ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..)

ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ :) ? -ನಮ್ಮದು ಡಿಫರೆಂಟೂ.. ನಾಯಕಿ,ಟು ಪೀಸ್ ಡ್ರೆಸ್‌ನಲ್ಲಿ.. ‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ.., ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ).. ಎಮ್.ಜಿ.ರೋಡಲ್ಲಿ ಬರುತ್ತಾಳೆ.. ಬೆವರಿಂದ ಪೂರ್ತಿ ಒದ್ದೆ.. ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್‌ಲ್‌ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.

ಈಗ ನಾಯಕನ ಎಂಟ್ರಿ.. ನಾಯಕ ಡಾಕ್ಟ್ರು?..ಊಹೂಂ

ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ

ಲಾಯರ್? ಪೋಲೀಸ್? ಕಳ್ಳ? .. ಊಹೂಂ..

ಎಸೆಲ್ಸಿ ಫೈಲ್? ೩ನೇ ಕ್ಲಾಸ್ ಫೈಲ್? ಎಲ್.ಕೆ.ಜಿ ? ..ಊಹೂಂ ಉಹೂಂ..

ಚಮ್ಮಾರ,ಗಮಾರಾ.. ಸಾರಿ ನಮ್ಮದು ಡಿಫರೆಂಟೂ..

ಕ್ಯಾಮರ ಮೊದಲಿಗೆ ನಾಯಕನ ಎದುರಿನ ತಟ್ಟೆ..ಅದರ ಮೇಲಿರುವ ೩-೪ ಕಾಯಿನ್ ಮೇಲೆ ಫೋಕಸ್ ಮಾಡುತ್ತಾ ನಿದಾನವಾಗಿ ಮೇಲೆ ಬರುತ್ತದೆ.. ಟೇಂ..ಟೆ..ಡೇಂ..(ಸುಮ್ಮನಿದ್ದೀರಲ್ಲಾ, ವಿಶ್‌ಲ್ ಹಾಕ್ರೀ..) ನಾಯಕನದು ತೆಳ್ಳಗಿನ ದೇಹ.. (ಆದರೆ ಸಿಕ್ಸ್ ಪ್ಯಾಕ್ ಶಕ್ತಿ ಇದೆ) ಹರಿದ ಅಂಗಿ..(ಒಳಗೆ ಮೃದು ಹೃದಯ) ತೂತು ಬಿದ್ದ ಪ್ಯಾಂಟ್ (..ಬೇಡ ಬಿಡಿ..) ಮುಖಕ್ಕೆ ಮುತ್ತಿಕ್ಕುವ ಹಿಪ್ಪಿ ಕೂದಲು (ಪೆಂಗ್ವಿನ್ ಮರಿಯಾ.. ಪೆಂಗ್ವಿನ್ ಮರಿಯಾ.. ಹಾಡಿಗೆ ಆ ಕೂದಲು ಕುಣಿಯುವ ಸ್ಟೈಲ್ ನೋಡಲು ಮರೆಯದಿರಿ) ಈ ಭಿಕ್ಷುಕ.. ಸಾರಿ..ನಾಯಕ ತಾನು ಕುಳಿತಿದ್ದ ಹರಕು ಗೋಣಿಯನ್ನು, ಬೆವರಿಂದ ಒದ್ದೆಯಾಗಿ, ಚಳಿಯಲ್ಲಿ ನಡುಗುವ ನಾಯಕಿಗೆ ಕೊಡುವನು. ಇದಕ್ಕೆಲ್ಲಾ ಕಾರಣವಾದ ಸೂರ್ಯಗ್ರಹಣವನ್ನು ನಾಯಕ ಬೈಯುವ ದೃಶ್ಯ ಸೂಪರ್ ಆಗಿ ಬಂದಿದೆ. ಲವ್ ಶುರು..

ಈಗ ವಿಲನ್ ಎಂಟ್ರಿ ಆಗಬೇಕಲ್ಲ..ಯಾರು ವಿಲನ್?

ಹುಡುಗಿಯ ಅಪ್ಪ..? ಊಹೂಂ.. ಡಿಫರೆಂಟೂ.. ಅಪ್ಪ ಖುಷಿಯಿಂದ ಒಪ್ಪುವನು. ಮದುವೆ ಗ್ರಾಂಡ್ ಆಗಿ ಸ್ವಿಜರ್‌ಲ್ಯಾಂಡ್‌ನಲ್ಲಿ ಮಾಡೋಣವೆಂದು ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಹೊರಡುವನು.

ಹಾಗಾದರೆ ವಿಲನ್? ನಾಯಕನ ಭಿಕ್ಷುಕ ಅಪ್ಪ!! (ಡಿಫರೆಂಟೂ)

‘ನೋಡು ಮಗಾ, ಅವನ ತಿಂಗಳ ಸಂಬಳಕ್ಕಿಂತ ನಿನ್ನ ಸಂಪಾದನೆ ಜಾಸ್ತಿ ಮಗಾ. ನಿನಗೀಗಿರುವ ಸ್ವಾತಂತ್ರ್ಯ ಕಳಕೊಳ್ಳುತ್ತೀಯಾ? ಅಮೆರಿಕಾ ಅಧ್ಯಕ್ಷನ ಬೀಗ ಎಂದು ನನ್ನ ಸಂಪಾದನೆಗೂ ಖೋತಾ ಆಗುವುದು. ಬ್ರಿಗೇಡ್ ರೋಡಲ್ಲಿ ಬೇಡುವ ನಂಜಿಯೊಂದಿಗೆ ನಿನ್ನ ಮದುವೆ ನಾಳೆನೇ ಅಶೋಕ ಹೋಟಲಲ್ಲಿ..’

ಇಂಟರ್‌ವಲ್ (sorry ಗೆಳೆಯರೆ, ಗಂಟೆ ೧೨. ಕ್ಲೈಮ್ಯಾಕ್ಸ್ ನಾಳೆ ಬರೆಯುವೆ) -ಗಣೇಶ. ***************************************** ಭಿಕ್ಷುಕರ ಸಂಘದವರು ನಿರ್ಮಿಸಿದ್ದರಿಂದ (ಲೆಕ್ಕವಿಲ್ಲದ-ಲೆಕ್ಕವಿಲ್ಲದಷ್ಟು ಹಣ) ಧಾರಾಳವಾಗಿ ಖರ್ಚು ಮಾಡಿದ್ದಾರೆ. ಕೇವಲ ನಾಯಕನ ಒಂದೊಂದು ಡ್ರೆಸ್‌ಗೆ ೧೦ ಲಕ್ಷ ರೂ. ಖರ್ಚಾಗಿದೆ-ಲಂಡನ್‌ನಿಂದ ತರಿಸಿ ಹರಿದು ಚಿಂದಿ ಮಾಡಿ ಹಾಕಿದ್ದು ಅಂದಾಗ ಎಷ್ಟು ಅದ್ದೂರಿಯಾಗಿ ಬಂದಿರಬಹುದು ಯೋಚಿಸಿ.

ಈಗ ಇಂಟರ್‌ವಲ್ ನಂತರದ ಕತೆ-

ಅಮೆರಿಕಾದ ಫೈಟರ್ ಜೆಟ್‌ಗಳು ಅಶೋಕಾ ಹೋಟಲ್ ಸುತ್ತುವರಿದವು ಅಂದ್ರಾ-ಊಹೂಂ.. ಡಿಫರೆಂಟೂ.. ನಿರಾಶೆಯಿಂದ ಅಮೆರಿಕಾ ಅಧ್ಯಕ್ಷ, ತನ್ನ ಮಗಳನ್ನು ಕರಕೊಂಡು ವಿಮಾನದಲ್ಲಿ ಹಿಂದೆ ಹೋಗುವನು.

ಕತೆಯಲ್ಲಿ ಟ್ವಿಸ್ಟ್- ಡಂಡಂ ಲಾಡಂನ ಕಡೆಯ ಟೆರರಿಸ್ಟ್‌ಗಳು ವಿಮಾನ ಹೈಜಾಕ್ ಮಾಡುವರು!! ಇನ್ನೇನು ಅಮೆರಿಕಾದ ಅಧ್ಯಕ್ಷನ ಹಣೆಗೆ ಗನ್ ಗುರಿಯಿಡಬೇಕು ಅನ್ನುವಾಗ ಹಾಡು ಕೇಳುವುದು-‘ಜುಂಯ ಜುಂಯ ಜುಂಯಾ ಜುಂಯ..’- ವಿಮಾನದ ಮೇಲೆ ನಾಯಕ ತನ್ನ ಭಿಕ್ಷುಕ ಬಳಗದೊಂದಿಗೆ ಡ್ಯಾನ್ಸ್ ಮಾಡುತ್ತಿರುವನು ನಾಯಕಿ ಕಿಟಕಿಯಿಂದ ಹೊರಗೆ ಇಣುಕಿ ನಾಯಕನಿಗೆ ಕಣ್ಣು ಹೊಡೆಯುವಳು.. ;)

ಕ್ಲೈಮ್ಯಾಕ್ಸ್ (ಗೌಪ್ಯ)ನಲ್ಲಿ ಹಾಲಿವುಡ್/ಬಾಲಿವುಡ್/ಎಲ್ಲಾವುಡ್‌ಗಳಲ್ಲಿ ಯಾರೂ ಮಾಡದಿದ್ದ ಡಿಫರೆಂಟ್ ಸಾಹಸವಿದೆ. ಕನ್ನಡ,ತಮಿಳು,ಹಿಂದಿ..ಯಾವ ಚಿತ್ರವೂ ಎಪ್ರಿಲ್‌ನಲ್ಲಿ ಬಿಡುಗಡೆಯಾಗಲು ರೆಡಿಯಿಲ್ಲ. ಯಾಕೆಂದರೆ ಎಪ್ರಿಲ್ ೧ಕ್ಕೆ ನಮ್ಮ ಸಿನೆಮಾ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು. ಅಕ್ಷರಶಃ ಚಿಂದಿ ಉಢಾಯಿಸುವುದು!!

-ಗಣೇಶ.