ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರಿಹರು
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ || ..285
ಇವರಿಂತೆ ಅವರಂತೆ ಎಂತಿರಲಿ ಏನಂತೆ
ಇರುವೆ ನೀನೆಂತೆ ಬಿಟ್ಟುಬಿಡು ಪರಚಿಂತೆ |
ಹುಳುಕನೆತ್ತಾಡದಿರು ಕೆಡುಕು ನಿನಗಂತೆ
ಕೊಟ್ಟಿಗೆಯ ಶುನಕ*ನಾಗದಿರು ಮೂಢ || ..286
[*ಕೊಟ್ಟಿಗೆಯ ಶುನಕ: ಕೊಟ್ಟಿಗೆಯಲ್ಲಿ ನಾಯಿ ಇದ್ದರೆ ಅದು ತಾನಂತೂ ಹುಲ್ಲು ತಿನ್ನುವುದಿಲ್ಲ, ಆದರೆ, ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ.]
*****************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (4)