ಉರಿವ ಬತ್ತಿ ಅಕ್ಕಸದಿ
ಮೇಣಕ್ಕೆ ಹೇಳಿತು
ಉರಿಯುವುದು ನಾನು
ನೀನೇಕೆ ಕರಗುತ್ತಿ ?
ಮೇಣದ ಉತ್ತರ
ಉರಿಯುವುದು ನೀನಾದರೂ
ಇಂಧನ ನಾನು
ಕರಗದೆ ಗತ್ಯಂತರವಿಲ್ಲ
ಎರಡೂ ಕೂಡಿ
ಬೆಳಗುವ ಜ್ಯೋತಿಯ
ಬೆನ್ನು ಬಿದ್ದವು ನಿನ್ನದೆ
ಸುಖದ ಬದುಕು
ಕರಗುವವರು ಯಾರೋ
ಉರಿವವರು ಯಾರೋ
ಉರುವಣಿಗೆ ಮಾತ್ರ ನಿನ್ನದು !
ಬೆಳಕು ಅವುಗಳನ್ನು
ಸಮಾಧಾನಿಸಿತು
ಕರಗುವುದು ಉರಿಯುವುದು
ಬೆಳಗುವುದು ಒಂದು
ನಿರಂತರ ಸಂವಹನ ಕ್ರಿಯೆ
ಇಲ್ಲದಿರೆ
ಕತ್ತಲಿನದೆ ಸಾಮ್ರಾಜ್ಯ !
ನೀವಿಲ್ಲದೆ ನಾನಿಲ್ಲ
ನಾವಿಲ್ಲದಿರೆ ಜಗವಿಲ್ಲ
ಜಗವಿಲ್ಲದಿರೆ
ನಮಗೆ ಅಸ್ತಿತ್ವವಿಲ್ಲ
ಪರಸ್ಪರ ಸಹಕಾರ
ನಿಜದ ಬಾಳು ತಿಳಿಯಿರಿ
ಮೌನದಲಿ ಮೋಂಬತ್ತಿ
ಉರಿಯ ತೊಡಗಿತು
*
ಚಿತ್ರಕೃಪೆ :ಅಂತರ್ ಜಾಲದಿಂದ
ಪ್ರತಿಕ್ರಿಯೆ (4)
ಕಡೆಗೆ ಸಂಸಾರವು ಒಂದು ದೀಪದಂತೆ
ಗಂಡ ಉರಿವಬತ್ತಿಯಾದರೆ ಹೆಂಡತಿ ಕರಗುವ ಮೇಣ,
ಉರಿಯುವನು ಗಂಡಾದರು ! ಕಣ್ಣೀರು ಮಾತ್ರ ಹೆಣ್ಣಿನದು ! :) ಇಬ್ಬರು ಸೇರಿದಾಗ ಸಂಸಾರವೆಂಬ ಬೆಳಕು ಸುತ್ತಲು ಚೆಲ್ಲುವುದು !
ಆ ಬೆಳಕಲ್ಲಿ ಮಕ್ಕಳು ಮರಿ ಸಮಾಜ ಹೀಗೆ....
ಉತ್ತಮ ಕವನ ನಿಮ್ಮದು ಅಭಿನಂದನೆ
ಪಾರ್ಥಸಾರಥಿ
ತಮ್ಮ ಪ್ರತಿಕ್ರಿಯೆಗಳನ್ನು ಓದಿದೆ ಕವನವನ್ನು ನೀವುಗಳು ಗ್ರಹಿಸಿದ ರೀತಿ ಮತ್ತು ಪ್ರತಿಕ್ರಿಯಿಸಿದ ಕ್ರಮ ವಿಭಿನ್ನವಾದುದು. ಕವನವೊಂದು ಗ್ರಹಿಕೆಗಳು ನೂರೊಂದು ನಿಮ್ಮ ಗ್ರಹಿಕೆ ಮತ್ತು ನೋಟಗಳು ಕವನಕ್ಕಿಂತ ಚೆನ್ನಾಗಿವೆ. ನಮ್ಮಲ್ಲಿ ಒಂದು ವಾರದಿಂದ ಕತ್ತಲಿನದೆ ಸಾಮ್ರಾಜ್ಯ ಅಂತರ್ಜಾಲ ಸಂಪರ್ಕ ಸಿಗುವಲ್ಲಿ ತೊಂದರೆಗಳಿವೆ, ಧನ್ಯವಾದಗಳು.
ಕುಂದಾಪುರ ನಾಗೇಶ್ ಪೈ
ತಮ್ಮ ಪ್ರತಿಕ್ರಿಯೆ ಓದಿದೆ ತಮ್ಮ ಗ್ರಹಿಕೆ ಅರ್ಥಪೂರ್ಣವಾಗಿದೆ ಧನ್ಯವಾದಗಳು.