2011 ರ ಡಿಸೆಂಬರ್ 4 ರ ಬೆಳಗು ವಿಷಾದದ ರಾಗವೊಂದನ್ನು ಹೊತ್ತು ತಂದ ಬೆಳಗು ಆಯಿತು. ಮಾಮೂಲಿನಂತೆ ಇಂದು ಬೆಳಿಗ್ಗೆ ಟೆಲಿವಿಜನ್ ಆನ್ ಮಾಡಿದಾಗ ಚಾನಲ್ ವೊಂದರಲ್ಲಿ ಚುಟುಕು ಸುದ್ದಿಯೊಂದು ಬಿತ್ತರ ಗೊಳ್ಳುತ್ತಿತ್ತು. ಅದು ಹಿಂದಿ ಚಿತ್ರರಂಗದ ಹಳೆಯ ತಲೆಮಾರಿನ ಖ್ಯಾತ ನಟ ' ಎವರ್ಗ್ರೀನ್ ' ಹೀರೊ, ದಾದಾ ಸಾಹೇಬ ಫಾಲ್ಕೆ ಪುರಸ್ಕೃತ ದೇವ ಆನಂದನ ನಿಧನದ ಸುದ್ದಿ ಅದಾಗಿತ್ತು. ಹಾಗೆ ನೋಡಿದರೆ 88 ವರ್ಷಗಳ ಪ್ರಾಯದ ಚಿರ ಯೌವನಿಗ ದೇವ್ ಈಗ ಚಾಲ್ತಿಯಲ್ಲಿಲ್ಲದ ನಟನಾಗಿದ್ದ, ಕಾರಣ ಆತ ನಾಯಕ ಪಾತ್ರಗಳಿಂದ ನಿರ್ಗಮಿಸಿದ ನಂತರ ಬೇರೆ ಪಾತ್ರಗಳಲ್ಲಿ ಅಭಿನಯಿಸಲು ಹೋಗಲಿಲ್ಲ. ಆದರೆ ಸುಮಾರು 70 ವರ್ಷಗಳ ಹಿಂದಿನ ಯುವ ಪೀಳಿಗೆಗೆ ದೇವಾನಂದ ಅನೇಕ ವರ್ಷಗಳ ಕಾಲ ಮನರಂಜಿಸಿದ ನಟ ಎನ್ನುವುದಕ್ಕಾಗಿ ಈ ಸ್ಮರಣೆ.
ಈ ಸಿನೆಮಾ ಪ್ರಪಂಚ ಎಲ್ಲ ಕಾಲಕ್ಕೂ ಆಯಾ ಕಾಲ ಘಟ್ಟದ ಯುವ ಪೀಳಿಗೆಯನ್ನು ರಂಜಿಸುತ್ತ ಬಂದಂತಹ ಒಂದು ಆಕರ್ಷಕ ಜಗತ್ತು. ಎಲ್ಲರಿಗೂ ಈ ಚಲನಚಿತ್ರಗಳನ್ನು ನೋಡುವ ಅವಕಾಶ ಆಗ ದೊರೆಯುತ್ತಿದ್ದುದು ಕಷ್ಟಕರವಾಗಿತ್ತು. ಆದರೂ ಈ ಕೊರತೆಯನ್ನು ನಾವು ಪ್ರತಿಕೆ ಗಳಲ್ಲಿ ಬರುತ್ತಿದ್ದ ಲೇಖನ ವಿಮಶರ್ೆಗಳನ್ನು ಓದುತ್ತ ಖುಷಿ ಪಡುತ್ತಿದ್ದೆವು. ಬಾಲ್ಯಕಾಲದಲ್ಲಿ ಅಜ್ಜಿಯ ಜೊತೆ ನೋಡಿದ ಪೌರಾಣಿಕ ಮತ್ತು ಭಕ್ತಿ ಪ್ರಧಾನ ಕೆಲ ಚಿತ್ರಗಳನ್ನು ನೋಡಿದ್ದು ಬಿಟ್ಟರೆ ಆ ಕಾಲದ ಯಾವ ಚಿತ್ರಗಳನ್ನು ನೋಡಲಾಗಿರಲಿಲ್ಲ. ದೂರದರ್ಶನ ಜಾಲ ಬಂದ ನಂತರ ಆ ಜಮಾನಾದ ಚಿತ್ರಗಳನ್ನು ನೋಡಲು ಸಾಧ್ಯವಾದದ್ದು. ಆಗ ಗ್ರಾಮೀಣ ಪರಿಸರದಲ್ಲಿ ಕಾಲೇಜು ಹುಡುಗರು ಮಾತ್ರ ನಗರ ಪ್ರದೇಶಗಳಿಗೆ ಓದಲು ಹೋದಾಗ ಅದು ಅನುಕೂಲಸ್ಥರ ಮಕ್ಕಳಿಗೆ ಮಾತ್ರ ಚಲನ ಚಿತ್ರ ವೀಕ್ಷಣೆ ಸಾಧ್ಯವಿತ್ತು.ಅ ಕಡೆಗೆ ಒಲವು ಬೆಳೆಸಿಕೊಂಡವರನ್ನು ದಾರಿ ತಪ್ಪಿದವರು ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಅಚಾನಕ್ಕಾಗಿ ಒದಗಿ ಬರುತ್ತಿದ್ದ ಅವಕಾಶಕ್ಕಾಗಿ ನಾವು ಕಾಯುತ್ತಿದ್ದೆವು.
ಅಂತಹ ಅವಕಾಶ ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಒದಗಿ ಬಂತು. ಅದು 1965 ಇಂಡೋ ಪಾಕ್ ಕದನ ಪ್ರಾರಂಭವಾಗಿದ್ದ ಕಾಲ. ಗುಡಿಗೆರೆಯ ಮುನಸಿಪಲ್ ಹೈಸ್ಕೂಲಿನಲ್ಲಿ ಒಂಭತ್ತನೆ ತರಗತಿ ಓದುತ್ತಿದ್ದೆ. ಅಲ್ಲಿ ರಾಜಶ್ರೀ ಟೂರಿಂಗ್ ಟಾಕೀಸ್ ಬಂದಿತ್ತು. ಬರಿ ವಾಲ್ ಪೋಸ್ಟರ್ ನೋಡಿ ಸಂತಸ ಪಡುತ್ತಿದೆವು. ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ಕಳಿಸಲು ಹೈಸ್ಕೂಲ್ ಮಕ್ಕಳಿಗೆ ಒಂದು ಪ್ರದರ್ಶನವನ್ನು ಏರ್ಪಡಿಸಲು ಹೈಸ್ಕೂಲ್ ಆಡಳಿತ ನಿರ್ಧರಿಸಿತ್ತು. ಅದು ಕಡ್ಡಾಯವೆಂದು ಮಾಡಿದ್ದು ನಮಗೆ ಖುಷಿ ತಂದಿತ್ತು. ಆಗ ದೇವ ಆನಂದ ನೂತನ ಮತ್ತು ನಾನಾ ಪಾಲಸೀಕರ ರವರ ಅಭಿನಯದ ' ತೆರೆ ಘರ ಸಾಮನೆ' ಚಿತ್ರ ಪ್ರದರ್ಶನ ಕೊಳ್ಳುತ್ತಿತ್ತು. ಮನೆಯಲ್ಲಿ ಅದಕ್ಕೆ 25 ಪೈಸೆ ಕೊಡಲು ತಕರಾರು ಮಾಡುತ್ತಿದ್ದರು. ಅಂತೂ ಕೊನೆಗೆ ಆ ದುಡ್ಡು ಕೈಗೆ ಸಿಕ್ಕಾಗ ಸಂತಸವಾಗಿತ್ತು. ಆ ಬೆನಿಫಿಟ್ ಶೋ ದಿಂದಾಗಿ ಒಂದು ಚಿತ್ರ ನೋಡಿದ ಸಂತಸ ನಮ್ಮದಾಗಿತ್ತು.
ಆ ಕಾಲದ ಪ್ರಸಿದ್ಧ ನಾಯಕ ನಟರಾದ ರಾಜಕಪೂರ, ದೇವಾನಂದ ಮತ್ತು ದಿಲೀಪಕುಮಾರ ರವರು ಬಂದದ್ದು ಆಗಿನ ಅವಿಭಾಜ್ಯ ಭಾರತದ ಪಶ್ಚಿಮ ಭಾಗದಿಂದ ಅಂದರೆ ಈಗಿನ ಪಾಕಿಸ್ಥಾನ ಪ್ರದೇಶದಿಂದ. 1923 ರ ಸಪ್ಟಂಬರ 26 ರಂದು ಜನಿಸಿದ ದೇವ ಆನಂದ ತನ್ನ ಪದವಿ ಮುಗಿ ದೊಡನೆ ಉದ್ಯೋಗ ವನ್ನರಸಿ ಬಂದದ್ದು ಮುಂಬೈ ಮಾಯಾ ನಗರಿಗೆ. 1946 ರಲ್ಲಿ ' ಹಮ್ ಏಕ ಹೈ ' ಚಿತ್ರದ ಮೂಲಕ ಹಿಂದಿ ಚಲನಚಿತ್ರ ರಂಗಕ್ಕೆ ಪದಾರ್ಪಣ ಮಾಡಿದ ದೇವ ಆನಂದ ಮುಂದೆ ' ಜಿದ್ದಿ ' ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ತನ್ನ ಪಯಣವನ್ನು ಪ್ರಾರಂಭಿಸಿದ. ಮುಂದೆ ಆತ ತನ್ನದೆ ಒಂದು ವಿಶಿಷ್ಟಶೈಲಿಯ ಅಭಿನಯ ರೂಢಿಸಿಕೊಂಡು ಆತ ಬೆಳೆದ ಎತ್ತರ ಮಾಡಿದ ಸಾಧನೆ ಅದ್ಭುತ. ರಾಜ ಕಪೂರ ಮುಗ್ಧ ನಟನೆಗೆ ಹೆಸರಾದರೆ, ದಿಲೀಪ ದುರಂತ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಪಡೆದ ದೇವ ಆನಂದ ರೊಮ್ಯಾಂಟಿಕ್ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ. ಇವರುಗಳು ಎಲ್ಲ ತರಹದ ಪಾತ್ರಗಳಲ್ಲಿ ಅಭಿನಯಿಸಿದರೂ ಅಭಿ ಮಾನಿಗಳು ಅವರನ್ನು ಆ ರೀತಿ ಭಾವಿಸಿದರು. ಈ ಮೂವರು ಸೇರಿ ' ಇನ್ಸಾನಿಯತ್ ' ಚಿತ್ರದಲ್ಲಿ ಅಭಿನಯಿಸಿದ್ದು ಬಿಟ್ಟರೆ ಮುಂದೆ ಒಟ್ಟಾಗಿ ಯಾವ ಚಿತ್ರಗಳಲ್ಲಿ ಅಭಿನಯಿಸಲಿಲ್ಲ.
ದೇವಾನಂದ ಆ ಕಾಲದ ದೇವಿಕಾರಾಣಿ, ನಳಿನಿ ಜಯವಂತ, ಮಧುಬಾಲ, ಕಲ್ಪನಾ, ಶೋಭನಾ ಸಮರ್ಥ, ಕಲ್ಪನಾ ಕಾತರ್ಿಕ, ವಹೀದಾ ರೆಹಮಾನ, ಸಾಧನಾ, ವೈಜಯಂತಿಮಾಲಾ, ನೂತನ, ತನುಜಾ, ಮಾಲಾಸಿನ್ಹಾ, ಜಹೀರಾ, ಝೀನತ್ ಅಮಾನ್, ಮಮ್ತಾಜ್, ಹೇಮಾ ಮಾಲಿನಿ ಮುಂತಾದ ಎಲ್ಲ ಖ್ಯಾತನಾಮ ನಟಿಯರೊಂದಿಗೆ ಅಭಿನಯಿಸಿದ ಬಹುತೇಕ ಎಲ್ಲ ಚಿತ್ರಗಳು ಯಶಸ್ವಿ ಯಾದವು. ಆತನ ಖ್ಯಾತ ಚಿತ್ರಗಳ ಪೈಕಿ ಕೆಲವನ್ನು ಹೆಸರಿಸುವುದಾದಲ್ಲಿ ಕಾಲಾಪಾನಿ, ಕಾಲಾಬಜಾರ, ಸಿಐಡಿ, ತೆರೆ ಘರಕೆ ಸಾಮನೆ, ಮಾಯಾ, ತೀನ್ ದೇವಿಯಾ, ಜಬ್ ಪ್ಯಾರ ಕಿಸಿಸೆ ಹೋತಾ ಹೈ, ಗೈಡ, ಜುವೆಲ್ ಥೀಫ್, ಪ್ರೇಮ ಪೂಜಾರಿ, ಹರೆ ರಾಮ ಹರೆ ಕೃಷ್ಣ ಮುಂತಾದವನ್ನು ನೆನಪಿಸಿ ಕೊಳ್ಳ ಬಹುದು. ಆತ ಅಭಿನಯಿಸಿದ ಚಿತ್ರಗಳ ಸಂಖ್ಯೆ ಸುಮಾರು 200 ಇರಬಹುದು. ಆತನ ನಿರ್ಮಾಣ ಮತ್ತು ನಿರ್ದೇಶನದ ಇತ್ತೀಚೆಗೆ ಬಿಡುಗಡೆ ಕಂಡ ' ಚಾರ್ಜ ಶೀಟ್ '.
ಈತನ ಕಾಲದ ಪ್ರಸಿದ್ಧ ಅಭಿನೇತ್ರಿ ಮತ್ತು ಗಾಯಕಿ ' ಸುರಯ್ಯ' ಪರಸ್ಪರ ಪ್ರೀತಿಸಿದರು. ಆದರೆ ಸುರಯ್ಯಾಳ ಅಜ್ಜಿ ಸಂಪ್ರದಾಯಸ್ಥ ಮುಸ್ಲೀಂ ಮಹಿಳೆ ಯಾಗಿದ್ದು ಈ ಮದುವೆಗೆ ಒಪ್ಪಿಗೆ ನೀಡದ ಕಾರಣ ಅವರ ಮದುವೆ ನಡೆಯಲಿಲ್ಲ. ಕೊನೆಗೆ ಸುರಯ್ಯ ಆಜನ್ಮ ಕಾಲ ಮದುವೆ ಯಾಗದೆ ಉಳಿದು ಕೊನೆಯುಸಿರೆಳೆದಳು. ನಂತರ ಈತ ನಟಿ ಕಲ್ಪನಾ ಕಾರ್ತಿಕಳನ್ನು ಮದುವೆ ಯಾದ. ಈತ ತನ್ನ ಮಗನಿಗಾಗಿ ಒಂದರಡು ಚಿತ್ರಗಳನ್ನು ನಿರ್ಮಿಸಿ ನಿರ್ದೆಶಿಸಿದ. ಆದರೆ ಆತ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಸಲಾಗಲಿಲ್ಲ. ಈತ ತನ್ನದೆ ನವಕೇತನ ಲಾಂಛನ ದಲ್ಲಿ ಅನೇಕ ಚಿತ್ರಗಳನ್ನು ತಯಾರಿಸಿದ ಅವು ಯಶಸ್ವಿಯಾದವೂ ಕೂಡ. ಈತನ ಸ್ವಂತ ನಿರ್ಮಾಣದ ಚಿತ್ರಗಳನ್ನು ಆತನ ತಮ್ಮ ವಿಜಯಾನಂದ ನಿರ್ದೇಶಿಸಿದ. ಯಶಸ್ವಿ ಚಿತ್ರಗಳೆಂದು ಹೆಸರಿಸುವುದಾದಲ್ಲಿ ಗೈಡ, ಜುವೆಲ್ ಥೀಫ್, ಪ್ರೇಮ ಪೂಜಾರಿ ಮುಂತಾದವನ್ನು ಹೆಸರಿಸ ಬಹುದು. ಹರೆ ರಾಮ ಹರೆ ಕೃಷ್ಣ ಚಿತ್ರದಿಂದ ತಾನೇ ನಿರ್ದೇಶನಕ್ಕೆ ತೊಡಗಿದ. ಜಹೀರಾ, ಝೀನತ್ ಅಮಾನ್ ಹಾಗೂ ಟೀನಾ ಮುನೀಮ್ ರನ್ನು ಪರಿಚಯಿಸಿದ. ಈತ ಗೈಡ್ ಚಿತ್ರಕ್ಕೆ ಆಯ್ದು ಕೊಂಡದ್ದು ಖ್ಯಾತ ಇಂಗ್ಲೀಷ್ ಕಾದಂಬರಿಕಾರ ಆರ್.ಕೆ.ನಾರಾಯಣ ಗೈಡ್ ಕಾದಂಬರಿಯನ್ನು. ಇದನ್ನು ಆತ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ತಯಾರಿಸಿದ. ಇದು ಬಹಳ ಯಶಸ್ವಿಯಾದ ಚಿತ್ರ, ಇದು ಆರು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಮಂದೆ ಆತನ ನಿಮರ್ಾಣದ ಯಾವ ಚಿತ್ರಗಳೂ ಈ ಮಟ್ಟದ ಯಶಸ್ಸು ಪಡೆಯಲಿಲ್ಲ.
ಈತ ತನ್ನ ಜೀವಿತಾವಧಿಯಲ್ಲಿ ಏಳು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದ. 2001 ರಲ್ಲಿ ಈತನ ಕೊಡುಗೆಯನ್ನು ಗಮನಿಸಿ ಕೇಂದ್ರಸಕರ್ಾರ ' ಪದ್ಮ ಭೂಷಣ ' ಪ್ರಶಸ್ತಿಯನ್ನು ಹಾಗೂ 2002 ರಲ್ಲಿ ' ದಾದಾ ಸಾಹೇಬ ಫಾಲ್ಕೆ ' ಪುರಸ್ಕಾರಗಳನ್ನು ಕೊಡಲಾಯಿತು. ಈತನ ಅಣ್ಣ ಚೇತನ ಆನಂದ ಸಹ ಉತ್ತಮ ನಿರ್ದೇಶಕನಾಗಿದ್ದ. ಈತ ನಝೀರ್ ಹುಸ್ಸೇನ್ ನಿರ್ಮಾಣದ ' ತೀಸ್ರಿ ಮಂಝಿಲ್ ' ಚಿತ್ರದಲ್ಲಿ ಅಭಿನಯಿಸ ಬೇಕಿತ್ತು. ಆದರೆ ಕಾಲ್ ಶೀಟ್ ಗಳು ಇಲ್ಲದ ಕಾರಣ ಆತನ ಬದಲು ಶಮ್ಮಿ ಕಪೂರನನ್ನು ಹಾಕಿಕೊಂಡು ಚಿತ್ರ ನಿರ್ಮಾಣ ಮಾಡಿದ. ವಯಸ್ಸಾದರೂ ಆತ ಉತ್ಸಾಹಿಯಾಗಿದ್ದ ಜಿವನವನ್ನು ಪ್ರೀತಿಸಿದ ಅದರಂತೆ ಚಲನಚಿತ್ರ ನಿರ್ಮಾಣ, ನಿರ್ದೇಶನ ಮತ್ತು ನಟನೆಗಳನ್ನು ಸಹ. ನಮಗೆ ಆತನ ಕ್ರಿಯಾಶೀಲ ಬದುಕು ಆದರ್ಶವಾಗಬೇಕು ಎಂಬುದಕ್ಕಾಗಿ ಈ ಲೇಖನ.
ದೇವ ಆನಂದ ಗತಿಸಿ ಹೋದರೂ ಆತ ಬಿಟ್ಟುಹೋದ ಸುಂದರ ಮನರಂಜಿಸುವ ಚಿತ್ರಗಳಿವೆ. ಮನಸೂರೆಗೊಳುವ ಮಧುರ ಗೀತೆಗಳಿವೆ. ಆತನ ಜನಪ್ರಿಯ ಗೀತೆಗಳನ್ನು ಹೆಸರಿಸುವುದಾದಲ್ಲಿ ಕೆಲವನ್ನು ಉದಾಹರಿಸಬಹುದು.
(1) ಹಮ್ ದೋನೊ :- 1.ಅಭಿ ನ ಜಾವೋ ಛೋಡಕರ್ ಅಭಿಏ ದಿಲ್ ಭರಾ ನಹಿ, 2. ಮೈ ಜಿಂದಗೀಕಾ ಸಾಥ ನಿಭಾತಾ ರಹಾ,
(2) ಕಾಲಾ ಬಜಾರ :- 1.ಖೋಯಾ ಖೋಯಾ ಚಾಂದ್ ಖುಲಾ ಆಸಮಾನ್, 2. ಅಪನಿ ತೋ ಹರ್ ಆಹ್
(3) ಶರಾಬಿ :- 1.ಕಭಿ ನ ಕಭಿ ಕಹಿ ನ ಕಹಿ, 2.ಮುಝೆ ಲೇ ಚಲೊ, 3. ಸಾವನ ಕೆ ಮಹೀನೇಮೆ, 4. ದೋ ದೋ ಹಾಥ್ ದೋ ದೋ ಪಾಂವ್
(4) ಮಂಝಿಲ್ :- 1. ಯಾದ್ ಮೆ ಆ ಗಯಿ ವೋ ನಶೀಲಿ ನಿಗಾಂಹೆ, 2. ಹಮ್ ದಮ್ ಸೆ. 3. ಅಬ್ ಕಿಸೆ ಪತಾ ಕಲ್ ಹೋ ಕ್ಯಾ.
(5) ಅಸಲಿ ನಕಲಿ :- 1.ಕಲ್ ಕಿ ದೌಲತ್ ಆಜ್ ಕಿಸಿಕಾ, 2. ತುಝೆ ಜೀವನ ಕಿ ದೋರ್ ಸೆ ಬಾಂಧ ಲಿಯಾ ಹೈ, 3. ಗೊರಿ ಜರಾ ಹಂಸಕೆ
(6) ಗೈಡ್ :- 1. ಗಾತಾ ರಹೆ ಮೇರಾ ದಿಲ್, 2. ದಿನ್ ಢಲ್ ಜಾಯೆ, 3. ತೆರೆ ಮೇರೆ ಸಪನೆ, 4. ಕ್ಯಾಸೆ ಕ್ಯಾ ಹೋಗಯಾ.
(7) ಪ್ರೇಮ್ ಪೂಜಾರಿ :- 1. ಫೂಲೋಂಕೆ ರಂಗ್ ಸೆ, 2. ಶೋಕಿಯೋಂ ಮೆ ಘೋಲಾ ಜಾಯೆ.
(8) ಮುನೀಮ್ಜಿ :- ಜೀವನ್ ಕಿ ಸಫರ್ ಮೆ ರಾಹಿ.
(9) ತೀನ್ ದೇವಿಯಾ :- ಖ್ವಾಬ್ ತುಮಹೋ ಕೋಯೀ ಹಕೀಕತ್.
(10) ಜುವೆಲ್ ಥೀಫ್ :- ಏ ದಿನ್ ನಾ ಹೊತಾ ಬೇಚಾರಾ.
(11) ಜಬ್ ಪ್ಯಾರ ಕಿಸೀಸೆ ಹೋತಾ ಹೈ :- ಜಿಯಾ ಹೋ ಜಿಯಾ ಕುಛ್ ಬೋಲ್ ದೊ
(12) ಕಹಿ ಔರ್ ಚಲ್ :- ಓ ಲಕ್ಷ್ಮಿ ಓ ಸರಸು ಓ ಶೀಲಾ ಓ ರಜನಿ ಕ್ಯಾ ಕ್ಯಾ ಲೇಕರ ಆತಾ ಹೈ ಏ ಮಸ್ತ ಬಹಾರ್.
(13) ಹರೆ ರಾಮ ಹರೆ ಕೃಷ್ಣ :- ದಮ್ ಮಾರೋ ದಮ್ ಮಿಟ್ ಜಾಯೆ ಹಮ್
ಅವಿಶ್ರಾಂತವಾಗಿ ದುಡಿದ ದೇವ ವಿಶ್ರಾಂತಿ ಪಡೆಯಲಿ, ಸಾಧ್ಯವಿದ್ದರೆ ಪುನರ್ಜನ್ಮ ಇರುವು ದಾದಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ ನೊಂದ ಜೀವಗಳ ರಂಜಿಸಲಿ ಎಂದು ಲೇಖನ ಮುಗಿಸುವೆ.
ಚಿತ್ರ: IANS
ಪ್ರತಿಕ್ರಿಯೆ (4)