ಇದು 10 ವರ್ಷ ಹಿಂದಿನ ನೆನಪು ಅಷ್ಟೆ!!! (28-10-2000 )
ಆಗಷ್ಟೆ ಪದವಿಗೆ (ಹಾಸನದಲ್ಲಿ) ಕಾಲಿಟ್ಟಿದ್ದ ನಂಗೆ ನನ್ನೂರಿನಿಂದ ಸುಮಾರು ನೂರು ಕಿ.ಮೀ. ದೂರದಲ್ಲಿರುವ ಕುದರೆಮುಖ ಅಂದ್ರೆ ಅಲ್ಲೊಂದು ಐರನ್ ಓರ್ ಫ್ಯಾಕ್ಟ್ರಿ ಇದೆ ಅಂತ ಮಾತ್ರ ಗೊತ್ತಿತ್ತಷ್ಟೆ. ಮೂರ್ನಾಲ್ಕು ತಿಂಗಳು ಕ್ಲಾಸಿಗ್ ಹೊದ್ಮೇಲೆ ಕುದರೆಮುಖ ಅಂದ್ರೆ ನಿಜವಾಗಿ ಏನು ಅಂತ ತಿಳ್ಕಂಡೆ. ಅದ್ಹೆಂಗೆ ಅಂತಿದೀರಾ? ನಾನು, ಪ್ರೇಮ್, ಮೇಗ್ರಾಜ, ಅಕ್ಮಲ್, ವಿಶ್ವ, ದೀಪು, ಶಿವು, ಸದಾನಂದ, ದೊರೆ... ಹೀಗೆ ಸುಮಾರ್ ಜನ ಕ್ಲಾಸ್ಮೇಟ್ಸು ಒಟ್ಗೆ ಕ್ಲಾಸಿಗೆ ಬಂಕ್ ಹೊಡ್ದು ಸುಮ್ನೆ ಹರ್ಟೆ ಹೊಡ್ಕಂಡು ಸುತ್ತಾಡಕ್ ಶುರು ಮಾಡ್ದು, ಹೀಗೆ ಬಂಕ್ ಹೊಡ್ಯದು ಮಾಮೂಲಾಗೊಗಿತ್ತು.
‘ಕ್ಲಾಸಿಗೆ ಬಂಕ್ ಹಾಕಿ ಇಲ್ಲಿಲ್ಲೆ ಅಲಿತಿದ್ರೆ ಪ್ರಯೋಜ್ನ ಇಲ್ಲ ನಡಿರಪ್ಪ ಕುದರೆಮುಖ ಟ್ರೆಕ್ಕಿಂಗ್ ಹೋಗ್ಬರಣ’ ಅಂತ ಪ್ರೇಮ್ ಹೇಳ್ದಾಗ ಎಲ್ರೂ ಹುರುಪ್ನಿಂದ ಹೂ...ಹೂ...ಅಂದ್ರೂ ‘ಅಯ್ಯೋ ಅಷ್ಟ್ ದೂರನಾ?’ ಅಂತ ಕೆಲವ್ರು ‘ನಾವಂತು ಬರಲ್ಲಪ್ಪ’ ಅನ್ನೋ ಸಿಗ್ನಲ್ ಆಗ್ಲೆ ಕೊಟ್ಟಿದ್ರು. ಊಟ-ತಿಂಡಿ ವ್ಯವಸ್ಥೆ ನಾವೇ ಮಾಡ್ಕಬೇಕಿದ್ದಿದ್ರಿಂದ ತಲೆಗೆ ರೂ.250 (ಬಸ್ ಚಾರ್ಜ ಅಲ್ದೆ ) ಕೊಡಿ ಅಂದಾಗ ಎಲ್ರೂ ಒಂದಿಲ್ಲೊಂದು ಕಾರಣ ಕೊಟ್ಟು 'ಬರಲ್ಲ' ಅಂತ ಕೈ ಕೊಟ್ರು. ಇದ್ನೆಲ್ಲ ನೋಡಿ ಟ್ರೆಕ್ಕಿಂಗ್ ಹೋಗಕಾಗಲ್ಲ ಅನ್ಕಂಡು ಮನ್ಸಲ್ಲೇ ಮರುಗಿದ್ದೆ. ಆದ್ರೆ ‘ಲೋಕಲ್ ಬಾಯ್’ ಪ್ರೇಮ್ (ಕುದರೆಮುಖ ಹತ್ರದ ಕಳಸದವನು) ‘ಇಲ್ಲಿಂದ ನಾವಿಬ್ರು ಹೋಗಣ, ಕಳಸದಲ್ಲಿ ನನ್ ಫ್ರೆಂಡ್ಸ್ ಇಬ್ರು ಬರ್ತಾರೆ’ ಅಂದಾಗ ನಂಗೆ ಫುಲ್ ಖುಷಿಯಾಗಿತ್ತು. ಪ್ರೇಮ್ ಕಳಸದ ಫ್ರೆಂಡ್ಸ್ ಜೊತೆ ಇದಕ್ಕೂ ಮೊದಲು ಕುದರೆಮುಖ ಪರ್ವತ ಚಾರಣ ಹೋಗ್ಬಂದಿದ್ರಿಂದ ನಮ್ಗೆ ಅವ್ನೇ ಗೈಡ್.
ಪ್ರೇಮ್ ಮತ್ತು ನಾನು ಹೊರಡೊ ಸಿದ್ಧತೆ ಮಾಡಕ್ ಶುರು ಮಾಡಿದ್ಮೇಲೆ ತಡ್ಕಳಕಾಗ್ದೆ ಅಕ್ಮಲ್, ವಿಶ್ವ ಮತ್ತೆ ನನ್ನ ಪಕ್ಕದ ರೂಮಿನ ತಮ್ಸ್ (ನಮ್ಮ ಕಾಲೇಜವ್ನೆ, ಫ್ರೆಂಡು) ‘ನಾವು ಬರ್ತೀವಿ’ ಅಂತ ಹೂರಟು ನಿಂತಿದ್ದು ನಮ್ಮಿಬ್ರಗೂ ಆಶ್ಚರ್ಯ ತಂದಿತ್ತು. ಒಟ್ಟು ಮೂರು ದಿನದ ಪ್ರೋಗ್ರಮ್ ಅದು. ನಾನು ಮತ್ತು ಪ್ರೇಮ್ ಎಲ್ರಿಗಿಂತ ಒಂದು ದಿನ ಮೊದಲೇ ಕಳಸಕ್ಕೆ ಹೋಗಿದ್ವಿ, ಅಂದು ಸಂಜೆ ಸುರಿದ ಮಳೆ ನಮ್ಮ ಆಸೆಗೆ ನೀರೆರೆಚಿತ್ತು. ಉಳಿದ ಫ್ರೆಂಡ್ಸು ಹಾಸನದಿಂದ ಕಳಸಕ್ಕೆ ಮಳೆಯೊಳಗೆ ಸಂಜೆ ಬಂದಿಳಿದಿದ್ರು. ರಾತ್ರಿಯಾಗುವಷ್ಟರಲ್ಲಿ ತಣ್ಣಗಾಯ್ತು ಮಳೆ. ಎಲ್ರಿಗೂ ಖುಷಿ. ನಮ್ಮ ಹೊರಡೊ ಸಿದ್ಧತೆ ಮುಗ್ದಿದ್ದು ಪರ್ವತದ ಮೇಲೆ ಟೆಂಟ್ ಹಾಕಲು ಪ್ಲಾಸ್ಟಿಕ್ ಚೀಲಗಳ್ನ ಸೇರ್ಸಿ ಹೊಲ್ದಿದ್ದ ಟಾರ್ಪಲ್, ಅಡ್ಗೆ ಮಾಡಲು ಬೇಕಾಗುವ ಪಾತ್ರೆ, ತರಕಾರಿ, ರೇಷನ್, ಇತ್ಯಾದಿ(ಲಿಸ್ಟ ತುಂಬಾ ಉದ್ದ ಇದೆ)ಗಳನ್ನ ವ್ಯವಸ್ಥೆ ಮಾಡ್ಕಂಡು, ತಂದ ಚಿಕನ್ ನ ಕಂದಿಸಿಟ್ಟ(ಪರ್ವತದ ಮೇಲೆ ಹುರಿಯಲು) ಮೇಲೆಯೇ. ಪ್ರೇಮ್ ಮನೆಯಲ್ಲೇ ಅಂದು ಹಾಲ್ಟ್.
ಕಳಸದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಚಾರಣ ಪ್ರಾರಂಭಿಸಬೇಕಿದ್ದ ಬಾಳಗಲ್(ಕಳಸದಿಂದ 10ಕಿ.ಮೀ.) ತಲುಪಿದೆವು, ಬಾಳಗಲ್ಲಲ್ಲಿ ಬಸ್ಸಿಳಿದ ಕೂಡಲೆ ಸಿಗುವ ಸೋಮಾವತಿ ನದಿ ಹತ್ರ ಒಂದು ಫೋಟೋ ಸೆಷನ್ ಇತ್ತು. ಇಲ್ಲಿಂದ ನಮ್ಮ ಗುರಿ ತಲ್ಪಲು ನಾವು ಸುಮಾರು 20 ಕಿ.ಮೀ. ಚಾರಣ ಮಾಡ್ಬೇಕಿತ್ತು, ಹಿಂದಿನ ದಿನ ಹೊಂದಿಸ್ಕೊಂಡ ಎಲ್ಲಾ ಸರಕುಗಳೊಂದಿಗೆ !!!
ನದಿ ದಾಟುತ್ತಿದ್ದಂತೆಯೇ ನಾವೆಲ್ಲ ಹಸಿರು ಕಾನನದ ತೆಕ್ಕೆಯೊಳಗೆ ಅಡಗಿಕೊಂಡಂತಾಯ್ತು, ಹಿಂದಿನ ರಾತ್ರಿ ಮಳೆ ಹುಯ್ದಿದ್ರಿಂದ ಮಣ್ಣು-ರಸ್ತೆ ಕಾಲಿಗೆ ಮೆತ್ತನೆ ಮುದ ನೀಡುತ್ತಿತ್ತು. ದಟ್ಟವಾದ ಕಾಡು, ಕಿಟ್ರಟ್ರ.... ಎಂತಿದ್ದ ಕೀಟಗಳು, ವಿಚಿತ್ರವಾಗಿ ಚೀರ್ತಾ ಪಟಪಟನೆ ಹಾರುತ್ತಿದ್ದ ಹಕ್ಕಿಗಳು, ಒಮ್ಮೊಮ್ಮೆ ನಿಶ್ಯಬ್ಧತೆ ನಮಗೆ ಭಯತರಿಸಿದ್ರೂ ಕೆಲವು ಪಕ್ಷಿಗಳ ಮಧುರ ನಿನಾದ, ದಾರಿ ಮಧ್ಯೆ ಅಲ್ಲೊಂದು ಇಲ್ಲೊಂದು ಸಿಗುತ್ತಿದ್ದ ಮನೆ, ಅಲ್ಲಿಯ ಜನರ ಮಾತು ನಮಗೆ ಸ್ವಲ್ಪ ಮಟ್ಟಿನ ಧೈರ್ಯ ಕೊಟ್ಟಿದ್ವು.
ಒಂದೂವರೆ ಗಂಟೆಯ ಟ್ರೆಕ್ಕಿಂಗ್ ನಮ್ಮನ್ನ ಸೋಮಾವತಿ ಜಲಪಾತದೆಡೆ ಕೊಂಡೊಯ್ದಿತ್ತು, ಅಷ್ಟರಲ್ಲಿ ಎಲ್ರೂ ಸುಸ್ತಾಗಿದ್ರಿಂದ ನೀರ್ ಕಂಡ್ ಕೂಡ್ಲೆ ಏಕಾಏಕಿ ನೀರಿಗ್ ಇಳ್ದೇ ಬಿಟ್ವಿ, ಈಜಕ್ ಬಾರ್ದವ್ರೂ!!!, ಅವರವರಿಗಿಷ್ಟವಾದ ಭಂಗಿಯಲ್ಲಿ ಕ್ಯಾಮೆರಾಕ್ಕೆ ಪೋಸೂ ಕೊಡ್ತಿದ್ರು. ಜೊತೆಗೆ ಹೊಟ್ಟೆ ತಾಳ ನಿಲ್ಲಿಸಲು ಅಲ್ಲೇ ಉಪ್ಪಿಟ್ಟು ಮಾಡ್ಕಂಡು ತಿಂದು ತೇಗುತ್ತಾ ಹೊರಟ್ವಿ. ಜಲಪಾತ ದಾಟುವಾಗ ಅಯತಪ್ಪಿ ದಡಾರನೆ ಹತ್ತು ಅಡಿ ಆಳಕ್ಕೆ ದಡಲ್ಲನೆ ಬಿದ್ದ ನನ್ನ ಕೈಯಲ್ಲಿದ್ದ ಸೀಮೆಎಣ್ಣೆ ಕ್ಯಾನ್ ನೀರೊಳಗೆ ಮಾಯವಾಯ್ತು, ಎಲ್ಲರಿಗೂ ಬೇಸ್ರವಾಗಿತ್ತು. ಬೇಸ್ರ ನಾ ಬಿದ್ದಿದ್ಕಲ್ಲ, ಸೀಮೆಎಣ್ಣೆ ಕ್ಯಾನ್ ಮಿಸ್ಸಾಗಿದ್ಕಕ್ಕೆ. ‘ಸೀಮೆಎಣ್ಣೆ ಇಲ್ದೆ ಪೀಕ್ ಮೇಲೆ ಒಲೆ ಉರ್ಸಕ್ಕಾಗಲ್ಲ ಕಣ್ರಪ್ಪ’ ಪ್ರೇಮ್ ಅನುಬವದ ಮಾತು, ಅರ್ಧ ಗಂಟೆ ಎಲ್ಲಾ ಕಡೆ ತಡ್ಕಾಡಿದ್ಮೇಲೆ ಅಲ್ಲೆಲ್ಲೋ ದೂರದಲ್ಲಿ ಸಿಕ್ತು. ಟ್ರೆಕ್ಕಿಂಗ್ ಮುಂದುವರಿಸಿದ್ವಿ, ಜಲಪಾತದಾಚೆಗೆ ಕಡಿದಾದ ಗುಡ್ಡವನ್ನೇರಬೇಕಿತ್ತು, ದಬಾಯಿಸಿ ತಿಂದವ್ರು ಹತ್ತಲು ಪರ್ದಾಡ್ತಿದ್ರು. ಹೇಗೋ ಸಾಗಿ ಸಮತಟ್ಟಾದ ಹಾದಿ ಸಿಕ್ದಾಗ ಎಲ್ರೂ ಉಸ್ಸಪ್ಪಾ ಅಂತ ನಿಟ್ಟುಸಿರ್ ಬಿಟ್ವಿ. ಪೀಕ್ ಮಂಜಿಂದ ಮುಚ್ಚಿಕೊಂಡಿತ್ತು.
ಮತ್ತೆ ಮುಂದೆಲ್ಲೋ ಒಂದು ಮನೆ ಕಾಣಿಸ್ತು, ಅದೇ ಕೊನೆ, ಅಲ್ಲೊಬ್ಬ ಫಾರೆಸ್ಟ ಗಾರ್ಡ ಇರ್ತಿದ್ನಂತೆ, ಅವತ್ತಿರ್ಲಿಲ್ಲ. ತಗ್ಗು-ದಿಬ್ಬಗಳೆನ್ನದೇ ಸರಾಗವಾಗಿ ಹೋಗ್ತಾನೆ ಇದ್ವಿ, ಎಷ್ಟೊತನಕ, ಬಿಸಿಲಿನ ಧಗೆಯಿಂದ ಬಸವಳಿದ ದೇಹ ಪದೇ ಪದೇ ನೀರು ನೀರು ಅಂತ ಕೇಳ್ತಿದ್ವು. ಹೀಗೆ ಸುಮಾರು ನಾಲ್ಕೈದು ಕಿ.ಮೀ ಸಾಗಿದ ಮೇಲೆ ಒಂದು ಪಾಳು ಮನೆ (ಲೋಬೋ ಹೌಸ್) ಸಿಕ್ತು, ಅಲ್ಲಿಯೇ ಹೊರಗೆ ದೇಹ ಚಾಚ್ಕೊಂಡು ರೆಸ್ಟ್ ತಗಳುವಾ ಅಂತ ಕೂತಿದ್ದೇ ತಡ ಎಲ್ರೂ ಕಾಲ್ ಕೆರ್ಕೊಳಕ್ ಶುರು, ಜಿಗಣೆಗಳು (ಮನುಷ್ಯನ ದೇಹದ ಬಿಸಿಗೇ ಇವು ಆಕರ್ಷಿಸಲ್ಪಡುತ್ತವೆ). ಜಿಗಣೆಗಳ ಪರಿಚಯ ಇಲ್ದೇ ವಿಶ್ವ, ತಮ್ಸ್ ಮತ್ತು ಅಕ್ಮಲ್ ಭಯಪಟ್ಟಿದ್ರು. ತಕ್ಷಣ ಅಲರ್ಟಾಗಿ ಬ್ಯಾಗಲ್ಲಿದ್ದ ನಿಂಬೆಹಣ್ಣು ಮತ್ತು ಡೆಟಾಲ್ ಲಿಕ್ವಿಡ್ ತೆಗ್ದು ಕೈಗೆ ಸುರ್ಕೊಂಡು ಕಾಲಿಗೆ ಸವರ್ಕೊಂಡ್ವಿ, ಆದ್ರೂ ಶೂ ಒಳಗೆಲ್ಲಾ ಇಣುಕಿ ಕಾಲ್ಬೆರಳುಗಳ ಸಂಧಿಯಲ್ಲಿ ಅವಿತು ಕಚ್ಚಿ ರಕ್ತ ಹೀರ್ತಿದ್ದ ಜಿಗಣೆಳನ್ನು ಕೈಯಿಂದ ಕಿತ್ತೊಗೆಯುತ್ತ ಅಲ್ಲಿಂದ ಓಟ...
ಮುಂದೆ ದಾರಿ ಕೆಲವೆಡೆ ಆಳೆತ್ತರದ ಹುಲ್ಲಿನಿಂದ ಮುಚ್ಚೋಗಿದ್ರೆ, ಮತ್ತೆ ಕೆಲವೆಡೆ ಬಿದಿರಿನ ಮೆಳೆಯೊಳಗೆ, ಕಲ್ಲು ಬಂಡೆಗಳ ಇಕ್ಕೆಲಗಳಲ್ಲಿ, ಶೋಲಾ ಕಾಡೊಳಗೆ ಹೆಣೆದುಕೊಂಡಿತ್ತು. ಶೋಲಾ ಕಾಡೊಳಗಿನ ದಾರಿ ತುಂಬಾ ತಣ್ಣಗಿತ್ತು. ಮಧ್ಯಾನದ ಊಟ ಮಿಸ್ಸಾಯ್ತು, ತಿಂಡಿ ತಿನಿಸುಗಳಷ್ಟೆ. ಲೋಬೋ ಹೌಸ್ನಿಂದ ಹೊರಟಾಗ ಕಂಡ ಕುದರೆಮುಖದ ತುದಿ ಶೋಲಾ ಮುಗೀಯುತ್ತಿದ್ದಂತೆ ಕಾಣದಾಗಿತ್ತು, ಸ್ವಲ್ಪ ಬಯಲು ದಾರಿ, ಮತ್ತೆ ಛಡಾವು. ಹೇಗೊ ದಾರಿ ಸವೆಸಬೇಕಾಗಿತ್ತು.
ತುಸು ವಾಲಿದ ಗೊಡೆಯಂತಿದ್ದ ದೊಡ್ಡ ಗುಡ್ಡದ ಬುಡಕ್ಕೆ ತಲುಪಿದೆವು, ‘ಈ ಗುಡ್ಡ ಹತ್ತಿದ್ರೆ ಮುಗೀತು, ಪೀಕ್ ಸಿಗುತ್ತೆ’ ಅಂತ ಪ್ರೇಮ್ ಎಲ್ರನ್ನೂ ಹುರಿದುಂಬಿಸ್ದ. ಕೆಲವರು ನಾ ಮುಂದೆ, ತಾ ಮುಂದೆ ಅನ್ಕಂಡ ಮುನ್ನುಗ್ಗಿದ್ರು. ಕೊನೆಗೆ ಅಲ್ಲಲ್ಲೆ ಏದುಸಿರು ಬಿಡ್ತಾ ಕೂತ್ರು. ಸುಮಾರು 1 ಕಿ.ಮೀ.ನಷ್ಟು ಎತ್ತರಕ್ಕೆ ಬುಸುಗುಡುತ್ತ ಹತ್ತಿದ್ಮೇಲೆ ವಿಶಾಲವಾದ ಹಸಿರು ಹಾಸಿಗೆಯಂತಿದ್ದ ಹುಲ್ಲು ‘ಬನ್ನಿ ನನ್ಮೇಲೆ ಹೊರಳಾಡಿ, ವಿಶ್ರಮಿಸಿಕೊಳ್ಳಿ’ ಎಂದು ಕರೆದಂತಿತ್ತು. ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಸುತ್ತಾ ನೋಡಿದೆವು, ನಾವು ಎಲ್ರಿಗಿಂತ್ಲೂ ಎತ್ರದಲ್ಲಿದ್ದೆವು, ನಮ್ಮ ಖುಷಿಗೆ ಪಾರವೇ ಇರ್ಲಿಲ್ಲ. ಅಲ್ಲಿಂದ ಅನತಿ ದೂರದಲ್ಲಿದ್ದ ಜಾಗವನ್ನ ತೋರಿಸಿ ಪ್ರೇಮ್, ‘ಅದೇ ಟೆಂಟ್ ಹಾಕೋ ಜಾಗ’ ಅಂದಾಗ ಎಲ್ರೂ ಬಿರುಸಿನಿಂದ ನಡೆಯಲೆತ್ನೆಸಿದೆವು. ಆಗ್ಲಿಲ್ಲ. ಎಲ್ಲಾ ಸುಸ್ತಾಗಿದ್ವಿ. ಟೆಂಟ್ ಹಾಕ್ಬೇಕಿದ್ದ ಸ್ಪಾಟ್ ತಲುಪಿದಾಗ ಗಂಟೆ ಐದಾಗಿತ್ತು. ನಮ್ಮ ಸ್ವಲ್ಪ ಎಡಕ್ಕೆ ಪಾತಾಳ, ಬಲಕ್ಕೆ ಕಾಡು. ಅಲ್ಲಿಯೇ ಕೊರೆಯುವ ನೀರಿನ ಸಣ್ಣದೊಂದು ತೊರೆ. ತೊರೆಯ ಕೊರೆವ ನೀರಿನ ರಸ್ನಾ ಕುಡಿದು ಎಲ್ರೂ ನೆರಳಡಿಯಲ್ಲಿ ಹಾಸಿಗೆಯಂತಿದ್ದ ತಣ್ಣನೆಯ ಬಂಡೆಗಳ ಮೇಲೆ ಸ್ವಲ್ಪ ಹೊತ್ತು ಉರುಳಿಕೊಂಡು ಎದ್ದು ಟೆಂಟ್ ಹಾಕಲು ಬೇಕಾದ ಕಂಬಗಳು, ಉರಿಸಲು ಸೌದೆ, ತರಗೆಲೆ ತರಲು ಕಾಡೊಳಗೆ ನುಗ್ಗಿದೆವು...
ಮುಂದುವರಿಯುವುದು...
ನನ್ನ ಆತ್ಮೀಯ ಪ್ರೇಮ್ ಸಾಗರ್ ಹುಟ್ಟಿದ ದಿನ ಇಂದು(ಮೇ, 5), ಬರ್ತಡೇ ಗಿಫ್ಟ್ ಈ ಬರಹ...
ಜ್ಞಾನ
ಈ ಬರಹಕ್ಕೆ ಸಂಬಂಧಿಸಿದ ಫೊಟೋಗಳು ‘ಸಂಪದ’ ದ ’ಇತ್ತೀಚಿನ ಚ್ತಿತ್ರಗಳು’ ಲ್ಲಿ...
http://sampada.net/image/25230
http://sampada.net/image/25231
http://sampada.net/image/25232
http://sampada.net/image/25233
http://sampada.net/image/25234
http://sampada.net/image/25235
ಪ್ರತಿಕ್ರಿಯೆ (3)