ಲೇ ಸುಬ್ಬ, ನಮ್ಮ ಸಂಪದದ ಹರಿ ಪ್ರಸಾದ್ ನಾಡಿಗರು ಕನ್ನಡನಾ ಸಾನೇ ಬೆಳಸ್ತಾವ್ರೆ. ಅಂಗೇ ಉಳಿಸ್ತಾವ್ರೆ ಅವರಿಗೊಂದು ಸನ್ಮಾನ ಮಾಡಬೇಕು ಅಂತಾ ನಮ್ಮ ಗೌಡಪ್ಪ ಅಂದ. ಸರೀ ಹೆಂಗಿದ್ರೂ ನಮ್ಮ ಪಕ್ಕದ ಕೇರಿ ಗಣಪತಿ ಇನ್ನೂ ಬಿಟ್ಟಿಲ್ಲ ಸರಿ ಮಾಡುವ ಬಿಡಿ. ಒಂದು ಸಾಲು. ಅಂಗೇ ಹಾರ. ರಂಗಂಗೆ ಮೈಕ್ ಸೆಟ್ ಗೆ ಹೇಳಿದ್ರಾತು ಬಿಡಿ. ಸರೀ ಕಲಾ ನಾನು ಮಾತಾಡ್ತೀನಿ ಎಲ್ಲಾ ತಯಾರಿ ಮಾಡು. ಅಂದು ಗೌಡಪ್ಪ ಕೆರೆತಾವ ನಿಂಗನ ಅಂಗಡಿ ಚೊಂಬು ಇಟ್ಕಂಡು ಹೋದ. ಇನ್ ಮ್ಯಾಕೆ ನಿಂಗನ ಅಂಗಡೀಲಿ ನೀರು ಕುಡಿಬಾರದು ಅಂದಾ ಸುಬ್ಬ.

ಗೌಡಪ್ಪ : ಹಲೋ ಹರಿ ಪ್ರಸಾದ್ ನಾಡಿಗರಾ

ಅಲ್ಲಾ ಸುರೇಶ್ ನಾಡಿಗರು, ಸರ್ ನಮಗೆ ಹರಿಪ್ರಸಾದ್ ನಾಡಿಗರು ಬೇಕಾಗಿತ್ತು. ರಾಂಗ್ ನಂಬರ್. ಕ್ಸಮಿಸಿ ಸಾರ್ರ್

ಗೌಡಪ್ಪ : ಹಲೋ ಹರಿ ಪ್ರಸಾದ್ ನಾಡಿಗರಾ

ಹ.ನಾಡಿಗರು : ಹೌದು, ಯಾರು

ಗೌಡಪ್ಪ : ನಾನು ಗೌಡಪ್ಪ ಅಂತಾ, ನಿಮಗೆ ನಮ್ಮ ಹಳ್ಳೀಲಿ ಸನ್ಮಾನ ಮಡಿಗಿದೀವಿ. ಖಂಡಿತಾ ಬರಬೇಕು ಸಾರ್. ನಿಮ್ಮ ಚಾ ಖರ್ಚು, ಕಾರಿನ ಬಾಡಿಗೆ ಅಂಗೇ ಡ್ರೈವರ್ ಬಾಟಾ ಎಲ್ಲಾ ನಾವೇ ಕೊಡ್ತೀವಿ.

ಹ.ನಾಡಿಗರು : ಸರೀ ನೀವು ಇಷ್ಟೆಲ್ಲಾ ಹೇಳ್ತೀರಾ ಅಂದ್ ಮೇಲೆ ಬರ್ತೀನಿ ಗೌಡ್ರೆ. ಆದ್ರೆ ನಂಗೆ ಸ್ವಲ್ಪ ನಾಚಿಕೆ ಜಾಸ್ತಿ ಅಂದ್ರು. ಅಂಗೆಲ್ಲಾ ಅನ್ಕಬೇಡಿ ಸಿವಾ.

ಸರೀ ನಾಡಿಗರು ಬತ್ತಾರೆ ಅಂತಾ ಕಲಾ. ಎಲ್ಲಾ ತಯಾರಿ ಮಾಡ್ರಲಾ ದಯವಿಟ್ಟು ನಿಮ್ಮ ಚಂಗುಲಿ ಬುದ್ದಿ ಮಾತ್ರ ತೋರಿಸ್ ಬೇಡ್ರಲಾ ಅಂದಾ ಗೌಡಪ್ಪ.

ನಮ್ಮ ಹಳ್ಯಾಗೆ ಯಾರೋ ದೊಡ್ಡ ರಾಜಕಾರಣಿ ಬತ್ತಾರೆ ಅಂತಾ ಸಾನೇ ಜನಾ ಸೇರಿತ್ತು. ಕಾರು ಬಂತು ಹಾರ ತಗೊಂಡು ಬರ್ರಲಾ.

ನೋಡಿದ್ರೆ ಜೀನ್ಸ್ ಪ್ಯಾಂಟ್, ಟೀ ಸರ್ಟ್ ಹಾಕ್ಕೊಂಡು ಒಬ್ಬ ಹುಡುಗ ಇಳಿದ್ರು. ಮತ್ಯಾರೋ ಇಳಿತಾರೆ  ಅಂತಾ ಜನಾ ಕಾಯ್ತಾ ಇದ್ವು. ನೋಡಿದ್ರೆ ಯಾರೂ ಇಳೀಲಿಲ್ಲ. ಅಲ್ಲಾ ಕಲಾ ಏನೋ ಸಾಧನೆ ಮಾಡಿದಾರೆ ಅಂದರೆ ಬಿ.ಡಿ.ಜತ್ತಿ,ವಾಜಪೇಯಿಯಷ್ಟು ವಯಸ್ಸಾಗಿದೆ ಅಂತಾ ನೋಡಿದ್ರೆ ಏನಲಾ ಇನ್ನೂ ಐದ ಕಲಾ ಅಂದ್ವು.

ಸರಿ ಮೆರವಣಿಗೆ ಹೊಂಡ್ತು. ಸಂಪದದ ನಾಡಿಗರಿಗೆ, ಜೈ ಅನ್ನೋವು. ನಿಂಗಂಗೆ ಬಾಯಿ ಹೊರಳ್ತಾ ಇರ್ಲಿಲ್ಲ. ಸಂದಪದ ನಾಗಡಿಗರಿಗೆ ಜೈ. ಸುಮ್ಕಿರಲ್ಲಾ ನಾಡಿಗರು ಆಮ್ಯಾಕೆ ನಮ್ಮ ಅಕೌಂಟ್ ನ್ನ ಬ್ಲಾಕ್ ಮಾಡ್ ಬಿಡ್ತಾರೆ ಅಂದ್ ಮ್ಯಾಕೆ ಎಲ್ಲಾ ಸುಮ್ಕಾದ್ವು. ನಾಡಿಗರು ಕಾಲಿಗೆ ಅಡ್ಡಡ್ಡ ಸೀತು ಸಿಗೋನು. ನಾಡಿಗರು ಎಲ್ಡು ಕಿತಾ ಬಿದ್ದು ಹೋಗೋರು, ಏ ಥೂ ಸೈಡಿಗೆ ಬಾರಲಾ ಅಂದಾ ಸುಬ್ಬ. ನಾಡಿಗರು ಡ್ರೈವರ್ ಗೂ ನಮ್ಮ ಜನಾ ಹಾರ ಹಾಕಿ ಚಾ ಕೊಟ್ಟಿದ್ವು. ಕುಡಿದು ಏನು ಡಿಕಾಕ್ಸನ್ ಕಮ್ಮಿ ಐತೆ ಅಂದಾ ಡ್ರೇವರ್. ಪುಕ್ಕಟೆ ಕೊಟ್ಟಿರೋದು ಕುಡಿದು ಏಳಲಾ ಅಂದಾ ನಿಂಗ.

ಸರಿ ಗೌಡಪ್ಪನ ಮನ್ಯಾಗೆ ಕೋಳಿ ಸಾರು, ಮಟನ್ ಬಿರ್ಯಾನಿ ಮಾಡಿದ್ರು. ನಾಡಿಗರು ನಾನು ಇವೆಲ್ಲಾ ತಿನ್ನುವುದಿಲ್ಲ ಅಂತಾ ಸ್ವಲ್ಪ ಮಜ್ಜಿಗೆ ಕೊಡಿ ಎಂದು ಸುತ್ತಲೂ ನೀರು ಹಾಕಿ ಮಾಡಿ ಕುಡಿದು ಎದ್ರು. ಏನಲಾ ಇದು ಅಂದಾ ಸುಬ್ಬ. ಅದು ಅವರ ಪದ್ದತಿ ಕಲಾ. ಗೌಡರು ಹೆಂಡರು ನಾನು ನೀವು ಇಷ್ಟೆಲ್ಲಾ ಸಾಧನೆ ಮಾಡಿದ್ದು ನೋಡಿದ್ರೆ ಎಲ್ಲೋ ಬಿ.ಡಿ.ಜತ್ತಿ ತರೋನೋ ಇಲ್ಲಾ, ಅಬ್ದುಕಲಾಂ ತರಾನೋ ಇದೀರಾ ಅಂದಕೊಂಡಿದ್ದೆ ನೀವು ನೋಡಿದ್ರೆ  ಹೀರೋ ಪ್ರೇಮ್ ತರಾ ಇದೀರಾ ಅಂದ್ವು. ಸ್ವಲ್ಪ ಒಳಗೆ ಹೋಯ್ತೀರಾ ಅಂದಾ ಗೌಡಪ್ಪ.

ಸರಿ ಸಂಜೆ ಗಣಪತಿ ಪೆಂಡಾಲ್ ನಾಗೆ ಭಾಸಣ. ಎಂದಿನಂತೆ ಗೌಡಪ್ಪ ಸುರು ಹಚ್ಕಂಡ ಭಾಸಣ, ನೋಡ್ರಲಾ ಸಂಪದದಾಗೆ ನಮ್ಮ ನಾಡಿಗರು ಸಾನೇ ಪೇಮಸ್ ಕಲಾ. ಅದ್ರಾಗೆ ಕನ್ನಡದ ಬಗ್ಗೆ ಬಾಳ ವರದಿ ಬತ್ತದೆ ಕನ್ರಲಾ. ನೀವು ಕಂಪ್ಯೂಟರ್ ತಗೊಂಡು ನೋಡ್ರಲಾ. ಅಂಗೇ ಸಾಕ್ಷರತಾ ಕಾರ್ಯಕ್ರಮಕ್ಕೆ ಹೋಗಿ ಕನ್ನಡ ಕಲಿತು ನೀವು ಸಂಪದದಾಗೆ ನಮ್ಮ ಹಳ್ಳಿ ಬಗ್ಗೆ ಬರೀಲಾ ಅಂದು ಕುಂತ. ನಾಡಿಗರಿಗೆ ಹೆಣ್ಣು ಐಕ್ಳುಗಳು ಹಾರ ಹಾಕಿದ್ದೇ ಹಾಕಿದ್ದು, ನಾಡಿಗರು ಟೀ ಸಲ್ಟು ಒಂತರಾ ಗೋಣಿ ಚೀಲ ಆದಂಗೆ ಆಗಿತ್ತು. ನಮ್ಮ ಐಕ್ಳು ಹಾರದಾಗೆ ಅಂಗೆ ನೀರಿತ್ತು. ಅದಕ್ಕೆ ಅಂಗೆ ಆಗಿತ್ತು.

ಈಗ ನಾಡಿಗರ ಭಾಸಣ. ನೋಡಿ ಕನ್ನಡ ಕಲಾಭಿಮಾನಿಗಳೆ, ಕಲಾ ರಸಿಕರೆ ಅಂದ್ರು. ಏನಲಾ ರಾಜಣ್ಣ ಹೇಳಿದಂಗೆ ಹೇಳ್ತಾವ್ರೆ ಅಂದಾ ಕಿಸ್ನ. ನೀವು ಸಂಪದ ನೋಡಿ ಎಂಜಾಯ್ ಮಾಡಿ ಅಂದು ಕುಂತರು. ಸರಿ ಎಲ್ಲಾ ಚಾರ್ಜು ಕೊಟ್ಟು ನಾಡಿಗರನ್ನು ಬೆಂಗಳೂರಿಗೆ ಕಳಿಸಿದ್ವಿ. ಹೆಣ್ಣು ಐಕ್ಲೂ ಇವತ್ತು ಅವರನ್ನ ಇಲ್ಲೇ ಉಳಿಸಿಕೊಂಡು ನಮ್ಗೂ ಕಂಪೂಟರ್ ಕಲಿಸಬೇಕಾಗಿತ್ತು ಅಂದ್ವು. ಏ ಥೂ.

ಸರಿ ಸಂಜೆ ತಾವ ಸಾಲೆ ನೋಡಿದ್ರೆ ಸಾನೇ ರಸ್ ಆಗಿತ್ತು. ಎಲ್ಲಾವೂ ಕಂಪೂಟರ್ ಕಲಿಯೀದೆಯಾ. ಒಂದು ಹತ್ತು ಕೀ ಬೋರ್ಡ್ ಹಾಳಾಗಿತ್ತು. ಮುಂಡೇವು ಕಂಪೂಟರ್ ನ್ನ ಏನೇನೋ ಒತ್ತಿ ಹಾಳು ಮಾಡಿದ್ವು. ಸಾಲೆಗೆ ಅಂತಾ ಇನ್ಫೋಸಿಸ್ ನೋರು ಫ್ರೀ ಕೊಟ್ಟಿದ್ರಂತೆ. ಮತ್ತೊಂದಿಷ್ಟು ಕೊಡ್ರಿ ಅಂದಿದ್ದಕ್ಕೆ ಸುಧಾ ನಾರಾಯಣ ಮೂರ್ತಿ ಸಾನೇ ಉಗಿದಿದ್ರು. ಕಡೆಗೆ ಸಂಪದ ನೋಡಿದ್ರೆ ನಮ್ಮಹಳ್ಳಿಂದ ಒಂದು ನೂರು ಲೇಖನ ಇತ್ತು. ಎಲ್ಲಾವು ತಮ್ಮ ಕೆರೆತಾವ ಹೋಗಿದ ಅನುಭವ ಬರೆದಿದ್ವು. ಗೌಡಪ್ಪ ಮಾತ್ರ ಬೇಜಾರಾಗಿದ್ದ, ಯಾಕ್ರೀ ಗೌಡ್ರೆ. ನೋಡಲಾ ಇವರನ್ನೆಲ್ಲಾ ಸೇರಿಸಿದ್ದಕ್ಕೆ ನಾಡಿಗರು ನನ್ನ ಅಕೌಂಟನ್ನೇ ಬ್ಲಾಕ್ ಮಾಡಿದಾರೆ. ಕೇಳಿದ್ರ ಇಡೀ ಸಂಪದದನೇ ನಿಮ್ಮ ಹಳ್ಳಿ ಆಗೈತೆ ಇನ್ನು ನೀನು ಯಾಕೆ ಬೇಕು ಅಂದ್ರು ಕಲಾ ಅಂದ.