ಗ್ರಾಮೀಣ ಸೊಗಡಿನ, ಎತ್ತರದ ನಿಲುವಿನ, ಮುಖದಲ್ಲಿ ಒಂದು ರೀತಿಯ ಆತ್ಮವಿಶ್ವಾಸದ ಕಳೆಹೊತ್ತಿದ್ದವರು ನಮ್ಮ ಅಜ್ಜಿ ವೀರಮಲ್ಲಮ್ಮ. ಅವರು ಹಣೆಯಲ್ಲಿ ಅಗಲವಾದ ಗುಂಡಗಿನ ಕುಂಕುಮವಿಟ್ಟುಕೊಳ್ಳುತ್ತಿದ್ದ, ಕೈಯಲ್ಲಿ ಡಜನ್‍ಗಟ್ಟಲೆ ಕಪ್ಪು ಸಾಣೆ ಬಳೆಗಳನ್ನು ತೊಡುತ್ತಿದ್ದ ಪರಿಯೇ ಒಂದು ರೀತಿಯ ಆಕರ್ಷಣೀಯವಾಗಿ, ಅವರ ವ್ಯಕ್ತಿತ್ವಕ್ಕೆ ಮೆರುಗನ್ನು ಕೊಟ್ಟಿತ್ತು. ಅಜ್ಜಿಯ ಮಾತು ಅವರ ಹೆಸರಿಗೆ ಅನ್ವರ್ಥವಾಗುವಂತೆ ಒಂದು ರೀತಿಯ ಜೋರಿನ ಮಾತೇ ಎನ್ನಬೇಕು. ಇಲ್ಲದಿದ್ದರೆ, ಯಾವಾಗಲೂ ತಾವೇ ತಮ್ಮ ಜಮೀನನಲ್ಲಿ ಏನಾದರೂ ಗಿಡ ನೆಡುವ ಅಥವಾ ಕಳೆ ಕೀಳುವ ಮುಂತಾದ ಕಾಯಕದಲ್ಲಿ ತೊಡಗುತ್ತಿದ್ದು, ಆ ಮೂಲಕ ಹೊಲದಲ್ಲಿ ತಮ್ಮ ಕೂಳಿಯಾಳುಗಳು ಸರಿಯಾಗಿ ಕೆಲಸ ಮಾಡುವಂತೆ ನಿಭಾಯಿಸುತ್ತಿದ್ದುದು ಸೌಮ್ಯ ಸ್ವಾಭಾವದ ಹೆಣ್ಣು ಹೆಂಗಸರಿಗೆ ಸಾಧ್ಯವಿಲ್ಲದ ಮಾತು. ಅಜ್ಜಿಯ ಇನ್ನೊಂದು ಹವ್ಯಾಸ ಮತ್ತು ಆಸಕ್ತಿಯೆಂದರೆ, ಎಲ್ಲಿಗೆ ಹೋದರು ಗಿಡಗಳನ್ನು ತಂದು ನೆಡುವುದು. ಬಗೆಬಗೆಯ ಗಿಡಗಳನ್ನು ಜಮೀನಿನ ಮಧ್ಯೆ ಇದ್ದ ಅವರ ಮನೆಯ ಅಂಗಳದಲ್ಲಿ ನೋಡಬಹುದಾಗಿತ್ತು. ಅವರು ಬಗೆ ಬಗೆಯ ಗಿಡಗಳನ್ನು ಸಾಕುತ್ತಿದ್ದುದು ಮಾತ್ರವಲ್ಲದೆ ಅವುಗಳಿಂದ ಆಗುವ ಉಪಯೋಗಗಳನ್ನು ಅರಿತ್ತಿದ್ದರು. ಮನೆಯಲ್ಲಿ ಯಾರಿಗಾದರೂ ಅರೋಗ್ಯದಲ್ಲಿ ಏರು-ಪೇರಾದರೆ ನಾಟಿ ಔಷಧವನ್ನು ತಯಾರುಮಾಡಿ ಕೊಡುತ್ತಿದ್ದರು. ಒಂದು ರೀತಿಯಲ್ಲಿ ಅಜ್ಜಿ ನಮ್ಮ ಕುಟುಂಬದ ಆರ್ಯುವೇದ ಪಂಡಿತರಾಗಿದ್ದರು.

ಅಜ್ಜಿ ಯಾವಾಗಲೂ ತಾವೇ ತಮ್ಮ ಹೊಲದಲ್ಲೇ ಕೆಲಸ ಮಾಡುತ್ತಿದ್ದು, ಆ ಮೂಲಕ ಕೂಲಿಯಾಳುಗಳನ್ನು ನಿಭಾಯಿಸುತ್ತಿದ್ದುದರ ಕಾರಣ ತಾತನ  ಒಂದು ರೀತಿಯ ಉದಾಸೀನತೆಯೆನಬೇಕು. ಗಿಡ್ಡ ನಿಲುವಿನ, ಶ್ವೇತ ವರ್ಣದ ಕಚ್ಚೆ ಪಂಚೆಯನ್ನುಡುತ್ತಿದ್ದ, ಆಗಾಗ್ಗೆ ತಲೆಗೆ  ರುಮಾಲನ್ನು ತೊಡುತ್ತಿದ್ದ, ಸಾಧು ಮಾತಿನ ನಂಜುಡಪ್ಪ ತಾತನವರ ವ್ಯಕ್ತಿತ್ವ ಅಜ್ಜಿಯ ವ್ಯಕ್ತಿತ್ವಕ್ಕೆ ವಿರುದ್ಧವಾದದ್ದು ಎನ್ನಬೇಕು.ಅವರು ಬಹುಪಾಲು ಸಮಯವನ್ನು ಮನೆಯ ಹೊರಗಡೆಯೇ ಕಳೆಯುತ್ತಿದ್ದರು. ಯಾವಾಗಲೂ ರಾಜಕೀಯ ವಿಷಯಗಳನ್ನು ಚರ್ಚೆಮಾಡುತ್ತ, ಊರಿನವರ ವ್ಯಾಜ್ಯಗಳನ್ನು ಬಿಡಿಸುವುದರಲ್ಲಿಯೇ ಅವರ ಬಹುಪಾಲು  ಸಮಯ ಸವೆಯುತ್ತಿತ್ತು.  ಜಮೀನಲ್ಲಿ ಮನೆ ಮಾಡಿದ್ದ ಇವರು ತಮ್ಮ ಜಮೀನಿನ ಮನೆಯಿಂದ ಸ್ವಲ್ಪ ದೂರವಿದ್ದ  ಹಳೇಹಳ್ಳಿ ಊರಿನ ಜಗಲಿಕಟ್ಟೆಯಲ್ಲಿ ಮಾತು-ಕತೆಯಾಡುತ್ತಿದ್ದರು. ಪರೋಕ್ಷವಾಗಿ ರಾಜಕೀಯ ವ್ಯಕ್ತಿಗಳಿಗೆ/ಸ್ಪರ್ಧಿಗಳಿಗೆ ಬರಿಯ ಉತ್ತೇಜನವನ್ನು ನೀಡುವ ಮೂಲಕ ಮಾತ್ರ ತಾತ ರಾಜಕೀಯದಲ್ಲಿ ಪಾಲ್ಗೊಂಡಿದ್ದರು, ಆದರೆ ನೇರ ಸ್ಪರ್ಧಿಯಾಗಿ ತಾತ ರಾಜಕೀಯವಾಗಿ ಎಂದೂ ಪಾಲ್ಗೊಂಡಿರಲಿಲ್ಲ,  ಆ ಇಚ್ಛೆಯು ಅವರಿಗಿಂದ್ದತಿರಲಿಲ್ಲ.

ಊರ ಜನರ ವ್ಯಾಜ್ಯಗಳನ್ನು ಸರಿಮಾಡುವುದರಲ್ಲಿ ತಾತ ಎತ್ತಿದ ಕೈ ಎನ್ನಬೇಕು. ಬೇರೆಯವರ ಉಸಾಬರಿ ನಮಗೆ ಬೇಡ ನಮ್ಮ ಮನೆಯ ಉಸಾಬರಿ ನೋಡಿ ಸಾಕು ಎಂದು ಅಜ್ಜಿ ಹೇಳಿದರೂ, ಅಜ್ಜಿಯ ಮಾತಿನ ಕಡೆ ತಾತನ ಗಮನ ಇರಲಿಲ್ಲ. ಆ ಕೆಲಸ ಈ ಕೆಲಸ ಎಂದು ತಮ್ಮ ಊರಿನಿಂದ ಒಂದು ನಾಲ್ಕು ಕಿಲೋ ಮೀಟರ್ ದೂರವಿದ್ದ  ಹೋಬಳಿ ಕೇಂದ್ರವಾಗಿರುವ ಮಂಚೇನಹಳ್ಳಿಯಾದ ನಮ್ಮ ಊರಿನಲ್ಲೂ ತಾತ ಯಾವಾಗಲೂ ಕಾಣಸಿಗುತ್ತಿದ್ದರು.

ಇಷ್ಟೇಲ್ಲ ಪೀಠಿಕೆಯ ಉದ್ದೇಶ ತಾತ-ಅಜ್ಜಿಯರ ವ್ಯಕ್ತಿತ್ವ ಪರಸ್ಪರ ವಿರುದ್ಧವಾಗಿದ್ದವು ಎಂದು ಹೇಳುವುದಕ್ಕೆ ಮಾತ್ರ.

ಹಳೇಹಳ್ಳಿಯ ಊರಿನಲ್ಲಿಯೂ ಬೇರೆ ಊರುಗಳಲ್ಲಿರುವಂತೆ ಅನೇಕ ರಾಜಕೀಯ ಪಕ್ಷಗಳಿದ್ದವು ಅದರಲ್ಲಿ ಎರಡು ಗುಂಪುಗಳು ಮುಖ್ಯವಾಗಿ ತೋರಬರುತ್ತಿದ್ದವು. ಒಂದು ಅಜ್ಜಿಯ ಅಣ್ಣನಾದ ವೀರಮಲ್ಲಣ್ಣನವರ ಗುಂಪು , ಇನ್ನೊಂದು ತಾತನ ಮಾಡಿಮನೆ (ಮಹಡಿ ಮನೆ) ವಂಶದವರದ್ದು. (ಯಾರು ಯಾವ ಪಕ್ಷದವರು, ಆ ಪಕ್ಷಗಳು ಯಾವುವು ಎನ್ನುವುದು ನನ್ನ ನೆನಪಿನಂಗಳದಿಂದ ಮರೆಯಾಗಿದೆ) ಇವರಿಬ್ಬರ ಗುಂಪುಗಳ ನಡುವೆ ಗಲಾಟೆ ಕಲಹಗಳೇರ್ಪಡುತ್ತಿದ್ದುದು ಸಹಜ. 

ಯಾವಾಗಿನಂತೆ ಈ ಸಲವೂ ರಜೆಯಲ್ಲಿ ತಾತ-ಆಜ್ಜಿಯರ ಮನೆಯಲ್ಲಿ ಮೊಮ್ಮಕ್ಕಳಾದ ನಾವುಗಳೇಲ್ಲ ಸೇರಿದ್ದೇವು. ಈಗಿರುವಾಗ ಎಲ್ಲಾ ಗ್ರಾಮಗಳಲ್ಲೂ ನಡೆಯುವಂತೆ ಇಲ್ಲಿಯೂ  ಗ್ರಾಮ ಪಂಚಾಯತಿ ಚುನಾವಣೆ ನಡೆಯುವ ಸಂದರ್ಭ ಬಂತು. ತಾತನೂ ಚುನಾವಣೆ ಕೆಲಸದಲ್ಲಿ ಸಕ್ರೀಯವಾಗಿ ಭಾಗವಹಿಸಿ ತುಂಬಾ ಬಿಜಿಯಾಗಿದ್ದರು. ತಾತ ಅಜ್ಜಿಯ ಮನೆತನದವರದ್ದು ವಿರೋಧ ಪಕ್ಷಗಳಾದ್ದರಿಂದ ಎರಡು ಕಡೆಯ ಕುಟುಂಬಗಳು ಈ ರಾಜಕೀಯ ಕಾರಣಕ್ಕಾಗಿ ಕಿತ್ತಾಡುವುದರ ಮೂಲಕ ಸುಮ್ಮನೆ ಸಂಬಂಧಗಳು ಹಳಸುತ್ತವೆ ಎನ್ನುವುದು ಅಜ್ಜಿಯ ಚಿಂತನೆ. ಸುಮ್ಮನೇ, ಚುನಾವಣೆಯ ವಿಷಯದಲ್ಲಿ ತಲೆಯಾಕಬೇಡಿ ಎಂದು ಅಜ್ಜಿ ತಾತನಿಗೆ ಸಾಕಷ್ಟು ಬಾರಿ ಸಾರಿ ಸಾರಿ ಹೇಳಿದರೂ ತಾತ ಕೇಳುತ್ತಿರಲಿಲ್ಲ. ಇದೇ ಕಾರಣಕ್ಕೆ ಮನೆಯಲ್ಲೂ, ತಾತನಿಗೆ ಗೊತ್ತಿಲ್ಲದಂತೆ ಎರಡು ಪಕ್ಷಗಳಾದವು  ಅವರ ಮಕ್ಕಳು-ಮೊಮ್ಮಕ್ಕಳೊಳಗೊಂಡ ಅಜ್ಜಿಯದು ಒಂದು ಪಕ್ಷ,  ತಾತನದು ಇನ್ನೊಂದು ಪಕ್ಷ. 

ಚುನಾವಣೆಯ ಹಿಂದಿನ ದಿನ ಹೊಲದಲ್ಲಿ ಅಜ್ಜಿ ಎಂದಿನಂತೆ ಸೊಪ್ಪು-ತರಕಾರಿಗಳನ್ನು ಕೀಳುತ್ತಿರುವಾಗ ನಾಳೆ ದಿನ ನಿಮ್ಮ ತಾತ ಹೇಗೆ ಚುನಾವಣೆ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ, ನಾನು ನೋಡುತ್ತೇನೆ, ನಿಮ್ಮ ತಾತನಿಗೆ ನಾಳೆ ಸರಿಯಾಗಿ ಇದೆ ಎಂದು ಗೊಣಗಿಕೊಳ್ಳುತ್ತಿದ್ದದು ನಮಗೆ ಕೇಳಿಸಿತ್ತು.  ಚುನಾವಣೆಗೆ ಮತ ಚಲಾಯಿಸುವ ದಿನ ಎಲ್ಲರೂ ಎದುರು ನೋಡುತ್ತಿದ್ದಂತೆ ಬಂದೇ ಬಂತು. ಅಜ್ಜಿ ಬೇಡವೆಂದರೂ ಕೇಳದ ತಾತ ಮತದಾನ ನಡೆಯುತ್ತಿದ್ದ ಸ್ಥಳಕ್ಕೆ ಹೋಗಲು ಸಿದ್ದತೆ ನಡೆಸುತ್ತಿದ್ದರು. ಅಜ್ಜಿ ತಾತನನ್ನು ತಡೆಯಲು ಯಾವ ರೀತಿ ಉಪಾಯಮಾಡುತ್ತಾರೆಂಬ ಕುತೂಹಲ ಅಜ್ಜಿಯ ಪಾರ್ಟಿ ಮೆಂಬರುಗಳಾದ ನಮಗೆ. ಅಜ್ಜಿಯ ಉಪಾಯವೇನು ಎಂದು ನಮಗೆ ಅರ್ಥವಾಗಿರಲಿಲ್ಲ.

ಆ ದಿನ ಬೆಳಗಿನ ತಿಂಡಿ ಏನೂ ಬೇಡ ಬರೀ ಅಡುಗೆ ಮಾಡಿ ಸಾಕು ಎಂದು ಅಜ್ಜಿ ತಮ್ಮ ಸೊಸೆ ಮತ್ತು ಹೆಣ್ಣುಮಕ್ಕಳಿಗೆ ತಾಕೀತು ಮಾಡಿದರು. ಯಾವಾಗಲೂ ಪ್ರತಿ ದಿನದ ತಿಂಡಿ-ಅಡುಗೆಗೆ ಹೊಲದಲ್ಲಿ ತಾವೇ ಕಿತ್ತುಕೊಂಡು ಬಂದ ಬೆಳೆದ ಸೊಪ್ಪು-ತರಕಾರಿಗಳನ್ನು ಕೊಡುತ್ತಿದ್ದ ಅಜ್ಜಿ ಆ ದಿನವೂ ಒಂದೆರಡು ಬಗೆಯ ಸೊಪ್ಪುಗಳನ್ನು ಕೊಟ್ಟು ಸೊಪ್ಪಿನ ಹುಳಿ, ಮುದ್ದೆ ಮತ್ತು ಅನ್ನವನ್ನು ಮಾಡಲು ಹೇಳಿದರು. 

ತಾತ ಮತದಾನದ ದಿನ ಹೊರಗೆ ಹೋಗದಂತೆ ತಡೆಯಲು ಅಜ್ಜಿ ಏನು?  ಮಾಡುತ್ತಾರೆ ಎಂದು ಮೊಮ್ಮಕ್ಕಳಾದ ನಮಗೆ ಕುತೂಹಲವಿತ್ತು, ಅದಕ್ಕಾಗಿ ಭಕ ಪಕ್ಷಿಗಳಂತೆ ಕಾಯುತ್ತಿದ್ದೆವು. ಇತ್ತ ಅಡುಗೆ ಆದ ಮೇಲೆ ಎಂದಿನಂತೆ ತಾತ ಊಟ ಮಾಡಲು ಬಂದರು. ಆ ದಿನ ಊಟ ಮಾಡುವುದರಲ್ಲಿ ತಾತನೇ ಮೊದಲನೆಯವರಾಗಿದ್ದರು. ಚುಣಾವಣಾ ಮತದಾನದ ಕಣಕ್ಕೆ ಹೋಗುವ ಹುಮ್ಮಸ್ಸಿರುವುದರಿಂದ ಸ್ವಲ್ಪ ಲಗು-ಬಗೆಯಿಂದಲೇ ತಾತ ಊಟ ಮಾಡಿದರೆನ್ನಬೇಕು. ತಾತ ಊಟ ಮಾಡುವಾಗ ನಾವೇಲ್ಲರೂ ತಾತನನ್ನೇ ನೋಡುತ್ತಿದ್ದೇವು, ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಾತ ಅಲ್ಲಿಗೆ ಹೋಗುತ್ತಾರೆ, ಅಜ್ಜಿ ಹೇಗೆ ಅವರನ್ನು ತಡೆಯುತ್ತಾರೆ? ಅಜ್ಜಿಯ ಉಪಾಯ ಏನಿರಬೇಕು ಅಜ್ಜಿಗೆ ಆ ಕೆಲಸ ಆಗುವುದಿಲ್ಲವೇನೋ ಎಂದು ಅಜ್ಜಿಯ ಪಾರ್ಟಿ ಮೆಂಬರುಗಳಾದ ನಾವು ಪಿಸುಮಾತಿನಲ್ಲಿ ಚರ್ಚೆ ಮಾಡುತ್ತಿದ್ದೆವು.  

ಊಟ ಮುಗಿಸಿ ತಾತ ಅಲ್ಲಿಗೆ ಹೋಗಲು ಅನುವಾಗುತ್ತಿದ್ದರು, ನಮ್ಮಲ್ಲರ ಕುತೂಹಲ ಇಮ್ಮೆಡೆರಿಸಿತ್ತು. ನಮ್ಮ ಮನೆಯ ಪಕ್ಷಗಳಲ್ಲಿ ತಾತನ ಪಕ್ಷಕ್ಕೆ ಜಯವಾಗುವುದೋ ಅಥವಾ ಅಜ್ಜಿಯ ಪಕ್ಷಕ್ಕೆ ಜಯವಾಗುವುದೋ ಎಂದು ತಿಳಿಯುವ ಕುತೂಹಲ ನಮಗೆ. ತಾತ ಒಂದು ಸಲ ಶೌಚಾಲಯಕ್ಕೆ ಹೋಗಿಬಂದರು. ಮತ್ತೇ ಹೊತ್ತಾಯಿತೆಂದು ಲಗುಬಗನೆ ಹೊರಡಲನುವಾದರು. ಅಷ್ಟರಲ್ಲಿ ತಾತ ಮತ್ತೇ  ಕಕ್ಕಸು ರೂಮಿಗೆ ಹೋಗಿ ಬಂದರು. ಬಹುಶಃ ಅಜೀರ್ಣವಾಗಿಬೇಕು ಮತ್ತೇ ಮತ್ತೇ ಭೇದಿಯಾಗುತ್ತಿದೆ ಎಂದು ತಾತ ದೊಡ್ಡವರಲ್ಲಿ ಹೇಳುತ್ತಿದ್ದರು. ಈಗ ನಮಗೆ ಇದೇ ಇರಬೇಕು ಅಜ್ಜಿಯ ಉಪಾಯ ಎಂದು ತಿಳಿಯಿತು. ಆದರೆ ತಾತನಿಗೆ, ಅಜ್ಜಿ ಬೇದಿಯಾಗಲು ಏನು ಮಾಡಿದರು ಎನ್ನುವುದು ತಿಳಿಯಲಿಲ್ಲ. ಅದರ ಬಗ್ಗೆ ಕೇಳಿದಾಗ ಅಜ್ಜಿ ಒಂದು ಬಗೆಯನಾದ ಸೊಪ್ಪನ್ನು ನಮಗೆ ತೋರಿಸಿ ಇದು ಭೇದಿಯ ಸೊಪ್ಪು ಇದನ್ನು ತಿಂದರೆ ಚೆನ್ನಾಗಿ ಭೇದಿ  ಆಗುವುದು ಎಂದು ಹೇಳಿದರು. ಈಗಾಗಲೇ ಅಜ್ಜಿಯ ಪಕ್ಷ ಸೇರಿದ್ದ ನಾವುಗಳು ಹೋ, ಹೋ, ತಾತನಿಗೆ ಭೇದಿಯಾಗುತ್ತಿದೆ ಎಂದು ಕೂಗುತ್ತ ಕುಣಿಯುತ್ತಿದ್ದೆವು. ತಾತ ಮತದಾನ ನಡೆಯುವ ಸ್ಥಳಕ್ಕೆ ಹೋಗುವುದಕ್ಕೆ ಆಗುವುದಿಲ್ಲ, ತಾತನಿಗೆ ಹೀಗೆಯೇ ಆಗಬೇಕು ಎಂದು ಮನೆಯ ಮುಂದಿನ ರಸ್ತೆಯಲ್ಲಿ ಕೂಗುತ್ತಿದ್ದೇವು. ತುಂಬಾ ಬಯಲಿದ್ದ ಕಾರಣ ಇದು ತಾತನಿಗೆ ಕೇಳಿಸಿರಲಿಲ್ಲ. ಆದರೆ ವಿಷಯ ಗೊತ್ತಿದ್ದ ನಾವ್ಯಾರೂ ಆ ದಿನ ಆ ಸೊಪ್ಪಿನ ಸಾರನ್ನು ತಿನ್ನಲು ಮನಸ್ಸು ಮಾಡಲಿಲ್ಲ ಆದರೆ ಅಜ್ಜಿ ಬಿಡಬೇಕಲ್ಲ, ಎಲ್ಲಾರೂ ಸ್ವಲ್ಪವಾದರೂ ತಿನ್ನಲೇ ಬೇಕೆಂದು ತಾಕೀತು ಮಾಡಿದರು, ನಾವೇಲ್ಲರೂ ಅವರ ಆಜ್ಞೇಯಂತೆ ಸ್ವಲ್ಪ ತಿಂದೆವು ಅದರ ಪರಿಣಾಮ ಲಘುವಾಗಿ ನಮಗೂ ಭೇದಿಯಾಯಿತು.

ಸಂಜೆ ಹೊತ್ತಿಗೆ ತಾತನ ಭೇದಿ ನಿಲ್ಲುವ ಲಕ್ಷಣ ಕಾಣುತ್ತಿತ್ತು ತಾತನಿಗೆ ಮತದಾನದ ಕೊನೆಯ ದಿನ ಈಗಾಗಿತಲ್ಲ ಎಂದು ತುಂಬಾ ಬೇಸರವಾಗಿತ್ತು. ಅಜ್ಜಿಯ ಅನುಮತಿ ಪಡೆದು ಸಂಜೆ ಮತದಾನದ ಸಮಯ ಮುಗಿದ ಮೇಲೆ ತಾತನಿಗೆ ನಡೆದ ಘಟನೆಯನ್ನು ಹೇಳಿ ಜೋರಾಗಿ ನಕ್ಕೆವು. ತುಂಬಾ ಸುಸ್ತಾಗಿದ್ದ ತಾತ ಬೇಸರವಾದರೂ ಮುಗ್ಳುನಗೆಯನ್ನು ಬೀರಿ ನಕ್ಕರು. ಅಂತೂ ಭೇದಿಸೊಪ್ಪಿನ ಮಹಿಮೆಯಿಂದ ತಾತ ಆ ದಿನ ಮನೆಯಲ್ಲೇ ಇರಬೇಕಾಯಿತು.

ಈಗಲೂ ಅದರ ಗಿಡಗಳು ನಮ್ಮ ಮನೆಯ ಆವರಣದಲ್ಲಿರುವ ಕುಂಡಗಳಲ್ಲಿ ಬೆಳೆದಿವೆ. ಈ ಕುಂಡಗಳಲ್ಲಿ ಹುಲುಸಾಗಿ ಬೆಳೆದಿರುವ ಭೇದಿ ಸೊಪ್ಪನ್ನು ನೋಡಿದಾಗಲೆಲ್ಲ ಮತ್ತೆ ಮತ್ತೆ ನೆನಪಾಗುವ ಆ ಬಾಲ್ಯದ ನೆನಪು.......  ಈ ಘಟನೆಯನ್ನು ಬರೆಯುವ ಇಚ್ಛೆಯಾದದ್ದು, ಎರಡು ಕಾರಣಗಳಿಂದ ;

ಒಂದು: ಬೆಂಗಳೂರಿನ ಈ ಕಾಂಕ್ರೀಟ್ ನೆಲದಲ್ಲೂ ಒಂದು ಖಾಲಿ ನಿವೇಶನದಲ್ಲಿ ಹುಲುಸಾಗಿ ಬೆಳೆದಿದ್ದ ಭೇದಿ ಸೊಪ್ಪನ್ನು ನೋಡಿದ ಮೇಲೆ. ನಮ್ಮ ಅಕ್ಕನ ಮಕ್ಕಳಿಗೆ ಅಂದರೆ ತಾತ-ಅಜ್ಜಿಯ ಮರಿಮಕ್ಕಳಿಗೆ ಆ ಘಟನೆಯನ್ನು ಹೇಳಿ ಈ ಸೊಪ್ಪನ್ನು ತಿಂದರೆ ಭೇದಿ ಚೆನ್ನಾಗಿ ಆಗುವುದು ಎಂದು ಹೇಳಿ ಸ್ವಲ್ಪ ಸೊಪ್ಪನ್ನು ಕಿತ್ತು ತಂದು ಅದರ ಪ್ರಯೋಗವನ್ನು ಮಾಡಿದ್ದಾಯಿತು. 

ಮತ್ತೊಂದು: ನನ್ನ ಅಕ್ಕನ ಮಗನಿಗೆ (ಅಂದರೆ ತಾತ-ಅಜ್ಜಿಯ ಮರಿಮಗನಿಗೆ) ಒಮ್ಮೆ  ಭೇದಿಯಾಗಿ ಆಗಲಿ ಎಂದು ಮಾತ್ರೆಯನ್ನು ಕೊಟ್ಟಿದ್ದರೂ ಸರಿಯಾಗಿ ಭೇದಿ ಆಗಿರಲಿಲ್ಲ. ಆದರೆ ಭೇದಿ ಸೊಪ್ಪಿನ ಪ್ರಯೋಗದಿಂದ ಅವನಿಗೆ   ಸರಿಯಾಗಿ ಭೇದಿಯಾಯಿತು.  ಆಗ ನೆನಪಿಗೆ ಬಂದದ್ದು ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ. ಆದರೆ ಮಾತ್ರೆಗಳನ್ನು ನುಂಗುವುದರಲ್ಲಿ ಇರುವ ಪ್ರೇಮ ಮಕ್ಕಳಿಗೆ ಮತ್ತು ದೊಡ್ಡವರಿಗೂ ಸಹ ಆರ್ಯುವೇದ ಔಷಧಿಗಳನ್ನು ತೆಗೆದುಕೊಳ್ಳುವುದರಲ್ಲಿ ಇಲ್ಲ.

ಭೇದಿಸೊಪ್ಪು ಅಥವಾ ನೆಲಭೇದಿ ಸೊಪ್ಪು ಯಾವುದು ಎಂದು ಕಂಡುಹಿಡಿಯಲು (ಚಿತ್ರ ನೋಡಿ) ಸೊಪ್ಪನ ಎಲೆಯನ್ನು ಕಿತ್ತಾಗ ಅದರ ತೊಟದಿಂದ ಹಾಲು ಒಸರಿಸುತ್ತದೆ. ಸಾರಿಗೆ ಉಪಯೋಗಿಸುವ ದಂಟು, ಪಾಲಾಕ್ ಮುಂತಾದ ಸೊಪ್ಪುಗಳ ಜೊತೆ ಬೆರಿಕೆ ಮಾಡಿ ಸೊಪ್ಪಿನ ಹುಳಿ ಅಥವಾ ಮೊಸ್ಸಪ್ಪು ಮಾಡಿದರೆ ಸಾರು ರುಚಿಯಾಗಿಯೂ ಇರುತ್ತದೆ ಮತ್ತು ಭೇದಿಯೂ ಸಹ ಆಗುತ್ತದೆ. (ಬರಿ ಈ ಸೊಪ್ಪಿನಿಂದಲೇ ಸಾರನ್ನು ಮಾಡಬಹುದಾದರೂ ಭೇದಿಯ ತೀರ್ವತೆ ಜಾಸ್ತಿ ಇರುತ್ತದೆ). ಭೇದಿಯ ತೀರ್ವತೆ ಆ ಸೊಪ್ಪನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸುವುದೋ ಅಷ್ಟು ಪ್ರಮಾಣದಲ್ಲಿ ಇರುತ್ತದೆ. 

ವಾಣಿಜ್ಯೀಕರಣದಿಂದಾಗಿ, ಆರ್ಯುವೇದ ಔಷಧಿಗಳ ಚಿಕಿತ್ಸೆ ಎಂದರೆ ಒಂದು ರೀತಿಯ ಹೈಟೆಕ್ ಚಿಕಿತ್ಸಾ  ಪದ್ದತಿಯಾಗಿರುವ ಈ ಕಾಲದಲ್ಲಿ ನಾಟಿ ಔಷಧ ಎಂದು ಮೂಗು ಮುರಿಯುತ್ತಿದ್ದ ಕಾಲವೇನೋ ಸ್ಪಲ್ಪ ಮಟ್ಟಿಗೆ ಚೇತರಿಸಿಕೊಂಡಿದೆಯಾದರೂ ಸಾಕಷ್ಟು ಜನ ಆರ್ಯುವೇದ ಚಿಕಿತ್ಸೆಗೆ ಎಂದು ಹೈಟೆಕ್ ಚಿಕಿತ್ಸಾ ಕೇಂದ್ರಗಳಿಗೆ ಮೊರೆಯೋಗುತ್ತಿರುವುದು ಒಂದು ರೀತಿಯ ವಿಪರ್ಯಾಸ ಎನ್ನಬೇಕು. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಮನೆಯಲ್ಲೇ/ಹಿತ್ತಿಲಲ್ಲೇ (ಬೆಂಗಳೂರಂತ ಪಟ್ಟಣಗಳಲ್ಲಿ ಅನೇಕ ಮನೆಗಳಿಗೆ ಹಿತ್ತಿಲೇ ಇರುವುದಿಲ್ಲ ಅದು ಬೇರೆ ಮಾತು) ಇರುವ ಅನೇಕ ಸರಳವಿಧಾನಗಳನ್ನು ತಾವೇ ಮಾಡಿಕೊಳ್ಳದ್ದೇ ಅದೇ ತರಹದ ಚಿಕಿತ್ಸೆಗಳನ್ನು ಚಿಕಿತ್ಸಾ ಕೇಂದ್ರಗಳಲ್ಲಿ ಹೆಚ್ಚಿನ ಹಣ ಕೊಟ್ಟು ಮಾಡಿಸಿಕೊಳ್ಳುವುದು ಒಂದು ರೀತಿಯ ರೂಡಿಯಾಗಿದೆ.