ಮೈಕ್ರೋಸಾಫ್ಟ್ ನ 'ವಿಸ್ತಾ' ಇನ್ನೇನು ಮಾರುಕಟ್ಟೆಗೆ ಬರಲಿದೆಯಂತೆ. ಎಕ್ಸ್ ಪಿಯಲ್ಲಿ ಇದ್ದ ಕನ್ನಡ ಅಕ್ಷರಗಳ ಸಮಸ್ಯೆ ಇಲ್ಲಿಯೂ ಮುಂದುವರಿದಿದೆ ಎಂಬುದು ವಿಸ್ತಾದ ರಿಲೀಸ್ ಕ್ಯಾಂಡಿಡೇಟ್ -2 ಪರೀಕ್ಷಿಸಿದವರಿಗೆಲ್ಲಾ ತಿಳಿಯುತ್ತದೆ. Rank ಈಗ ರ್ಯಾಂಕ್ ಆಗುವುದಿಲ್ಲ. ಆದರೆ ಸಾಫ್ಟ್ ವೇರ್ ಎಂದು ಬರೆದರೆ ಅದು ಸಾ ಫ್ ಟ್ ವೇ ರ್ ಆಗುತ್ತದೆ.
ಮೈಕ್ರೋಸಾಫ್ಟ್ ನಲ್ಲಿ ಇದೆಲ್ಲಾ ಸರಿಯಾಗಿರಲೇಬೇಕು ಎಂದು ವಾದಿಸುವುದರ ಬದಲಿಗೆ ಅದನ್ನು ಬಳಸುವುದನ್ನೇ ಬಿಟ್ಟು ಬಿಡಿ ಎಂಬ ವಾದವನ್ನು ಮಂಡಿಸಬಹುದು. ಇದು ತಾತ್ವಿಕವಾಗಿ ಸರಿಯೂ ಹೌದು. ನನಗೆ ಕಾಡುತ್ತಿರುವುದು ಈ ಸಮಸ್ಯೆಯಲ್ಲ. ಯಾವುದಾದರೂ ಒಂದು ಸಂಸ್ಥೆ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯೊಂದನ್ನು ಅದಕ್ಕೆ ತೋಚಿದಂತೆ ಬದಲಾಯಿಸಿಬಿಡುವುದನ್ನು ಒಪ್ಪಿಕೊಳ್ಳಬೇಕೇ?
ಸಾ ಫ್ ಟ್ ವೇ ರ್ ಎಂಬಂಥ ಪ್ರಯೋಗವನ್ನು ಬಿಎಂಶ್ರೀ ಒಮ್ಮೆ ಪ್ರತಿಪಾದಿಸಿದ್ದರು. ಆದರೆ ಅದಕ್ಕೆ ಹೆಚ್ಚಿನವರ ಬೆಂಬಲ ದೊರೆಯಲಿಲ್ಲ. ಕೆಲವರಿದನ್ನು ವಿರೋಧಿಸಿದರು ಎಂದೂ ಓದಿದ್ದು ನೆನಪಾಗುತ್ತಿದೆ. ಈಗ ಮೈಕ್ರೋಸಾಫ್ಟ್ ಇದನ್ನು ಹೇರುತ್ತಿದೆ. ವಿರೋಧಿಸುವುದು ಬಿಡಿ. ಕನಿಷ್ಠ ಇದರ ಕುರಿತು ಚರ್ಚಿಸುತ್ತಿಲ್ಲ.
ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಸಾಫ್ಟ್ ವೇರ್ ಗಳ ಅತಿದೊಡ್ಡ ಗ್ರಾಹಕ ಸರಕಾರ. ಸರಕಾರ ತನ್ನ ಎಲ್ಲಾ ಕೆಲಸಕ್ಕೆ ಮೈಕ್ರೋಸಾಫ್ಟ್ ನ ತಂತ್ರಾಂಶಗಳನ್ನೇ ಬಳಸುತ್ತಿದೆ. (ಇತ್ತೀಚೆಗೆ ಚುನಾವಣಾ ಆಯೋಗ ಮುಕ್ತ ತಂತ್ರಾಂಶಗಳನ್ನು ಬಳಸುವ ಪ್ರಯತ್ನ ಆರಂಭಿಸಿದೆ) ಕರ್ನಾಟಕ ಸರಕಾರದ ಇ-ಗವರ್ನನ್ಸ್ ಕಾರ್ಯದರ್ಶಿಯವರಿಗಂತೂ ಮೈಕ್ರೋಸಾಫ್ಟ್ ಎಂದರೆ ಪಂಚಪ್ರಾಣ. ಆಡಳಿತದಲ್ಲಿ ಕನ್ನಡ ಎಂಬ ಪರಿಕಲ್ಪನೆ ಕಂಪ್ಯೂಟರ್ ಗಳ ಸಂದರ್ಭದಲ್ಲಿಯೂ ನಿಜವಾಗುತ್ತಿರುವ ಹೊತ್ತಿನಲ್ಲಿ ಕನ್ನಡ ಬರೆವಣಿಗೆಯೂ ಮೈಕ್ರೋಸಾಫ್ಟ್ ನ ತಂತ್ರಾಂಶಗಳ ಮೂಗಿನ ನೇರಕ್ಕೆ ಇರುತ್ತದೆ ಎಂದಾಗುತ್ತದೆಯಲ್ಲವೇ?
ಮೈಕ್ರೋಸಾಫ್ಟ್ ಎಕ್ಸ್ ಪಿಗಾಗಿ ಹೊರತಂದಿದ್ದ ಕನ್ನಡ ಹೊದಿಕೆ ಅಥವಾ ಲಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ನಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಕೊಂದಿರುವುದರ ಬಗ್ಗೆ ಉದಾಹರಣೆ ಸಹಿತ ಒಂದು ವರ್ಷದ ಹಿಂದೆಯೇ ಪ್ರಶಾಂತ್ ಪಂಡಿತ್ 'ಸಂಪದ'ದಲ್ಲಿಯೇ ಬರೆದಿದ್ದರು. ಆ ಸ್ಥಿತಿ ಈಗಲೂ ಬದಲಾಗಿಲ್ಲ. ವಿಸ್ತಾಕ್ಕೂ ಇದೇ ಹೊದಿಕೆಯನ್ನು ಬಳಸಲಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ.
ಮೈಕ್ರೋಸಾಫ್ಟ್ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ. ಈ ತಪ್ಪನ್ನು ತಿದ್ದಿಸಬೇಕು ಎಂಬ ಅರಿವು ಕರ್ನಾಟಕ ಸರಕಾರಕ್ಕೂ ಇರುವಂತೆ ಕಾಣಿಸುತ್ತಿಲ್ಲ. ಸರಕಾರಕ್ಕೂ, ಮೈಕ್ರೋಸಾಫ್ಟ್ ಗೂ ಕನ್ನಡವನ್ನು ಕೊಲ್ಲಬೇಡಿ ಎಂದು ಹೇಳುವವರು ಯಾರು? ಹೇಗೆ?
-ಇಸ್ಮಾಯಿಲ್
ಪ್ರತಿಕ್ರಿಯೆ (2)
ರಾಜಕಾರಣಿಗಳನ್ನು ದೂರುವ ಸಮಯದಲ್ಲಿ ವಿಧಾನಸೌಧದಲ್ಲಿ ಕೂರುವಂತೆ ಮಾಡಿದ್ದೂ ನಾವೇ ಎಂದು ಬರೋದಿಲ್ವೆ? ಹಾಗೆ.[/quote] ಇದು ಖಂಡಿತ ನಿಜ.ಇದಕ್ಕಿಂತ ದೊಡ್ಡ ಬಾಟಮ್ ಲೈನ್ ಇಲ್ಲ ಅಂತ ನನ್ನ ವೈಯಕ್ತಿಕ ನಂಬಿಕೆ. ಇರಲಿ ಬಿಡಿ,ಈಗ ಅದನ್ನು (ಅವರನ್ನು) ಬದಲಾಯಿಸುವುದರ ಬಗ್ಗೆ ಅಲ್ಲವಲ್ಲ್ ಈ ಚರ್ಚೆ. ಜಾಥಾ, ಸಹಿ ಸಂಗ್ರಹಣೆ ಎಲ್ಲವೂ ಈ ಕಾಲದಲ್ಲಿಯೂ ನಡೆಯುತ್ತವೆ. ಆದರೆ ಬಲವಾಗಿ, ಕಾಣುವ ರೀತಿ, ಮಾಡಬೇಕು ಅಷ್ಟೆ. ಸುಮ್ಮನೆ ೧೦೦ ಜನ ಸೇರಿ, ಅದನ್ನೇ ಜಾಥ ಎಂದರೆ ಅದು ದೇವರಾಣೆಗೂ flop ಆಗುತ್ತದೆ! ಕನ್ನಡಿಗರು ಒಟ್ಟಾಗಿ ಸೇರಬೇಕು.ಅರ್ಧ ದಿನದ ರಜೆ ಹೋದರೂ ಪರವಾಗಿಲ್ಲ,ಕನ್ನಡಕ್ಕಾಗಿ ಮುನ್ನುಗ್ಗುತ್ತೇವೆ ಅನ್ನುವ ಭಾವನೆ ಬಂದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಚಳುವಳಿಗಳ ಉಪಯೋಗ ಸಾಧ್ಯ. ನನಗೇನೋ ಈಗಲೂ ಚಳುವಳಿಗಳಲ್ಲಿ ನಂಬಿಕೆಯಿದೆ. [quote=HPN]ಅದೇ ಜವಾಬ್ದಾರಿ ಹೊತ್ತು ಇಸ್ಮಾಯಿಲರು ಈ ಲೇಖನ ಬರೆದಿದ್ದಾರೆ - ನಾವುಗಳು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ... [/quote]ಬಹುಶಃ ನನ್ನ ಅನಿಸಿಕೆಯ ಕೊನೆಯ ಪ್ಯಾರವನ್ನು ಓದಿ ಹೀಗಂದಿರಬೇಕು. ನನಗೆ ಇಸ್ಮಾಯಿಲರ ಆಶಯದ ಬಗ್ಗೆ ಶಂಕೆಯಿಲ್ಲ, ಮೇಲಾಗಿ ಅದನ್ನು ಸಂಪೂರ್ಣ ಒಪ್ಪುತ್ತೇನೆ.ಅದನ್ನು ಕುರಿತು ನಾನು ಹೇಳಲಿಲ್ಲ. ಖಂಡಿತ ಚರ್ಚೆ ಎನ್ನುವುದು ಯಾವುದೇ ಕ್ರಿಯೆಗೆ ಮುಂಚಿನ ಹಂತ. ಆದರೆ ಅದು ಬರಿಯ ಚರ್ಚೆಯಾಗಿಯೇ ಉಳಿಯಬಾರದು ಅನ್ನುವುದು ನನ್ನ ಆಸೆ. ಹಲವಾರು ಬಾರಿ ಎಷ್ಟೋ ವಿಚಾರಗಳು ಚರ್ಚೆಯಲ್ಲೇ ಆರಂಭವಾಗಿ, ಚರ್ಚೆಯಲ್ಲೇ ಬೆಳೆದು, ಕೊನೆಗೆ ಚರ್ಚೆಯಲ್ಲೇ ಮುಗಿದೂ ಹೋಗುತ್ತವೆ . ಏನಂತೀರಾ? ಇದನ್ನು ನಾನೂ ನೋಡಿದ್ದೇನೆ, ನೀವೂ ನೋಡಿದ್ದೀರಾ. ಅಲ್ಲವೇ? ಈ ವಿಷಯ ನಿಜಕ್ಕೂ ಗಂಭೀರವಾದ್ದರಿಂದ, ಹಾಗಾಗದಿರಲಿ ಅಂತ ನನ್ನ ಹಾರೈಕೆ. - ಶ್ಯಾಮ್ ಕಿಶೋರ್