ಅದೊಂದು ದಿವಿನಾದ ಕನಸು .. ಎದೆಯಾಳದೊಳಗೊಂದು ದೇದೀಪ್ಯಮಾನ ಹೊಂಬೆಳಕು. ಕಣ್ಣಂಚಿನಿಂದಿಳಿದ ಆನಂದ ಬಾಷ್ಪದ ಬಿಂದು.ಮಣಗಟ್ಟಲೆ ಬಿದ್ದಿದ್ದ ಕಷ್ಟದ ದುಃಖದ ಮೂಟೆಗಳೆಲ್ಲ ಅದೊಂದು ಒಲವಿನ ಸ್ಪರ್ಷಕ್ಕೇ ಕರಗಿ ಹೋದಂತೆ ! ಕರಗಿ ನೀರಾಗಿ ಹರಿದು ಹೋದಂತೆ ! ಅಲ್ಲೆಲ್ಲೋ , ಆಳದ ಕಣಿವೆಯಲ್ಲಿ ದಿಕ್ಕುಗಾಣದೆ ಬೀಳುತ್ತಿದ್ದವಳನ್ನು ಮೃದುವಾದ ಕರವೊಂದು ಹೊತ್ತು ಮೇಲೆ ತಂದಂತೆ, ಇದು ಕನಸೇ ? ಅಲ್ಲ ಅಲ್ಲ ... ಕನಸೊಳಗೊಂದು ಕನಸು ಎಂದೇ ಅಂದುಕೊಂಡಿದ್ದೆ ಇಷ್ಟೂ ಹೊತ್ತು. ಆದರದು ನಿಜವೆಂದು ತಿಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ ಆ ಅನುಭೂತಿಗಾಗಿ ಇಷ್ಟು ದಿನ ನನ್ನ ಜನ್ಮ ಕಾಯುತ್ತಿತ್ತೇನೋ ಅನ್ನುವ ಹಾಗೇ....
ಅಂದ ಹಾಗೆ ನನ್ನ ಹೆಸರು ಜ್ವಾಲಾ !ಅದಾರು ಆ ಹೆಸರಿಟ್ಟರೋ ಗೊತ್ತಿಲ್ಲ. ಹುಟ್ಟಿದ ತಿಂಗಳಿಗೇ ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡೆ. ಹೇಗೆ ಕಳೆದುಕೊಂಡೆ? ಅದೂ ತಿಳಿಯದು . ಅವರಿವರು ಹೇಳುವ ಪ್ರಕಾರ, ನನ್ನ ಅಪ್ಪ ಅಮ್ಮ ಇಬ್ಬರೂ ನಡು ಮದ್ಯಾಹ್ನದ ಬಿರುಬಿಸಿಲಿನಲ್ಲಿ ನಡೆಯುತ್ತಾ ನಡೆಯುತ್ತಾ ಹಾಗೇ ಸತ್ತು ಹೋದರಂತೆ ! ವಿಷ ಕುಡಿದಿದ್ದರೇನೋ ಅಂದರು ಅನೇಕರು. ಅದಾವ ಹೀನಾಯ ಪರಿಸ್ಟಿತಿಗೆ ಹೆದರಿದರೋ ಕೈಗೂಸು ನನ್ನನ್ನು ಅನಾಥಳನ್ನಾಗಿ ಮಾಡಿ ಬಾರದ ಲೋಕಕ್ಕೆ ತೆರಳಿದ್ದರು. ಅವರಿವರ ಮನೆಯ ಮಗುವಾಗಿ ಬೆಳೆದೆ ನಾನು. ಯಾರೋ ಪುಣ್ಯಾತ್ಮರು ನನ್ನನ್ನು ಅನಾಥಾಲಯದಲ್ಲಿ ಸೇರಿಸಿದ್ದರು. ಅದು ನನ್ನಂಥ ಅನೇಕ ಮಕ್ಕಳಿಗೆ ಆಶ್ರಯ ತಾಣ . ಸಾಕಲಾಗದೆ ಅಪ್ಪಮ್ಮ ಬಿಟ್ಟು ಹೋದ ಮಕ್ಕಳು, ಸನ್ನಿವೇಶಕ್ಕೆ ಹೆದರಿ ಹೆತ್ತವಳು ಎಸೆದ ಮಕ್ಕಳು, ಓಹ್ ! ಅಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ ..
ಅಲ್ಲಿರುವ ಯಾರಿಗೂ ಯಾರೂ ಇರಲಿಲ್ಲ. ನನಗೂ ನನ್ನವರು ಅನ್ನುವ ಒಂದು ಸಂಬಂಧವೂ ಇರಲಿಲ್ಲ. ಆ ವ್ಯಕ್ತಿ ಬರುವ ತನಕ. ಯಾರೆಂದಿರಾ ? ಅದೇ ಆ ಶ್ರೀಮಂತ . ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲಿಕ್ಕೇ ಅಂತಲೇ ನಮ್ಮ ಆಶ್ರಮಕ್ಕೆ ಮೊದಲು ಬಂದಿದ್ದು. ಸಿರಿವಂತನಾದರೂ ಸೊಕ್ಕಿನವನಲ್ಲ. ಬದವರೆಂದರೆ, ಅನಾಥರೆಂದರೆ ಬಹಳೇ ಪ್ರೀತಿ. ಮಕ್ಕಳೆಂದರಂತೂ ಪ್ರಾಣ. ಸಿಂಬಳ ಸುರಿವ ಮಗುವನ್ನೂ ಹೆಗಲ ಮೇಲೆತ್ತಿ ಮುದ್ದಾಡುತ್ತಿದ್ದರು. ಮಕ್ಕಳಿಲ್ಲ ಎಂಬ ಕೊರಗು ಅವರ ಈ ವರ್ತನೆಗೆ ಕಾರಣ ಅಂತ ಆ ನಂತರ ತಿಳಿಯಿತು. ನನ್ನದೋ ಇನ್ನೂ ಮಗುವಿನದೇ ಮನಸು. ಕಂಡದ್ದಕ್ಕೆಲ್ಲಾ ಆಸೆ ಪಡುತ್ತಿದ್ದ ಹಸಿ ಮನಸು . ಆ ಮಗುವನ್ನೆತ್ತಿ ಮುದ್ದಾಡುವಾಗಲೆಲ್ಲಾ ನನಗೂ ನನ್ನಪ್ಪನಿದ್ದಿದ್ದರೆ ಹೀಗೆಯೇ ಮಾಡುತ್ತಿದ್ದರಲ್ಲವೇ ಅಂತ ಕನಸಿಗೆ ಜಾರುತ್ತಿದ್ದೆ. ನಮ್ಮ ಆಶ್ರಮದ ಮಕ್ಕಳ ಬಗ್ಗೆ ವಿಶೇಷ ಪ್ರೀತಿಯನ್ನು ಇರಿಸಿಕೊಂಡಿದ್ದ ಅವರು ಆಗಾಗ ಬರತೊಡಗಿದ್ದರು. ಅವರು ಬಂದಾಗಲೆಲ್ಲ ನಮಗೆ ಭರ್ಜರಿ ಭೋಜನ. ಚಾಕ್ಲೇಟು, ಬಿಸ್ಕೇಟು, ಐಸ್ ಕ್ರೀಮ್ ಗಳನ್ನು ತಂದು ಎಲ್ಲರಿಗೂ ಹಂಚುತ್ತಿದ್ದರು. ಆಶ್ರಮದ ಎಲ್ಲ ಮಕ್ಕಳೂ ಅವರ ಮಡಿಲಿಗೆ ಮುಗಿಬಿದ್ದು ನನಗೆ ತನಗೆ ಅಂತ ಕೂಗಾಡಿ ಗಿಟ್ಟಿಸಿಕೊಳ್ಳುತ್ತಿದ್ದರು. ನಾನು ಮಾತ್ರ ಮುಂಬಾಗಿಲ ಕಟ್ಟೆಯ ಮೇಲೆ ಕುಳಿತು ಅದನ್ನೆಲ್ಲ
ಗಮನಿಸುತ್ತಿದ್ದೆ. ಅದನ್ನವರೂ ಸೂಕ್ಷ್ಮವಾಗಿಯೇ ಗುರುತಿಸಿರುತ್ತಿದ್ದರು. ಆ ಮಕ್ಕಳಿಗೆಲ್ಲ ಹಂಚಿ ಕೈ ಬರಿದಾದ ಮೇಲೆ ತಮ್ಮ ಮತ್ತದೇ ಮಂದಹಾಸವನ್ನು ಹೊತ್ತು ಅತ್ತೆತ್ತಲೋ ಕಣ್ಣು ನೆಟ್ಟು ಕುಳಿತಿದ್ದ ನನ್ನತ್ತ ಬರುತ್ತಿದ್ದರು. ಹತ್ತಿರ ಬಂದವರೇ, " ಕಂದಾ ಇಲ್ಲಿ ನೋಡು! ಅಂತ ತಮ್ಮ ಇನಿದನಿಯಲ್ಲಿ ಉಲಿಯುತ್ತಿದ್ದರು. ನಾನತ್ತ ತಿರುಗಿದ ಕೂಡಲೇ ತಮ್ಮ ಎರಡೂ ಕಿಸೆಯಿಂದ ವಿಶೇಷವಾಗಿ ನನಗಾಗಿಯೇ ತಂದಿದ್ದ ಚಾಕೊಲೇಟುಗಳನ್ನು ನೀಡುತ್ತಿದ್ದರು. ಓಹ್! ನನಗಾಗ ಸ್ವರ್ಗಕ್ಕೆ ಮೂರೇ ಗೇಣು. ಅವರು ಚಾಕೋಲೇಟು ಕೊಟ್ಟದ್ದಕ್ಕಲ್ಲ. ನನ್ನ ಇರವನ್ನು ಪ್ರೀತಿಸುವ ಒಬ್ಬ ವ್ಯಕ್ತಿ ಇದ್ದಾರಲ್ಲ ಅನ್ನುವ ತೃಪ್ತಿಯಿಂದ. ನನಗೋಸ್ಕರ ತನ್ನ ಸಮಯವನ್ನು ನನ್ನೊಂದಿಗೆ ಕಳೆಯುತ್ತಾರಲ್ಲಾ ಅಂತ ..
ಹೀಗೇ ಪ್ರಾರಂಭವಾದ ನಮ್ಮ ಇಬ್ಬರ ಬಾಂಧವ್ಯ ನನ್ನ ಹಾಡಿನೊಂದಿಗೆ ಮತ್ತಷ್ಟು ಗಟ್ಟಿಯಾಯಿತು. ಚಿಕ್ಕಂದಿನಿಂದ ಕೇಳಿಸಿಕೊಂಡ ಹಾಡುಗಳನ್ನೆಲ್ಲಾ ಶ್ರದ್ಧೆಯಿಂದ ಕಲಿಯುತ್ತಿದ್ದೆ. ಆಶ್ರಮದಲ್ಲಿದ್ದ ಅಂಧರೊಬ್ಬರು ನನಗೆ ಸಂಗೀತ ಹೇಳಿಕೊಡುತ್ತಿದ್ದರು. ನಾನು ತುಂಬಾ ಚೆನ್ನಾಗಿ ಹಾಡುತ್ತಿದ್ದೆ... ಹಾಡುತ್ತಿದ್ದೆನಾ ? ಹಾಗಂತ ಅವರು ಹೇಳುತ್ತಿದ್ದರು. ಆಶ್ರಮಕ್ಕೆ ಬಂದಾಗಲೆಲ್ಲಾ ನನ್ನಿಂದೊಂದು ಹಾಡು ಹಾಡಿಸಿ ಮೈಯೆಲ್ಲಾ ಕಿವಿಯಾಗುತ್ತಿದ್ದರು. ಅವರಿಗೆ ಹಾಡು ಕೇಳುವುದೂ , ನನಗೆ ಹಾಡುವುದೂ ಬಹಳ ಇಷ್ಟವಾದ ವಿಚಾರಗಳಾದ್ದರಿಂದ ಆ ಸಂಗೀತದಿಂದಲೇ ನಮ್ಮಿಬ್ಬರ ನಡುವಿನ ಬಂಧ ಮತ್ತಷ್ಟು ಬಿಗಿಯಾಯಿತು. ಅದರಲ್ಲೂ ಆ ಹಾಡು ಹಾಡುವಾಗ ..... " ಅನಾಥ ಮಗುವಾದೆ ನಾನು ಅಪ್ಪನೂ ಅಮ್ಮನೂ ಇಲ್ಲಾ.... ಅತ್ತರೆ ಮುದ್ದಿಸೋರಿಲ್ಲ.... " ಅನ್ನುವ ಹಾಡನ್ನಂತೂ ಭಾವ ತುಂಬಿ ಹಾಡುತ್ತಿದ್ದೆ.. ಹಾಗಂತ ಅವರು ಹೇಳುತ್ತಿದ್ದರು. ನನ್ನ ಎದೆಯಾಳದ ನೋವು ಹೆಪ್ಪುಗಟ್ಟಿ ಹಾಡಾಗಿ ಹರಿಯುತ್ತಿತ್ತು. ಹೀಗೆ ಆಶ್ರಮದಲ್ಲಿ ಅವರು ಬಂದಾಗಲೆಲ್ಲಾ ನನ್ನನ್ನು ಹುಡುಕುವುದೂ , ನಾನು ಅವರ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾಯುವುದೂ ..... ನಿತ್ಯವೂ ಪರಿಪಾಠವಾಯಿತು.

ಆ ದಿನ ಶಿಶಿರದ ಒಂದು ಮುಂಜಾವು . ಏಳುವ ಹೊತ್ತಿಗಾಗಲೇ ದಿಗಂತದಾಚೆ ಹೊಸ ಸೂರ್ಯ ಓಡಿ ಬಂದಿದ್ದ . ಆಶ್ರಮದ ಸುತ್ತ ನಭಕ್ಕೆ ಚಾಚಿಕೊಂಡಿದ್ದ ಮರಗಳ ಒಡಲಿನಲ್ಲಿ ಬೆಚ್ಚಗೆ ಕುಳಿತಿದ್ದ ಹಕ್ಕಿ ಪಕ್ಷಿಗಳು ತಮ್ಮ ಚಿಲಿಪಿಲಿ ರಾಗದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಆಶ್ರಮದ ಹಸುಗಳು ಗಂಗೆ, ನೀಲೆಯರು ಅಂಬಾ ... ಅನ್ನುತ್ತಾ ಕರುಳಿನ ದನಿಯಾಗುತ್ತಿದ್ದವು. ನೀಲೆ ದಿನ ತುಂಬಿದ ಗರ್ಭಿಣಿ. ನಾಳೆಯೋ, ನಾಡಿದ್ದೋ ಬರುವ ತನ್ನ ಕಂದನಿಗಾಗಿ ಕಾಯುತ್ತಿದ್ದಳು. ಅವಳೆಂದರೆ ನನಗೆ ಬಲು ಆಸೆ. ವಿಶೇಷವೆಂದರೆ ಅವಳೂ ನನ್ನ ಹಾಡಿಗೆ ತಲೆದೂಗುತ್ತಿದ್ದಳು. ಹಾಲು ಕರೆವಾಗ ನನಗೆ ಮಾತ್ರ ಹೆಚ್ಚು ಹಾಲು ಕೊಡುತ್ತಿದ್ದಳು. ಅದಕ್ಕೆಂದೇ ಅವಳ ವಿಷಯಕ್ಕೆ ಮಾತ್ರ ನನ್ನದೇ ಪಾರುಪತ್ಯ.
ಹ್ಮ್ಮ... ಆ ದಿನವಂತೂ ನೀಲೆ ನನ್ನನ್ನು ವಿಶೇಷ ಪ್ರೀತಿಯಲ್ಲಿ ನೋಡುತ್ತಿರುವಂತೆ ತೋರುತ್ತಿತ್ತು. ಅದನ್ನು ನೋಡಿದ ನನಗೆ ಇವತ್ತವಳು ಕರು ಹಾಕಬಹುದು ಅನ್ನಿಸತೊಡಗಿತ್ತು. ಆಶ್ರಮದ ಆಳುಮಗ ಸಿದ್ದನೂ ಹಾಗೇ ಹೇಳಿದ. ಸರಿ.. ಎಲ್ಲ ಕೆಲಸ ಮುಗಿಸಿ ಬಂದವಳೇ ನೀಲೆಯ ಎದುರು ಸ್ಥಾಪಿತಳಾಗಿಬಿಟ್ಟೆ. ಅವಳ ಮೊಗದಲ್ಲಿ ಎಂಥದೋ ಸಂಭ್ರಮ ಎದ್ದು ತೋರುತ್ತಿತ್ತು. ಅದರೊಡನೆಯೇ ಅವ್ಯಕ್ತ ನೋವೂ ಸಹ. ಬರುವ ಕಂದನಿಗಾಗಿ ಕಾತರದಿಂದ ಕಾಯುತ್ತಿರುವಂತೆ ತೊರುತ್ತಿತ್ತು. ಮದ್ಯಾಹ್ನದ ಸೂರ್ಯನ ಪ್ರಖರತೆ ಏರುವವರೆಗೂ ನೀಲೆ ಪ್ರಸವಕ್ಕಾಗಿ ಹರಸಾಹಸ ಮಾಡಿ ಹೆಣ್ಣು ಕಂದನಿಗಾಗಿ ಜನ್ಮವಿತ್ತಳು. ಆ ಮುದ್ದಾದ ಕರುವನ್ನು ನೋಡಿ ನನಗೆ ಖುಷಿಯೋ ಖುಷಿ. ಹುಟ್ಟಿದ ಕರು ಅಂಬಾ ಎನ್ನಲು ಮೊದಲಿಟ್ಟಿತು. ಅದು ಅಂಬಾ ಎಂದು ಕರೆದಾಗಲೆಲ್ಲಾ ನನಗೆ ನನ್ನ ಹೆತ್ತವರ ನೆನಪಾಗುತ್ತಿತ್ತು. ಅದೇ ಗುಂಗಿನಲ್ಲಿ ಇದ್ದ ನನ್ನನ್ನು ಕರೆದದ್ದು ಅದೇ ವ್ಯಕ್ತಿ. ಅವರ ದಾರಿಯನ್ನೇ ಕಾಯುತ್ತಿದ್ದ ನನಗೆ ನೀಲೆಯ ಜೊತೆಯಿದ್ದಾಗ ಸಮಯ ಸರಿದದ್ದೇ ಗೊತ್ತಾಗಿರಲಿಲ್ಲ. ಮಾಮೂಲಿನಂತೆ ಅದು ಅವರು ಬರುವ ಹೊತ್ತೇ .! ಇವತ್ತವರು ಎಮ್ದಿನಂತಿರಲಿಲ್ಲ. ಮೊಗದಲ್ಲಿ ಹರ್ಷ, ಉಲ್ಲಾಸ ತುಂಬಿ ತುಳುಕುತ್ತಿತ್ತು. ಸಂತೃಪ್ತವಾದದ್ದೊಂದು ಮುಖಭಾವ ಅವರಲ್ಲಿತ್ತು. ಅವರು ನನ್ನತ್ತ ಧಾವಿಸಿದವರೇ ಕಂದಾ, ಅನ್ನುತ್ತಾ, ಮಗಳೇ ಇಂದಿನಿಂದ ನೀನು ನನ್ನ ಮಗಳು, ನಾನು ನಿನ್ನಪ್ಪ ನಿನ್ನನ್ನು ದತ್ತು ಸ್ವೀಕರಿಸಿದ್ದೇನೆ. ಎಲ್ಲ ಪ್ರಕ್ರಿಯೆ ಮುಗಿದಿದೆ ಮಗೂ ಅಂದರು. ಅವರ ಹಿಂದೆ ನಿಂತ ಅವರ ಮನೆಯ ಸದಸ್ಯರನ್ನೆಲ್ಲಾ ತೋರುತ್ತಾ ನೋಡು, ಇವರೆಲ್ಲಾ ನಿನ್ನ ಬಂಧುಗಳು " ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದರು. ಹಾಗೇ ಹೇಳುತ್ತಿದ್ದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಹುಶಃ ಎಷ್ಟೋ ದಿನಗಳಿಂದ ಮನದ ಮೂಲೆಯಲ್ಲಿ ಕೊರೆಯುತ್ತಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ದೊರಕಿಸಿಕೊಂಡವರಂತೆ ಇತ್ತು ಅವರ ಆ ಸ್ಥಿತಿ. ಮತ್ತದೇ ಮಂದಹಾಸ ತೋರುತ್ತಾ ’ ಇಂದಿನಿಂದ ನೀನು ನನ್ನ ಮಗಳು’ ಮತ್ತೆ ಹೇಳಿದರು. ಅದನ್ನು ನೋಡ ನೋಡುತ್ತ ನನಗೆ ಒಂದೆಡೆ ಭಯ, ದಿಗಿಲು, ಸಂತೋಷ ಎಲ್ಲ ಒಟ್ಟೊಟ್ಟಿಗೆ ಆದಂತಾಗಿ ಭಾವಬಂಧದೊಳಗೆ ಸಿಲುಕಿದಂತಾಗಿತ್ತು. ಇದ್ದಕ್ಕಿದ್ದ ಹಾಗೇ ನನ್ನ ಮೈ ಇಡೀ ಕಂಪಿಸತೊಡಗಿತ್ತು. ಬಾಯಿ ಕಟ್ಟಿದಂತಾಗಿ ಮಾತನಾಡಲು ಪದವಿಲ್ಲದಂತಾಯ್ತು. ನನ್ನ ಖುಷಿಗೆ ಎಣೆಯಿರಲಿಲ್ಲ. ಒಮ್ಮೆಲೇ ಕುಣಿದು ಕುಪ್ಪಳಿಸಿ, ಈ ಜಗತ್ತೆಲ್ಲಾ ಸುಂದರವಾದಂತೆ ಭಾಸವಾಯಿತು. ನನ್ನ ಉತ್ತರಕ್ಕಾಗಿ ಕಾಯುತ್ತಾ ನಿಂತ ಅವರನ್ನು ತದೇಕಳಾಗಿ ದಿಟ್ಟಿಸಿದೆ. ಅವರು ನನ್ನಪ್ಪ . ಓಹ್ ! ನನ್ನದೆಂತಹಾ ಸೌಭಾಗ್ಯ, ಮನದಾಸೆಯ ಹಾಗೆಯೇ ಆ ಭಗವಂತ ತಥಾಸ್ತು ಅಂದಿದ್ದ.
ಆ ಸಂದರ್ಭದಲ್ಲಿ ನನ್ನ ಯೋಚನಾ ಲಹರಿ ನಾಗಾಲೋಟದಲ್ಲಿ ಓಡಹತ್ತಿತ್ತು. ಭಗವಂತ ನೀಡಿದ ನನ್ನಪ್ಪನ ಜೊತೆಗಿನ ಉಳಿದ ದಿನಗಳ ಕನಸು . ಓಹ್ ! ಅವರು ಹೇಳುತ್ತಿದ್ದರು..... " ಈಗಷ್ಟೇ ಎಲ್ಲ ಪ್ರಕ್ರಿಯೆ ಮುಗಿಸಿದ್ದೇನೆ ಮಗೂ... ನನಗೆ ಮಕ್ಕಳಿಲ್ಲ ಅನ್ನುವ ಕೊರಗನ್ನು ನೀಗಿಸಿದವಳು ನೀನು. ಮಗಳಾಗಿ ನನ್ನ ಮನ ತುಂಬಿದವಳು ನೀನು ... ಪ್ರತಿ ದಿನ ನಿನಗಾಗಿ ಈ ಆಶ್ರಮಕ್ಕೆ ಓಡೋಡಿ ಬರುತ್ತಿದ್ದೆ. ನಿನ್ನ ಮುಗ್ಧತೆಗೆ , ನಿನ್ನ ಹಾಡಿಗೆ ಮನ ಸೋತಿದ್ದೆ... ಇನ್ನೀಗ ನೀನು ನನ್ನ ಮನೆಗೇ ಬರುತ್ತೀಯೆ. ನಾನು ನಿನ್ನನ್ನು ದತ್ತು ತೆಗೆದುಕೊಂಡಿದ್ದೇನೆ. ನಿನ್ನ ಆಶ್ರಮದ ಮುಖ್ಯಸ್ಥರ ಒಪ್ಪಿಗೆ ಪಡೆದಿದ್ದೇನೆ. ನನ್ನ ಮನೆಯವರೂ ಸಹ ನಿನ್ನನ್ನು ಸ್ವೀಕರಿಸಿದ್ದಾರೆ ಕಂದಾ ......ಇನ್ನೀಗ ನಿನ್ನ ಸಂಪೂರ್ಣ ಜವಾಬ್ದಾರಿ ನನ್ನದು. ........ ನಿನ್ನನ್ನು ಜತನದಿಂದ ಕಾಪಾಡುತ್ತೇನೆ. ಗದ್ಗದಿತರಾದರು .

ನನಗೆ ಇದೆಲ್ಲಾ ನಿಜವಾ , ಕನಸಾ ಒಂದೂ ತಿಳಿಯದಂತಾಗಿತ್ತು. ಹೌದಲ್ಲವೇ ಅಪ್ಪ ಅಮ್ಮನ ಮುಖವನ್ನೂ ಕಾಣದೆ ಬೆಳೆದ ನನಗೆ ಅಪ್ಪ ದೊರೆತಿದ್ದಾರೆ. ನನ್ನನ್ನು ಸಾಕುವ ಅಪ್ಪ , ಪ್ರೀತಿ ತೋರುವ ನನ್ನಪ್ಪ, ಕೈ ತುತ್ತು ಮಾಡಿ ಉಣಿಸುವ ನನ್ನಪ್ಪ... ಊರೆಲ್ಲ ಹೊತ್ತು ತಿರುಗುವ ನನ್ನಪ್ಪ ... ಇಷ್ಟು ದಿನ ಎದುರಿಗಿದ್ದರೂ ಅವರೊಬ್ಬ ಒಳ್ಳೆಯ ವ್ಯಕ್ತಿ ಅಂತ ಆರಾಧಿಸುತ್ತಿದ್ದವಳು ಅವರು ಅಪ್ಪನೆಂದಾಕ್ಷಣ ನೋಡುವ ದೃಷ್ಟಿಯೇ ಬೇರೆಯಾಗಿಬಿಟ್ಟಿತು. ಆ ದೇವರೇ ನನಗಾಗಿ ಕಳಿಸಿಕೊಟ್ಟ ನನ್ನಪ್ಪನನ್ನು ನೋಡುತ್ತಾ ಹರುಷ ಉಕ್ಕಿ ಬಗ್ಗಿ ನಮಸ್ಕರಿಸಿ ಅವರ ಪಾದಗಲನ್ನು ಚುಂಬಿಸಿದೆ. ಮೆಲ್ಲನೆ ನನ್ನ ತೋಳುಗಳನ್ನು ಹಿಡಿದೆತ್ತಿದ ನನ್ನಪ್ಪ ನನ್ನ ಹಣೆಗೊಂದು ಸಿಹಿ ಮುತ್ತನಿತ್ತರು. ಮುಂಗುರುಳನ್ನು ನೇವರಿಸುತ್ತಾ ಎದೆಗೊರಗಿಸಿಕೊಂಡರು.... ಆ ಕ್ಷಣ ಕಾಲ ಓಡದೆ ಹಾಗೆಯೇ ನಿಂತುಬಿಡಬಾರದೇ ಅನ್ನಿಸಿತು. ನನ್ನನ್ನು ನಾನೇ ಮರೆತುಹೋದಂತೆನಿಸಿ ಧನ್ಯತೆಯ ಭಾವವನ್ನು ಅನುಭವಿಸತೊಡಗಿದೆ. ಅವರ ಮಡಿಲಲ್ಲಿ ಮಗುವಾಗಿ ಹೋದೆ. ... ದಿವ್ಯವಾದ ಈ ಕ್ಷಣಗಳನ್ನು ಈಗಲೂ ಅನುಭವಿಸುತ್ತಿರುವೆ. .... ಮನದಾಳದಲ್ಲಿ ಮಾರ್ದನಿ ಮೊಳಗಿತ್ತು " ಜ್ವಾಲಾ ! ನಿನ್ನ ಜನ್ಮ ಸಾರ್ಥಕವಾಯಿತು." .......................