ರಾತ್ರಿಯ ಸಮಯ ಮನುಷ್ಯ ತನ್ನ ಎಲ್ಲ ದೈನಂದಿನ ಚಟುವಟಿಕೆಗಳನ್ನು ಮುಗಿಸಿ ಆ ದಿನದ ವಿಶ್ರಾಂತಿಗಾಗಿ ಮತ್ತು ಮಾರನೆ ದಿನದ ಬದುಕಿನ ಚೈತನ್ಯಕ್ಕಾಗಿ ನಿದ್ರೆಗೆ ಜಾರಲು ಅಣಿಯಾಗುತ್ತಾನೆ, ಇದು ಪ್ರತಿಯೊಬ್ಬ ಮನುಷ್ಯ ಜೀವಿಯ ತಪ್ಪದ ದೈನಂದಿನ ದಿನಚರಿ. ಆದರೆ ಕೆಲವೆ ಕೆಲವು ಜೀವಿಗಳನ್ನು ಬಿಟ್ಟರೆ ಉಳಿದವರೆಲ್ಲರೂ ತಮ್ಮ ನಿತ್ಯದ ಎಲ್ಲ ಜಂಜಾಟಗಳ ಮಧ್ಯೆಯೂ ಅದೊಂದು ದಿನ ಮಾತ್ರ ರಾತ್ರಿಯೆಲ್ಲ ಎಚ್ಚರವಿದ್ದು ಮಿಂದು ತನ್ನದೆ ಆದ ಮಿತಿಯಲ್ಲಿ ಶಿವನನ್ನು ಆರಾಧಿಸಿ ಉಪವಾಸ ಮಾಡಿ ಬಿಲ್ವಪತ್ರೆ ಬಿಳಿಯ ಹೂವುಗಳಿಂದ ಅಲಂಕರಿಸಿ ಶಿವನ ಸ್ತುತಿಮಾಡಿ ಹರಭಜನಗಳನ್ನು ಹಾಡಿ ಇಲ್ಲವೆ ಹರ ಕೀರ್ತನೆಗಳನ್ನು ಕೇಳಿ ಪಾವನನಾಗುತ್ತಾನೆ. ಅದುವೆ ಪ್ರತಿ ವರ್ಷ ತಪ್ಪದೆ ಬರುವ ಮಹಾ ಶಿವರಾತ್ರಿ.
ಶಿವರಾತ್ರಿಯ ಆ ಶುಭದಿನದಂದು ಎಲ್ಲ ದೈವಭಕ್ತರೂ ಹೊಸ ಆಶಯಗಳೆಡೆಗೆ ತಮ್ಮ ಕಂಗಳನು ನೆಟ್ಟು ಶಿವನನ್ನು ಅರ್ಚಿಸಿ ಹೊಸ ಬದುಕಿನೆಡೆಗೆ ಪ್ರಬುದ್ಧ ಹೆಜ್ಜೆಗಳನ್ನಿಟ್ಟು ಸಾಗಲು ಮಾಡುವ ಸಂಕಲ್ಪವೆ ಒಂದು ಆರೋಗ್ಯಕರ ವಿಚಾರ. ಈ ಕುರಿತಂತೆ ಕನ್ನಡ ಸಾಹಿತ್ಯದಲ್ಲಿ ಶಿವನ ಕುರಿತು ವಿಭಿನ್ನ ಪರಿಕಲ್ಪನೆಗಳಿವೆ. ಶಿವ ಎಲ್ಲ ವರ್ಗದವರ ದೇವರು ಅದರಲ್ಲಿಯೂ ವಿಶೇಷವಾಗಿ ಆತ ಜನ ಸಾಮಾನ್ಯರ ಮತ್ತು ಶ್ರಮಿಕ ವರ್ಗದವರ ದೇವರು. ಇವರಿಗೆ ಶಿವ ಎನ್ನುವುದು ಬರಿ ದೇವರ ಹೆಸರಲ್ಲ ಅದೊಂದು ಭರವಸೆ ಬದುಕು ನಂಬಿಕೆ ಮತ್ತು ಮೌಲ್ಯ ಎಲ್ಲವೂ ಕೂಡ ಹೌದು. ವಚನಕಾರರ ಶಿವನಿಗೂ ಮತ್ತು ಜನ ಸಾಮಾನ್ಯರ ಶಿವನಿಗೂ ಒಂದು ಸಾಮ್ಯತೆಯಿದೆ. ಶಿವ ಮನೆಯಿಂದ ಮನೆಗೆ ಮತ್ತು ಮನದಿಂದ ಮನಕ್ಕೆ ನಿರಂತರವಾಗಿ ಚಲಿಸುವ ಒಂದು ನಂಬಿಕೆ ಮತ್ತು ಚೇತನ.
ಆದರೆ ಇಂದಿನ ವೈಚಾರಿಕ ಯುಗದಲ್ಲಿ ಗ್ರಾಮೀಣರಿಗಿಂತ ಅನೇಕ ವಿದ್ಯಾವಂತರು ನಗರ ಪ್ರದೇಶದವರು ವೈಚಾರಿಕತೆಯನ್ನು ಬದಿಗೊತ್ತಿ ಬರಿ ಯಾಂತ್ರಿಕವಾಗಿ ತಮ್ಮದೆ ವೈಖರಿಯಲ್ಲಿ ಸಹ ಮನಸ್ಕರು ಒಂದೆಡೆ ಒಟ್ಟಿಗೆ ಸೇರಿ ಕುಡಿದು ಕುಣಿದು ಕುಪ್ಪಳಿಸಿ ಶಿವರಾತ್ರಿಯ ಆಚರಣೆಗೆ ತೊಡಗುತ್ತಿರುವುದು ಒಂದು ಖೇದಕರ ಸಂಗತಿ. ಧಾರ್ಮಿಕ ಮೂಢ ನಂಬಿಕೆಗಳು ಜನ ಸಮೂಹವನ್ನು ದಿಕ್ಕೆಡಿಸುತ್ತಿವೆ. ಹೀಗಾಗಿ ಯಾವುದೆ ಆಚರಣೆಗಳ ಕುರಿತಾಗಿ ಕೂಲಂಕುಷವಾಗಿ ವಿಚಾರ ವಿನಿಮಯ ಮಾಡಿ ವಿಮರ್ಶಿಸಿ ಅವುಗಳನ್ನು ಹೊಸ ಬೆಳಕಿನಲ್ಲಿ ನೋಡಿ ಒಪ್ಪುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು.
ಪರಶಿವನ ಕುರಿತು ಹನ್ನೆರಡನೆ ಶತಮಾನದಲ್ಲಿ ಆಗಿ ಹೋದ ವಚನಕಾರರು ನೀಡಿದ ಪರಿಕಲ್ಪನೆ ಬಹಳ ಅದ್ಭುತ ವಾದುದು. ಆತ ಸ್ಥಿರ ಜಂಗಮನಂತೆ ಚರ ಜಂಗಮ ಕೂಡ. ಈ ಹಿನ್ನೆಲೆಯಲ್ಲಿ ನಮ್ಮ ಆಚಾರ ವಿಚಾರಗಳು ಮತ್ತು ಸತ್ಯ ಹಾಗೂ ಮಿಥ್ಯಗಳು ವೈಚಾರಿಕ ಮೂಸೆಯಲ್ಲಿ ಪರೀಕ್ಷೆಗೊಳಪಟ್ಟು ಹೊಸ ರೂಪ ಪಡೆಯಬೇಕು. ಹುಟ್ಟಿದ ಮನುಷ್ಯ ಬದುಕಲೆ ಬೇಕು, ಆದರೆ ಅದು ಅಂಧಾಚರಣೆಯ ಬದುಕು ಆಗಬಾರದು ಯಾಕೆಂದರೆ ಶಿವ ಬಹಳ ಸರಳ ಮತ್ತು ಆತ ಪರಿಶ್ರಮದ ಒಂದು ಸಂಕೇತ. ಇದು ಆಗಿಹೋದ ವಚನಕಾರರ ಆಶಯ.
ಇಂದಿನ ಆಧುನಿಕ ಯುಗದಲ್ಲಿ ವೈಜ್ಞಾನಿಕವಾಗಿ ಮನುಷ್ಯ ಎಷ್ಟೇ ಮುಂದುವರಿದಿರಲಿ ಇನ್ನೂ ಹಬ್ಬಗಳ ಆಚರಣೆ ಮತ್ತು ಧರ್ಮ ಕರ್ಮ ಮತ್ತು ಮೋಕ್ಷಗಳೆಂಬ ಪುರಾತನ ನಂಬಿಕೆಗಳನ್ನು ತಲತಲಾಂತರಗಳಿಂದ ಆಚರಣೆಯಲ್ಲಿ ಉಳಿಸಿಕೊಂಡು ಬಂದವನು. ಇದಕ್ಕೆ ಶಿವರಾತ್ರಿಯ ಆಚರಣೆ ಕೂಡ ಹೊರತಲ್ಲ. ಈ ನಂಬಿಕೆಗಳ ಪರಿಕಲ್ಪನೆ ಏನೇ ಇರಲಿ ಆತನ ಸರಳತನ, ತ್ಯಾಗಬುದ್ಧಿ, ಕಷ್ಟಸಹಿಷ್ಣುತೆ, ತೊಂದರೆ ಬಂದಾಗ ಮುಂದೆನಿಲ್ಲುವ ಪರಿ ಮತ್ತು ಪ್ರೀತಿ ಪಾತ್ರರಿಗೆ ವರಕೊಡುವ ಆತನ ಉದಾರತನ ನಮಗೆ ಆದರ್ಶಗಳಾದರೆ ಸಾಕು ಶಿವರಾತ್ರಿಯ ಆಚರಣೆ ಸಾರ್ಥಕ ವಾದಂತೆ. ಈ ಬಾರಿಯ ಶಿವರಾತ್ರಿಯ ಆಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ.
ಚಿತ್ರಕೃಪೆ : http://en.wikipedia.org/wiki/Shivaratri
ಪ್ರತಿಕ್ರಿಯೆ (2)