ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದು. ಹಾಗೆಯೆ ಯೋಚಿಸುತ್ತ ಹೋದಂತೆ ಆತನ ಸಮಕಾಲೀನ ಮತ್ತು ಆತನಿಗಿಂತ ಹಿಂದಿನ ಹಿಂದಿ ಚಲನಚಿತ್ರ ಲೋಕದ ಖಳನಟರ ಚಿತ್ರಗಳು ಕಣ್ಮುಂದೆ ಸುಳಿದು ಹೋದವು. ಕೆ.ಎನ್.ಸಿಂಗ್, ಮೋತಿಲಾಲ್, ಜೀವನ್ ( ಹಿಂದಿ ಚಿತ್ರರಂಗದ ನಾಯಕ ನಟ  ಕಿರಣ ಕುಮಾರನ ತಂದೆ ) , ಜಯಂತ್ ( ಶೋಲೆ ಖ್ಯಾತಿಯ ಖಳನಟ ಅಮ್ಜದ್ ಖಾನ್ ನ ತಂದೆ ), ಮದನ್ ಪುರಿ ( ಖ್ಯಾತ ಖಳನಟ ಅಮರೀಶ ಪುರಿಯ ಸೋದರ ) ಅಜಿತ್, ಶ್ಯಾಮ್ ಮತ್ತು ರೆಹಮಾನ್ ಎಷ್ಟೊಂದು ವೈವಿಧ್ಯಪೂರ್ಣ ತಮ್ಮದೆ ಆದ ಒಂದು ವಿಶೇಷ ಮ್ಯಾನರಿಜಂನ ಅಭಿನಯ ವಿಶಿಷ್ಟತೆ ಹೊಂದಿದ ಅನೇಕ ಖಳ ನಟರ ಅಭಿನಯದ ವೈಖರಿಯ ಚಿತ್ರಗಳು ಬಿಚ್ಚಿ ಕೊಳ್ಳುತ್ತ ಹೋದವು.

     ಪ್ರಾಣ್ ಎಂಬ ಈ ಹೆಸರು ಮತ್ತು ವ್ಯಕ್ತಿ ನೇಪಥ್ಯಕ್ಕೆ ಸರಿದು ಬಹಳ ಕಾಲವಾಯಿತು. ಕಳೆದ ಶತಮಾನದ ಐದು, ಆರು ಮತ್ತು ಏಳನೆ ದಶಕದ ಒಬ್ಬ ಖ್ಯಾತ ಖಳನಟನೀತ. ಆ ಜಮಾನಾದಲ್ಲಿ ನಾಯಕ ನಾಯಕಿ ಮತ್ತು ಹಾಸ್ಯ ನಟರಿಗಿರುವಷ್ಟೆ ಪ್ರಾಮುಖ್ಯತೆ ಖಳ ನಟರಿಗಿತ್ತು. ಈ ಎಲ್ಲ ಸ್ಟಾರ್ ಕಾಸ್ಟ್ ಜಬರದಸ್ತ್ ಆಗಿದೆಯೆಂದರೆ ಚಿತ್ರ  ಚನ್ನಾಗಿರುತ್ತದೆ ಎನ್ನುವುದು ಆಗಿನ ಜನ ಸಾಮಾನ್ಯ ಸಿನೆಮಾ ವೀಕ್ಷಕರ ಅಭಿಪ್ರಾಯ ವಾಗಿರುತ್ತಿತ್ತು. ಪ್ರಾಣ್ ಇರುವನೆಂದರೆ ಒಮ್ಮೆ ಆ ಚಿತ್ರವನ್ನು ನೋಡಬೇಕು ಎನ್ನುವ ಕುತೂಹಲ ವಿರುತ್ತಿತ್ತು. ಆತ ನಟಿಸಿದ ಅನೇಕ ಖಳ ಪಾತ್ರಗಳು ಬಾಕ್ಸ್ ಆಫೀಸ್ ದೃಷ್ಟಿಯಲ್ಲಿಟ್ಟುಕೊಂಡೆ ರೂಪಿಸಿದ ಪಾತ್ರಗಳಾಗಿದ್ದವು. ಆಗಿನ ಕಾಲದ ಬಹುತೇಕ ಎಲ್ಲ ನಿರ್ಮಾಪಕ ಮತ್ತು ನಿರ್ದೇಶಕರ ಆಯ್ಕೆ ಖಳನಾಯಕ ಪ್ರಾಣ್ ಆಗಿರುತ್ತಿದ್ದ. ಆತನ ಕಾಲ್ ಶೀಟ್ ದೊರೆಯದೆ ಹಲವು ನಿರ್ಮಾಪಕ ನಿರ್ದೇಶಕರು ಬೇರೆ ಖಳನಾಯಕನನ್ನು ಅನಿವಾರ್ಯವಾಗಿ ಆಯ್ಕೆ ಮಾಡಿ ಕೊಳ್ಳುತ್ತ್ತಿದ್ದರು. ಅಷ್ಟು ಬೇಡಿಕೆ ಆತನಿಗಿತ್ತು.

     ಆತನ ಅನೇಕ ಚಿತ್ರಗಳ ವಿಶೇಷ ಮ್ಯಾನರಿಸಂ ಎಂದರೆ ಫುಲ್ ಸೂಟ್ ಧರಿಸಿದ ಟೈ ಕಟ್ಟಿದ ಕೈಯಲ್ಲಿ ಯಾವಾಗಲೂ ಉರಿಯುತ್ತಿರುವ ಸಿಗರೇಟ್. ಆದರೆ ಸಿಗರೇಟ್ ಹಿಡಿಯುವ ಶೈಲಿ ಚಿತ್ರದಿಂದ ಚಿತ್ರಕ್ಕೆ ಭಿನ್ನ. ಉದಾಹರಣೆಗಾಗಿ ಅತನ ಅಭಿನಯದ ದೋ ಬದನ್, ಬ್ರಹ್ಮಚಾರಿ, ಫಿರ್ ವಹಿ ದಿಲ್ ಲಾಯಾ ಹೂಂ, ಜಂಗಲಿ, ಗುಮ್ನಾಮ್ ಮುಂತಾದ ಚಿತ್ರಗಳನ್ನು ನೋಡಿದರೆ ಗೊತ್ತಾಗುತ್ತದೆ. ಇದಲ್ಲದೆ ಈತ ಪ್ರೊಪೆಸರ್, ಸಾವನ್ ಕಿ ಘಟಾ, ಲಾಟ್ ಸಾಹೇಬ್, ರಾಜಕುಮಾರ ಮುಂತಾದ ಚಿತ್ರಗಳಲ್ಲಿ ತನಗೆ ದೊರೆತ ಮಿತಿಯಲ್ಲಿಯೆ ಉತ್ತಮ ಅಭಿನಯ ನೀಡಿದ. ನಿಜವಾಗಿಯೂ ಆತನ ಅಭಿನಯದ ರೇಂಜ್ ನೋಡ ಬೇಕೆಂದರೆ ದಿಲೀಪ ಕುಮಾರ ಮತ್ತು ವೈಜಯಂತಿಮಾಲ ಅಭಿನಯದ ಮಧುಮತಿ, ಆರ್.ಕೆ.ಬ್ಯಾನರ್ನ ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ ಚಿತ್ರಗಳ ಲ್ಲಿನ ಆತನ ಖಳ ನಟನ ಆಭಿನಯ ಗಮನ ಸೆಳೆಯುವಂತಹುದು. ಆತನ ಅಭಿನಯದ ಸತ್ವ ಹೇಗಿತ್ತು ಎಂದರೆ ಯಾರೂ ತಮ್ಮ ಮಕ್ಕಳಿಗೆ ಪ್ರಾಣ್ ಎಂದು ಹೆಸರಿಟ್ಟದ್ದನ್ನು ನಾವು ಕೇಳಿಲ್ಲ.

     ನಿಜಕ್ಕೂ ಆತನ ಅಭಿನಯ ವೈವಧ್ಯತೆಯನ್ನು ಭಿನ್ನ ರೀತಿಯ ಕ್ಯಾರೆಕ್ಟರ್ ರೋಲ್ನಲ್ಲಿ ತೋರಿಸಿದ ಕೀರ್ತಿ ಮನೋಜ ಕುಮಾರಗೆ ಸಲ್ಲಬೇಕು. ಆತ ತನ್ನ ವಿಶಾಲ್ ಪಿಕ್ಷರ್ಸ ಲಾಂಛನದಲ್ಲಿ ತೆರೆಗೆ ತಂದ ' ಉಪಕಾರ ' ಚಿತ್ರದಲ್ಲಿ ಆತನ ಖಳ ಇಮೇಜಿಗೆ ಹೊರತಾದ ಪಾತ್ರ ನೀಡಿ ಜೊತೆಗೆ ಒಂದು ಹಾಡನ್ನು ಸಹ ಆತನಿಗೆ ನೀಡಿದ.  ಆ ಚಿತ್ರದ ನಾಯಕ ಮನೋಜ್, ನಾಯಕಿ ಆಶಾ ಪಾರೇಖ್ ಮತ್ತು ಖಳನಾಯಕ ಪ್ರೇಮ್ ಛೋಪ್ರ್ರಾರಿಗೆ ಮಿಗಿಲಾಗಿ ಅಭಿನಯಿಸಿದ. ' ಕಸ್ಮೆ ವಾದೆ ಪ್ಯಾರ್ ವಫಾ ' ಎಂದು ಪ್ರಾರಂಭವಾಗುವ ಆ ಹಾಡು  ಬಹಳ ಪರಿಣಾಮಕಾರಿ ಯಾಗಿತ್ತು. ಅದೇ ರೀತಿ ಮನೋಜ್ನ ಪೂರಬ್ ಔರ್ ಪಶ್ಚಿಮ್ ಚಿತ್ರದ ಅಭಿನಯ ಕೂಡ ಆತನಿಗೆ ಬಹಳ ಹೆಸರು ತಂದು ಕೊಟ್ಟಿತು. ಮೆಹ್ರಾ ನಿಮರ್ಾಣದ ಜಂಝೀರ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತಗೆ ಅಭಿನಯಿಸಿದ ಆ ಪಠಾಣನ ಪಾತ್ರ ಬಹುಕಾಲ ನೆನಪಿನಲ್ಲಿ ಉಳಿಯುವಂತಹದು.

     ಮುಂದೆ ಕಾಲ ಸರಿದಂತೆ ಈತ ಚಾರಿತ್ರಿಕ ಪಾತ್ರಗಳೆಡೆಗೆ ಹೊರಳಿದ, ಅಲ್ಲದೆ ಹಾಸ್ಯ ಪಾತ್ರಗಳಲ್ಲಿ ಕೂಡ ಅಭಿನಯಿಸಿದ. ಹಿರಿಯ ನಟ ಅಶೋಕ ಕುಮಾರ ಜೊತೆಗೆ ಆಭಿನಯಿಸಿದ ' ವಿಕ್ಟೋರಿಯಾ ನಂ.203 ' ಬಹಳ ಯಶಸ್ವಿ ಪ್ರದರ್ಶನ ಕಂಡ ಚಿತ್ರ. ಈತನ ಅಭಿನಯದ ವೈವಿಧ್ಯತೆಯನ್ನು ತೆರೆದಿಟ್ಟ ಚಿತ್ರಗಳು ಎಂದರೆ ಕವಿ ಲೇಖಕ ಸಂಭಾಷಣೆಕಾರ ಮತ್ತು ನಿರ್ದೇಶಕ ಗುಲ್ಜಾರರ ಶ್ರೇಷ್ಟ ಚಿತ್ರಗಳಲ್ಲಿ ಒಂದಾದ ಜಿತೇಂದ್ರ, ಸಂಜೀವ ಕುಮಾರ ಮತ್ತು ಜಯಾ ಬಾಧುರಿ ಅಭಿನಯದ ' ಪರಿಚಯ ', ರಾಜ್ ಕಪೂರ್ ನಿರ್ಮಾಣ ನಿರ್ದೇಶನದ ರಿಷಿ ಕಪೂರ, ಡಿಂಪಲ್ ಕಪಾಡಿಯಾ, ಪ್ರೇಮನಾಥ್, ಡೆವಿಡ್ ಮತ್ತು ಅರುಣಾ ಇರಾಣಿ ಮುಂತಾದವರ ತಾರಾಗಣದ ಚಿತ್ರ ' ಬಾಬಿ ' ಮುಂತಾದವು ಎನ್ನಬಹುದು. ಮುಂದೆ ಆತ ಸಹಾಯಕ ಪಾತ್ರಗಳಿಗೆ ಹೊರಳಿದ. ನಂತರ ವೃದ್ಧಾಪ್ಯದ ಅಂಚಿಗೆ ಸರಿಯುತ್ತ ಹೋದ ಪ್ರಾಣ್ ಅಭಿನಯ ಪ್ರಪಂಚದಿಂದ ದೂರ ಸರಿದ.

     ಇಂದಿಗೂ 93 ವಸಂತಗಳನ್ನು ಪೂರೈಸಿದ ಆತ ಮುಂಬೈನಲ್ಲಿ ತನ್ನ ಮಕ್ಕಳ ಆಶ್ರಯದಲ್ಲಿ ಬದುಕು ಸವೆಸುತ್ತಿದ್ದಾನೆ. ಆತ ವೃತ್ತಿಯಲ್ಲಿ ಖಳ ನಟನಾದರೂ ನಿಜ ಜೀವನದಲ್ಲಿ ಸಭ್ಯ ಮನುಷ್ಯನಾಗಿದ್ದ. ಯಾವುದೇ ಗಾಸಿಪ್ಗಳು ಆತನ ಬಗೆಗೆ ಕೇಳಿ ಬರಲಿಲ್ಲ. ಅಷ್ಟರ ಮಟ್ಟಿಗಿನ ಘನವಾದ ಬದುಕನ್ನು ಆತ ಬಾಳಿದ.  ಆತನ ಸಿನೆ ಬದುಕನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೆನಪಿಸಿ ಕೊಳ್ಳುವಂತೆ ಮಾಡಿದೆ. ಆತನ ಜಮಾನಾದ ಸಿನೆಮಾ ಪ್ರಿಯರನ್ನು ರಂಜಿಸಿದ ಆತನ ಉಳಿದ ಆತನಿಗೆ ಬದುಕು ನೆಮ್ಮದಿಯನ್ನು ತರಲಿ ಈ ಇಳಿ ವಯಸ್ಸಿನ ಸಭ್ಯ ನಟನನ್ನು ಈ ಸಂಧರ್ಭದಲ್ಲಿ ಅಭಿನಂದಿಸೋಣ.

                                         *****