ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧

೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ. 

೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ – 

(ಕೋಷ್ಟಕ - ೧ನ್ನು ನೋಡಿ)

 

ಕಾದಿ ನವ = ’ಕ’ ದಿಂದ ’ಝ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.   

ಟಾದಿ ನವ = ’ಟ’ ದಿಂದ ’ಧ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.   

ಪಾದಿ ಪಂಚಕ = ’ಪ’ ದಿಂದ ’ಮ’ ದವರೆಗಿನ ಅಕ್ಷರಗಳು (ಐದು) ಒಂದರಿಂದ ಐದರವರೆಗಿನ (೧ರಿಂದ ೫) ಅಂಕೆಗಳನ್ನು ಸೂಚಿಸುತ್ತವೆ.    

ಯಾಧ್ಯಾಷ್ಟಕ = ’ಯ’ ದಿಂದ ’ಹ’ ದವರೆಗಿನ ಅಕ್ಷರಗಳು (ಎಂಟು) ಒಂದರಿಂದ ಎಂಟರವರೆಗಿನ (೧ರಿಂದ ೮) ಅಂಕೆಗಳನ್ನು ಸೂಚಿಸುತ್ತವೆ.   

ಕ್ಷಃ ಶೂನ್ಯಮ್ = ’ಕ್ಷ’ ಅಕ್ಷರವು ಶೂನ್ಯವನ್ನು ಅಂದರೆ ಸೊನ್ನೆಯನ್ನು ಸೂಚಿಸುತ್ತದೆ.

 

೩, ಈ ಕೆಳಗಿನ ಕೋಷ್ಟಕವು (ಕೋಷ್ಟಕ - ೨ನ್ನು ನೋಡಿ) ಅಕ್ಷರಗಳು ಹಾಗು ಅವುಗಳು ಸೂಚಿಸುವ ಅಂಕೆಗಳನ್ನು ತೋರಿಸುತ್ತದೆ. 

 

೧ ೨ ೩ ೪ ೫ ೬ ೭ ೮ ೯ ೦   

ಕ ಖ ಗ ಘ ಙ ಚ ಛ ಜ ಝ -   

ಟ ಠ ಡ ಢ ಣ ತ ಥ ದ ಧ -   

ಪ ಫ ಬ ಭ ಮ - - - - -   

ಯ ರ ಲ ವ ಶ ಷ ಸ ಹ - ಕ್ಷ

 

೪. ಈ ಪದ್ಧತಿಯಂತೆ ಅಂಕೆ ೧ನ್ನು ಕ, ಟ, ಪ ಮತ್ತು ಯ ಗಳು ಸೂಚಿಸುತ್ತವೆ.

೫. ಬೇರೆ ಅಂಕೆಗಳನ್ನೂ ಸಹ ಅದೇ ವಿಧವಾಗಿ ಮೇಲಿನ ಕೋಷ್ಟಕದಿಂದ ತಿಳಿಯಬಹುದು.

೬. ಸ್ವರದೊಂದಿಗೆ ವ್ಯಂಜನವು ಸೇರಿ ಗುಣಿತಾಕ್ಷರವುಂಟಾದಾಗ ಆ ಅಕ್ಷರದ ಬೆಲೆಯನ್ನು ಲೆಕ್ಕಹಾಕಲು ವ್ಯಂಜನಾಕ್ಷರವಷ್ಟೆ ತೆಗೆದುಕೊಳ್ಳಬೇಕು, ಸ್ವರಾಕ್ಷರಕ್ಕೆ ಯಾವುದೇ ಪ್ರತ್ಯೇಕವಾದ ಬೆಲೆಯಿರುವುದಿಲ್ಲ. ಉದಾಹರಣೆಗೆ ಕ, ಕಾ, ಕಿ, ಕೀ ಎಲ್ಲವೂ ಕ ಅಕ್ಷರದ ಬೆಲೆಯಾದ ಅಂಕೆ ೧ನ್ನು ಮಾತ್ರವೇ ಹೊಂದಿರುತ್ತವೆ. 

ಉದಾಹರಣೆ - ೧: "ಜಯ" ಶಬ್ದವು ಯಾವ ಸಂಖ್ಯೆಯನ್ನು ಸೂಚಿಸುತ್ತದೆ? 

೧. ಜಯ ಶಬ್ದವು ಮಹಾಭಾರತದಲ್ಲಿ ಬಹಳ ಮಹತ್ವದ್ದಾಗಿ ಪರಿಗಣಿಸಲ್ಪಟ್ಟಿದೆ.

ಮಹಾಭಾರತ ಕೃತಿಯು ಕೆಳಗಿನ ಶ್ಲೋಕದಿಂದ ಆರಂಭವಾಗುತ್ತದೆ. 

ನಾರಾಯಣ ನಮಸ್ಕೃತ್ಯ ನರಂ ಚೈವ ನರೋತ್ತಮಮ್ l

ದೇವೀಂ ಸರಸ್ವತೀಂ ವ್ಯಾಸಂ ತಥೋ ಜಯಮುದೈರಯೇತ್ ll

ಗೀತೆಯು ಈ ಶ್ಲೋಕದೊಂದಿಗೆ ಆರಂಭವಾಗುತ್ತದೆ (ಗೀತಾ ೧. ೧) -

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ l

ಮಾಮಕಾಃ ಪಾಂಡವಶ್ಚೈವ ಕಿಮಕುರ್ವತ ಸಂಜಯ ll

ಗೀತೆಯು ಈ ಶ್ಲೋಕದೊಂದಿಗೆ ಮುಕ್ತಾಯವಾಗುತ್ತದೆ (ಗೀತಾ ೧೮.೭೮) -

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ l

ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾನೀತಿರ್ಮತಿರ್ಮಮ ll 

ಜಯ ಶಬ್ದವು ಈ ಎಲ್ಲಾ ಶ್ಲೋಕಗಳಲ್ಲಿಯೂ ಕಂಡುಬರುತ್ತದೆ.

೨. ಜಯ ಶಬ್ದದ ಸಂಖ್ಯಾ ಬೆಲೆಯು ಈ ವಿಧವಾಗಿ ಇದೆ - 

’ಜ’ ಅಕ್ಷರದ ಸ್ಥಾನ ಬೆಲೆ = ೮ (ಏಕ ಸ್ಥಾನ)

’ಯ’ ಅಕ್ಷರದ ಸ್ಥಾನ ಬೆಲೆ = ೧ (ದಶ ಸ್ಥಾನ)

೩. ಅಂಕೆಗಳನ್ನು ಅವುಗಳ ಸ್ಥಾನ ಬೆಲೆಗಳ ಪ್ರಕಾರ ಹೊಂದಿಸಲು ಇರುವ ಸೂತ್ರ - ಅಂಕಾನಾಂ ವಾಮತೋ ಗತಿಃ (ಅಂಕೆಗಳನ್ನು ಬಲದಿಂದ ಎಡಕ್ಕೆ ಬರೆಯಿರಿ)

೪. ಸೂತ್ರದಂತೆ ‘ಜ(=೮)’ ಅಕ್ಷರವನ್ನು ಏಕದ ಸ್ಥಾನದಲ್ಲಿ, ಹಾಗು ‘ಯ(=೧)’ ಅಕ್ಷರವನ್ನು ಹತ್ತರ (ದಶಮ) ಸ್ಥಾನದಲ್ಲಿ ಬರೆಯಬೇಕು. 

೫. ಆಗ ಸೂತ್ರವನ್ನು ಅನುಸರಿಸಿ ಉತ್ಪನ್ನವಾಗುವ ಸಂಖ್ಯೆಯು ೧೮ ಆಗುತ್ತದೆ.

೬. ಮಹಾಭಾರತದಲ್ಲಿರುವ ಪರ್ವಗಳ ಸಂಖ್ಯೆ = ೧೮

೭. ಮಹಾಭಾರತದಲ್ಲಿರುವ ಅಧ್ಯಾಯಗಳ ಸಂಖ್ಯೆ = ೧೮

೮. ಮಹಾಭಾರತ ಯುದ್ಧ ನಡೆದ ದಿನಗಳ ಸಂಖ್ಯೆ = ೧೮

೯. ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡ ಅಕ್ಷೋಹಿಣಿ ಸೈನ್ಯಗಳ ಸಂಖ್ಯೆ 

    (ಕೌರವರದು ೧೧ ಹಾಗು ಪಾಂಡವರದು ೭) = ೧೮

೧೦. ಮಹಾಭಾರತಕ್ಕೆ ಇರುವ ಪರ್ಯಾಯ ಹೆಸರು "ಜಯ"

****

ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ -೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4,  (PUBLISHED BY SHRI VEDA BHARATHI, AUTHOR: Dr. Remella Avadhanulu) 

 

ಇದರ ಹಿಂದಿನ ಲೇಖನ ವೇದಗಣಿತ ಕಿರು ಪರಿಚಯ ಭಾಗ - ೧: ಸಂಸ್ಕೃತದಲ್ಲಿ ಸಂಖ್ಯೆಗಳನ್ನು ಹೇಳುವ ವಿಧಾನ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7-%E0%B2%B5...