ಮತ್ತೆ ಹೆಡೆಯೆತ್ತಿದ ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತ
ಪ್ರಸ್ತುತ ವರ್ಷದ ಆರನೆ ಐಪಿಎಲ್ ಕ್ರಿಕೆಟ್ ಪಂದ್ಯಗಳು ರೋಚಕ ಘಟ್ಟ ತಲುಪಿವೆ. ನಾಲ್ಕನೆ ಹಂತಕ್ಕೆ ಯಾವ ತಂಡಗಳು ತಲುಪ ಬಹುದು ಎನ್ನುವ ಕುತೂಹಲವಿದೆ. ಇಂತಹ ಕೌತುಕಮಯ ಸನ್ನಿವೇಶದಲ್ಲಿ ಸಮಸ್ತ ಭಾರತೀಯ ಕ್ರಿಕೆಟ್ ಪ್ರಿಯರಿಗೆ ಒಂದು ಆಘಾತಕರ ಸುದ್ದಿ ಎಲ್ಲರನ್ನು ತಲ್ಲಣಗೊಳಿಸಿದೆ. ಕಳೆದ ವರ್ಷದ ಅನೇಕ ಏಳು ಬೀಳುಗಳ ನಡುವೆಯೂ ' ರಾಜಸ್ತಾನ ರಾಯಲ್ಸ್' ತಂಡ ತನ್ನ ಮಿತಿಗಳ ನಡುವೆಯೂ ಈ ವರ್ಷ ಚೆನ್ನಾಗಿ ಆಡುತ್ತ ಬಂದಿದೆ. ಇಂತಹ ಸಂಧರ್ಭದಲ್ಲಿ ಏನಿದು ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಹಗರಣ ?
ಇಂದು ಬೆಳಗಿನ ವೇಳೆ ನಿನ್ನೆಯ ಐಪಿಎಲ್ ಪಂದ್ಯಗಳ ಹೈಲೈಟ್ಸ್ ನೋಡುತ್ತಿರುವಾಗ ಕುತೂಹಲಕರ ಸುದ್ದಿಯ ತುಣುಕೊಂಡು ಮಾಧ್ಯಮದಲ್ಲಿ ಹರಿದು ಬರ ತೊಡಗಿತು. ಗಮನಿಸುತ್ತ ಹೋದಂತೆ 'ರಾಜಸ್ತಾನ ರಾಯಲ್ಸ್' ತಂಡದ ಮೂವರು ಆಟಗಾರರನ್ನು ದೆಹಲಿ ಪೋಲೀಸರು ಬಂಧಿಸಿದ್ದು ಅವರ ಹೆಸರುಗಳು ಮಾಧ್ಯಮದಲ್ಲಿ ಕೇಳಿ ಬರತೊಡಗಿದವು. ಅವರಲ್ಲಿ ಒಬ್ಬ ಭಾರತೀಯ ತಂಡದ ಎಲ್ಲ ಪ್ರಾಕಾರದ ಕ್ರಿಕೆಟ್ಗಳಲ್ಲಿ ಆಡಿ ಹೆಸರು ಮಾಡಿದ ಸುಕುಮಾರನ್ ಶ್ರೀಶಾಂತನದಾದರೆ ಇನ್ನಿಬ್ಬರು ಅಂಕಿತ್ ಚೌಹಾಣ್ ಮತ್ತು ಅಶೋಕ ಚಾಂಡೀಲಾ ರವರು. ಕಳೆದ ವರ್ಷ ಸಹ ಡೆಕ್ಕನ್ ಚಾರ್ಜರ್ಸ ಆಟಗಾರರಿಬ್ಬರ ಮೇಲೆ ಸಹ ಇಂತಹ ಆರೋಪಗಳು ಕೇಳಿ ಬಂದಿದ್ದವು.
ಈ ಕ್ರಿಕೆಟ್ ಆಟಗಾರರು ಏಕೆ ಹೀಗೆ ಮಾಡುತ್ತಾರೆ? ಪ್ರಮುಖ ಟೂರ್ನಿಗಳಲ್ಲಿ ಆಡಲು ಅವಕಾಶ ಸಿಕ್ಕರೆ ಸಾಕು ಎಂದು ಕಾಯುವವರು ಅನೇಕ ಸಂಖ್ಯೆಯಲಿರುವಾಗ ಅವಕಾಶ ದೊರಕಿಸಿಕೊಂಡ ಈ ಆಟಗಾರರು ಏಕೆ ಹೀಗೆ ಆಡುತ್ತಾರೆ ? ತಂಡದಲ್ಲಿ ಆಡದೆ ಬರಿ ಬೆಂಚು ಕಾಯ್ದು ಲಕ್ಷಾಂತರ ಹಣ ಮಾಡಿಕೊಂಡು ಹೋಗುವ ಪ್ರಸ್ತುತ ದಿನಮಾನಗಳಲ್ಲಿ ಈ ಆಟಗಾರರು ಏಕೆ ಹೀಗೆ ವರ್ತಿಸುತ್ತಾರೆ ?
ಈ ಆಟಗಾರರು ಇತಿಹಾಸದಿಂದ ಪಾಠ ಕಲಿಯುವುದಿಲ್ಲವೆ ? ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ, ಭಾರತದ ಮೊಹಮ್ಮದ್ ಅಜರುದ್ದೀನ್, ಅಜಯ್ ಜಡೆಜಾ, ಪಾಕಿಸ್ತಾನದ ಸಲ್ಮಾನ್ ಬಟ್ ಮತ್ತು ಮಹಮ್ಮದ್ ಆಸೀಫ್ ಮುಂತಾದ ಆಟಗಾರರ ಕ್ರಿಕೆಟ್ ಬದುಕು ಕುಂಠಿತಗೊಂಡದ್ದು ಇವರ ಅರಿವಿಗೆ ಬಂದಿಲ್ಲವೆ? ಸಭ್ಯರ ಕ್ರೀಡೆ ಎನ್ನಿಸಿ ಕೊಂಡ ಕ್ರಿಕೆಟ್ಗೆ ಆ ಹೆಸರು ಉಳಿಯ ಬೇಕಾದಲ್ಲಿ ಇಂತಹ ಪ್ರಕರಣಗಲನ್ನು ಗಂಭೀರವಾಗಿ ಪರಿಗಣಿಸಿ ಆರೋಪ ಸಾಬಿತಾದಲ್ಲಿ ಅಂತಹವರಿ ಆಜನ್ಮ ನಿಷೇಧ ಹೇರಬೇಕು. ಈ ನಿಟ್ಟಿನಲ್ಲಿ ಕ್ರಿಕೆಟ್ ಆಡುವ ದೇಶಗಳ ಕ್ರಿಕೆಟ್ ಕಂಟ್ರೋಲ್ ಬೋರ್ಡಗಳು ಮತ್ತು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕಠಿಣ ಕ್ರಮಕ್ಕೆ ಮುಂದಾಗಬೇಕು ಅಂದಾಗ ಮಾತ್ರ ಬೆಟ್ಟಿಂಗ್ ನಿಯಂತ್ರಣ ಸಾಧ್ಯವಾದೀತು.
*****
ಪ್ರತಿಕ್ರಿಯೆ (4)