ಉಪ್ಪಾಕೆ ಹಣ್ಣು
ಮೂರ್ಮನೆ ಕಾನಿನಲ್ಲಿ ಉಪ್ಪಾಕೆಹಣ್ಣು ತುಂಬಿದ್ದ ಮರ ಚೆನ್ನನಿಗೆ ಕಾಣಿಸಿದ್ದು ಮಧ್ಯಾಹ್ನ ಎರಡೂವರೆ ಸಮಯದಲ್ಲಿ. ಬೆಳಿಗ್ಗೆಯಿಂದ ಅಲೆದು ಅಲೆದು ತಲೆಬಿಸಿಯಾಗಿತ್ತು. ವಾರದ ಹಿಂದಷ್ಟೇ ಗಜ್ಜೆಗಟ್ಟಲೆ ಕಾಯಿ ಜೋತುಬಿದ್ದಿದ್ದ ಉಪ್ಪಾಕೆ ಮರಗಳೆಲ್ಲಾ ಬೋಳು ಬೋಳಾಗಿತ್ತು. ಮಳೆ ಸ್ವಲ್ಪ ಕಡಿಮೆಯಾದ ಕೂಡಲೆ ಕೊಯ್ದರಾಯಿತೆಂದು ಹಾಗೆಬಿಟ್ಟು ಹೋಗಿದ್ದು ತಪ್ಪು ಅಂತ ಈಗ ಅನಿಸಿತು. ಒಂದೂ ಮರವನ್ನು ಬಿಡದೆ ಎಲ್ಲವನ್ನೂ ಕೊಯ್ದಿದ್ದ ಕೆಲಸ ಯಾರದ್ದಿರಬಹುದೆಂದು ಯೋಚಿಸಿದ. ಊರಲ್ಲಿ ಯಾರ ಮನೆಯಲ್ಲಿಯೂ ಹೊಗೆ ತಟ್ಟಿಗೆ ಬೆಂಕಿ ಹಾಕಿ ಸಿಪ್ಪೆ ಒಣಗಿಸಿದ್ದು ಕಾಣಿಸಿರಲಿಲ್ಲ. ಹಾಗಾಗಿ ಇದು ಕಾನ್ಮನೆ ಊರಿನವರದ್ದೇ ಯಾರದೋ ಕೆಲಸ ಅಂದುಕೊಂಡ.
ತಥ್ ಇವ್ರ ಕೆಲ್ಸಕ್ಕಿಷ್ಟು ಬೆಂಕಿಹಾಕ, ಹಣ್ಣು ಕೊಯ್ದಿದ್ರೆ ಬೇಜಾರು ಇರ್ಲಿಲ್ಲ ದರಿದ್ರದೋವ್ರು ಕಾಯಿನೂ ಕೊಯ್ದು ಹಾಳು ಮಾಡಿದಾರೆ ಎಂದು ತನ್ನಷ್ಟಕ್ಕೆ ಶಪಿಸಿಕೊಳ್ಳುತ್ತಾ ಮನೆಕಡೆ ಹೊರಟವನಿಗೆ ಕನ್ನರ್ಸೆ ಭಟ್ಟರ ತೋಟಕ್ಕಿಳಿಯುವ ಸೊಪ್ಪಿನ ಬೆಟ್ಟದ ಅಂಚಿನಲ್ಲಿ ಒಂದು ಉಪ್ಪಾಕೆ ಮರದಲ್ಲಿ ಗೊಂಚಲು ಗೊಂಚಲು ಹಣ್ಣುಗಳು ಜೋತುಬಿದ್ದಿದ್ದು ಕಾಣಿಸಿತು. ಅಬ್ಬಾ ಅಂತೂ ಒಂದು ಮರವನ್ನಾದರೂ ಬಿಟ್ಟಿದಾರಲ್ಲ ಬೇವರ್ಸಿ ನನ್ನ ಮಕ್ಕಳು ಎಂದುಕೊಳ್ಳುತ್ತಾ ಮರಹತ್ತಿ ಇಡೀ ಮರವನ್ನು ಅಲುಗಾಡಿಸಿದ.
ನೂರಾರು ಉಪ್ಪಾಕೆ ಹಣ್ಣು ಬಡಬಡ ಸದ್ದು ಮಾಡುತ್ತಾ ಕೆಳಗೆ ಬೀಳತೊಡಗಿತು. ಒಮ್ಮೆ ಚೀಲ ತುಂಬಿ ಮತ್ತೆ ಉಳಿದದ್ದನ್ನು ಕೊಯ್ದರಾಯಿತು ಎಂದು ಮರದಿಂದ ಕೆಳಗಿಳಿದು ಬಿದ್ದ ಹಣ್ಣು ಆರಿಸಿ ಚೀಲ ತುಂಬತೊಡಗಿದ. ಉಪ್ಪಾಕೆ ಹಣ್ಣು ಚೀಲ ತುಂಬಿದಂತೆಲ್ಲಾ ಬಸವಿಯ ಮಾತು ನೆನಪಾಯಿತು. ಅವತ್ತು ಅಲ್ಲಾ ಆ ದರಿದ್ರ ರಂಡೆ ಮೂರ್ಮನೆ ಕಾನಾಗೆ ಒಂದಾರು ಉಪ್ಪಾಕೆ ಮರ ಐತನಾ? ಎಂದು ನನಗೆ ಸವಾಲು ಹಾಕಿದ್ಲಲ್ಲ, ಇವತ್ತು ಸಿಕ್ಕಿದ್ರೆ ಮಂಡೆಜುಟ್ಟ ಹಿಡ್ದು ತೋರಿಸಬಹುದಿತ್ತು, ಇವತ್ತು ಮನೆಗೆ ಹೋಗಿ ಚೀಲತುಂಬಿದ ಉಪ್ಪಾಕೆ ಹಣ್ಣು ತೋರಿಸಿದರೆ ಹೊಟ್ಟೆಯುರಿಸಿದಂಗೂ ಆಗಿ ತಾನೂ ಗೆದ್ದಂತೆ ಆಗುತ್ತದೆ ಎಂದು ಆಲೋಚಿಸುತ್ತಾ ಒಂದು ಬಾರಿ ಚೀಲವನ್ನು ಎತ್ತಿ ನೆಲಕ್ಕೆ ಕುಕ್ಕರಿಸಿದ.
ಉಪ್ಪಾಕೆ ಮರದ ಕೆಳಗಡೆ ಮಾಗಿದ ಹಣ್ಣು ಬಿದ್ದು ಕೊಳೆತು ಕೆಲವು ಬೀಜಗಳು ಮೊಳಕೆ ಹೊರಬರುತ್ತಿದ್ದುದನ್ನು ಕಾಣಿಸಿತು. ಆವಾಗ,
ಚೆನ್ನಾ ನೀನು ಉಪ್ಪಾಕೆಹಣ್ಣಿಗೆ ಹೋದಾಗ ನಂಗೆ ಒಂದೈವತ್ತು ಹಣ್ಣು ತಂದು ಕೊಡು ಎಂದು ಮೋಹನ ಭಟ್ರು ಹೇಳಿದ್ದು ನೆನಪಾಯಿತು. ಅಷ್ಟು ಹಣ್ಣು ಎಂತಕ್ರಾ? ಎಂದು ಕೇಳಿದ್ದಕ್ಕೆ,
ನಂಗೇನು ಚೆನ್ನಾಗಿರೋ ಹಣ್ಣೇ ಬೇಕು ಅಂತೇನೂ ಇಲ್ಲ ಕೊಳೆತದ್ದಾದ್ರೂ ಅಡ್ಡಿಯಿಲ್ಲ, ನೀನೇನು ಪುಗ್ಸಟ್ಟೆ ಕೊಡೋದು ಬ್ಯಾಡಾ ಮಾರಾಯ ದುಡ್ಡು ಕೊಟ್ತೇನೆ ಅಂದಿದ್ದರು.
ಥೋ ದುಡ್ಡಿನಸುದ್ದಿ ನಿಮ್ಮತ್ರ ಕೇಳ್ಳಿಲ್ಲ ಹಣ್ಣು ಎಂತಕೆ ಅಂದೆ ಅಷ್ಟೆಎಂದಿದ್ದ ಚೆನ್ನ. ಅದಕ್ಕೆ ಮೋಹನಭಟ್ರು ಬೀಜ ನೆಟ್ಟು ಗಿಡ ಮಾಡೋದಕ್ಕೆ ಎಂದಿದ್ದರು.
ಪ್ರತೀ ವರ್ಷ ಕಾಡಾಗೆ ಸಾವ್ರಗಟ್ಲೆ ಬೀಜ ಬಿದ್ದು ಗಿಡ ಹುಟ್ಟಿ ಸಾಯ್ತಾವೆ, ಅದ್ನೆ ಕೇಳೊರಿಲ್ಲ, ಇನ್ನು ನೀವು ಗಿಡ ಮಾಡಿದ್ರೆ ಯಾರು ತಗಳ್ತಾರೆ ಚೆನ್ನ ಎಂದಾಗ.
ನಿಂಗೆ ತಗೋಳೋರು ಇದಾರೋ ಇಲ್ವೋ ಅದೆಲ್ಲಾ ಯಾಕೆ? ನಮ್ಮ ತೋಟದ ಬದುವಿನಲ್ಲಿ ನೆಡೋದಕ್ಕೆ ಬೇಕು, ನಿನ್ನ ಕೈಲಿ ತಂದುಕೊಡಕೆ ಆಗತ್ತಾ ಇಲ್ವಾ ಅಷ್ಟು ಹೇಳು ಎಂದು ಸಿಟ್ಟಿನಿಂದ ಹೇಳಿದ್ದರು.
ಚೆನ್ನನಿಗೆ ಆವಾಗಲೆಲ್ಲಾ ಈ ಹವ್ಯಕ ಬ್ರಾಹ್ಮಣರ ತಲೆಯಲ್ಲಿ ಹುಚ್ಚು ಸೇರಿಕೊಂಡಿದೆ ಅಂತ ಅನ್ನಿಸುತ್ತಿತ್ತು. ಯಾರಿಗೂಬೇಡದ ಕೆಲಸ ಮಾಡೋದೆ ಇವರ ಜಾಯಿಮಾನ ಅಂತಕಾಣ್ತೈತಿ. ಊರಲ್ಲಿರೋ ಗಿಡಗಳಿಗೆ ಗೊಬ್ರ ಹಾಕೋಕೇ ಜನ ಇಲ್ಲ, ಎಲ್ಲಾ ಓದಿ ಪ್ಯಾಟೆ ಸೇರಿದಾರೆ. ಇನ್ನು ಈ ತರಹ ಸುಮ್ನೆ ಕಾಡಲ್ಲಿ ಹುಟ್ಟಿ ತನ್ನಷ್ಟಕ್ಕೆ ಬೆಳೆದು ಚೀಲದ ತುಂಬಾ ಹಣ್ಣು ಬಿಡೋ ಉಪ್ಪಾಕೆ ಗಿಡಕ್ಕೆ ಇವರೆಲ್ಲಾ ಯಾಕೆ ಒದ್ದಾಟ ಮಾಡಿ ತಮ್ಮ ತೋಟದೊಳಗೆ ನೆಟ್ಟು, ಅದಕ್ಕೆ ಗೊಬ್ರಹಾಕಿ ಔಷಧಿ ಹೊಡ್ದು, ಕೊನೆಗೆ ಲಾಭ ಇಲ್ಲ ಅಂತ ಗೊಣಗ್ತಾರೆ ಅನ್ನೋದೆ ಅರ್ಥ ಆಗುತ್ತಿರಲಿಲ್ಲ. ಅಷ್ಟಕ್ಕೂ ಉಪ್ಪಾಕೆಹಣ್ಣು ಬೇಕು ಅಂತಾದರೆ ಬೆಳಗ್ಗೆ ಎದ್ದು ಕಾಡಿಗೆ ಹೋದ್ರಾತು. ತಲೆಮೇಲೆ ಹೊರೋಷ್ಟು ಕೊಯ್ದುಕೊಂಡು ಮನೆ ಸೇರಿದ್ರಾತು. ಸುಲುಭದ ಕೆಲಸಕ್ಕೆ ಪುಸ್ತಕ ಹಿಡ್ಕಂಡು, ತಲೆ ಕೆಡಿಸ್ಕಂಡು, ಅದೆಂತದೊ ಗೊಬ್ರಔಷಧಿಯಂತ ಯಾಕೆ ದುಡ್ಡು ಹಾಳುಮಾಡ್ಕೋಬೇಕು ಚೆನ್ನನಿಗೆ ಅನ್ನಿಸಿತು.
ಚೆನ್ನನಿಗೆ ರಾಗುಭಟ್ರ ನೆನಪಾದ್ದು ಆವಾಗಲೆ. ಅವರದ್ದು ಮತ್ತೊಂದು ತರ. ಒಂದಷ್ಟು ದಿವಸ ಒಂದೊಂದು ವೇಷ, ಕೈಯಾಗೆ ಫೋನು, ಕುಂಡೆಗೆ ಕಾರು ಇದ್ದರೂ ಅದೇನೋ ಜೇನು ಸಾಕ್ತೀನಿ ಅಂತ ಹೊರಟಿರುವುದು ಚೆನ್ನನಿಗೆ ಅವರು ಸ್ವಲ್ಪ ಯಡವಟ್ಟು ಅನ್ನಿಸಿತ್ತು. ಜೇನುತುಪ್ಪ ಬೇಕು ಅಂದಾಗ ಕಾಡಲ್ಲಿ ಆರಾಮಾಗಿ ಸಿಗುವ ಜೇನಿಗೆ, ಸಾವಿರಾರು ರೂಪಾಯಿ ಖರ್ಚುಮಾಡಿ ಪೆಟ್ಟಿಗೆ ತಂದು ಹಗಲು ರಾತ್ರಿ ಒದ್ದಾಡಿ, ಅದು ಹೀಗೆ ಇದು ಹಾಗೆ ಎಂದು ಉದ್ದುದ್ದ ಭಾಷಣ ಬಿಗಿಯುತ್ತಾ ಯಾಕೆ ಒದ್ದಾಡುತ್ತಾರೆ, ದೇವರು ಅವರಿಗೆ ಹಾಸಿ ಹೊದೆಯುವಷ್ಟು ಕೊಟ್ಟಿದ್ದರೂ ಮೈ ಮುಖ ಎಲ್ಲಾ ಜೇನು ಹೊಡೆಸಿಕೊಂಡು ಅಲೆಯೋದ್ಯಾಕೆ? ಎಂಬಂತ ಪ್ರಶ್ನೆಗಳು ಮೂಡುತ್ತಿದ್ದರೂ ಉತ್ತರ ಕಂಡುಕೊಳ್ಳಲಾಗಿರಲಿಲ್ಲ.
ಅವರೇನಾದರೂ ಮಾಡಿಕೊಳ್ಳಲಿ ಆದರೆ ತನ್ನನ್ನು ಕಂಡಾಗಲೆಲ್ಲಾ ಚೆನ್ನಾ ಎಲ್ಲಾದ್ರೂ ಒಂದು ಜೇನ್ ಕಂಡಿದ್ದೀಯಾ ಎಂದು ಪ್ರಶ್ನೆ ಕೇಳಿದಾಗಲೆಲ್ಲಾ ಮೈ ಉರಿಯುತ್ತಿತ್ತು. ಖರ್ಚಿಗೆ ಐವತ್ತುರೂಪಾಯಿ ಕೊಡಿ ಅಂದ್ರೆ ಅದ್ಯಾವಾಗ್ಲೋ ತನಗೆ ಕೊಟ್ಟಿದ್ದ ನೂರುರೂಪಾಯಿ ನೆಪಹೇಳಿ ಅದರಹಂಗೆ ಮಾಡ್ಬೇಡ ಎಂದು ಹಂಗಿಸುತ್ತಾ ದುಡ್ಡು ಕೊಡೋ ಭಟ್ರಿಗೆ ನಾನು ಪುಗಸಟ್ಟೆ ಜೇನು ಯಾಕೆ ಹುಡುಕಿ ಕೊಡಬೇಕು ಅಂತ ಅನ್ನಿಸುತ್ತಿತ್ತು. ಆದರೆ ಅವರ ಎದುರು ಅನ್ನಲಾಗದೆ ಏನಾದರೂ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದುದು ನೆನಪಾಗಿ ಒಳಗೊಳಗೆ ನಗುಬಂತು. ಒಟ್ಟಿನಲ್ಲಿ ಅದೆಲ್ಲಾ ಅವರ ಹಣೆಬರಹ, ಯಾರ ಕೈಯಲ್ಲೂ ತಪ್ಪಿಸೋಕಾಗಲ್ಲ ಎಂದು ಆಲೋಚಿಸುತ್ತಾ ಚೀಲದ ಬಾಯಿ ಕಟ್ಟುತ್ತಿದ್ದ ಚೆನ್ನನಿಗೆ ಅಯ್ಯಯ್ಯೋ... ಅಯ್ಯಯ್ಯ್ರೋ ಎಂದು ದೂರದಲ್ಲಿ ಯಾರೋ ಕೂಗಿದಂತೆ ಕೇಳಿಸಿತು. ಮತ್ತೆ ಅತ್ತ ಕಡೆ ಕಿವಿಗೊಟ್ಟು ಆಲಿಸಿದ ಅನಂತರ ಯಾವ ಸದ್ದೂ ಕೇಳಲಿಲ್ಲ. ಯಾರೋ ಸುಮ್ಮನೆ ಕೂಗಿರಬಹುದೆಂದು ಚೀಲ ತಲೆಯ ಮೇಲೆತ್ತಿಕೊಳ್ಳಲು ನೋಡಿದ. ಭರ್ಜರಿ ಭಾರವಾಗಿತ್ತು. ಯಾವುದೋ ಆಲೋಚನೆ ಮಾಡುತ್ತಾ ಹೊರಲಾರದಷ್ಟು ಹಣ್ಣುಗಳನ್ನು ಚೀಲ ತುಂಬಿಕೊಂಡದ್ದಕ್ಕೆ ತನ್ನನ್ನೇತಾನು ಶಪಿಸಿಕೊಂಡ. ಯಾರಾದರೂ ತಲೆಗೆ ಹೊರಿಸುವವರಿದ್ದರೆ ಅದೇನು ಹೊರಲಾರದ ಭಾರವಾಗಿರಲಿಲ್ಲವಾದರೂ ಒಬ್ಬನೇ ತಲೆಗೆ ತೆಗೆದುಕೊಳ್ಳುವುದು ಕಷ್ಟವಾಗಿತ್ತು. ಯಾರೋ ಮೂರ್ನಾಲ್ಕು ಜನ ಹೆಣ್ಣಾಳು ಕನ್ನರ್ಸೆಭಟ್ಟರ ತೋಟದ ಸೊಪ್ಪಿನ ಬೆಟ್ಟದ ದಾರಿಯಲ್ಲಿ ಹೋಗುತ್ತಿದ್ದುದು ಕಂಡು ಹೋಯ್ ಯಾರ್ರೋ ಅದು ಎಂದು ಕೂಗಿದ.
ನಾವು ಸೊಪ್ಪಿಗೆ ಹೋಗೋರು ಅವರೂ ಅಲ್ಲಿಂದಲೇ ಕೂಗಿದರು. ಅವರು ಕೆಳಗಡೆ ಇದ್ದಿದ್ದರಿಂದ ಮುಖ ಕಾಣಿಸುತ್ತಿರಲಿಲ್ಲ.
ಒಂಚೂರು ನಂಗೆ ಈ ಚೀಲ ತಲಿಗೆ ಎತ್ತಿ ಹೋಗ್ರಿ ಮತ್ತೆ ಕೂಗಿ ಹೇಳಿದ ಚೆನ್ನ.
ಇವನ ದನಿ ಕೇಳಿ ಅವರು ಇತ್ತ ಕಡೆಯೇ ಬಂದರು. ಹತ್ತಿರ ಬಂದಾಗ ನೋಡುತ್ತಾನೆ, ಬಸವಿ ಮತ್ತೆ ಇಬ್ಬರು ಕಾನ್ಮನೆಯ ಹೆಂಗಸರು.
ಏಯ್ ಚೆನ್ನಣ್ಣ ನೀನು ಇಲ್ಲೇ ಇದೀಯನಾ, ರಾಗು ಭಟ್ರು ನಿನ್ನ ಹುಡುಕ್ತಾ ಇದ್ರು, ನೀನು ಎಲ್ಲಾದ್ರೂ ಕಂಡ್ರೆ ನಾಣಸ್ವಾಮಿ ಭಟ್ರ ಸೊಪ್ಪಿನ ಬೆಟ್ಟದ ಹತ್ರ ಬರಕೆ ಹೇಳು ಅಂದ್ರು ಬಸವಿ ಚೆನ್ನನ ಬಳಿ ಹೇಳಿದಳು.
ಅವ್ರು ಸತ್ರು, ಅವ್ರಿಗೆ ಬೇರೆ ಕೆಲ್ಸ ಇಲ್ಲ
ಏ ಹಂಗೆಲ್ಲಾ ಎಂತ ಕೆಟ್ಟ ಮಾತಾಡ್ತೀಯಾ, ಅವರು ನಿಂಗೆ ಎಂತ ಮಾಡಿದಾರ
ನಂಗೆಂತ ಮಾಡ್ತಾರೆ, ಮತ್ತೆಂತೆ, ಹಗಲೂ ರಾತ್ರಿ ಜೇನು ಕೂಡಿಕೊಡು, ಹುಡುಕಿ ಕೊಡು ಅಂತ ರಗಳೆ. ನೀವೆತ್ಲಾಗೆ ಹೊಂಟ್ರಿ?
ಚೆನ್ನ ಮತ್ಯಾವ ಸಮಯವಾಗಿದ್ದರೂ ಆವತ್ತು ಬಸವಿ ಮೂರ್ಮನೆ ಕಾನಿನಲ್ಲಿ ಉಪ್ಪಾಕೆಮರ ಇಲ್ಲ ಎಂದಿದ್ದನ್ನು ಹೇಳಿ ಕ್ಯಾತೆ ತೆಗೆಯುತ್ತಿದ್ದ. ಆದರೆ ಈಗ ಮತ್ತೆ ಜಗಳವಾದರೆ ತಲೆಗೆ ಮೂಟೆ ಹೊರಿಸಲು ಯಾರೂ ಇರಲಿಲ್ಲ, ಹಾಗಾಗಿ ಆವತ್ತಿನ ಜಗಳದ ವಿಚಾರ ಇಬ್ಬರೂ ಮರೆತು ವಿಶ್ವಾಸಿಕರಂತೆ ನಡೆದುಕೊಂಡರು.
ಹೆಗಡೇರ ಮನೆ ಗೊಬ್ಬರದ ಗುಂಡಿಗೆ ಸೊಪ್ಪು ಹಾಕ್ತಾ ಇದೀವಿ, ಪಾಪ ಅಲ್ಲಿ ಜೇನು ಹಿಡಿಯಾಕೆ ಆಗ್ದೆ ಒದ್ದಾಟ ಮಾಡ್ತಾ ಇದಾರೆ ಬೇಗ ಹೋಗ ಮಾರಾಯ
ಅಡ್ಡಿಲ್ಲಾ ಹೋಗ್ತೀನಿ, ಸ್ವಲ್ಪ ಈ ಚೀಲ ತಲೆಗೆ ಎತ್ತು ಎಂದು ಬಗ್ಗಿದ, ಚೀಲ ತಲೆಗೆ ಎತ್ತಲು ಬಂದ ಬಸವಿಯ ಬಳಿ,
ಅದೇನೆ ಇವತ್ತು ಅಪರೂಪಕ್ಕೆ ಹೆಂಗಸರ ಜತೆ ಮಾಡ್ಕೊಂಡು ಹೊಂಟೀದೀಯಲ್ಲ? ಎಂದು ಸಣ್ಣದಾಗಿ ಹೇಳಿದ.
ನಿಂಗೆ ಯಾವಾಗ್ಲೂ ತಮಾಸಿ, ಅಲ್ಲಿ ಊರಲ್ಲಿ ಹೆಣ್ತಿ ಎದುರು ಪೌರುಸ ನೋಡಿದ್ರೆ ಬಡದು ಬುಡಾನಾ ಅನಿಸ್ತದೆ ಎನ್ನುತ್ತಾ ಉಪ್ಪಾಕೆ ಚೀಲವನ್ನು ಚೆನ್ನನ ತಲೆಯ ಮೇಲೆ ಇಟ್ಟು ಏ ದರಿದ್ರದವನೇ ಕನ್ನರ್ಸೆ ಭಟ್ರಮನೆ ಸೊಪ್ಪಿನ ಬೆಟ್ಟದ ದಾರ್ಯಾಗೆ ಹೋಗು, ಪಾಪ ಜೇನು ಹಿಡಿಯ್ಯಕ್ಕೆ ಆಗದೆ ಒದ್ದಾಡ್ತಾ ಇದಾರೆ ಎಂದು ಕೂಗಿ ಹೇಳಿದಳು ಬಸ್ವಿ.
ಚೆನ್ನ ತಲೆಯ ಮೆಲೆ ಉಪ್ಪಾಕೆ ಹಣ್ಣಿನ ಚೀಲ ಹೊತ್ತುಕೊಂಡು ಜೇನು ಪೆಟ್ಟಿಗೆಗೆ ಕೂಡಿಸುತ್ತಿದ್ದ ಜಾಗಕ್ಕೆ ಬರುವಷ್ಟರಲ್ಲಿ ದೂರದಿಂದ ಯಾರೋ ಯಾರನ್ನೋ ಹಿಡಿದು ಮಲಗಿಸುತ್ತಿದ್ದುದ್ದನ್ನು ಹಾಗು ಮತ್ಯಾರೋ ಕೆಳಗಡೆ ಓಡುತ್ತಿರುವುದನ್ನು ಕಂಡ. ಉಪ್ಪಾಕೆ ಚೀಲ ಅಲ್ಲಿಯೇ ಇಳಿಸಿ ಅತ್ತ ಕಡೆ ಓಡಿದ.
* * * * *
ಹೊಗೆ
ನಾನು ಚೆನ್ನನ ಮನೆಯಿಂದ ಕನ್ನರ್ಸೆಗೆ ಬರುವಷ್ಟರಲ್ಲಿ ನಾರಾಯಣಸ್ವಾಮಿ ನನ್ನ ಬರುವಿಕೆಯನ್ನೇ ಕಾಯುತ್ತಿದ್ದ. ಮಧ್ಯಾಹ್ನ ನಾನು ಹೊರಡುವಾಗ ಅವನಲ್ಲಿದ್ದ ನಿರುತ್ಸಾಹ ಮಾಯವಾಗಿದ್ದಂತೆ ತೋರಿತು. ಕೆ.ಇ.ಬಿ.ಯವರಿಗೆ ಫೋನ್ಮಾಡಿ ಕರೆಂಟ್ ಲೈನ್ ಆಫ್ ಮಾಡಿಸಿಕೊಂಡು ಅಕೇಶಿಯಾ ಮರವನ್ನು ಕಡಿದು ಬಂದು ಕುಳಿತಿದ್ದ. ಕಳೆದುಹೋಗಿದ್ದ ಕತ್ತಿ ಸಿಕ್ಕಿತೆಂದು ಹೇಳಿದ. ಅದು ಸುಮಾರು ನೂರು ಅಡಿ ಆಚೆ ಬಿದ್ದಿತ್ತಂತೆ.
ಜೇನು ಪೆಟ್ಟಿಗೆ ಸಮೇತ ಎಲ್ಲಾ ಪರಿಕರಗಳನ್ನು ಕಾರಿನಿಂದ ಇಳಿಸಿ ಇಬ್ಬರೂ ಹಿಡಿದುಕೊಂಡು ಸೊಪ್ಪಿನ ಬೆಟ್ಟದ ಕಡೆ ಹೊರಟೆವು.
ರಾತ್ರಿಯಿಡೀ ಜಿಟಿಜಿಟಿ ಸುರಿದಿದ್ದ ಮಳೆ ಬೆಳಗ್ಗಿನಿಂದ ವಿರಾಮ ಪಡೆದಿತ್ತು. ಬಿಸಿಲು ಇರದಿದ್ದರೂ ಮಳೆ ಇರಲಿಲ್ಲ. ಹಾಗಾಗಿ ನಮ್ಮ ಕೆಲಸ ಅರ್ಧ ಸುಲಭವಾಗಿತ್ತು. ಮಳೆಯೇನಾದರೂ ಜೋರಾಗಿದ್ದರೆ ನಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿತ್ತು. ನನಗೆ ಅದೇನೋ ಒಂದು ದೊಡ್ಡ ಯುದ್ಧಕ್ಕೆ ಹೊರಡುತ್ತಿದ್ದ ಅನುಭವ. ನಾರಾಯಣಸ್ವಾಮಿಗೂ ಇದು ಮೊದಲನೆ ಅನುಭವವಾದರೂ ನನ್ನಷ್ಟು ಉದ್ವಿಗ್ನನಾಗಿರಲಿಲ್ಲ. ಪುಸ್ತಕದಲ್ಲಿನ ಘಟನಾವಳಿ ಯನ್ನು ಓದಿದ್ದರಿಂದ ನನಗೆ ಹಾಗಾಗುತ್ತಿರಬೇಕು ಎಂದು ಅಂದಾಜಿಸಿದೆ. ಜೇನು ಹಿಡಿಯುವುದನ್ನು ನೋಡುವ ಕುತೂಹಲದ ಜೊತೆಗೆ ನನಗೆ ಉಪಕಾರ ಮಾಡುತ್ತಿದ್ದೇನೆಂದೂ ಆತ ಯೋಚಿಸುತ್ತಿದ್ದಂತೆ ನನಗೆ ಭಾಸವಾಯಿತು.
ಸಳ್ಳೆ ಮರದ ಹತ್ತಿರ ಎಲ್ಲಾ ಹತಾರಗಳನ್ನು ಇಟ್ಟು, ನಿಧಾನ ಮರದ ಪೊಟರೆ ಬಳಿ ಹೋದೆ. ಜೇನು ಅಲ್ಲಿ ವಾಸವಾಗಿರಲಿಲ್ಲವೇನೋ ಎಂಬಷ್ಟು ಕಡಿಮೆ ಪ್ರಮಾಣದಲ್ಲಿ ಒಂದೋ ಎರಡೋ ಜೇನ್ನೊಣ ಒಳಗೆ ಹೊರಗೆ ಓಡಾಡುತ್ತಿತ್ತು. ಬೆಳಿಗ್ಗೆ ಕಾಣಿಸಿದ ಬಿಳಿ ಬಣ್ಣದ ತತ್ತಿ ಕಾಣಿಸಲಿಲ್ಲ. ಯಾರಾದರೂ ಕಿತ್ತುಕೊಂಡು ಹೋಗಿಬಿಟ್ಟರೇನೋ ಎಂಬ ಅನುಮಾನದಿಂದ ಪೊಟರೆಯ ಬಳಿ ನಿಧಾನ ಕುಳಿತು ಇಣುಕಿದೆ. ಎಲ್ಲಾ ಸುರಕ್ಷಿತವಾಗಿತ್ತು. ಬಿಳಿ ತತ್ತಿ ಕಾಣದೇ ಇರುವುದಕ್ಕೆ ಕಾರಣ ಜೇನ್ನೊಣಗಳು ಅದರ ಮೇಲೆ ಕುಳಿತುಕೊಂಡಿದ್ದವು. ರಾಣಿ ಹುಳು ಎಲ್ಲಾದರೂ ಕಾಣಿಸಬಹುದಾ ಎಂದು ನೋಡಿದೆ, ಕತ್ತಲೆಯಲ್ಲಿ ಏನೂ ಕಾಣಿಸಲಿಲ್ಲ. ಆಗ ಪುಸ್ತಕದಲ್ಲಿನ ಪರಿಕರದ ಪಟ್ಟಿಯಲ್ಲಿ ಟಾರ್ಚ್ ಏಕೆ ಬರೆದಿದ್ದಾರೆ ಎಂದು ಅರ್ಥವಾಯಿತು. ನಾರಾಯಣಸ್ವಾಮಿ ಚೀಲದಲ್ಲಿದ್ದ ಟಾರ್ಚ್ ತಂದು ಕೊಟ್ಟ. ಬೆಳಕು ಪೊಟರೆಯೊಳಗೆ ಹೋದ ತಕ್ಷಣ ಸ್ಪಷ್ಟವಾಗಿ ಎಲ್ಲಾ ಗೋಚರಿಸತೊಡಗಿತು.
ಲಕ್ಷಾಂತರ ಜೆನ್ನೊಣಗಳು ತತ್ತಿಗೆ ಜೋತುಬಿದ್ದಿದ್ದವು. ಒಂದರ ಪಕ್ಕದಲ್ಲಿ ಒಂದರಂತೆ ಸಾಲಾಗಿ ಒಟ್ಟು ಏಳು ತತ್ತಿ ಇತ್ತು. ರಾಣಿನೊಣ ಹೊರಗಡೆ ನನಗೆ ಕಾಣಿಸುತ್ತಿದ್ದ ತತ್ತಿಯಲ್ಲಿ ಇರಲಿಲ್ಲ ಬಹುಶಃ ಒಳಗಡೆ ಸೇರಿಕೊಂಡಿರಬೇಕು. ಮರದ ಪೊಟರೆ ಅಗಲ ಅರ್ಧ ಅಡಿಗಿಂತ ಕಡಿಮೆಯಿತ್ತು. ಮೊದಲು ಅದನ್ನು ದೊಡ್ಡದು ಮಾಡಿಕೊಳ್ಳಬೇಕಿತ್ತು. ಕೈಕೊಡಲಿಯ ಮೂಲಕ ಬಹಳ ಎಚ್ಚರಿಕೆಯಿಂದ ಒಂದು ಪೆಟ್ಟನ್ನು ಪೊಟರೆಯ ಬಾಯಿಗೆ ಹೊಡೆದೆ. ಆದರೆ ಮರ ಲಡ್ಡಾಗಿದ್ದಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಹಾಗಾಗಿ ನಾನು ಅಷ್ಟೊಂದು ನಿಧಾನವಾಗಿ ಹೊಡೆದ ಹೊಡೆತವೂ ಹೆಚ್ಚಾಗಿ, ಕೊಡಲಿ ಒಳಗಡೆ ಹೋಗಿ ಜೇನು ತತ್ತಿಗೆ ತಾಕಿತು. ಮರದಬಾಯಿ ಯಾವ ಕಸರತ್ತು ಮಾಡದೆ ದೊಡ್ಡದಾಯಿತು. ಆದರೆ ತತ್ತಿಗೆ ಕೊಡಲಿಯ ಏಟು ಬಿದ್ದಿದ್ದರಿಂದ ಅದು ಅರ್ಧಕ್ಕೆ ತುಂಡಾಗಿ ಮರದೊಳಗೆ ಬಿತ್ತು. ಜೇನ್ನೊಣಗಳು ಒಮ್ಮೆಲೇ ಗಾಬರಿ ಬಿದ್ದು ಸೊಯ್ಯನೆ ಧಾಳಿ ಮಾಡಿದವು, ಕೊಡಲಿಯನ್ನು ಅಲ್ಲಿಯೇ ಕೈಬಿಟ್ಟು ನನಗೆ ಅರಿವಿಲ್ಲದಂತೆ ಕ್ಷಣಮಾತ್ರದಲ್ಲಿ ಅಲ್ಲಿಂದ ದೂರ ಓಡಿದೆ. ಆದರೂ ಒಂದು ಹುಳ ಕಣ್ಣುಹುಬ್ಬಿನ ಬಳಿ ಹೊಡೆಯಿತು. ನಾರಾಯಣಸ್ವಾಮಿಯ ಬಳಿ ಅಂಬನ್ನು ತೆಗೆಯಲು ಹೇಳಿದೆ. ಆದರೆ ಆತ ನಾನು ತಿರುಗಿ ಓಡಿದ್ದನ್ನು ನೋಡಿ ನನಗಿಂತ ಇನ್ನೂರು ಅಡಿ ದೂರ ಓಡಿಹೋಗಿ ನಿಂತಿದ್ದ. ಅವನು ನಾನಿದ್ದಲ್ಲಿಗೆ ಬರಲು ಒಪ್ಪದ ಕಾರಣ ನಾನೇ ಎಡಗೈಯಲ್ಲಿ ಹುಬ್ಬನ್ನು ತಿಕ್ಕಿಕೊಳ್ಳುತ್ತಾ ಅವನಿದ್ದಲ್ಲಿಗೆ ಹೋಗಿ ಅಂಬನ್ನು ತೆಗೆಸಿಕೊಂಡು ಸೊಪ್ಪಿನ ರಸ ಹಚ್ಚಿಕೊಂಡೆ.
ಏಯ್ ರಾಗಣ್ಣ ಜೇನು ಸಾಯ್ಲಿ, ಇದನ್ನ ಪೆಟ್ಟಿಗೆಯಲ್ಲಿ ಕೂಡ್ತೀನಿ ಅಂತ ಹೋದ್ರೆ ಕೈಕಾಲು ಮುರಿದುಕೊಳ್ಳಬೇಕಾಗುತ್ತೆ, ಸಾಕು ಮನೆಗೆ ಹೋಗೋಣ ಬಾ ಎಂದ ಸ್ವಾಮಿ.
ಥೋ ಇವೆಲ್ಲಾ ಮಾಮೂಲಿ ಬಾ ಮಾರಾಯ ಎಂದು ಬಹಳ ಅನುಭವಸ್ಥರ ತರಹ ಹೇಳಿ ಮತ್ತೆ ಮರದ ಪೊಟರೆಯ ಬಳಿ ಹೋದೆ.
ಬಿಳಿ ಬಣ್ಣದ ತತ್ತಿ ಈಗ ದೂರದಿಂದಲೇ ಕಾಣಿಸಿತು. ಎಲ್ಲಾ ಹುಳುಗಳು ತತ್ತಿಯನ್ನು ಬಿಟ್ಟಿದ್ದವು. ನಿಧಾನ ಕೊಡಲಿಯನ್ನು ಹೊರಗಡೆ ಎಳೆದೆ, ಅದರ ಬಾಯಿಗೆ ಕಚ್ಚಿಕೊಂಡ ತತ್ತಿ ಸಮೇತ ಕೊಡಲಿ ಆಚೆ ಬಂತು. ಒಂದೆರಡು ಹುಳು ಅದರ ಮಧ್ಯೆ ಸಿಕ್ಕಿ ಸತ್ತುಹೋಗಿತ್ತು. ಅವನ್ನು ನೋಡಿದ ನನಗೆ ಯುದ್ದಗಳಲ್ಲಿ ಪ್ರಾಣತ್ಯಾಗ ಮಾಡಿದ ವೀರಯೋಧರ ನೆನಪಾಯಿತು. ಅವುಗಳಲ್ಲಿಯೂ ಮಾಹಿತಿ ವಿನಿಮಯದ ತಂತ್ರಜ್ಞಾನವಿದ್ದಿದ್ದರೆ ವೀರ ಯೋಧರ ದುರ್ಮರಣ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಬರುತ್ತಿತ್ತೇನೋ. ನಿಧಾನ ತತ್ತಿಯನ್ನು ಕೊಡಲಿಯಿಂದ ಬೇರ್ಪಡಿಸಿದೆ, ತತ್ತಿ ತೀರಾ ಅಚ್ಚ ಬಿಳಿ ಬಣ್ಣದ್ದಾಗಿರಲಿಲ್ಲ, ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿತ್ತು. ತತ್ತಿಯ ಮೇಲ್ಭಾಗದಲ್ಲಿ ಒಂದು ಸಾಲಿನಲ್ಲಿ ಮಾತ್ರ ಸ್ವಲ್ಪ ತುಪ್ಪ ಇತ್ತು. ಮೊದಲ ಬಾರಿ ಇಷ್ಟೊಂದು ಹತ್ತಿರದಿಂದ ಜೇನುತತ್ತಿ ನೋಡಿದ ನನಗೆ ಅದರ ವಿನ್ಯಾಸ ಕಂಡು ಜೇನಿನ ಕೌಶಲ್ಯದ ಬಗ್ಗೆ ಅಪಾರ ಮೆಚ್ಚುಗೆಯನ್ನು ಮೂಡಿಸಿತು. ಷಟ್ಕೋನದ ಆಕೃತಿಯ ನೂರಾರು ಕೋಣೆಗಳು ಸಾಲಾಗಿ ನಿರ್ಮಿಸಲ್ಪಟ್ಟಿದ್ದವು. ದೂರದಿಂದ ನೋಡಿದರೆ ಸಣ್ಣ ಸಣ್ಣತೂತಿನಂತೆ ಕಾಣುವ ಅವು ಪ್ರತಿಯೊಂದೂ ಕರಾರುವಕ್ಕಾಗಿ ಒಂದೇ ಅಳತೆಯಲ್ಲಿದ್ದಿದ್ದನ್ನು ಕಂಡು ಜೇನು ನೊಣಗಳಲ್ಲಿನ ಇಂಜನಿಯರ್ಗಳಿಗೆ ನನಗರಿವಿಲ್ಲದಂತೆ ದೊಡ್ದದಾಗಿ ಶಭಾಷ್ ಎಂದೆ.
ನನ್ನಷ್ಟಕ್ಕೆ ಮಾತನಾಡಿದ್ದನ್ನು ಕೇಳಿದ ಸ್ವಾಮಿ ಏನಾಯಿತಾ? ಎಂದ.
ಇಲ್ಲ ಏನಿಲ್ಲ ಎಂದು ತತ್ತಿಯನ್ನು ನೋಡಲು ಅವನಿಗೆ ಕೊಟ್ಟೆ. ಈಗ ಅವನಿಗೂ ಸ್ವಲ್ಪ ಧೈರ್ಯ ಬಂದಿತ್ತು ಹಾಗಾಗಿ ನನ್ನ ಮಾತು ಕೇಳುವಷ್ಟು ಹತ್ತಿರ ಬಂದು ನಿಂತುಕೊಂಡಿದ್ದ. ಬಹಳಷ್ಟು ಜೇನುಗಳು ಪೊಟರೆಯ ಬಾಯಿಯಲ್ಲಿ ಹಾರಾಡತೊಡಗಿದ್ದವು. ಆದರೆ ವಿಚಿತ್ರವೆಂದರೆ ಒಂದು ಹುಳವೂ ನನ್ನನ್ನು ಹೊಡೆಯುತ್ತಿರಲಿಲ್ಲ. ಜೊಂಯ್ ಎಂದು ಸದ್ದು ಮಾಡುತ್ತಾ ಒಳಗೂ ಹೊರಗೂ ಓಡಾಡತೊಡಗಿದ್ದವು. ಅವು ಯಾವುದೋ ಸುದ್ದಿಯನ್ನು ವಿನಿಮಯ ಮಾಡುತ್ತಿರುವಂತೆ ನನಗೆ ಅನಿಸಿತು. ಇನ್ನು ಹೆಚ್ಚು ಸಮಯ ವ್ಯರ್ಥ ಮಾಡಿದರೆ ಬೆಳಗಿನಿಂದ ಗಾಬರಿಯಾಗಿದ್ದ ಇಡೀ ಕುಟುಂಬ ಪರಾರಿಯಾಗಬಹುದೆಂದು, ರಾಣಿನೊಣ ಹುಡುಕಲು ಟಾರ್ಚ್ ತೆಗೆದುಕೊಂಡು ಪೊಟರೆಯೊಳಗೆ ಬೆಳಕು ಬಿಟ್ಟೆ. ಎಲ್ಲಾ ಜೇನು ನೊಣಗಳು ತತ್ತಿಯನ್ನು ಬಿಟ್ಟು ಸ್ವಲ್ಪ ದೂರದಲ್ಲಿ ತೊಪ್ಪೆಯಾಗಿ ಒಂದೆಡೆ ಕುಳಿತುಕೊಂಡಿದ್ದವು. ಅವುಗಳಲ್ಲಿ ರಾಣಿನೊಣವನ್ನು ಪತ್ತೆ ಮಾಡುವುದು ಅಸಾಧ್ಯದ ಮಾತಾಗಿತ್ತು. ಹಾಗಾಗಿ ಸ್ಟೀಲಿನ ಸೌಟನ್ನು ಬಳಸುವ ವಿಧಾನವನ್ನು ಪ್ರಯೋಗಿಸಲು ತೀರ್ಮಾನಿಸಿ ಕೂಡು ಪೆಟ್ಟಿಗೆಯನ್ನು ಪೊಟರೆಯ ಬಾಯಲ್ಲಿ ಇಟ್ಟು ನಿಧಾನವಾಗಿ ಸೌಟನ್ನು ಪೊಟರೆಯೊಳಗೆ ತೂರಿಸಿ ಜೇನುಹುಳು ಕುಳಿತಲ್ಲಿಗೆ ಸೌಟನ್ನು ಆನಿಸಿ ಹಿಡಿದು ಸ್ವಲ್ಪ ಮೇಲಕ್ಕೆ ಎತ್ತಿ ನಂತರ ಹೊರಗಡೆ ಎಳೆದುಕೊಂಡೆ. ಸೌಟಿನ ತುಂಬಾ ಹುಳುಗಳು ಬಂದಿದ್ದವು.
(ಮುಂದುವರೆಯುತ್ತದೆ)
ಪ್ರತಿಕ್ರಿಯೆ (3)