ಅನಿವಾಸಿಯವರು ಡಾರ್ವಿನ್ ಅವರ 200ನೇ ಹುಟ್ಟುಹಬ್ಬದ ಪ್ರಯುಕ್ತ ಆ ವಿಜ್ಞಾನಿಯನ್ನು ನೆನಪು ಮಾಡಿಕೊಟ್ಟರು. ವಿಕಾಸ ಸಿದ್ಧಾಂತವನ್ನು ಭದ್ರ ಬುನಾದಿಯ ಮೇಲೆ ಸ್ಥಾಪಿಸಿ, ಜೀವವಿಜ್ಞಾನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಗೆ ಕಾರಣರಾದ ಬ್ರಿಟಿಷ್ ಜೀವವಿಜ್ಞಾನಿ ಡಾರ್ವಿನ್ ಬಗ್ಗೆ ಅರಿಯದವರು ಯಾರು?
ಡಾರ್ವಿನ್ ಒಬ್ಬ ವೈದ್ಯರ ಮಗನಾಗಿ ಇಂಗ್ಲಾಂಡ್‘ನ ಶ್ರೂಸ್ಬರಿಯಲ್ಲಿ ಜನಿಸಿದರು. ವೈದ್ಯರ ಮಗ ವೈದ್ಯರೇ ಆಗಬೇಕೇನೋ ಎಂಬಂತೆ ಎಡಿನ್‍ಬರ್ಗ್‍ನಲ್ಲಿ ವೈದ್ಯಕೀಯ ಕಾಲೇಜಿಗೆ ಸೇರಿದರು. ಆದರೆ ಅವರ ಒಲವು ಅತ್ತಕಡೆ ಇರಲಿಲ್ಲವೋ ಏನೋ ಅವರು ಕೇಂಬ್ರಿಡ್ಜ್ ಯೂನಿವರ್ಸಿಟಿಗೆ ಸೇರಿ M.A. ಪದವಿ ಪಡೆದರು.ಅಲ್ಲಿ ಬಯೋಲಜಿ ಪ್ರೊಫೆಸರ್ ಜಾನ್ ಸ್ಟೀವನ್ಸ್ ಹೆನ್ಸ್ಲೊ ಅವರ ಗೆಳೆತನ ಅವರಿಗೆ ದೊರಕಿತು. ಅಲ್ಲಿ ಡಾರ್ವಿನ್ ಅವರಿಗೆ ಜೀವಶಾಸ್ತ್ರ ಹಾಗೂ ಭೂಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಯಿತು.
ಒಮ್ಮೆ 1835ರ ಸೆಪ್ಟೆಂಬರ್ 15ರಂದು ಬೀಗಲ್ ಎಂಬ ಹಡಗು ವೈಜ್ಞಾನಿಕ ವಿಚಾರಗಳ ಅನ್ವೇಷಣೆಗಾಗಿಯೇ ಹೊರಟಿತು. ಅದರ ಕ್ಯಾಪ್ಟನ್ 26 ವರ್ಷಯ ಯುವಕ ರಾಬರ್ಟ್ ಫಿಟ್ಸ್ ರಾಯ್ ತನ್ನ ಜೊತೆಗೆ ಒಬ್ಬ ಜೀವಶಾಸ್ತ್ರಜ್ಞನನ್ನು (Naturalist) ಸಹಚರರಾಗಿ ಬರಬೇಕೆಂದು ಬಯಸಿದ. ಅದಕ್ಕೆ ಪ್ರೊ. ಹೆನ್ಸ್ಲೊ ಅವರು ಡಾರ್ವಿನ್ನನ್ನು ಕ್ಯಾಪ್ಟನ್ ಜೊತೆ ಹೋಗುವಂತೆ ಸಲಹೆ ನೀಡಿದರು. ಅದರಂತೆ ಹೊರಟ ಡಾರ್ವಿನ್‘ಗೆ ಆದ ಲಾಭವೇ ಇಂದು ನಮ್ಮ ಮುಂದಿರುವ ಅವರ ವಿಕಾಸವಾದದ ಸಿದ್ಧಾಂತ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದೊಂದಿಗೆ ದಕ್ಷಿಣ ಅಮೆರಿಕದ ಹತ್ತಿರ ಇರುವ ದಕ್ಷಿಣ ದ್ವೀಪಗಳಾದ ಗ್ಯಾಲ್ಪಗೋಸ್ ದ್ವೀಪಗಳತ್ತ ಪಯಣ ಬೆಳೆಸಿದರು. ಸತತ 5 ವರ್ಷಗಳ ಈ ಪಯಣದಲ್ಲಿ ಡಾರ್ವಿನ್ ಭೂಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರಗಳ ಎಷ್ಟೋ ವಿಷಯ ಸಂಗ್ರಹಣೆ ಮಾಡಿದರು. ಅವುಗಳಿಗೆ ವೈಜ್ಞಾನಿಕ ನಿಯಮಗಳನ್ನು ಅಳವಡಿಸಿಕೊಂಡು ಸ್ಪೆಸಿಮನ್ನುಗಳನ್ನು ಸಂಗ್ರಹಿಸಿಕೊಂಡು ಬಂದರು. ಇದು ಅವರ ವಿಕಾಸವಾದಕ್ಕೆ ತಳಪಾಯ ಹಾಕಿತು. ಅವರು ತನ್ನ “origin of species”ನಲ್ಲಿ ಪೀಠಿಕೆಯಾಗಿ ಹೀಗೆ ಬರೆದಿದ್ದಾರೆ.
“ದಕ್ಷಿಣ ಅಮೆರಿಕದಲ್ಲಿ ಹಾಗೂ ಗ್ಯಾಲ್ಪಗೋಸ್ ದ್ವೀಪಗಳಲ್ಲಿ ವಾಸವಾಗಿರುವ ಈ ಜೀವಿಗಳ ಹಾಗೂ ಹಿಂದೆ ವಾಸವಾಗಿದ್ದ ಜೀವಿಗಳ ಪಳೆಯುಳಿಕೆಗಳನ್ನೆಲ್ಲಾ ಸೇರಿಸಿ ಒಟ್ಟು ಅಧ್ಯಯನ ಮಾಡಿದಾಗ ಅನೇಕ ಸ್ಪೀಷೀಸ್‍ಗಳ ಮೇಲೆ ಬೆಳಕು ಚೆಲ್ಲಿದಂತಾಯಿತು. ಅನೇಕ ನಿಗೂಢವಾದ ರಹಸ್ಯಗಳು ಬಯಲಾದವು. ಜೀವಿಗಳು ತಾವು ವಾಸವಾಗಿರುವ ಭೂಲಕ್ಷಣಗಳಿಗೆ ಅಲ್ಲಿನ ವಾತಾವರಣಕ್ಕೆ ಹೇಗೆ ಹೊಂದಿಕೊಂಡಿವೆ, ಉಳಿವಿಗಾಗಿ ಹೋರಾಟ ನಡೆಸಿ ತಮ್ಮ ಅಂಗಾಂಗಗಳಲ್ಲಿ ಹೇಗೆ ಬದಲಾವಣೆ ಮಾಡಿಕೊಂಡು ಬದುಕುತ್ತವೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಿದೆ. ಹಾಗೆ ಹೋರಾಟದಲ್ಲಿ ಗೆದ್ದವುಗಳನ್ನು ಪ್ರಕೃತಿದೇವಿ ಹೇಗೆ ಆಯ್ಕೆ ಮಾಡಿಕೊಳ್ಳುತ್ತಾಳೆ ಎಂಬುದನ್ನೂ ಅವಲೋಕಿಸಿದೆ. ಗೆದ್ದ ಜೀವಿಗಳ ಸ್ಪೀಷೀಸ್ ಬೆಳೆಯುತ್ತಾ ಬಂದವು. ಉಳಿದವು ನಾಶವಾದವು. ಇವುಗಳ ಬಗ್ಗೆ ವಿಸ್ತಾರವಾಗಿ ವಿಶ್ಲೇಷಣೆ ಮಾಡಿದಾಗ ಜೀವಿಗಳ ಬೆಳವಣಿಗೆಯ ಬಗ್ಗೆ ನಾನು ತೆಗೆದುಕೊಂಡ ನಿರ್ಧಾರ ಸರಿ ಎನ್ನಿಸುತ್ತಿದೆ. ನಾನು ಆ ವಿಚಾರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ನಾನು ಈಗ ಬರೆದಿರುವ “Origin of Species” ವಿಚಾರಗಳು ಅವಸರದ ನಿರ್ಧಾರಗಳಲ್ಲಎಂದು ಮನದಟ್ಟು ಮಾಡುತ್ತವೆ.”
ಒಂದು ವಿಶೇಷ ಎಂದರೆ ಅವರು ಆಡಂಸ್ಮಿತ್ ರ ತತ್ವಗಳನ್ನು ಓದಿದಾಗ ಅವರಿಗೆ ತನ್ನ ವಿಕಾಸವಾದದ ಸಿದ್ಧಾಂತಕ್ಕೆ ನಾಂದಿ ಹಾಡಿದಂತಾಯಿತು ಎನ್ನುತ್ತಾರೆ. ಆಡಂಸ್ಮಿತ್ ನೀತಿಶಾಸ್ತ್ರಜ್ಞರ ಸಾಲಿನಲ್ಲಿ ಕೊನೆಯವರಾದರೆ ಅರ್ಥಶಾಸ್ತ್ರಜ್ಞರ ಸಾಲಿನಲ್ಲಿ ಮೊದಲಿಗರಾಗುತ್ತಾರೆ. ಡಾರ್ವಿನ್ ಆಡಂಸ್ಮಿತ್‘ರ ವಿಚಾರಗಳನ್ನು ಓದುತ್ತಾ ಅರ್ಥಶಸ್ತ್ರಜ್ಞರ ಸಾಲಿನಲ್ಲಿ ಕೊನೆಯವರಾಗಿ ಜೀವಶಾಸ್ತ್ರಜ್ಞರ ಸಾಲಿನ ಮೊದಲಿಗರಾಗುತ್ತಾರೆ. ಇವರು ತನ್ನ ವಾದಕ್ಕೆ ಮಾಲ್ಥಸ್‘ನ ಜನಸಂಖ್ಯಾ ಸಿದ್ಧಾಂತ ಹೆಚ್ಚು ಸಹಕಾರಿಯಾಯಿತು ಎನ್ನುತ್ತಾರೆ. ಹೀಗೆ ಎಲ್ಲಾ ಉದಾಹರಣೆಗಳು ಭೂಮಿಯಮೇಲೆ ಜೈವಿಕ ವಸ್ತುಗಳ ಬದುಕು ನಿಧಾನವಾಗಿ ಸಣ್ಣ ಕಣಗಳಿಂದ ಪ್ರಾರಂಭಿಸಿ ಕೋಟ್ಯಾನುಕೋಟಿ ವರ್ಷಗಳಲ್ಲಿ ವಿಕಾಸ ಹೊಂದುತ್ತಾ ಬಂದು ಇಂದಿನ ಸ್ಥಿತಿಗೆ ತಲುಪಿದೆ. ಇದು ಹೀಗೇ ಇನ್ನೂ ಬದಲಾಗುತ್ತಾ ಹೋಗುತ್ತದೆ. ಹೀಗೆ ಇದ್ದಕ್ಕಿದ್ದಂತೆ ಒಂದು ದಿನ ಈಗಿರುವಂತೆ ವಸ್ತುಗಳನ್ನು ಆ ದೇವನು ಪೂರ್ಣ ರೂಪದಲ್ಲಿ ಸೃಷ್ಟಿಸಿದನೆಂಬ ವಾದವನ್ನು ಅಲ್ಲಗಳೆಯುತ್ತಾರೆ.
ಇಷ್ಟೆಲ್ಲಾ ಅಧ್ಯಯನ ನಡೆಸಿ ವಿಕಾಸವಾದಕ್ಕೆ ತಳಹದಿ ಹಾಕಿದ ಡಾರ್ವಿನ್ ಅದನ್ನು ಪುಸ್ತಕದ ರೂಪಕ್ಕೆ ಇಳಿಸುವ ಬಗ್ಗೆ ಇನ್ನು ಚಿಂತನೆ ನಡೆಸಿಯೇ ಇರಲಿಲ್ಲ.ಆಗ ಆ ಕಾಲದ ಇನ್ನೊಬ್ಬ ವಿಜ್ಞಾನಿ ಆಲ್ಫ್ರೆಡ್ ರಸಲ್ ವ್ಯಾಲೆಸ್ ಎಂಬುವನು ಮಾಲ್ಥಸ್ನನ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು ವಿಕಾಸವಾದದ ಬಗ್ಗೆ ಒಂದು ಲೇಖನ ತಯಾರು ಮಾಡಿಟ್ಟಿದ್ದ. ಇದರ ಬಗ್ಗೆ ಆ ವಿಜ್ಞಾನಿಯು ಡಾರ್ವಿನ್ ಗೆ ಒಂದು ಪತ್ರವನ್ನೂ ಬರೆದಿದ್ದ. ನಂತರ ಆ ವಿಜ್ಞಾನಿಯ ಲೇಖನ ಮೊದಲು ಹೊರಬಂದರೆ ಡಾರ್ವಿನ್ನನ ಶ್ರಮವೆಲ್ಲಾ ವ್ಯರ್ಥವಾದಂತೆ ಎಂದು ಡಾರ್ವಿನ್ ಗೆಳೆಯರೆಲ್ಲಾ ಅವನನ್ನು ಮೊದಲು ತನ್ನ ಸಿದ್ಧಾಂತವನ್ನು ಮಂಡಿಸುವಂತೆ ಪ್ರೋತ್ಸಾಹಿಸಿದರು. ಆದರೆ ಡಾರ್ವಿನ್ಗೆ ಸಿಕ್ಕಷ್ಟು ಆಧಾರಗಳು ವ್ಯಾಲೆಸ್‘ಗೆ ಸಿಕ್ಕಿರಲಿಲ್ಲ. ವ್ಯಾಲೆ‍ಸ್ಗೆನ ಆಧಾರ ಎಂದರೆ ಮಾಲ್ಥಸ್‘ನ ಜನಸಂಖ್ಯಾ ಸಿದ್ಧಾಂತ ಮಾತ್ರ. ಹೀಗಾಗಿ ಅವರಿಬ್ಬರ ಲೇಖನಗಳು ಒಂದೇ ಪತ್ರಿಕೆಯಲ್ಲಿ ಪ್ರಕಟವಾದರೂ ಮೊದಲು ಮೌಲ್ಯಯುತ ಲೇಖನವಾಗಿ ಹೊರಬಂದದ್ದು ಡಾರ್ವಿನ್ ಅವರದ್ದೇ ಆಗಿತ್ತು. ಹಾಗೂ ಮೊದಲದಿನವೇ ಅವರ ಪುಸ್ತಕದ 1200 ಕಾಪಿಗಳ ಮಾರಾಟವೂ ಆಯಿತು. ಜೊತೆಗೆ ಸುಪ್ರಸಿದ್ದ ಜೀವವಿಜ್ಞಾನಿ ಥಾಮಸ್ ಹಕ್ಸ್ಲಿಯವರು ಚಾರ್ಲ್ಸ್ ಡಾರ್ವಿನ್ನನ ನಿಕಟವರ್ತಿಗಳಲ್ಲೊಬ್ಬರು. ಸ್ವತಃ ದೊಡ್ಡ ಜೀವವಿಜ್ಞಾನಿಯಾಗಿದ್ದ ಅವರು ಡಾರ್ವಿನ್ನರ ವಿಕಾಸ ಸಿದ್ಧಾಂತದ ಪರವಾಗಿ ಹೋರಾಡಿ , ತಮ್ಮ ಬರವಣೀಗೆಗಳ ಮೂಲಕ, ಉಪನ್ಯಾಸಗಳ ಮೂಲಕ, ವಿಜ್ಞಾನ ಪ್ರಪಂಚದಲ್ಲಿ ಹಾಗೂ ಅದರ ಹೊರಗಡೆ ಆ ಸಿದ್ಧಾಂತಕ್ಕೆಮಾನ್ಯತೆ ದೊರಕಿಸಿಕೊಟ್ಟ ಪ್ರಾಧಾನ ವ್ಯಕ್ತಿಯಾಗಿದ್ದರು. ಜನಸಾಮಾನ್ಯರಿಗೆ ವಿಜ್ಞಾನ ವಿಷಯಗಳನ್ನು ತಿಳಿ ಹೇಳುವ ಕಲೆಯ ಆದ್ಯ ಪ್ರವರ್ತಕರಲ್ಲೊಬ್ಬರೂ ಆಗಿದ್ದರು.
ಅವರ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ತಿಳಿಸುತ್ತೇನೆ. ಡಾರ್ವಿನ್ನರ ಮೊಮ್ಮಕ್ಕಳು ಒಮ್ಮೆ ತಮ್ಮ ತಾತನನ್ನು ಕೀಟಲೆ ಮಾಡುವುದಕ್ಕಾಗಿ ಒಂದು ಜೀರುಂಡೆಯನ್ನು ಹಿಡಿದು ತಂದು ಅದರ ರೆಕ್ಕೆಗಳನ್ನು ಕಿತ್ತು ಹಾಕಿದರು ಅದಕ್ಕೆ ಚಿಟ್ಟೆಯೊಂದರ ರೆಕ್ಕೆಗಳನ್ನು ಅಂಟಿಸಿದರು. ಬಹಳ ಬುದ್ಧಿವಂತಿಕೆಯಿಂದ ಮಾಡಿದ್ದರಿಂದ ಅದು ಒಂದು ನೈಜವಾದ , ಆದರೆ ಅಪರೂಪದ ಕೀಟದಂತೆ ಕಾಣುತ್ತಿತ್ತು. ಅದನ್ನು ಅವರು ಡಾರ್ವಿನ್ನರ ಬಳಿಗೆ ಕೊಂಡೊಯ್ದು, “ತಾತಾ, ಇದು ಯಾವ ಜಾತಿಯ ಕೀಟ?” ಎಂದು ಕೇಳಿದರು. ಡಾರ್ವಿನ್ ಅದನ್ನು ಒಂದು ನಿಮಿಷ ಪರೀಕ್ಷಿಸಿ ನೋಡಿ, “ಒಂದು ಹೊಸ ಕೀಟ ಜಾತಿಯನ್ನೇ ಪತ್ತೆ ಮಾಡಿಬಿಟ್ಟಿದೀರಲ್ಲ. ತುಂಬಾ ಸಂತೋಷ. ಇದು ನಿಮಗೆ ಎಲ್ಲಿ ಸಿಕ್ಕಿತು? ನೀವು ನೋಡಿದಾಗ ಇದು ಏನು ಮಾಡುತ್ತಿತ್ತು?” ಎಂದು ಕೇಳಿದರು. ತಾತಾ ತಮ್ಮ ಬಲೆಗೆ ಬಿದ್ದರೆಂದು ಬಹು ಸಂತೋಷಪಟ್ಟ ಆ ಮಕ್ಕಳು, “ನಮ್ಮ ಮನೆಯ ಹಿತ್ತಲ ತೋಟದಲ್ಲಿ ಸಿಕ್ಕಿತು. ಗಿಡದ ಎಲೆಯ ಮೇಲೆ ಕುಳಿತಿತ್ತು. ನಾವು ನೋಡಿದಾಗ ಇದು ಗುಯ್ಗುಡುತ್ತಿತ್ತು” ಎಂದರು. ಅದಕ್ಕೆ ಡಾರ್ವಿನ್ ಅವರು, “ಓಹೋ! ಸರಿ ಮತ್ತೆ. ಇದು ಹಂಬಗ್” ಎಂದು ಹೇಳುತ್ತಾ ತುಂಟನಗೆ ನಕ್ಕರು (ಹ೦ಬಗ್ ಎ೦ದರೆ ಗು೦ಯ್ಗುಡುವ ಕೀಟ ಎ೦ದು ಒ೦ದರ್ಥವಾದರೆ ‘ಮೋಸ’ ಎ೦ದು ಇನ್ನೊ೦ದರ್ಥವಿದೆ!!)