ಎಲ್ಲೆಲ್ಲೂ ಪಂಚರಂಗಿಯದೇ ಮಾತು. ದಿಗಂತ್ ಹೀರೋನೋ ಅಥವಾ ಭಟ್ಟರು ಹೀರೋನೋ ಅನ್ನೋದೆ ಜನಕ್ಕೆ ಕನ್ಫೂಸ್. ನಮ್ಮ ಬಾಸ್ ನೀನು ಹೋಗಿ ಯೋಗರಾಜ್ ಭಟ್ಟರ ಬಗ್ಗೆ ಮಾತಾಡಿ ಒಂದು ಒಳ್ಳೆ ಸಂದರ್ಶನ ತೆಗೆದುಕೊಂಡು ಬಾ ಅಂದರು. ನಾನು ಅಲ್ಲೇ ನಿಂತಿದ್ದೆ. ಸಂಬಳ ಜಾಸ್ತಿ ಮಾಡಲಿ ಅಂತಾ. ಲೇ ಹೋಗಲೇ ಬೇಗ, ಇಲ್ಲಾ ಅಂದ್ರೆ ಬೇರೆಯವರು ಹೋದ್ರೆ ಆ ವಯ್ಯ ಹೇಳಿದ್ದೇ ಹೇಳ್ತಾನೆ ಅಂದ್ರು.

ಸರಿ ಬೆಳಗ್ಗೆ 6ಕ್ಕೆ ಯಾರೂ ಇರಲ್ಲಾ ಅಂತಾ ಗಿರಿನಗರದ ಯೋಗರಾಜಭಟ್ಟರ ಮನೆ ಬಾಗಿಲು ಬಡೆದೆ. ಇವತ್ತು ಹಾಲು ಬೇಡಪ್ಪಾ ಅಂದ್ರು ಅವರ ಹೆಂಡರು. ಹಾಲನೋರು ಅಲ್ಲಮ್ಮಾ. ಮತ್ತೆ ಸೊಪ್ಪು ಬೇಡ ಬಿಡು. ನಿನ್ನೆ ಗಣಪತಿ ಹಬ್ಬಕ್ಕೆ ಮಾಡಿದ್ದೇ ಬಹಳ ಉಳಿದಿದೆ. ಅದನ್ನೇ ಬಿಸಿ ಮಾಡಿಕೊಂಡು ತಿನ್ತೀವಿ ಕಣಪ್ಪಾ, ಏ ನಾವು ಸೊಪ್ಪಿನೋರು ಅಲ್ಲಮ್ಮಾ. ಮತ್ತೆ ಅಮ್ಮಾ ತಾಯಿನಾ ಅಂದ್ರು. ಏ ಥೂ. ನಾನು "ಸಿದ್ದೇಸ" ಟಿವಿ ಯಿಂದ ಬಂದಿದೀನಿ ಅಂದೆ. ಹಂಗೇ ಬಾಗಿಲು ಧಡಕ್ ಅಂತಾ ಖುಲ್ಜಾ ಸಿಮ್ ಸಿಮ್ ಆತು. ನಮ್ಮ ಕ್ಯಾಮೆರಾಮೆನ್ ಕ್ಯಾಮೆರಾಕ್ಕೆ ಪೂಜೆ ಮಾಡಿರಲಿಲ್ವಂತೆ. ಅವರ ಮನೆದೇ ಊದಬತ್ತಿ, ಕಾಯಿ, ಕರ್ಪೂರ ಇಸ್ಕಂಡು ಪೂಜೆ ಮಾಡ್ದ.

ಅಮ್ಮಾ ಭಟ್ಟರು ಇಲ್ವಾ. ಅವರು ನಿನ್ನೆ ಅಡುಗೆ ಮುಗಿಸಿ, ಯಾವುದೋ ತಿಥಿ ಅಡುಗೆ ಇದೆ ಅಂತಾ ಹೋದ್ರಲಾ. ಏ ಥೂ. ಅಡುಗೆ ಭಟ್ಟರು ಅಲ್ಲಮ್ಮಾ ನಿಮ್ಮ ಯಜಮಾನರು "ಶ್ರೀಮಾನ್ ಯೋಗರಾಜ ಭಟ್ಟರು" ಅವರಾ ಮಲಗಿದಾರೆ. ತಡೀರಿ. ರೀ ನಿಮ್ಮನ್ನ ಹುಡುಕಿಕೊಂಡು ಸಿದ್ದೇಸ ಟಿವಿಯೋರು ಬಂದಿದಾರೆ ನೋಡ್ರಿ. ಎದ್ದ ಯೋಗರಾಜರು. ಕೆರೆತಾವ ಹೋಗಿ, ಹೆಗಲ ಮೇಲೆ ಒಂದು ಟವಲ್ ಹಾಕ್ಕೊಂಡು ಬೈಟು ಕಾಫಿ ಹೇಳಿ ನಮ್ಮ ಕೊತೆ ಕೂತರು.

ಸರ್ ನಿಮ್ಮನ್ನ ಇಂಟರ್ ವ್ಯೂ ಮಾಡಬೇಕು ಅಂತಾ ಬಂದಿದೀವಿ. ದಯವಿಟ್ಟು ಅವಕಾಶ ಮಾಡಿಕೊಡಿ ಸರ್.

"ನೋಡಿ ಎಂ.ಎ ಮಾಡಿ ಕೆಲಸ ಇಲ್ಲದೆ, ಕಬ್ಬನ್ ಪಾರ್ಕ್ ನಲ್ಲಿ ಕಡಲೆ ಕಾಯಿ ತಿನ್ತಾ, ಹುಡುಗಿಯರನ್ನ ನೋಡ್ತಾ, ಸಂಜೆ ಆದ್ ಮೇಲೆ ಮನೆಗೆ ಬಂದು ಟಿವಿ ನೋಡಿ ಊಟ ಮಾಡಿ ಮಲಗೋ ತನಕ ಪುಸ್ತಕ ಓದಿ. ಕನಸಿನಲ್ಲಿ ಕನಸು ಕಾಣುತ್ತಾ, ಸಂತಸವಾಗಿರುವುದು ಅದೇ ಕಣ್ರೀ ಲೈಪು. ಲೈಫು ಇಷ್ಟೇನೆ. ಅಂದ್ರು ಯೋಗರಾಜ ಭಟ್ಟರು. ಸರ್ ಕ್ಯಾಮೆರಾ ಆನ್ ಮಾಡೇ ಇಲ್ಲ. ಅಯ್ಯೀ ನಿನ್ನ ಮುಖಕ್ಕೆ ಭಟ್ಟರ ಮನೆ ನಿನ್ನೆ ಸಾರು ಹುಯ್ಯಾ ಅಂದೆ. ಕಾಫಿ ಬರಲಿ ಅಂತಾ ಕಾಯ್ತಿದ್ದೆ ಅಂದಾ. ಸರೀ ಬೈಟು ಕಾಫಿ ಬಂತು. ಮತ್ತೊಂದು ಲೋಟ ತರಿಸಿ. ಅದ್ರಾಗೆ ಕ್ಯಾಮಾರಮೆನ್ಗೂ ಒಂದು ಸ್ವಲ್ಪ ಹುಯ್ದು ಸೊರ್ ಸೊರ್ ಅಂತಾ ಕುಡಿದ್ವಿ.

ಸರೀ ಸಂದರ್ಶನ ಸ್ಟಾರ್ಟ್. ಭಟ್ರಿಗೆ ಎಷ್ಟೇ ಮೇಕಪ್ ಮಾಡಿದ್ರೂ ಬೆಳ್ಳಗಂತೂ ಆಗಲೇ ಇಲ್ಲ. ಕಡೆಗೆ ಮನೆ ಮುಂದೆ ಮುಂಜಿ ಮಾಡೋ ತರಾ ಕೂರಿಸಿ ಸಂದರ್ಶನ ಸುರು ಮಾಡಿದ್ವಿ. ಸರ್ ಚೇರ್ ಅಳ್ಳಾಡಿಸಬೇಡ್ರಿ.

ಜನ ಸಾನೇ ಸೇರಿತ್ತು. ಬೆಳಗ್ಗೆ ಡ್ಯೂಟಿಗೆ ಹೋಗೋರೆಲ್ಲಾ ಈ ಭಟ್ಟರು ಪಂಚರಂಗಿ ತೆಗೆದ ಮೇಲೆ ನವರಂಗಿ ಆಗಿದಾರೆ ಅನ್ನೋವು. ಅದು ಬಿಡಿ.

ಟಿವಿ : ಸರ್ ನಿಮ್ಮ ಮುಂಗಾರು ಮಳೆ. ಬಹಳ ಹಿಟ್ ಆಯ್ತು. ಸಂತೋಷವೇ

ಭಟ್ರು : ಅದರಲ್ಲಿ ಕಥೆ, ಸ್ವಲ್ಪ ಡೈಲಾಗ್ ಇತ್ತು. ಆಮೇಲೆ ಮೊಲ ಇತ್ತಲ್ಲಾ. ಅದು ಸತ್ತುಹೋಗಿದೆ ಅಂತಾ ತೋರಿಸಿದ್ದಕ್ಕೆ ಪ್ರಾಣಿ ದಯಾ ಸಂಘದವರು ಒಂದು ಹತ್ತು ಕೇಸು ಹಾಕಿದಾರೆ. ಪಿಚ್ಚರ್ ಮುಗಿದು ಎರಡು ವರ್ಷ ಆದರೂ ಕೇಸಿಗೆ ಓಡಾಡ್ತಾ ಇದೀನಿ. ಅದರಲ್ಲಿ ಬಂದಿರೋ ದುಡ್ಡನ್ನ ಅರ್ಧ ನ್ಯಾಯಾಲಯಕ್ಕೆ ಹಾಕಿದೀನಿ ಅಂತಾ ಅತ್ತರು. ಹೋಗಲಿ ಬಿಡಿ ಸರ್. ಮುಂದಿನ ಸಾರಿ ಬೀದಿ ನಾಯಿ ಬಳಸಿ. ಕಾಪರ್ಪೊರೇಸನ್ ಒರೋ ಒಂದಿಷ್ಟು ಹಣ ಹಂಗೇ ಫಿಲಂ ಛೇಂಬರ್ ನಿಂದ ಒಂದಿಷ್ಟು ರಿಯಾಯಿತಿ ಕಾಸು ಬತ್ತದೆ ಅಂದಾ ಕ್ಯಾಮಾರಾಮೆನ್. ಸುಮ್ನೆ ನಿನ್ನ ಕೆಲಸ ಮಾಡಲೇ.

ಟಿವಿ : ನವರಂಗಿ, ಕೋಡಂಗಿ, ಬಾರಂಗಿ ಕೇಳಿದೀವಿ. ಇದೇನು ಸಾರ್ ಪಂಚಂರಂಗಿ

ಭಟ್ರು : ಪಂಚಂರಂಗಿ ನನ್ನ ಕನಸಿನ ಕೂಸು. ಇದರಲ್ಲಿ ಕತೆ ಇಲ್ಲ. ಬರೀ ಮಾತು.

ಟಿವಿ : ಕನಸಿನ ಕೂಸು ಅಂದ್ರೆ ನಿಮಗೆ ಎರಡನೆ ಹೆಂಡರು ಅವ್ರಾ. ಏ ಥೂ. ಆಮೇಲೆ ಬರೀ ಮಾತು ಅಂದ್ರಲಾ ಒಂದು ಸ್ಯಾಂಪಲ್ ಹೇಳ್ತೀರಾ.

ಭಟ್ರು : ಕನ್ನಡ ಬರದಿದ್ರೂ ಕನ್ನಡ ಕಲಿತು, ಕನ್ನಡ ಮಾತಾಡಿ, ಕವನ ಅಲ್ಲದೇ ಹೋದ್ರು ಹಾಡು ಬರೆದು, ಎಲ್ಲರನ್ನೂ ಮೆಚ್ಚಿಸಿ. ಪ್ರೀತಿಗೆ ಪ್ರೀತಿ ಮಾಡಿ ಅದರಲ್ಲಿ ಪ್ರೀತಿ ಹುಟ್ಟಿಸಿ.......... ಇನ್ನೂ ಹೇಳ್ತಾನೆ ಇದ್ರು. ನಮ್ಮ ಕ್ಯಾಮಾರಾಮೆನ್. ಸರ್ ನಾನು ತಂದಿರೋದು ಒಂದು ಕ್ಯಾಸೆಟ್ ಸರ್ ಅಂದ. ಅಲ್ಲಿಗೆ ಭಟ್ಟರು ನಿಲ್ಲಿಸಿದ್ರು.

ಟಿವಿ : ಸರ್ ಇದಕ್ಕೆ ದುಡ್ಡು ಎಷ್ಟು ಖರ್ಚಾಗಿದೆ.

ಭಟ್ರು : ಮಾತಾಡೋದಿಕ್ಕೆ ದುಡ್ಡು ಖರ್ಚು ಆಗುತ್ತಾ. ದಿಗಂತ್ ಪುಕ್ಕಟೆ ಮಾಡಿರೋದು. ಏನು ಕೆಲಸ ಇಲ್ಲಾ ಅಂತಿದ್ದ. ಹಂಗೇ ನಿಧಿ ಸುಬ್ಬಯ್ಯ. ಸುಬ್ಬಯ್ಯ ನಮ್ಮಪ್ಪನ ಸ್ನೇಹಿತರು ಒಂದು ಚಾನ್ಸ ಕೊಟ್ಟಿದೀನಿ. ಅನಂತ್ ನಾಗ್ ಮತ್ತೆ ಮ್ಯೂಸಿಕ್ ಡೈರೆಕ್ಟರ್  ಮನೋಮೂರ್ತಿಗೆ  ದುಡ್ಡು ಕೊಟ್ಟಿದ್ದು ಬಿಟ್ರೆ ಒಂದು 10ಲಕ್ಷ ಖರ್ಚಾಗಿದೆ ಅಷ್ಟೆ.

ಟಿವಿ : ಈ ಐಡಿಯಾ ಹೇಗೆ ಬಂತು ಸರ್

ಭಟ್ರು : ನನ್ನ ಹೆಂಡ್ತಿ ತುಂಬಾ ಮಾತಾಡ್ತಾಳೆ. ಅದನ್ನ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು.ಹಾಳಾಗಲಿ ಅಂತಾ ಅವಳ ಮಾತನ್ನೇ ಪಿಚ್ಚರ್ ಮಾಡ್ದೆ ಬಡ್ಡೀ ಮಗಂದು ಹಿಟ್ ಆಗೋತು.

ಟಿವಿ : ಇದೇನು ಸರ್ ಪಂಚಂರಂಗಿ ಪೊವ್,ಪೊವ್

ಭಟ್ರು " ಪಂಚಂರಂಗಿ ಡೊಯ್, ಡೊಯ್ ಅಂತಾ ಮಾಡಿದ್ವಿ. ಆದರೆ ನನ್ನ ಮಗನ್ನ ಶಾಲೆಗೆ ಕರೆದುಕೊಂಡು ಹೋಗೋ ಆಟೋದೋನು ಸರ್ ನನ್ನ ಆಟೋ ಬಳಿಸಿ ಅಂತಿದ್ದ. ಅದಕ್ಕೆ ಅವನ ಹಾರ್ನ್ ಪೊವ್, ಪೊವ್ ಬಳಸಿದೀವಿ. ಅವನಿಂದ ೊಂದು ನೂರು ಜನಾ ಪಿಚ್ಚರ್ ನೋಡಿದಾರೆ.

ಟಿವಿ : ಸರ್ ನೀವು ಕಥೆ. ಹಾಡು, ನಿರ್ದೇಶನ ಎಲ್ಲಾ ಮಾಡ್ತಿದೀರಾ, ಹೀರೋ ಯಾಕೆ ಆಗಬಾರದು

ಭಟ್ರು : ನನ್ನ ಮುಂದಿನ ಚಿತ್ರ, ಭಜರಂಗಿ ಅಂತಾ. ಅದರಲ್ಲಿ ನಾನೇ ಹೀರೋ. ಫುಲ್ ಬಾಡಿ ಷೋ ಇರುತ್ತೆ. ಅದಕ್ಕೆ ಅಂತಾ ದಿನಾ ಚಿತ್ರಾನ್ನ, ಬೈ ಟು ಚಾ ಕುಡಿದು ತಾಕತ್ ತೆಗೆದುಕೊಳ್ತಾ ಇದೀನಿ ಅಂದು. ಬನೀನ್ ಬಿಚ್ಚಿ ಬಾಡಿ ತೋರಿಸಿದ್ರು. ಏನ್ ಸಾರ್ ಮೈನಾಗೆಲ್ಲಾ ಗಾಯ. ಅರಿಸಿನ ಹಚ್ಚಿದ್ರು.  ಗಣಪತಿ ಬಿಡೋಬೇಕಾದ್ರೆ ಕಲ್ಲು ಮೇಲೆ ಜಾರಿ ಬಿದ್ದೆ ಅಂತು. ಬಾಡಿ ಅನ್ನೋದು ಮಾತ್ರ ಹೇಳಂಗಿಲ್ಲ ಬಿಡಿ ಸೆನ್ಸಾರ್ ಪ್ರಾಬ್ಲಮ್.

ಟಿವಿ : ಇದರ ಬಗ್ಗೆ ಪ್ರತಿಕ್ರಿಯೆ ಹೇಗೆ ಸರ್

ಭಟ್ರು : ಬಹಳಷ್ಟು ಪತ್ರ ಬರುತ್ತಿದೆ. ಪೋಸ್ಟ್ ಮ್ಯಾನ್ ಗೆ ಆಟೋ ಚಾರ್ಜಿಗೆ ಅಂತಾ ಒಂದು ಸಾವಿರ ಕೊಟ್ಟಿದೀನಿ. ಒಂದು ಹತ್ತು ಮೂಟೆ ಬಂದಿದೆ. ಅದರಲ್ಲೇ ನಾವು ದಿನಾ ನೀರು ಕಾಯಿಸಿಕೊಳ್ಳೋದು ಅಂದ್ರು. ಸಾರ್ ಓದ್ಲಿಲ್ವಾ. ಓದಿದೆ. ನಮ್ಮ ಅಕ್ಕಪಕ್ಕದ ಮನೆಯವರಿಗೂ ಓದಕ್ಕೆ ಕೊಟ್ಟಿದೀನಿ. ಪಂಚಂರಂಗಿ ಭಾಗ 2 ತೆಗೀರಿ ಅಂತಿದಾರೆ. ಆದರೆ ಮಾತೆಲ್ಲಾ ಮುಗಿದೆ ಹೋಗಿದೆ. ಹಂಗಾಗಿ ನೆಕ್ಸ್ಟ್ ಪುಸ್ಪಕ ವಿಮಾನ ತರಾ ಸೈಲೆಂಟ್ ಆರ್ಟ್ ಮೂವಿ ಅಂದ್ರು.

ಅಷ್ಟೊತ್ತಿಗೆ ಅವರ ಹೆಂಡ್ತಿ ಬಂದು ನಿಮಗೆ ಬಾಲಿವುಡ್ ನಿಂದ ಪೋನ್ ಬಂದಿದೆ. ಅಲ್ಲೂ ನಿರ್ದೇಶನ ಮಾಡಬೇಕಂತೆ ಬಂದು ಹಿಂದಿ ಕಲೀರಿ ಅಂತಾ ಒಂದು ಪುಸ್ತಕ ಕೊಟ್ಟು ಹೋದ್ರು. "ಹದಿನೈದು ದಿನದಲ್ಲಿ ಹಿಂದಿ ಕಲಿಕೆ"

ಸರಿ ಕ್ಯಾಮಾರಾಮೆನ್ ಸಿದ್ದು ಜೊತೆಗೆ ಸಿದ್ದೇಸ ಟಿವಿಗೆ ಕೋಮಲ್. ಮುಂದಿನವಾರ ಮತ್ತೊಬ್ಬ ನಿರ್ದೇಶಕನೊಂದಿಗೆ ಓದುತ್ತಿರಿ ಸಂಪದ. ನೋಡುತ್ತಿರಿ ಸಿದ್ದೇಸ ಟಿವಿ. ನಮ್ಮ ಚಾನಲ್ ನೋಡುವ ಮೊದಲು ನಮಸ್ಕಾರ ಮಾಡೋದು ಮರೆಯಬೇಡಿ. ನಮ್ಮ ಸ್ಲೋಗನ್.

 

ಚಿತ್ರ ಕೃಪೆ - ಅಂತರ್ ಜಾಲದಿಂದ