ಕನಸಿನ ಅರಮನೆ
ಬೆಳ್ಳಿಯ ಮೋಡದ ಸಂಗದಿ ನಿನ್ನಯ
ಚೆಲುವನು ಸವಿಯಲು ಹೊರಟಿರುವೆ
ಇಬ್ಬನಿ ತಬ್ಬಿದ ನನ್ನಯ ಹಳ್ಳಿಯ
ತಂಪನು ಜೊತೆಯಲಿ ತಂದಿರುವೆ.
ಶಿಶಿರದ ಚುಮುಚುಮು ಚಳಿಯಲಿ ಚಂಚಲ
ನಯನದ ಬೆಚ್ಚನೆ ಮನೆಯೊಳಗೆ
ಚಂದ್ರನ ಬೆಳಕಿನ ತಂಪಿನ ಸಿಂಚನ
ನಿನ್ನಯ ಸ್ಪರ್ಶವೆ ನನ್ನೆದೆಗೆ.
ತಾರೆಯ ಲೋಕದಿ ತೇಲುತ ಕಳೆಯುವ
ನಾಳೆಯ ಕನಸಿನ ಹೂಬನವ
ಸೃಷ್ಟಿಯ ಸುಂದರ ಪ್ರೀತಿಯ ಕಾವ್ಯವ
ಸವಿಯುವ ಜೊತೆಯಲಿ ಜೀವನವ.
ನೇಸರನಾಚಿನ ಕೆಂಪಿನ ವರ್ಣವೂ
ನಾಚುವ ಕಿತ್ತಳೆ ಕದಪುಗಳು
ಸವಿಯುತಲಿದ್ದರೂ ಮಾಸದ ನೋವಿನ
ಸುಮಧುರ ಘಳಿಗೆಯ ನೆನಪುಗಳು.
ಕನಸಿನ ಅರಮನೆಯಾಚಿನ ಲೋಕದ
ಮುಗಿಯದ ವೇದನೆ ವಿಸ್ತಾರ
ಭ್ರಾಮಕ ಲೋಕದಿ ಕಳೆಯುವೆ ಮನಸಿನ
ವಿರಹದ ಭಾವನೆಗಳ ಭಾರ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!