ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ
ಅಯ್ಯಾ
ನೆನಹಿಂಗೆ ಬಾರದುದ ಕಾಂಬುದು ಹುಸಿ
ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲನಿಲ್ಲು ಮಾಣು
ಘಟ್ಟಿವಾಳಯ್ಯನ ಮೊದಲ ಹೆಸರು ಮುದ್ದಣ್ಣ. ಗಂಧ ತೇಯುವ ಕಾಯಕದವನು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು’ ಅನ್ನುವುದು ಅವನ ಅಂಕಿತ. ಇಡೀ ಒಂದು ವಾಕ್ಯದಂತೆ ಈ ಇರುವ ಈ ಅಂಕಿತ ಅವನ ವಚನಗಳಲ್ಲಿ ವಿಶೇಷವಾದ ಅರ್ಥ ಛಾಯೆಗಳನ್ನು ಮೂಡಿಸುತ್ತದೆ. ಈತನ ೧೫೦ ವಚನಗಳು ದೊರೆತಿವೆ.
ಘಟ್ಟಿವಾಳಯ್ಯ ಈ ವಚನದಲ್ಲಿ ಅರಿವನ್ನು ಕುರಿತ ನಮ್ಮ ಕಲ್ಪನೆಗಳನ್ನೆಲ್ಲ ಪ್ರಶ್ನಿಸುತ್ತಿದ್ದಾನೆ.
ಅರಿವುಅನ್ನುವುದು ನೆನಪಿಗೆ ಕೂಡ ಸಂಬಂಧಿಸಿದ್ದು ಎಂದುಕೊಂಡಿದ್ದೇವೆ. ನಮ್ಮ ಇಡೀ ಶಿಕ್ಷಣ, ಸಂಸ್ಕೃತಿ ಎಲ್ಲವೂ ನೆನಪಿಗೆ ಸಂಬಂಧಿಸಿದ್ದು, ನೆನಪನ್ನೇ ಆಧರಿಸಿದ್ದು ಅಲ್ಲವೇ? ಆದರೆಸತ್ಯ ಅನ್ನುವುದು ಇದ್ದರೆ ಅದು ನೆನಪಿಗೆ ಸಿಲುಕದು. ಅರಿವಿಗೆ ಸಿಲುಕದು. ಅರಿವಿಗೆಬಾರದಿರುವ ಸತ್ಯ ನೆನಪಿಗೆ ಬರುತ್ತದೆಯೇ? ನೆನಪಿಗೆ ಬರುವುದೇನಿದ್ದರೂ ನಮ್ಮ ಹಳೆಯಅನುಭವ, ಕೇಳಿದ ಮಾತು ಇಂಥವೇ ಅಲ್ಲವೇ? ಯವುದು ನಮ್ಮ ನೆನಪಿನಲ್ಲಿ ದಾಖಲಾಗಿದೆಯೋಅದನ್ನು ಮಾತ್ರ ನಾವು ಈಗ ಗುರುತಿಸುತ್ತೇವೆ. ಯಾವುದು ನೆನಪಿಗೆ ಬಾರದೋ ಅದು ನಮಗೆಕಾಣುವುದೂ ಇಲ್ಲ. ನೆನಪನ್ನೇ ಆಧರಿಸಿಕೊಂಡಿರುವ ನಮ್ಮ ಕಾಣ್ಕೆ, ನಮ್ಮ ಅರಿವುಸಸತ್ಯವನ್ನು ಕಾಣಿಸಿಕೊಡಲಾರದು. ಹೀಗಿರುವಾಗ ಮಾತಿಗೆ ಸಿಲುಕದ, ನೆನಪಿಗೆ ಆಹಾರವಾಗದಸತ್ಯವನ್ನೋ ದೇವರನ್ನೋ ಮುಟ್ಟುವುದು ಪೂಜಿಸುವುದು ಅಸಾಧ್ಯ ಅನ್ನುತ್ತಾನೆ ಘಟ್ಟಿವಾಳಯ್ಯ.
ಇಂಗ್ಲಿಷಿನರಿಕಾಗ್ನಿಶನ್ ಎಂಬ ಮಾತು ನೆನೆದುಕೊಳ್ಳೋಣ. ಅದು ರಿ(ಮತ್ತೆ) ಕಾಗ್ನಿಶನ್ (ಗ್ರಹಿಸುವುದು,ಗುರುತಿಸುವುದು). ನಮ್ಮ ಜ್ಞಾನದ ಕಲ್ಪನೆ,ಅರಿವಿನ ಕಲ್ಪನೆ ಎಲ್ಲವೂನೆನಪನ್ನು ಮಾತ್ರ ಆಧರಿಸಿದ್ದು. ಅದರಂತೆ ನಾವು ಈ ಮೊದಲು ದೇವರನ್ನು, ಸತ್ಯವನ್ನುಕಂಡಿಲ್ಲವಾದರೆ, ಕಂಡ ನೆನಪು ನಮ್ಮಲ್ಲಿಲ್ಲವಾದರೆ ಈಗ ಒಂದುವೇಳೆ ದೇವರು, ಸತ್ಯ ನಮ್ಮಕಣ್ಣೆದುರಿಗೇ ಇದ್ದರೂ ಗುರುತಿಸಲಾರೆವು. ಹೀಗಿರುವಾಗನಾನು ಸತ್ಯವನ್ನು ಕಂಡೆ, ದೇವರನ್ನು ಕಂಡೆ ಅನ್ನುವ ಮಾತುಗಳೇ ಸರಿಯಲ್ಲ, ಅದು ಅಸಾಧ್ಯ ಅನ್ನುತ್ತಿರುವಂತಿದೆಘಟ್ಟಿವಾಳಯ್ಯ..
ಪ್ರತಿಕ್ರಿಯೆ (2)