ಗೀತದೊಳಗಿನ ಭಾವ
ಬೆಚ್ಚಿಬೀಳಿಸಿತೆ ಸಖಿ!
ಹೆದರದಿರು
ಹಿಡಿದಿಟ್ಟ ಒಲವ ಬೆಂಕಿ
ಒಳಗೆ ಸುಡಲಿ.
ಅಪಧಮನಿ
ಅಭಿದಮನಿ
ಸುಟ್ಟಾದ ಮೇಲೆ
ಬೆಂಕಿ ತಲೆಗೇರೀತು
ಅಲ್ಲಿಯವರೆಗೂ
ನೀನು ನಿಶ್ಚಿಂತಳಾಗಿರು.
ನಾನೂ ನನ್ನ
ಸುಟ್ಟ ಮುಖ ತೋರೆನು.
೨
ನಿನ್ನಗಳ ಕಂಗಳೊಳಗೆ
ನನ್ನೆಲ್ಲಾ ಪ್ರೀತಿಯನು
ತುಂಬಿ ತುಂಬಿಸಿದೆ.
ಆಗ ಅದು ಕಟ್ಟೆಯೊಡೆಯಲಿಲ್ಲ.
ನಿನ್ನ ಕಂಗಳೋ!
ಅಗಾಧ,ತಳಕಾಣದ
ಬಾವಿಯಂತೆ
ತುಂಬಿಸಿಕೊಳ್ಳುತ್ತಲೇ ಇತ್ತು.
ಈಗೇಕೋ ಸಣ್ಣ
ಅನುಮಾನ!
ಅದು ತಳ ಕಾಣದ ಬಾವಿಯೋ?
ಇಲ್ಲ,
ತಳವಿಲ್ಲದ ಪಾತ್ರೆಯೋ?
೩
ಅಬ್ಬಾ! ಅದೆಷ್ಟು ಮೌನ !
ಕ್ರಿಯೆಗೆ ಪ್ರತಿಕ್ರಿಯೆಯೇ ಇಲ್ಲ,
'ಶಾಲಾ ಮೇಷ್ಟ್ರ ಮತ್ತು
ಹುಡುಗರ ನೆನಪಾಯ್ತು'
ಹೊಟ್ಟೆಯೊಳಗೆ ಸಂಕಟ
ಸೂಜಿ ನಿಧಾನವಾಗಿ
ಸುತ್ತಿ, ಸುತ್ತಿ
ಒಳಸೇರುವಾಗಿನ ನೋವು
ನೀನು ಸೂಜಿ
ಹೊರತೆಗೆದಾಗ ಚುಚ್ಚಿದ್ದು
ಔಷಧವೋ ,ವಿಷವೋ ?
ತಿಳಿಯದೆ ನಾನು ಕಂಗಾಲು.
ಪ್ರೀತಿ ಬೇಡಲು
ನಾನು ಭಿಕ್ಷುಕನಲ್ಲ.
ಕಣ್ಣಲ್ಲಿ ತೆಳ್ಳಗಿನ ನೀರು.
ನೀ ಕೊಟ್ಟ 'ಚುಚ್ಚಿ'ಗೆ
ಮನಸುಜ್ಜಿಕೊಳ್ಳುತ್ತಾ
ನಡೆದುಬಿಡುತ್ತೇನೆ, ಅಷ್ಟೆ
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!