ಒಮ್ಮೆ ಒಬ್ಬ ರಾಜನಿಗೆ ತುಂಬಾ ಹಸಿದಿರುವ ವ್ಯಕ್ತಿಗಳನ್ನು ನೋಡಬೇಕೆಂಬ ವಿಚಿತ್ರ ಬಯಕೆ ಉಂಟಾಯಿತು. ಸರಿ, ಅದರಂತೆ ರಾಜ್ಯದೆಲ್ಲೆಡೆ ಡಂಗುರ ಹಾಕಿಸಿದಾಗ ಅವನ ಅಪೇಕ್ಷೆಗೆ ಸರಿಹೋಗುವಂಥಹ ಇಬ್ಬರು ವ್ಯಕ್ತಿಗಳನ್ನು ರಾಜಭಟರು ಕರೆದುಕೊಂಡು ಬಂದರು; ಅದರಲ್ಲಿ ಒಬ್ಬ ಮುದುಕ ಮತ್ತೊಬ್ಬ ಹದಿಹರೆಯದ ಯುವಕ. ರಾಜನ ಸೇವಕರು ಅವರಿಬ್ಬರಿಗೂ ಒಂದೇ ತಟ್ಟೆಯಲ್ಲಿ ಊಟಬಡಿಸಿದರು. ಸ್ವಲ್ಪ ಹೊತ್ತಿಗೆ ಇಬ್ಬರೂ ಗೋಳೋ ಎಂದು ಅಳಲು ಷುರು ಮಾಡಿದರು. ಆಗ ರಾಜನಿಗೆ ಕುತೂಹಲ ಉಂಟಾಗಿ ಅವರ ಅಳುವಿಗೆ ಕಾರಣವೇನೆಂದು ಕೇಳಿದ. ಆಗ ಮುದುಕ ಹೇಳಿದ, "ಮಹಾಸ್ವಾಮಿ, ನಾನು ಹಲ್ಲಿಲ್ಲದ ಮುದುಕ ನಾನು ನಿಧಾನವಾಗಿ ಅನ್ನವನ್ನು ಜಗಿದು ಉಣ್ಣುತ್ತಿದ್ದರೆ, ಹಲ್ಲಿರುವ ಆ ಹುಡುಗ ಆಹಾರವನ್ನು ಚಕಚಕನೇ ಅಗಿದು ನನಗಿಂತ ಹೆಚ್ಚಿಗೆ ಆಹಾರವನ್ನು ತಿನ್ನುತ್ತಿದ್ದಾನೆ, ನನಗೆ ಹೆಚ್ಚು ಆಹಾರವನ್ನು ತಿನ್ನಲಾಗುತ್ತಿಲ್ಲವೆಂಬ ದುಃಖದಿಂದ ಅಳು ಬರುತ್ತಿದೆ". ಆಗ ರಾಜ ಆ ಯುವಕನನ್ನು ತನ್ನ ಅಳುವಿಗೆ ಕಾರಣವೇನೆಂದು ಕೇಳಿದ, ಆಗ ಆ ಯುವಕ ಉತ್ತರಿಸಿದ, "ಮಹಾಸ್ವಾಮಿ, ನಾನು ಹಲ್ಲಿನಿಂದ ನಿಧಾನವಾಗಿ ಆಹಾರವನ್ನು ಅಗಿದು ತಿನ್ನುತ್ತಿದ್ದರೆ, ಹಲ್ಲಿಲ್ಲದ ಆ ಮುದುಕ ಆಹಾರವನ್ನು ಸರಿಯಾಗಿ ಅಗಿಯದೇ ಗಬಗಬನೇ ನುಂಗಿ ನನಗಿಂತ ಹೆಚ್ಚು ಉಣ್ಣುತ್ತಿದ್ದಾನೆ ಅದಕ್ಕೇ ನಾನು ಆ ದುಃಖವನ್ನು ತಡೆದುಕೊಳ್ಳಲಾಗದೇ ಅಳುತ್ತಿದ್ದೇನೆ". ಇವರಿಬ್ಬರ ಮಾತನ್ನು ಕೇಳಿಸಿಕೊಂಡ ರಾಜನಿಗೆ ನಗಬೇಕೋ ಅಳಬೇಕೋ ತಿಳಿಯದೇ ಇಬ್ಬರಿಗೂ ಬೇರೆ ಬೇರೆ ತಟ್ಟೆಯಲ್ಲಿ ಅನ್ನವಿಡಿಸಿದನೆನ್ನಿ.
(ನೀತಿ: "ಸತ್ಯ ಎನ್ನುವುದು ಒಂದು ವಿಷಯವನ್ನು ನಾವು ನೋಡುವ ದೃಷ್ಟಿಕೋನದ/ಅನುಭವದ ಮೇಲೆ ಅವಲಂಭಿಸಿರುತ್ತದೆ")
ವಿ.ಸೂ: ಸುಮಾರು ೩೦-೩೫ ವರ್ಷಗಳ ಹಿಂದೆ ಬಹುಶಃ ಚಂದಮಾಮದಲ್ಲಿ ಈ ಕಥೆಯನ್ನು ಓದಿದ ನೆನಪು. ಮೂಲ ಲೇಖಕರಿಗೆ ನನ್ನ ಕೃತಜ್ಞತೆಗಳು
ಪ್ರತಿಕ್ರಿಯೆ (2)