳ್ಳಿಯಿಂದ ರಂಗಾ ಬಂದಿದ್ದಾನೆ. ಗೌರಿಗೆ ಬಾಗಿನ ತಂದಿದ್ದಾನೆ. ನೀವು, ಮೈನಾ ಸ್ನಾನ ಮುಗಿಸಿ ಬರುವುದರೊಳಗೆ ನಾನು ಪೂಜೆಗೆ ಅಣಿ ಮಾಡಿಕೊಳ್ಳುತ್ತೇನೆ. ಬೇಗ ಎದ್ದು ಬರ್ತೀರಾ...? ಎನ್ನುತ್ತಾ ಗೌರಿ ಮಂಟಪ ಕಟ್ಟಲು ದೇವರ ಮನೆಗೆ ತೆರಳಿದಳು. ಮೈತ್ರಿಯ ನಡೆ-ನುಡಿಗಳಲ್ಲಿ ಉಂಟಾದ ಉಲ್ಲಾಸ ಮಧುವಿನ ಗಮನಕ್ಕೆ ಬಂದು ಅವನ ಮನ ಹಗುರಾಯಿತು. ರಂಗನ ಮಮತೆಗೆ ಬೆರಗಾದನು.ರಂಗನಿಗೆ ಮನದಲ್ಲೇ ಧನ್ಯವಾದ ಅರ್ಪಿಸಿದನು.
******************************************
ಸಂಪದಿಗರೆಲ್ಲರಿಗೂ ಗೌರಿ-ಗಣಪತಿ ಹಬ್ಬದ ಶುಭಾಶಯಗಳು.
ಪ್ರತಿಕ್ರಿಯೆ (4)