ಅಣ್ಣಾ ಹಜಾರೆಯವರು ಭ್ರಶ್ಟಾಚಾರದ ವಿರುದ್ಧ ಸತ್ಯಾಗ್ರಹಕ್ಕೆ ಕುಳಿತಾಗಿನಿಂದ ಇಡೀ ದೇಶದಲ್ಲಿ ಎಲ್ಲರೂ ಅವರನ್ನ ಬೆಂಬಲಿಸಿದ್ದೇ ಬೆಂಬಲಿಸಿದ್ದು. ಅಣ್ಣಾ ಹಜಾರೆಯವರ ಈ ಹೋರಾಟವನ್ನು ನಾವು ಬೆಂಬಲಿಸ್ತೇವೆ, ನಾವು ಬೆಂಬಲಿಸ್ತೇವೆ ಅಂತ ಹೇಳಿದ್ದೇ ಹೇಳಿದ್ದು... ನೋಡಿ ನೋಡಿ ಸಾಕಾಗಿದೆ ಕಣ್ರೀ!
ಈ ಹೊತ್ತಲ್ಲಿ, ನನ್ನ ಮನಸಲ್ಲಿ ಏನೇನೋ ಪ್ರಶ್ನೆಗಳು ಹುಟ್ಕೊಂಡಿವೆ. ಭ್ರಶ್ಟಾಚಾರ ಅಂದ್ರೆ ಬರೀ ಹಣಕ್ಕೆ ಸಂಬಂಧಿಸಿದ್ದೇ? ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತಿರುವವರೆಲ್ಲರು ನಿಜವಾಗಿಯೂ ಭ್ರಶ್ಟಾಚಾರ ವಿರೋಧಿಗಳೇ? ಇಡೀ ದೇಶವೇ ಅವರನ್ನು ಬೆಂಬಲಿಸುತ್ತಿದೆ ಎಂದರೆ ಇಡೀ ದೇಶವೇ ಭ್ರಶ್ಟಾಚಾರದ ವಿರುದ್ಧ ಇದೆಯೆಂಬ ಅರ್ಥವೇ? ಹಾಗಾದ್ರೆ, ನಮ್ಮ ದೇಶ ಇಶ್ಟು ಬೇಗ ಈ ಭ್ರಶ್ಟಾಚಾರದ ವಿರುದ್ಧ ಎಚ್ಚೆತ್ಕೊಂಡುಬಿಟ್ರೇ? ಕರ್ನಾಟಕ ಭ್ರಶ್ಟಾಚಾರದಲ್ಲಿ ಇಡೀ ದೇಶದಲ್ಲಿಯೇ ನಂಬರ್ ಒನ್ ಎಂದು ಮ್ಯಾಗಜೀನ್ಗಳು ಪ್ರಕಟಿಸಿದ್ದನ್ನು ನೋಡಿದ್ಮೇಲೆ ಕರ್ನಾಟಕದಲ್ಲಿ ಹೆಚ್ಚೂ ಕಡಮೆ ಎಲ್ಲರೂ(ಹಾಲಿ/ಮಾಜಿ ಮುಖ್ಯಮಂತ್ರಿಗಳು, ಸಚಿವರು, ರಾಜಕಾರಣಿಗಳು, ಸಾಹಿತಿಗಳು, ವಿಚಾರವಾದಿಗಳು, ಮುಂತಾದವರು) ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತಿದ್ದಾರೆ! ಏನಾಶ್ಚರ್ಯ?
ಕಡೆಗೂ ನಮ್ಮ ಜನರಲ್ಲಿ ದೇಶದ ಜನರಲ್ಲಿ ಭ್ರಶ್ಟಾಚಾರ ವಿರುದ್ಧ ಜಾಗೃತಿ ಉಂಟಾಗಿದೆ ಎಂದುಕೊಂಡು ಸಂತಸಪಡಬಹುದು ಎಂದ್ಕೊಂಡ್ರೆ ನಮ್ಮಂತ ಮೂರ್ಖರು ಮತ್ತಾರೂ ಇರಲಾರರು!
ಬಹುಪಾಲು ಜನರು ಕಳ್ಳತನದ ವಿರುದ್ಧ ನಿಂತಾಗ ಆ ಬಹುಪಾಲು ಜನರನ್ನು ಬೆಂಬಲಿಸದಿರುವವರು ಕೂಡ ಕಳ್ಳರು ಎಂದೇ ಆಗುತ್ತದೆ. ಹಾಗಾಗಿ, ನಿಜವಾದ ಕಳ್ಳರೂ ಕೂಡ ಕಳ್ಳತನದ ವಿರುದ್ಧ ಬಹುಪಾಲು ಜನರ ಕೈಜೋಡಿಸುತ್ತಾರೆಯೇ ಹೊರತು ಸುಮ್ಮನಿರುವುದಿಲ್ಲ. ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಉಟ್ಟಿರೋರೇ ಮೂರ್ಖರು ಅಂದ ಹಾಗೆಯೇ, ಈ ಭ್ರಶ್ಟಾಚಾರದ ವಿರುದ್ಧ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತೇವೆ ಎಂದು ಹೇಳುವವರಲ್ಲಿ ಬಹುಪಾಲು ಜನರು ಕಳ್ಳರೇ ಎಂದರೆ ಯಾರೂ ಹೆಗಲುಮುಟ್ಟಿ ನೋಡಿಕೊಳ್ಳಬೇಕಾದ ಅಗತ್ಯವಿಲ್ಲ. ಯಾಕಂದ್ರೆ ವಾಸ್ತವ ಇರೋದೇ ಹಾಗೆ!
ಭಾರತ ದೇಶದ ನೆಲದಲ್ಲಿ ಆಳವಾಗಿ ಬೇರೂರಿರೋ ಈ ಭ್ರಶ್ಟಾಚಾರದ ಆಲದ ಮರಾನ ಬುಡಸಮೇತ ಕಿತ್ತುಹಾಕೋದಕ್ಕೆ ಇನ್ನೂ ನೂರಾರು ವರುಶಗಳೇ ಬೇಕಾದೀತು! ಅಣ್ಣಾ ಹಜಾರೆಯವರಂತಹ ಹೋರಾಟ 12ನೇ ಶತಮಾನದ ನಮ್ಮ ಬಸವಣ್ಣನವರಂತಹ ಹೋರಾಟದಂತೆಯೇ ಆದರೂ ಅಚ್ಚರಿಪಡಬೇಕಿಲ್ಲ. ಹಾಗಾದರೆ, ಹೋರಾಟ ಮಾಡುವುದು ತಪ್ಪೇ ಅಂದರೆ, ಖಂಡಿತ ತಪ್ಪಲ್ಲ. ಈ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರಬೇಕು. ಎಲ್ಲಿಯವರೆಗೆ ಅಂದರೆ, ನಮ್ಮ ದೇಶದಲ್ಲಿ ಕಿಂಚಿತ್ತೂ ಭ್ರಶ್ಟಾಚಾರ ಇಲ್ಲ ಎಂದು ಎಲ್ಲರೂ ಆತ್ಮಸಾಕ್ಷಿಯಾಗಿ ಒಕ್ಕೊರಲಿನಿಂದ ಹೇಳುವಂತಾಗಬೇಕು ಅಲ್ಲೀವರೆಗೆ...
ವಿಪರ್ಯಾಸ ನೋಡಿ. ಇಲ್ಲಿ ಒಂದ್ಕಡೆ ಭ್ರಶ್ಟಾಚಾರದ ವಿರುದ್ಧ ದೇಶವಿಡೀ ಹೋರಾಟ ನಡೆಸ್ತಿದೆ ಅಂತ ಅಂದ್ಕೊಳ್ತಾ ಇರೋವಾಗ್ಲೇ ಇನ್ನೊಂದ್ಕಡೆ ಚುನಾವಣೆಗಳು ನಡೀತಿರೋ ಕಡೆ ಮತ್ತದೇ ಹಣದ, ಹೆಂಡದ ಹೊಳೆ ಹರೀತಿದೆ. ಜನರೇ, ಅದರಲ್ಲೂ ಮುಖ್ಯವಾಗಿ ಹೆಂಗಸರೇ ನಮಗೆ ಆ ಪಕ್ಶದವರು ನಮಗೆ ಮತ ಹಾಕಲಿಕ್ಕೆ ಹಣ ಕೊಡಲಿಲ್ಲ, ಇನ್ನೊಂದು ಪಕ್ಶದವರು ಕೊಟ್ಟರು. ಅವರೇ ವಾಸಿ ಎಂದು ಊರಿಗೆ ಊರೇ ಕೂಗಿ ಹೇಳೋವಂತದ್ದನ್ನ ನಾವು ಮಾಧ್ಯಮಗಳಲ್ಲಿ ಕಾಣ್ತಾ ಇದ್ದೇವೆ. ಮತ ನೀಡೋವುದಕ್ಕೆ ಹಣ ಕೊಡ್ಲೇ ಬೇಕು ಎನ್ನೋವಂತ ಕಾನೂನುಬದ್ಧ ನಿಯಮಾನ ರಾಜಕೀಯ ಪಕ್ಶಗಳು ಗಾಳಿಗೆ ತೂರಿವೆ ಎಂದು ಜನರು ಕೂಗಿ ಹೇಳ್ತಾ ಇದ್ದದನ್ನ ಕಾಣ್ತಾ ಇದ್ದೇವೆ. ಇದೇ ನಮ್ಮ ಭವ್ಯ ಭಾರತ!
ಇನ್ನು ಶಾಲಾಕಾಲೇಜುಗಳು, ಸರಕಾರಿ ಖಾಸಗಿ ಸಂಸ್ಥೆಗಳಿಗೆ ಬನ್ನಿ ಸೀಟುಗಳಿಗಾಗಿ, ಕೆಲಸಗಳಿಗಾಗಿ ಅದೇ ಶಿಫಾರಸ್ಸುಗಳು, ಲಂಚಗಳು ಇತ್ಯಾದಿ... ಮುಂದುವರಿದೇ ಇದೆ. ನಮಗಿಂದು ಲಂಚ ನೀಡುವುದು, ಅದೂ ಹಣದ ರೂಪದಲ್ಲಿ ಅಂತದ್ದು ಮಾತ್ರ ಭ್ರಶ್ಟಾಚಾರ ಅನ್ನಿಸ್ತಿದೆ. ಆದರೆ, ಯಾವ್ಯಾವುದು ನ್ಯಾಯವಲ್ಲವೋ ಅದೆಲ್ಲವೂ ಭ್ರಶ್ಟಾಚಾರವೇ ಅಲ್ಲವೇ? ನಮಗೆ ನಮಗಾಗದವರು ಮಾಡುವುದೆಲ್ಲವೂ ಭ್ರಶ್ಟಾಚಾರ, ನಮ್ಮನ್ನೊಳಗೊಂಡಂತೆ ನಮಗೆ ಬೇಕಾದವರು ಏನೇ ಮಾಡಿದರೂ ಅದಾವುದೂ ಭ್ರಶ್ಟಾಚಾರ ಅನಿಸೋದೇ ಇಲ್ಲ. ಈ ಪಕ್ಷಪಾತ ಕೂಡ ಭ್ರಶ್ಟಾಚಾರ ಅಲ್ವೇ? ನಮಗೆ ನಮ್ಮ ಕೆಲಸಗಳು ಆಗಬೇಕೇ ಹೊರತು ಈ ಭ್ರಶ್ಟಾಚಾರದಂತಹ ಸಂಗತಿಗಳಿಂದ ಏನೂ ಆಗಬೇಕಾದ್ದಿಲ್ಲ ಅಲ್ವೇ?
ಇನ್ನು ಪತ್ರಿಕೆಗಳಲ್ಲಿ ನಾನು ಓದಿದ ಹಾಗೆ, ನಮ್ಮ ಸಾಹಿತಿಗಳು, ವಿಚಾರವಾದಿಗಳು, ಬುದ್ಧಿಜೀವಿಗಳು ಭ್ರಶ್ಟಾಚಾರದ ವಿರುದ್ಧದ ಈ ಹೋರಾಟ ವ್ಯಕ್ತಿಕೇಂದ್ರಿತ ಆಗಬಾರ್ದು. ವಿಶಯಕೇಂದ್ರಿತ ಆಗ್ಬೇಕು ಅಂತ ಹೇಳಿಕೆಗಳನ್ನ ಕೊಟ್ಟಿದ್ರು. ಆದ್ರೆ ಇವರಲ್ಲಿ ಎಶ್ಚು ಜನ ತಾವು ಈಗಿನ ಸ್ಥಾನಮಾನಗಳಿಗಾಗಿ, ಪ್ರಶಸ್ತಿಗಳಿಗಾಗಿ ಲಾಬಿ ನಡೆಸಿಲ್ಲ, ಶಿಫಾರಸ್ಸುಗಳನ್ನ ಮಾಡ್ಸಿಲ್ಲ, ತಮ್ಮವರಿಗೇ ಎಲ್ಲವೂ ಸಲ್ಲಬೇಕು ಅಂತ ಅರ್ಹರಾದ ಬೇರೆಯವರಿಗೆ ಅಂತಹ ಸ್ಥಾನಮಾನಗಳು ದಕ್ಕದ ಹಾಗೆ ನೋಡ್ಕೊಂಡಿಲ್ಲ. ಸರಕಾರದ ಹಣದಲ್ಲಿ ಮನೆ, ಮಠ, ಆಸ್ತಿಪಾಸ್ತಿಗಳನ್ನು ಮಾಡ್ಕೊಂಡಿಲ್ಲ. ಕರ್ನಾಟಕದಲ್ಲಿ ಎಲ್ಲವೂ ಕನ್ನಡದಲ್ಲೇ ನಡೀಬೇಕು ಒಂದ್ಕಡೆ ಹೇಳಿಕೆಗಳನ್ನ ಕೊಟ್ಟು, ಮತ್ತೊಂದ್ಕಡೆ ತಮ್ಮ ಮಕ್ಕಳನ್ನ ಸೆಂಟ್ರಲ್ ಸ್ಕೂಲ್ಗಳಲ್ಲಿ ಓದಿಸ್ತಿಲ್ಲ. ಒಂದೇ ಎರಡೇ... ಇವೆಲ್ಲ ಭ್ರಶ್ಟಾಚಾರ ಅಲ್ವೇ?
ಅಲ್ಲಾ ಸ್ವಾಮಿ, ಸ್ವಾತಂತ್ರಕ್ಕೋಸ್ಕರ ಲಕ್ಶಾಂತರ ಜನ ಹೋರಾಡಿದ್ರು, ನಿಜ. ಆದರೆ, ನಾವೆಲ್ರೂ ಗಾಂಧೀಜಿಯನ್ನೇ ಯಾಕೆ ಮಹಾತ್ಮ ಅಂತ ಕರೀತೀವಿ ಅಂದ್ರೆ ಉತ್ರ ಕೊಡೋಕೆ ಪರದಾಡ್ಬೇಕಾಗಿಲ್ಲ ಅಲ್ವ? ಹಂಗೇನೇ ನಂ ದೇಶ್ದಲ್ಲಿ ಭ್ರಶ್ಟಾಚಾರ ಹಾಸುಹೊಕ್ಕಾಗಿದೆ, ನಂ ದಿನ ಶುರುವಾಗೋದು ಮುಗಿಯೋದೇ ಭ್ರಶ್ಟಾಚಾರದ ಜೊತೇಗೇನೇ ಅಂತ ನಮ್ಮೆಲ್ರುಗೂ ಗೊತ್ತೇ ಇತ್ತು. ಗೊತ್ತೇ ಇದೆ. ಆದ್ರೂ ನಾವೆಲ್ಲ ಏನ್ ಮಾಡಿದೀವಿ? ಜಗತ್ತಿನಲ್ಲಿ ಮನುಶ್ಯನಾಗಿ ಹುಟ್ಟಿದ್ಮೇಲೆ ದುಕ್ಕ ಶಾಶ್ವತ ಅಂತ ಎಲ್ರಿಗೂ ಗೊತ್ತಿರೋದೇ ಅಲ್ವೇ. ಅದನ್ನ ಹೇಳೋಕೇ ಬುದ್ಧಾನೇ ಯಾಕೆ ಬೇಕಾಯ್ತು? ಹಾಗೇನೇ ಈ ಭ್ರಶ್ಟಾಚಾರದ ವಿರುದ್ಧ ಸೊಲ್ಲೆತ್ತೋಕೇ ಅಣ್ಣಾ ಹಜಾರೆಯಂತೋರು ಬೇಕಿತ್ತು ಅನ್ನೋದನ್ನ ನಾವೆಲ್ಲ ಅರ್ಥ ಮಾಡ್ಕೋಬೇಕು.
ಬೆಳಗ್ಗೆ ಪೇಪರಲ್ಲಿ ಓದಿದೆ. ವಾಲಿಬಾಲ್ ಮತ್ತು ಫುಟ್ಬಾಲಿನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸೋ ಕ್ರೀಡಾಳು ಹೆಣ್ಣುಮಗಳೊಬ್ಳನ್ನು ಯಾರೋ ಪಾಪಿಗಳು ರೈಲಿನಿಂದ ತಳ್ಳಿ ಆಕೆಯ ಕಾಲು ಹೋಗಿರೋದಕ್ಕೆ ಆ ಕ್ರೀಡಾಳು ವಾಸ ಮಾಡೋ ರಾಜ್ಯ ಅಂದರೆ, ಉತ್ತರಪ್ರದೇಶ ಸರಕಾರ 25, 000 ಪರಿಹಾರ ಘೋಶಣೆ ಮಾಡಿದೆ. ನೋಡಿ. ಕಾಲು ಹೋಗಿರೋದಕ್ಕೆ 25,000 ರೂಪಾಯಿ ಪರಿಹಾರ. ವರ್ಲ್ಡ್ ಕಪ್ ಗೆದ್ದಿದ್ದಕ್ಕೆ ಒಬ್ಬೊಬ್ಬ ಆಟಗಾರರಿಗೂ ಕೋಟಿಗಟ್ಟಲೆ ಹಣ, ಸೈಟು, ಕಾರು, ಬಂಗಲೆಗಳು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಇದೇ ಪ್ರಜಾಪ್ರಭುತ್ವ. ಇದೇ ನಮ್ಮ ಭವ್ಯಭಾರತ!
ಸರಿ...ಹೀಗೆ ಹೇಳ್ತಾ ಹೋದ್ರೆ ಒಂದು ಮಹಾಪ್ರಬಂಧಾನೇ ಬರೀಬೋದು. ತುಂಬಾ ಸಿಂಪಲ್ಲಾಗಿ ಹೇಳ್ವೇಕಂದ್ರೆ. ಅಂಬೇಡ್ಕರ್ ಬರೆದಿರೋ ಈ ಸಂವಿಧಾನದ ಮುನ್ನುಡಿ ಇದಿಯಲ್ಲ, WE the people, ಅದನ್ನ ಅರ್ಥ ಮಾಡ್ಕೋಬೇಕು. Liberty, Equality, Fraternity ಅಂದ್ರೆ ಏನು ಅನ್ನೋದನ್ನು ಅರ್ಥ ಮಾಡ್ಕೋಬೇಕು. Democratic, Republic, Socialist, Secular INDIA ಅಂದ್ರೆ ಏನು ಅಂತ ಅರ್ಥ ಮಾಡ್ಕೋಬೇಕು. ಆಗ ಯಾವ ಭ್ರಶ್ಟಾಚಾರವೂ ಇರೋದಿಲ್ಲ. ಆಗಶ್ಟೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಸಾರ್ಥಕ ಆಗೋದು. ಅದೇನು ಗಾಂಧಿ ಜಯಂತಿಗೆ ಮಾತ್ರ ರಜಾ ಕೊಡ್ತೀರಿ, ಅಂಬೇಡ್ಕರ್ ಜಯಂತಿಗೆ ರಜಾ ಕೊಡಲ್ಲ. ಅದಕ್ಕೂ ಕೊಡಿ ಅಂತ ಕೇಳೋದಲ್ಲ ನಮ್ಮ ಸಂವಿಧಾನ ಬದ್ಧ ಹಕ್ಕು. ಬೇರೆ ದೇಶದ ಜನ ವಿಶೇಶ ದಿನಗಳಲ್ಲಿ ಮಾಮಾಲು ದಿನಗಳಿಗಿಂತ ಹೆಚ್ಚು ಕೆಲ್ಸ ಮಾಡೋ ಹಾಗೆ ಇಂತ ಮಹಾತ್ಮರ ಜಯಂತಿಗಳಲ್ಲಿ ಇನ್ನೂ ಹೆಚ್ಚು ಕೆಲ್ಸ ಮಾಡ್ಬೇಕೇ ಹೊರತು ಸದ್ಯ ರಜಾ ಸಿಕ್ತಲ್ಲ ಅನ್ನೋದಲ್ಲ. ಅಥವಾ ಅವರ ಜಯಂತಿಗೆ ಮಾತ್ರ ರಜಾ ಕೊಡ್ತೀರಿ ಇವರ ಜಯಂತಿಗೂ ರಜಾ ಕೊಡಿ ಅಂತ ಕೇಳೋದಲ್ಲ! ನಮ್ಗಳ್ಗೇನು ಮಜಾ ಮಾಡೋಕೆ ಒಂದು ರಜಾ ಸಿಕ್ಕಿದ್ರೆ ಸಾಕು. ಇನ್ನೇನಾದ್ರೂ ನಂಗೇನೂ ಆಗ್ಬೇಕಿಲ್ಲ. ಊರೋರ ಉಸಾಬರಿ ನಂಗ್ಯಾಕೆ ಅಂತ!
ಒಟ್ನಲ್ಲಿ ನಾವು ಈ ಕಾಲಕ್ಕೆ ಉದ್ಧಾರ ಆಗಲ್ಲಿ ಕಣ್ರೀ! ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ದಿನ ರಜಾ ಕೊಟ್ಟು ನಮ್ಮ ಸರಕಾರಗಳು ಒಂದು ರೀತಿಯ ಭ್ರಶ್ಟಾಚಾರಕ್ಕೆ ದಾರೀ ಮಾಡ್ಕೊಡ್ತಿವೆ ಅಶ್ಟೆ! ಯಾರ ಜಯಂತಿಗೂ ರಜಾ ಕೊಡ್ಬೇಡಿ ಸ್ವಾಮಿ. ನಿಜವಾಗ್ಲೂ ಭ್ರಶ್ಟಾಚಾರ ತೊಲಗ್ಬೇಕು ಅಂತ ಮಾತಾಡೋರು ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸೋದು ಹೇಗೆ ಅಂತ ತೋರಿಸ್ಕೊಡಿ. ಆಗಶ್ಟೇ ಅಣ್ಣಾ ಹಜಾರೆಯಂತವ್ರ ಹೋರಾಟಗಳು ಸಾರ್ಥಕವಾಗೋದು.
ಇದನ್ನು ಓದಿದ ಮೇಲೆ ಇದೇನು ಇವ್ನು ತಲೇಬುಡು ಇಲ್ದೆ ಏನೋನೋ ಹೇಳ್ತಾ ಇದಾನೆ. ಒಂದಕ್ಕೊಂದು ಸಂಬಂಧಾನೇ ಇಲ್ಲಾ ಅಂತೀರಾ. ನೀವೇ ಯೋಚ್ನೆ ಮಾಡಿ. ನಿಂಗೇ ಹೊಳೆಯುತ್ತೆ. ನಾನೇನು ಹೇಳ್ತಾ ಇದೀನೀ ಅಂತ. ಒಟ್ನಲ್ಲಿ ನಾನು ಇಲ್ಲೀಗಂಟ ಹೇಳಿದ್ದು ನಿಂಗೇ ಅರ್ಥವಾಗಿದ್ರೆ ನಾನು ಇಷ್ಟುದ್ದ ಇದನ್ನೆಲ್ಲ ಬರ್ದಿದ್ದಕ್ಕೂ ಸಾರ್ಥಕ ಕಣ್ರೀ!
ಪ್ರತಿಕ್ರಿಯೆ (1)