ಹೀಗೇ ಇದೊಂದು ಕವನ ...... ..
ಮೊದಲಿನಂತಿಲ್ಲ ಎಲ್ಲವೂ ಈಗ
ಪಾಚಿ ಕಟ್ಟಿದೆ ಗೆಳೆಯ
ಸಂಬಂಧಗಳ ನಡುವೆ
ಮನ ಮನೆಯ ಮಧ್ಯದಲಿ
ನಿಂತಿಹುದು ಕಲ್ಲಿನ ಮಹಾಗೋಡೆ
ಬಂಧಿಸಲಾಗಿದೆ ಭಾವನೆಗಳನು
ಅಹಮ್ಮಿನ ಕೋಟೆಯಲಿ
ಹತ್ತಿರಾದರೂ ಜಗವು
ದೂರವಾಗಿದೆ ಮನವು
ಕಟ್ಟಿ ಹಾಕಿದೆ ಹಣವು
ಅನುಬಂಧ ಸೆಳೆತವನು
ಮೊದಲಿನಂತಿಲ್ಲ ಎಲ್ಲವೂ ಈಗ
ಹದಿನಾರಂಕಣದ ಮನೆಯೀಗ
ಸ್ಥಿರವಾಗಿದೆ ಮ್ಯೂಸಿಯಮ್ಮಿನಲ್ಲಿ
ಹಬ್ಬ ಹರಿದಿನ ಜಾಗರಣೆ
ಈಗೀಗ ಮೂರು ಮತ್ತೊಬ್ಬರ ನಡುವೆ
ಬರಿಯ ಜೊಳ್ಳು!
ಅಜ್ಜ ಅಜ್ಜಿಯರೆಲ್ಲ ವೃದ್ಧಾಶ್ರಮದಲ್ಲಿ
ಹಾಯಾಗಿ ಮಲಗಿದ್ದಾರೆ
ಮನೆಯಲ್ಲಿ ಮಕ್ಕಳು
ಮುದುಕ ಮುದುಕಿಯ ಬೊಂಬೆಗಳ
ಜೊತೆಗೆ ಆಟದಲಿ ಮಗ್ನ !
ಮೊದಲಿನಂತಿಲ್ಲ ಎಲ್ಲವೂ ಈಗ
ಪಾಚಿ ಕಟ್ಟಿದೆ ಗೆಳೆಯ
ಸಂಬಂಧಗಳ ನಡುವೆ...
ಪ್ರತಿಕ್ರಿಯೆ (5)