ಇನ್ಫೋಸಿಸ್‍ನ ನಾರಾಯಣ ಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ನಿಯುಕ್ತರಾದಾಗ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಇದಕ್ಕೆ ಆಕ್ಷೇಪಿಸಿ, "ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೆ ತರಬೇಕೆನ್ನುವ ನಾರಾಯಣ ಮೂರ್ತಿಯವರು ವಿಶ್ವಮಟ್ಟದ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದು ಯಾವ ನ್ಯಾಯ? ಇವರನ್ನು ಯಾವುದಾದರೂ ವಾಣಿಜ್ಯ ಮೇಳಗಳ ಉದ್ಘಾಟನೆಗೆ ಸರ್ಕಾರ ಬೇಕಾದರೆ ಬಳಸಿಕೊಳ್ಳಲಿ" ಎಂದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಾಕಷ್ಟು ಜನ ಕೇವಲ ನಾಲ್ಕು ಸಾಲು ಸಾಹಿತ್ಯ ಬರೆದು ಕನ್ನಡ ಉದ್ದಾರವಾಯಿತೆಂದುಕೊಂಡರೆ ಹೇಗೆ, ಕನ್ನಡಿಗರಿಗಾಗಿ ಇನ್ಫೋಸಿಸ್ ಸಂಸ್ಥೆ ಅದರಲ್ಲೂ ಸುಧಾ ನಾರಾಯಣ ಮೂರ್ತಿಯವರು ಸಾಕಷ್ಟು ಧನಸಹಾಯ ಮುಂತಾದ ಸೇವೆಗಳನ್ನು ಮಾಡಿರುವುದರಿಂದ ಅವರು ಯೋಗ್ಯರು ಎಂದು ಪ್ರತಿಕ್ರಿಯಿಸಿದ್ದರು. 

    ಅದೇನೆ ಇರಲಿ, ಇಂಗ್ಲೀಷಿನ ಬಗೆಗೆ ನಮ್ಮವರಿಗಿರುವ ವ್ಯಾಮೋಹವನ್ನು ನೋಡಿದಾಗ ನನಗೆ ಹಳೆಯದೊಂದು ಕಥೆ ಜ್ಞಾಪಕಕ್ಕೆ ಬರುತ್ತಿದೆ. ಬ್ರಿಟೀಷರು ನಮ್ಮನಾಳುತ್ತಿದ್ದ ಕಾಲ ಆಗ ವಿಲ್ಸನ್ ದೊರೆ ಎಂಬ ಒಬ್ಬ ಆಂಗ್ಲ ಅಧಿಕಾರಿ ಇದ್ದ. ಅಧಿಕಾರಿ ಎಂದ ಮೇಲೆ ಆಳು-ಕಾಳು ಎಲ್ಲಾ ಇದ್ದವು. ಅವನಿಗೊಬ್ಬ ಸೇವಕ ಮಾದ ಎಂಬಾತನಿದ್ದ; ಅವನು ದೊರೆಗೆ ಅಂಗರಕ್ಷಕನಂತಿದ್ದು ದೊರೆ ಬೇಟೆಗೆ ಹೋದಾಗಲೆಲ್ಲ ಅವನಿಗೆ ಸಹಾಯಕನಾಗಿ ತೆರಳುತ್ತಿದ್ದ. ಅವನ ಹೆಂಡತಿ ಕೆಂಪಿ ಬಣ್ಣದಲ್ಲಲ್ಲ ಹೆಸರಿನಲ್ಲಿ; ಆ ದೊರೆಯ ಬಂಗಲೆಯಲ್ಲಿ ಕಸ-ಮುಸುರೆ ಕೆಲಸ ಮಾಡುತ್ತಿದ್ದಳು. ಒಮ್ಮೆ ಮಾದ ಯಾವುದೋ ಕೆಲಸದ ಮೇಲೆ ಪರ ಊರಿಗೆ ಹೊರಡಬೇಕಾಗಿತ್ತು ಹಾಗಾಗಿ ತನ್ನ ಹೆಂಡತಿಗೆ ಒಂದು ಮಾತು ಹೇಳಿ ಹೋಗೋಣವೆಂದರೆ ಮನೆ ಕೆಲಸಕ್ಕೆ ಹೋದ ಕೆಂಪಿ ಎಷ್ಟೊತ್ತಾದರೂ ಬರಲೇ ಇಲ್ಲ. ಏಕೆ ತಡವಾಯಿತು , ಒಂದು ಬಾರಿ ತಿಳಿದುಕೊಂಡು ಬರೋಣವೆಂದು ಮಾದನೇ ದೊರೆಯ ಬಂಗಲೆಯತ್ತ ಕಾಲುಹಾಕಿದ. ಬಂಗಲೆಯ ಹತ್ತಿರ ಹೋದರೆ ಅಲ್ಲಿ ಯಾರೂ ಕಾಣ ಬರಲಿಲ್ಲ ಹಾಗಾಗಿ ಬಂಗಲೆಯನ್ನು ಒಂದು ಸುತ್ತು ಹಾಕಿ ಬರೋಣವೆಂದುಕೊಂಡು ಹೊರಟ. ಬಂಗಲೆಯ ಹಿಂದಿನ ಕೋಣೆಯಲ್ಲಿ ಏನೋ ಸದ್ದು ಕೇಳಿಸಿತು, ಕುತೂಹಲದಿಂದ ಅದೇನೆಂದು ತಿಳಿಯಲು ಮಾದ ಕಿಟಕಿಯಲ್ಲಿ ಇಣುಕಿ ನೋಡಿದ. ಅಲ್ಲಿ ಅವನಿಗೆ ಕಾಣ-ಬಾರದ ದೃಶ್ಯವೊಂದು ಕಣ್ಣಿಗೆ ಬಿತ್ತು ಅದೇನೆಂದರೆ ಅವನ ಕರಿ ಹೆಂಡತಿ ಕೆಂಪಿ ಪರಂಗಿ ದೊರೆಯ ತೋಳ್ತೆಕ್ಕೆಯಲ್ಲಿ ಸ್ವರ್ಗಸುಖ ಕಾಣಿತ್ತಿದ್ದಾಳೆ. ಮಾದನಿಗೆ ದೊರೆಯನ್ನು ಅಲ್ಲೇ ಕೊಚ್ಚಿ ಹಾಕುವಷ್ಟು ರೋಷ ಉಕ್ಕಿಬಂತು. ಆದರೆ, ದೊರೆಯ ಮೇಲೆ ಸೇಡು ತೀರಿಸಿಕೊಳ್ಳಲು ಮಾದನೇನು ಸಾಮಾಜಿಕವಾಗಿ ಬಲಿಷ್ಠನೇ? ಅದರಲ್ಲೂ ಬಿಳಿದೊರೆಗಳನ್ನು ಎದುರು ಹಾಕಿಕೊಳ್ಳುವುದು ಸಾಮಾನ್ಯ ವಿಷಯವೇ? ಹಾಗಾಗಿ, ಮಾದ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ. ಹೀಗಿರುವಾಗಲೊಮ್ಮೆ ದೊರೆಯೊಂದಿಗೆ ಬೇಟೆಗೆ ಹೋಗುವ ಅವಕಾಶ ಮಾದನಿಗೆ ಸಿಕ್ಕಿತು. ಆ ಸಮಯದಲ್ಲಿ ಸನಿಹದಲ್ಲೇ ಹುಲಿ ಬರುವ ಸುಳುಹು ಅರಿತ ಮಾದ ದೊರೆಗೆ ಅದರ ಬಗ್ಗೆ ಯಾವುದೇ ಸುಳಿವನ್ನು ವಿಲ್ಸನ್ ದೊರೆಗೆ ಕೊಡಲಿಲ್ಲ. ಹುಲಿ ತೀರ ಇನ್ನೇನು ಹತ್ತಿರ ಬಂತು ಎನ್ನುವಾಗ ಮಾದ ದೊರೆಗಳೇ ಹುಲಿ ಹುಲಿ ಎಂದು ಕೂಗಿ ಉಪಾಯದಿಂದ ಹತ್ತಿರದ ಮರವೇರಿ ಕುಳಿತುಬಿಟ್ಟ.  ಮಾದ ದೊರೆಯ ಸಹಾಯಕ್ಕೆ ನಿಲ್ಲದೇ ಹೋದದ್ದರಿಂದ ಅಸಾಯಕನಾದ ವಿಲ್ಸನ್ ದೊರೆ ಹುಲಿಗೆ ಆಹಾರವಾದ. ಇದಾದ ಮೇಲೆ ವಿಲ್ಸನ್ ದೊರೆ ಬೇಟೆಗೆ ಹೋಗಿ ಹುಲಿ ಬಾಯಿಗೆ ಸಿಕ್ಕು ಸತ್ತನೆಂದು ಮಾದ ಊರಲ್ಲೆಲ್ಲಾ ಸುದ್ದಿ ಹರಡಿದ. ಹೀಗೆ ಮಾದ ತನ್ನ ಸೇಡನ್ನು ತೀರಿಸಿಕೊಂಡಿದ್ದ. ಸ್ವಲ್ಪ ಕಾಲದ ನಂತರ ಕೆಂಪಿಗೆ ಮಗುವಾಯಿತು ನೋಡಿದರೆ ಮಗು ಕೆಂಪಗಿದ್ದು ವಿಲ್ಸನ್ ದೊರೆಯನ್ನು ಹೋಲುತ್ತಿತ್ತು. ಹೀಗೆ ವಿಲ್ಸನ್ ದೊರೆ ಸತ್ತೂ ಸೇಡಿಗೆ ಸೇಡು ತೀರಿಸಿಕೊಂಡಿದ್ದ. 

    ಹೀಗೆಯೇ, ಬ್ರಿಟಿಷರು ನಮ್ಮನ್ನು ಬಿಟ್ಟು ತೊಲಗಿದರೂ ಅವರ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿಹೋಗಿದ್ದಾರೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅವರಿಗಿಂತ ನಾವೇ ಚೆನ್ನಾಗಿ ಜರಿಯುತ್ತಾ ಬ್ರಿಟಿಷರ ಸಂಸ್ಕೃತಿ ಮತ್ತು ಭಾಷೆಯನ್ನು ಅವರಿಗಿಂತ ನಾವೇ ಚೆನ್ನಾಗಿ ಪೋಷಿಸಿಕೊಂಡು ಬರುತ್ತಿದ್ದೇವೆ. ಹೀಗೆ ಬ್ರಿಟಿಷರು ದೇಶ ಬಿಟ್ಟು ಹೋದರೂ ಅವರ ಸಂಸ್ಕೃತಿಯನ್ನು ನಾವೇ ಹಾಡಿ ಹೊಗಳೂವಂತೆ ಮಾಡಿ ವಿಲ್ಸನ್ ದೊರೆಯಂತೆ ಪರೋಕ್ಷವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದು ದೇಶಕ್ಕೊದಗಿದ ದೌರ್ಭಾಗ್ಯವೆನ್ನದೇ ಬೇರೆ ವಿಧಿಯಿಲ್ಲ. ವಿಶ್ವದ ಶ್ರೇಷ್ಠ ಸಂಶೋಧನಾ ಸಾಹಿತ್ಯವೆಲ್ಲಾ ಇಂಗ್ಲೀಷಿನಲ್ಲಿದೆ ಎಂದುಕೊಂಡರೆ ಅದನ್ನು ಅರಿತುಕೊಳ್ಳಲು ಬೇಕಾದರೆ ಇಂಗ್ಲೀಷನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಿಂದಲೇ ಕಲಿಯಲಿ ಅದು ಬೇರೆ ವಿಷಯ. ಆದರೆ ಸಾಂಸ್ಕೃತಿಕ ವಿಷಯಗಳಲ್ಲೂ ಅವರನ್ನೇ ಅಂದಾನುಕರಣೆ ಮಾಡುತ್ತಿರುವುದು ನಿಜಕ್ಕೂ ಖೇದಕರ.