ಮೌನದ ಕಣಿವೆಯೊಳಗೆ ಆತ ಇಳಿದ. ಒಂದೊಂದೇ ಮೆಟ್ಟಿಲು...ಮೊದಲ ಮೆಟ್ಟಿಲು ಇಳಿದಾಗ ಮಾತಿನ ಜಗತ್ತಿನ ಬಹಳಷ್ಟು ಭಾಗ ಕಾಣುತ್ತಿತ್ತು. ಎರಡನೇ ಮೆಟ್ಟಿಲಿನಲ್ಲಿ ಅದೇ ಜಗತ್ತು ಅದೃಶ್ಯವಾಗತೊಡಗಿತು. ಮೊದಲು ಕಾಣೆಯಾದದ್ದು ಕಾಲು...ಹೀಗೇ ಮೆಟ್ಟಿಲು ಮೆಟ್ಟಿಲು ಇಳಿದು ಕೊನೆಯ ಮೆಟ್ಟಿಲಿನಲ್ಲಿದ್ದಾಗ ಮೇಲಕ್ಕೆ ತಲೆ ಎತ್ತಿದ. ಮಾತಿನ ಲೋಕದ ತಲೆಯ ಒಂದು ಸಣ್ಣ ಭಾಗ ಚಿಕ್ಕದ್ದಾಗಿ ತೋರಿತು. ಮತ್ತೇನೋ ಕಾಣಲಿಲ್ಲ. ಸರಿ, ಮೆಟ್ಟಿಲಿಳಿದು ಹೊಸ ಲೋಕದ ನೆಲ ಸಿಕ್ಕಿತು.

ಉದ್ದನೆಯ ಹಾದಿ. ಕೊನೆ ಕಾಣುತ್ತಿಲ್ಲ. ತೋರುತ್ತಿರುವ ಕೊನೆ ಕೊನೆಯಲ್ಲ ; ಒಂದು ತಿರುವು ಅಷ್ಟೇ. ಅಕ್ಕ ಪಕ್ಕದಲ್ಲಿ ಎಲ್ಲೆಲ್ಲೂ ಸಮ್ಮೋಹನಗೊಳಿಸುವ ಹಸಿರು. ಮರ-ಗಿಡ-ಹೂವು...ಇನ್ನೂ ಏನೇನೋ ? ಅದರೊಳಗಿನ-ಅವುಗಳೊಳಗಿನ ಜೀವನೋತ್ಸಾಹ ಕಂಡು ಈತ ಬೆಚ್ಚಿ ಹೋದ. ಎಲ್ಲವೂ ಕಳೆಕಳೆಯಾಗಿದ್ದವು. ಹೀಗೆ ಇರಲು ನಮ್ಮಿಂದ ಸಾಧ್ಯವೇ ?ಎಂದು ಪ್ರಶ್ನೆ ಹಾಕಿಕೊಂಡ. ತಕ್ಷಣವೇ ತನ್ನ ಮೋರೆಯೇ ಉತ್ತರವಾಗಿತ್ತು. ಹೆಜ್ಜೆಯನ್ನು ಬೆಳೆಸಿದ.

ಇಪ್ಪತ್ತು ಹೆಜ್ಜೆ ಇಟ್ಟಿರಬಹುದು. ಬಲಕ್ಕೆ ಒಂದು ಮೈಲಿಗಲ್ಲಿನಂತೆ ಒಂದು ಕಲ್ಲು ನಿಂತಿತ್ತು. ಅದರಲ್ಲಿ ಬರೆದಿದ್ದನ್ನು ಓದಿದ-‘ಪ್ರತಿ ಹೆಜ್ಜೆ ಯಲ್ಲ್ಲೂ ಸುಖವಿದೆ. ಆದರೆ ಆ ಸುಖದ ನಾದವನ್ನು ಕೇಳಲು ನಾವು ತಯಾರಿಲ್ಲ’. ‘ಅರೆರೆ...’ ಎಂಥಾ ಮಾತು ಎಂದೆನಿಸಿತು ಮನಸಿಗೆ. ಅಲ್ಲೇ ಕ್ಷಣ ನಿಂತು ಮತ್ತೊಮ್ಮೆ ಓದಿಕೊಂಡ. ನೆನಪಾಗಿ ಹೋಯಿತು ಆ ಸಾಲು.

‘ಅದೂ ನಿಜವೇ’ ಎಂದುಕೊಂಡವ ಮತ್ತಷ್ಟು ಹೆಜ್ಜೆ ಇಟ್ಟ. ಅವನ ಎಡಕ್ಕೆ ಇದ್ದ ಮರದ ಮೇಲೆ ಕೆಲವು ಸಾಲುಗಳು ಕೆತ್ತಿದ್ದವು...ಸ್ವಲ್ಪ ಅಸ್ಪಷ್ಟ. ಇನ್ನಷ್ಟು ಹತ್ತಿರಕ್ಕೆ ಹೋಗಿ ಆ ಬುಡವನ್ನು ಆಧಾರವಿಟ್ಟುಕೊಂಡವನಂತೆ ಓದ ತೊಡಗಿದ. ‘ಸಿಕ್ಕ ಹಸಿರನ್ನು ಮೈಗೆಲ್ಲಾ ಹಚ್ಚಿಕೋ. ನಿನ್ನ ಬಣ್ಣ ಬದಲಿಸಿಕೋ’. ಓದಿ..ಓದಿ...ಕೊನೆಗೂ ಅದು ಸ್ಪಷ್ಟವಾಯಿತು. ಒಳ್ಳೆ ಅಮೂರ್ತ ಕಲಾಕೃತಿಯಂತೆ ಎನಿಸಿತು ಆತನಿಗೆ ಆ ಸಾಲುಗಳು.

ಈಗ ಅವನಿದ್ದದ್ದು ತಿರುವಿನಲ್ಲಿ. ಅವನೆದುರು ಮತ್ತಷ್ಟು ರಸ್ತೆ ಹಾಸಿತ್ತು. ಅಲ್ಲಿ ತಿರುಗಿ ಮುಂದಕ್ಕೆ ಹೋಗಬೇಕು. ಹತ್ತಿರದಲ್ಲೇ ಸಣ್ಣಗೆ ಹರಿಯುತ್ತಿದ್ದ ಝರಿಯ ನಾದ ಕೇಳತೊಡಗಿತು. ಅದನ್ನು ಅರ್ಥ ಮಾಡಿಕೊಳ್ಳಲು ಅತ್ತ ಹೋದ. ಆ ಝರಿಯ ನಡಿಗೆಯಲ್ಲಿ ಲಯವಿತ್ತು, ಶಬ್ದವಿರಲಿಲ್ಲ. ಆ ಲಯ ಇವನಿಗೆ ಅರ್ಥವಾಗಲಿಲ್ಲ. ಪಕ್ಕಕ್ಕೆ ತಿರುಗಿದ. ಝರಿಯ ಪಕ್ಕದಲ್ಲೇ ಚೆಂದದ ಗಿಡವೊಂದು ಕರೆಯಿತು. ಅದರೆದುರಿಗೆ ಬಂದು ನಿಂತ. ಗಿಡ ಏನೂ ಹೇಳಲಿಲ್ಲ. ತನ್ನ ಕೈಯಲ್ಲಿದ್ದ ಒಂದಿಷ್ಟು ಬಣ್ಣವನ್ನು ಅವನ ಮುಖದತ್ತ ಎಸೆಯಿತು. ಅರೆ ಕ್ಷಣದಲ್ಲಿ ಇವನೂ ಬಣ್ಣವಾದ. ಹಸಿರು ಎಲೆಗಳ ಮಧ್ಯೆ ಬಿಳಿಯ ಹೂವಾಗಿ ಅರಳಿದ.

ಮೇಲೆ ತೋರುತ್ತಿದ್ದುದು ನೀಲಿ ಆಕಾಶ, ಸಾಲು ಸಾಲು ಮುಗಿಲು ಮತ್ತು ಅವುಗಳು ಧರಿಸಿದ ಗಂಭೀರ ಮೌನ.