ಹಿಂದಿನ ಕಾಲದಲ್ಲಿ ಎಣ್ಣೆಯ ಗಾಣವನ್ನು ತಿರುಗಿಸಲು ಎತ್ತನ್ನ ಉಪಯೋಗಿಸುತ್ತಿದ್ದರು, ಈಗ ಎತ್ತಿನ ಬದಲು ವಿದ್ಯುತ್ ಚಾಲಿತ ಮೋಟರುಗಳು ಬಳಕೆಯಲ್ಲಿವೆ. ಸಂಸ್ಕೃತ ಮೂಲದ ಈ ಕತೆಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಈ ಹಿನ್ನಲೆ ಅವಶ್ಯವೆನಿಸಿದ್ದರಿಂದ ಈ ವಿಷಯವನ್ನು ಇಲ್ಲಿ ಹೇಳಹೊರಟೆ, ಇರಲಿ.  ಒಬ್ಬ ಗಾಣಿಗನಿದ್ದ., ಅವನು ಎಲ್ಲರಂತೆ ಎತ್ತನ್ನು ಅದರ ಹಿಂದೆ ನಿಂತು ಓಡಿಸುತ್ತಿರಲಿಲ್ಲ, ಅದು ತನ್ನ ಪಾಡಿಗೆ ತಾನು ತಿರುಗುವಂತೆ ಅದಕ್ಕೆ ಉಪಾಯವೊಂದನ್ನು ಮಾಡಿದ್ದ. ಒಮ್ಮೆ ಇವನಲ್ಲಿ ಎಣ್ಣೆಯನ್ನು ಕೊಳ್ಳಲು ಒಬ್ಬ ತರ್ಕ ಪಂಡಿತ ಬಂದ, ಅವನು ಎತ್ತು ತನ್ನಷ್ಟಕ್ಕೆ ತಾನೇ ತಿರುಗುತ್ತಿರುವುದನ್ನು ಕಂಡು ಆಶ್ಚರ್ಯಗೊಂಡ. ತನ್ನ ಕುತೂಹಲವನ್ನು ಹತ್ತಿಕ್ಕಿಕೊಳ್ಳಲಾಗದೆ ಒಳಗಡೆ ಯಾವುದೋ ಕೆಲಸದಲ್ಲಿ ನಿರತನಾಗಿದ್ದ ಗಾಣಿಗನನ್ನು ಕಂಡು ಪ್ರಶ್ನಿಸಿದ, "ಅಲ್ಲಾ, ನೀನು ನೋಡಿದರೆ ಇಲ್ಲಿ ಒಳಗೆ ಕೆಲಸದಲ್ಲಿದ್ದೀಯಾ, ಹೊರಗೆ ನಿನ್ನ ಎತ್ತು ತಿರುಗುತ್ತಿದೆಯೋ ಇಲ್ಲವೋ ಎಂದು ನಿನಗೆ ಹೇಗೆ ತಿಳಿಯುತ್ತದೆ?"
     ಅದಕ್ಕೆ ಆ ಗಾಣಿಗ, "ಸ್ವಾಮಿ ಅದು ಬಹಳ ಸರಳ, ಅದರ ಕೊರಳಲ್ಲಿ ಕಟ್ಟಿರುವ ಘಂಟೆಯ ಸದ್ದಿನಿಂದ ಅದು ತಿರುಗುತ್ತಿದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆ!"
    ಆ ತರ್ಕ ಪಂಡಿತ, "ಒಂದು ವೇಳೆ ನಿನ್ನ ಎತ್ತು ಕುಳಿತಲ್ಲಿಯೇ ತಲೆ ಅಲ್ಲಾಡಿಸುತ್ತಿದ್ದರೆ ಅದು ಕೆಲಸ ಮಾಡುತ್ತಿದೆಯೆಂದು ತಿಳಿದು ನೀನು ಮೋಸಹೋಗ ಬಹುದಲ್ಲವೇ?"
    "ಕ್ಷಮಿಸಿ ಮಹಾಸ್ವಾಮಿ, ನನ್ನ ಎತ್ತು ನಿಮ್ಮ ಹಾಗೆ ತರ್ಕವನ್ನು ಓದಿಕೊಂಡಿಲ್ಲ" ಎಂದು ಆ ಗಾಣಿಗ ಮಾರುತ್ತರ ನೀಡಿದ. ಗಾಣಿಗನ ಲೋಕಜ್ಞಾನದ ಮುಂದೆ ತನ್ನ ತರ್ಕ ಕೆಲಸಕ್ಕೆ ಬಾರದೆಂದರಿತ ಆ ಪಂಡಿತ ತನ್ನ ಕೆಲಸ ಮುಗಿಸಿ ಅಲ್ಲಿಂದ ಕಾಲ್ತೆಗೆದ.