ಲಲಿತಾ ಸಹಸ್ರನಾಮ ೩೧೭ - ೩೨೧

Rakṣākarī रक्षाकरी (317)

೩೧೭. ರಕ್ಷಾಕರೀ

            ಯಾರು ರಕ್ಷಿಸುತ್ತಾರೆಯೋ ಅವರು ರಕ್ಷಾಕರೀ. ದೇವಿಯು ಈ ಜಗತ್ತನ್ನು ಕಾಪಾಡುವವಳಾಗಿದ್ದಾಳೆ, ಆದ್ದರಿಂದ ಈ ನಾಮವು ಹೇಳಲ್ಪಟ್ಟಿದೆ. ಈ ನಾಮಕ್ಕೆ ಇನ್ನೊಂದು ವಿಧವಾದ ವ್ಯಾಖ್ಯಾನವೂ ಇದೆ. ಕೆಲವೊಂದು ಹೋಮಗಳಲ್ಲಿ ಸಸ್ಯಗಳನ್ನು ಆಹುತಿಯಾಗಿ ಅರ್ಪಿಸುವ ವಿಧಿಯಿದೆ. ಯಾವಾಗ ಅವು ಅಗ್ನಿ ಜ್ವಾಲೆಯಿಂದ ಭಸ್ಮವಾಗುತ್ತವೆಯೋ ಅವನ್ನು ಶೇಖರಿಸಿ ತಾಯಿತದಲ್ಲಿ ತುಂಬಿಸಿ,  ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಆ ತಾಯಿತವನ್ನು ವ್ಯಕ್ತಿಯೊಬ್ಬನು ತನ್ನ ದೇಹದಲ್ಲಿ ಧರಿಸುತ್ತಾನೆ. ಈ ವಿಧವಾಗಿ ಭಸ್ಮವು ರಕ್ಷಣೆಗೋಸ್ಕರವಾಗಿ ಉಪಯೋಗಿಸಲ್ಪಡುವುದರಿಂದ ಆ ಅರ್ಥದಲ್ಲಿ ದೇವಿಯು ರಕ್ಷಕಿಯಾಗಿದ್ದಾಳೆ. ಎರಡನೆಯದಾಗಿ ಭಸ್ಮವು ಮೃತ ವ್ಯಕ್ತಿಯ ಭೌತಿಕ ಶೇಷವಾಗಿದೆ, ಈ ಅರ್ಥದಲ್ಲಿ ದೇವಿಯು ವಿನಾಶಕಳು. ಬ್ರಹ್ಮದ ಮೂರು ವಿಧವಾದ ಕ್ರಿಯೆಗಳಲ್ಲಿ ಎರಡನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ದೇವಿಯು ಯಾವ ವಿಧವಾಗಿ ಆಹುತಿಯ ರೂಪವಾಗಿರುತ್ತಾಳೆ ಎನ್ನುವುದನ್ನು ೫೩೫ ಮತ್ತ ೫೩೬ ನಾಮಗಳ ಚರ್ಚೆಯಲ್ಲಿ ನೋಡೋಣ.

Rākṣasaghnī राक्षसघ्नी (318)

೩೧೮. ರಾಕ್ಷಸಘ್ನೀ

            ರಾಕ್ಷಸರ ಸಂಹಾರಕಳು ಎನ್ನುವುದು ಈ ನಾಮದ ಅರ್ಥ. "ಶಿಷ್ಟ ರಕ್ಷಣ ಮತ್ತು ದುಷ್ಟ ಶಿಕ್ಷಣಕ್ಕಾಗಿ ನಾನು ಯುಗ ಯುಗಗಳಲ್ಲಿಯೂ ಅವತಾರವೆತ್ತಿ ಬರುತ್ತೇನೆ ಮತ್ತು ಧರ್ಮವನ್ನು ಪರಿರಕ್ಷಿಸುತ್ತೇನೆ" ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೪.೮) ಹೇಳಿದ್ದಾನೆ. ಭಗವದ್ಗೀತೆಯ ಆ ಪ್ರಸಿದ್ಧ ಶ್ಲೋಕವು ಈ ರೀತಿಯಾಗಿದೆ:

                         परित्राणाय साधूनां विनाशाय च दुष्कृताम्।

                         धर्मसंस्थापनार्थाय सम्भवामि युगे युगे॥

                        ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|

                        ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

             ಇಲ್ಲಿ ರಾಕ್ಷಸರೆಂದರೆ ದುಷ್ಟ ಕೃತ್ಯಗಳು. ಯಾವಾಗ ದುಷ್ಟತನವು ಎಲ್ಲೆಡೆಯೂ ಅಸ್ತಿತ್ವದಲ್ಲಿರುತ್ತದೆಯೋ, ಆಗ ಮಹಾಪ್ರಳಯವುಂಟಾಗಿ ಈ ಜಗತ್ತಿನ ಸರ್ವನಾಶವಾಗಿ ಈ ಸೃಷ್ಟಿಯು ಪುನಃ ರಚಿಸಲ್ಪಡುತ್ತದೆ.  

Rāmā रामा (319)

೩೧೯. ರಾಮಾ

             ದೇವಿಯು ಸ್ತ್ರೀಯರ ಮೂರ್ತ ರೂಪವಾಗಿದ್ದಾಳೆ. ಲಿಂಗ ಪುರಾಣವು ಎಲ್ಲಾ ಪುರಷರು ಶಂಕರರಾಗಿದ್ದರೆ (ಶಿವನ ಸ್ವರೂಪವಾಗಿದ್ದರೆ) ಮಹಿಳೆಯರೆಲ್ಲಾ ಶಕ್ತಿ ದೇವತೆಯ ಸ್ವರೂಪರು ಎಂದು ಹೇಳುತ್ತದೆ. ಅದೇ ವಿಧವಾಗಿ ಸ್ತ್ರೀಯರನ್ನು ಗೌರವಿಸಬೇಕೆಂದು ಹೇಳಲಾಗಿದೆ. ಒಂದು ವೇಳೆ ಅವರನ್ನು ಕೀಳಾಗಿ ಕಂಡರೆ ಅಂತಹವರ ವಂಶವು ನಾಶವಾಗುತ್ತದೆ. ‘ರಮ್’ ಎಂದರೆ ಆನಂದ ಮತ್ತದು ಅಗ್ನಿ ಬೀಜವಾದ ’ರಂ’ (रं) ಆಗಿದೆ. ಅಗ್ನಿ ಬೀಜವು ಬಹಳಷ್ಟು ಶಕ್ತಿಯುತವಾದುದೆಂದು ಪರಿಗಣಿತವಾಗಿದೆ ಮತ್ತದನ್ನು ಇತರೇ ಬೀಜಗಳೊಂದಿಗೆ ಸಂಯುಕ್ತಗೊಳಿಸಿದಾಗ, ಆ ಸಂಯುಕ್ತ ಬೀಜಾಕ್ಷರವು  ಎರಡನೇ ಬೀಜಾಕ್ಷರದ ಸುಪ್ತಶಕ್ತಿಯನ್ನು ಹೆಚ್ಚಿಸುತ್ತದೆ. ಅಗ್ನಿ ಬೀಜದೊಂದಿಗೆ ಇತರೇ ಬೀಜಗಳನ್ನು ಸೂಕ್ತವಾದ ವಿಧದಲ್ಲಿ ಸಂಯುಕ್ತಗೊಳಿಸಿದಾಗ ಅದು ಕೃಪೆಯನ್ನುಂಟು ಮಾಡುತ್ತದೆ. ಶಿವ ಮತ್ತು ಶಕ್ತಿಯರು ಸಹಸ್ರಾರದಲ್ಲಿ ಸಂಯೋಗ ಹೊಂದಿದಾಗ ಯೋಗಿಗಳು ಪರಮಾನಂದದಲ್ಲಿ ಮುಳುಗಿ ಸಂತೋಷಗೊಳ್ಳುತ್ತಾರೆ. ಅವರು ಈ ಹಂತದಲ್ಲಿ ಪರಮಾನಂದವನ್ನು ಹೊಂದುವುದರಿಂದ, ದೇವಿಯನ್ನು ರಾಮಾ ಎಂದು ಕರೆಯಲಾಗಿದೆ. (ದೈವೀ ಪುರುಷನಾದ ರಾಮನು ಯೋಗಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾನೆ ಆದ್ದರಿಂದ ಅವನನ್ನು ರಾಮ ಎಂದು ಕರೆಯಲಾಗಿದೆ).

Ramaṇa-lampaṭā रमण-लम्पटा (320)

೩೨೦. ರಮಣ-ಲಂಪಟ

           ದೇವಿಯು ತನ್ನ ಸಂಗಾತಿಯಾದ ಶಿವನೊಡನೆ ಸಹಸ್ರಾರದಲ್ಲಿ ಇರುವ ಕ್ಷಣಗಳನ್ನು ಆನಂದಿಸುತ್ತಾಳೆ. ಆಕೆಯು ದಾಂಪತ್ಯ ಸುಖವನ್ನು ಅನುಭವಿಸುತ್ತಾಳೆ ಮತ್ತು ಆಕೆಯು ಶಿವನೊಂದಿಗೆ ಎಲ್ಲೆಡೆ ಆಡಲು ಬಯಸುತ್ತಾಳೆ. ದೇವಿಯು ಸ್ತ್ರೀಯರು ತಮ್ಮ ಪತಿಯರಿಗೆ (ರಮಣರಿಗೆ) ನಿಷ್ಠರಾಗಿರುವಂತೆ ಮಾಡುತ್ತಾಳೆ; ಏಕೆಂದರೆ ಅವಳು ಸ್ತ್ರೀಯ ಮೂರ್ತ ರೂಪವಾಗಿದ್ದಾಳೆ (ಹಿಂದಿನ ನಾಮ).

Kāmyā काम्या (321)

೩೨೧. ಕಾಮ್ಯಾ

           ಕಾಮ್ಯಾ ಎಂದರೆ ದೇವಿಯನ್ನು ನೋಡಲು ಉತ್ಕಟವಾಗಿ ಬಯಸುವುದು. ಮುಕ್ತಿಯನ್ನು ಪಡೆಯ ಬಯಸುವವರು ಆಕೆಯ ಬಗ್ಗೆ ಆಸಕ್ತಿಯಿಟ್ಟುಕೊಂಡಿರುತ್ತಾರೆ. ಮುಕ್ತಿಯು ಕೇವಲ ಜ್ಞಾನದಿಂದ ಮಾತ್ರವೇ ಲಭ್ಯವಾಗುತ್ತದೆ ಮತ್ತು ದೇವಿಯೇ ಆ ಜ್ಞಾನವಾಗಿದ್ದಾಳೆ (ನಾಮ ೯೮೦). ಕೃಷ್ಣ ಪಕ್ಷದ ೧೨ನೇ ತಿಥಿಯನ್ನೂ ಸಹ ಕಾಮ್ಯಾ ಎನ್ನುತ್ತಾರೆ.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 317-321 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.