ಗಣಪತಿ ಹಬ್ಬಕ್ಕೆ ಅಂತಾ ದೊಡ್ಡ ಪೆಂಡಾಲ್ ಮಾಡಿದ್ವಿ. ಅಂಗೇ ಪೂಜಾರಿ ಸೀತುನ ನೇಮಕ ಮಾಡಿದ್ವಿ. ಈ ಬಾರಿ ಸ್ವಲ್ಪ ಜಾಸ್ತಿನೇ ಕಲೆಕ್ಷನ್ ಆಗಿತ್ತು. ಅದ್ರಾಗೆ ಚಾ, ಬೀಡಿ,ಎಣ್ಣೆಗೆ ಅಂತಾ 10ಸಾವಿರ ಇಟ್ಟಿದ್ವಿ.  ಸರಿ ಗಣಪತಿ ತರುವಾ ಅಂತಾ ಡೊಳ್ಳು, ಗೀಗೀ ಪದ, ಭಜನಾ ಮೇಳ ಹಂಗೆ ಹಳ್ಳಿ ಜನ ಎಲ್ಲಾ ಸೇರಿ ಗಣಪತಿ ಅಂಗಡಿಗೆ ಹೊಂಟ್ವಿ.. ಪೆಂಡಾಲ್ ಇಂದ ಅಂಗಡಿ ಒಂದು ಕಿ.ಮೀ ಇತ್ತು, ಬಾರಿಸೋವು ಎಲ್ಲಾ ಅಲ್ಲಲ್ಲೇ ಕೂರೋವು. ಕಿಸ್ನ ಬೈಯ್ದ ಮೇಲೆ ಮತ್ತೆ ಬಾರಿಸೋವು. ತಾಳ ರಾಗ ಎಲ್ಡೂ ಇಲ್ಲ. ಮಾವಿನ ಸೊಪ್ಪು ಬಾಳೆಕಂಬ ದನ ತಿಂದಿತ್ತು. ಸರಿ ಅಂಗಡಿ ಬಂತು. ಗಣಪತಿ ಮಾಡೋ ವೀರಾಚಾರಿ ತನ್ನ ಮಗಂಗೆ " ಲೇ ಗಣಪತಿ ತಗೊಂಡು ಬಾರಲಾ ಅಂದ" ಅವನ ಮಗ ಮಂಗಾಚಾರಿ ಎಡಗೈನಾಗೆ ಎತ್ಕಂಡು ಬಂದು ಕೊಟ್ಟ. ಇಲಿ ಎಲ್ಲಲಾ. ಅಂದ್ರೆ ಜೋಬ್ನಾಗೆ ಇಂದ ತೆಗೆದುಕೊಟ್ಟ. ಬರೀ ಎರಡೇ ಅಡಿ ಗಣಪತಿ. ಏನ್ರೀ ಗೌಡ್ರೆ ಇದು. ಪೆಂಡಾಲ್ ನೋಡಿದ್ರೆ ಸಾನೇ ದೊಡ್ಡದು ಐತೆ. ಗಣಪತಿ ಇಟ್ಟರೆ ಕಾಣಕ್ಕೇ ಇಲ್ಲಾ ಅಂದಾ ಸುಬ್ಬ. ನೋಡಲಾ ಗ್ರಾಮ ಪಂಚಾಯ್ತಿಯವರು ಹೇಳವ್ರೆ. ದೊಡ್ಡ ಗಣಪತಿ ಕೆರೆಗೆ ಹಾಕಿದರೆ ದಂಡಾ ಅಂತಾ ಅದಕ್ಕೆ ಹಿಂಗೆ ಅಂದ ಗೌಡಪ್ಪ. ಸರೀ ಮೆರವಣಿಗೆ ಅಲ್ಲಿಂದ ಹೊಂಟ್ತು.

___LINK_OPEN_ href="http://3.bp.blogspot.com/_JufO3uU_KXE/TIzQJkf2cuI/AAAAAAAAAD8/Jrwxg-ZVvmA/s1600/2+copy.jpg"___

ಹಳ್ಳಿ ಜನ ಟ್ರಾಕ್ಟರ್ ಪೆಂಡಾಲ್ ನೋಡ್ತಾರೆ ಖಾಲಿ ಕಾಣ್ತಾ ಐತೆ. ಎಲ್ರಲಾ ಗಣಪತಿ ಅಂದ್ರೆ. ಸುಬ್ಬ ಅವರನ್ನ ಎತ್ತಿ ಅಗೋ ಅಲ್ಲಿ ಅಂತಾ ಯುಗಾದಿ ಚಂದ್ರನ್ನ ತೋರಿಸ್ದಂಗೆ ತೋರಿಸೋನು. ಅವು ಅಲ್ಲಿಂದನೇ ಕೂ ಮುಗಿಯೋವು. ಗಣೇಸ ಕಾಪಾಡಪ್ಪ. ಯಾರಾದರೂ ಹೆಣ್ಣು ಐಕ್ಳು ಕೇಳಿದರೆ ಕಾಂಪಟೇಸನ್ ಗಣಪತಿ ತೋರಿಸಕ್ಕೆ. ಅದೇ ಮುದುಕಿಯರು ಕೇಳಿದ್ರೆ ಗೌಡನ್ನ ತೋರಿಸೋರು. ಕಿಸ್ನ ರಾಜಮ್ಮನ ಎತ್ತಕ್ಕೆ ಹೋಗಿ ಇಬ್ಬರೂ ಚೆರಂಡಿಯಲ್ಲಿ ಕಿಸ್ಕಂಡಿದ್ವು. ಏ ಥೂ. ಸರೀ ಗಣಪತಿನ ಮೊದಲು ನಮ್ಮನೇಗೆ ಅಂತಾ ಗೌಡಪ್ಪ ಅವರ ಮನ್ಯಾಗೆ ಇಟ್ಟು ಪೂಜೆ ಮಾಡಿ ಆಮ್ಯಾಕೆ ಸಿದ್ದೇಸನ ಗುಡಿ ಪೆಂಡಾಲ್ ಗೆ ತಂದು ಮಡಗಿದ್ದ. ಮಗಾ ಮನೆಗೆ ತರೋ ಗಣಪತಿ ಕಾಸು ಉಳಿಸಿದ್ದ.
ಪೂಜಾರಿ ಸೀತು ಸಾನೇ ಹೂವು, ಅಂಗೇ ಸಾನೇ ಹತ್ತಿ ಗೆಜ್ಜೆ ವಸ್ತ್ರ ಹಾಕಿದ್ದಕ್ಕೆ ಗಣಪತಿ ಕಾಣ್ತಾನೇ ಇರ್ಲಿಲ್ಲ. ಎಲ್ಲೋ ಹುತ್ತಕ್ಕೆ ಪೂಜೆ ಮಾಡಿದಂಗೆ ಕಾಣೋದು. ಬಂದೋರೆಲ್ಲಾ ಗೌಡನ ಜುಗ್ಗತನಕ್ಕೆ ಹಳೇ ಎಕ್ಕಡ ಹಾಕ ಅನ್ನೋರು. ಆಮ್ಯಾಕೆ ದೇವರು ಮುಂದೆ ಹೇಳಿದ್ವಿ ಅಂತಾ ತಪ್ಪು,ತಪ್ಪು ಅಂತಾ ಕೆನ್ನೆಗೆ ಹೊಡಕಳೋವು. ಸರೀ ಭಾರೀ ಲೈಟಿನ ಸರ, ಅಂಗೇ ಹಾರ್ನ್ ಹಾಕಿದ್ದ ಮೈಕ್ ಸೆಟ್ ರಂಗ. ಮಗಂದು ಎಲ್ಲಿ ಮುಟ್ಟಿದ್ರು ಜುಂ ಜುಂ ಅನ್ನೋದು. ಲಕ್ವಾ ಹೊಡೆದೋರಿಗೆ ಒಂತರಾ ಹಿತ ಆಗೋದು. ಕಿಸ್ನ ಅವರ ಅಪ್ಪನ್ನ ಲೈಟಿನ ಸರಕ್ಕೆ ಮುಟ್ಟಿಸಿ, ಮುಟ್ಟಿಸಿ ಬಲಗೈ ಸರಿ ಮಾಡಿದ್ದ. ಬೆಳಗ್ಗೆ ಏಳ್ತಿದ್ದಂಗೆನೇ ರಂಗ ದರ್ಸನ್, ಶಿವರಾಜ್ ಕುಮಾರ್ ಪಿಚ್ಚರ್ ಹಾಡು ಹಾಕೋನು. ಪೋಲೀಸರು ಬಂದು ಉಗಿದು ಹೋಗಿದ್ರು. ಇದೇನು ಗಣಪತಿ ಪೆಂಡಾಲೋ ಇಲ್ಲಾ ಶಿವಪ್ಪನ ಟೂರಿಂಗ್ ಟೆಂಟೋ ಅಂತಾ. ರಾಜಕೀಯದ ವ್ಯಕ್ತಿ ಬಂದೋರೆಲ್ಲಾ ಎಲ್ರಲಾ ಗಣಪತಿ ಅನ್ನೋವು. ಪೂಜಾರಿ ಹೂವು ಸರಿಸ್ತಿದ್ದಾಗೆನೇ ಇದಕ್ಕಿಂತ ದೊಡ್ಡದು ಸಿಗಲಿಲ್ವಾ ಅನ್ನೋವು. ನಾವು ಗೌಡನ್ನ ತೋರಿಸ್ತಿದ್ವಿ ಏ ಥೂ.
ಸರಿ ಇಟ್ಟು ಮೂರು ದಿನಕ್ಕೆ ಬಿಡೋದು ಅಂತಾ ಆತು. ಭಾರೀ ಮೆರವಣಿಗೆ, ಭಾರೀ ಸಿಡಿ ಮದ್ದಿನ ಕಾರ್ಯಕ್ರಮ ಅಂತಾ ಸಾನೇ ಜನಾ ಕೆರೆತಾವ ಸೇರಿದ್ವು. ರಾಕೇಟ್ ಬಿಟ್ಟರೆ ಜನ ಮಧ್ಯ ಬಂದು ಢಮ್ ಅನ್ನೋದು. ಸರಪಟಾಕಿ ಹಚ್ಚಿದ್ರೆ ಅದು ಸಿಡಿದ ರಭಸಕ್ಕೆ ಅಕ್ಕಪಕ್ಕ ಇದ್ದೋರು ಮುಖಕೆಲ್ಲಾ ಮಣ್ಣು ಸಿಡಿದಿತ್ತು. ದೊನ್ನೆ ಸೀನ ಆಫ್ರಿಕಾದರೋ ತರಾ ಆಗಿದ್ದ. ಕಿಸ್ನ ಸೋಮಾಲಿಯಾದೋರು ತರಾ ಕಾಣೋನು. ಭಿಕ್ಷೆ ಎತ್ತೋನು ಅಂತಾ ಆಗಲೇ ಪನರ್ ವಸತಿ ವ್ಯಾನ್ ಗೆ ಹಾಕಿದ್ರು. ಕೊನೆಗೆ ಗೌಡಪ್ಪ ಲಂಚ ಕೊಟ್ಟು ಬಿಡಿಸ್ದ. ಗೌಡಪ್ಪ ಮಾತ್ರ ತೆಪ್ಪದಾಗೆ ನಿಂತು ಎಲ್ಲಾರಿಗೂ ಟವಲ್ ಎತ್ತಿ ಕೈ ಮಾಡೋನು. ಮಗಂದು ಪೋಸು.

ಸರಿ ಗಣಪತಿ ವಿಸರ್ಜನೆ ಅಂತಿದ್ದಾಗೆನೇ ಗೌಡಪ್ಪ ಒಂದೇ ಕೈನಾಗೆ ಮೂರು ಸತಿ ಮುಳಗಿಸಿ ರೊಯ್ ಅಂತಾ ಎಸೆದ. ಅದು ಅಲ್ಲಿಂದ ಒಂದು ಫರ್ಲಾಂಗ್ ದೂರು ಹೋಗಿ ಬಿತ್ತು. ಅಮ್ಮಾ ಅಂತಾ ಸವಂಡ್ ಬಂತು. ನೋಡಿದ್ರೆ ಸುಬ್ಬ ಪೋಸ್ ಕೊಡಕ್ಕೆ ಅಂತಾ ನೀರಿಗೆ ಇಳಿದಿದ್ದ. ಅವನ ತಲೆ ಮೇಲೆ ಬಿದ್ದಿತ್ತು. ರಕ್ತ ಒರೆಸ್ಕಂತ ದಡಕ್ಕೆ ಬಂದ. ಗೌಡಪ್ಪ ಎಲ್ಲಿ ಅಂತಾ ನೋಡಿದ್ರೆ ನೀರ್ನಾಗೆ ಕಿಸ್ಕಂಡವ್ನೆ. ತೆಪ್ಪದಾಗೆ ಇದ್ದ ಟಾರಿನ ಡ್ರಮ್ ಗೆ ನೀರು ತುಂಬಿ ಉಲ್ಟಾ ಆಗಿತ್ತು.ಸೀತು ತಂದು ದಡಕ್ಕೆ ಹಾಕಿದ್ದ. ಸಾನೇ ನೀರು ಕುಡಿದಿದ್ದ. ಯಾವ ಮಟ್ಟಕ್ಕೆ ನೀರು ಕುಡಿದಿದ್ದ ಅಂದ್ರೆ ಎರಡು ದಿನ ಊಟ ಮಾಡಿರಲಿಲ್ವಂತೆ. ಮಗಾ ಏಕಾದಸಿ ಅನ್ನೋನು. ಬಚ್ಚಲು ಮನೆಗೆ ಮಾತ್ರ ಗಂಟೆಗೆ ಒಂದು ಹತ್ತು ಕಿತ ಹೋಗೋನು. ಒಂದುವಾರ ಆದ್ ಮ್ಯಾಕೆ ಗೌಡಪ್ಪ  ಹೊಸಾ ಬೈಕ್ ತಂದಿದ್ದ. ನೋಡಲಾ ಗಣಪತಿ ಕಾಸ್ನಾಗೆ ಗೌಡಪ್ಪ ಬೈಕ್ ತಂದವ್ನೆ ಅನ್ನೋವು ಜನಾ. ಏ ಥೂ.