ಮೈಸೂರಿನಲ್ಲಿ ನಮ್ಮನ್ನು ಅಸ್ಪಶ್ಯ್ರರಂತೆ ಕಾಣಹತ್ತಿದರು. ನಮಗೆ ಒಂದೊಂದು ದಿವಸ ಕಳೆಯುವುದು ದುಸ್ತರವೆನಿಸತೊಡಗಿತು. ಮೈಸೂರುನಿಂದ ಬೆಂಗಳೂರಿಗೆ ಓಡಾಡುವುದು ನನ್ನ ಈಗಿನ ಸ್ಥಿತಿಯಲ್ಲಿ ಬಹಳ ಕಷ್ಟವೆನಿಸುತಿತ್ತು. ಮೈಸೂರಿನಲ್ಲಿ ಕೆಲಸವಂತೂ ಇರಲಿಲ್ಲ. ಹಾಗಾಗಿ ಬೆಂಗಳೂರಿಗೆ ವಾಪಾಸ್ಸು ಹೋಗುವ ಚಿಂತೆ ಮಾಡಹತ್ತಿದೆ. ಅವಿನಾಶ್ ನ ಮನವೊಲಿಸಿದೆ. ಅವನಂತೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ತೀರಾ ಬಳಲಿದ್ದ. ಹೀಗೆ ಬಿಟ್ಟರೆ ಅನಾಹುತವಾದೀತೆನಿಸಿ ಬೆಂಗಳೂರಿನಲ್ಲಿ ಒಂದು ಸಣ್ಣ ಮನೆ ಬಾಡಿಗೆಗೆ ಹುಡುಕಿದೆ. ಅವಿನಾಶ್ ಮನೆಯಲ್ಲಿ ಕುಳಿತು ಪ್ರಿಂಟಿಂಗ್ ಹಾಗೂ ಬೈಂಡಿಂಗ್ ಕೆಲಸ ಮಾಡಹತ್ತಿದ. ಸ್ವಲ್ಪ ಧೈರ್ಯ ಬಂತು ಅವನಿಗೆ. ನನಗೆ ಆಶಾಕಿರಣ ಸಂಸ್ಥೆಯಲ್ಲಿ ಈ ರೋಗದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಸಿಕ್ಕಿತು. ಜೀವನ ನಡೆಯಬೇಕಿತ್ತಲ್ಲ. ಹಾಗಾಗಿ ಈ ಸ್ಥಿತಿಯಲ್ಲೂ ಕೂಡ ಕೆಲಸ ಮಾಡಲು ಒಪ್ಪಿಕೊಂಡೆ. ಅಲ್ಲಿನ ಪ್ರತಿಯೊಬ್ಬ ಮಕ್ಕಳ ಕರುಣಾಜನಕ ಕಥೆ ಕೇಳಿದ ಮೇಲಂತೂ ನನ್ನ ಕಷ್ಟವೇನೂ ಇಲ್ಲ ಇವರ ಮುಂದೆ ಎನಿಸಿತು.
ಕೆಲವರು ಅಪಘಾತ ಇನ್ನಿತರ ಸಂದರ್ಭಗಳಲ್ಲಿ ಈ ರೋಗಾಣುವುಳ್ಳ ರಕ್ತವನ್ನು ಹಾಕಿಸಿಕೊಂಡು ಪಡೆದಿದ್ದರು. ಇನ್ನೂ ಕೆಲವರಿಗೆ ಲಸಿಕೆ ಮುಂತಾದುವು ಹಾಕಿಸಿಕೊಂಡಾಗ ಕಲುಷಿತ ಇಂಜೆಕ್ಷನ್ ಗಳಿಂದಾಗಿ ಬಂದಿತ್ತು. ಆದರೆ ಹೆಚ್ಚಾಗಿ ಮಕ್ಕಳು ತಾಯಿಯಿಂದ ಈ ರೋಗವನ್ನು ಬಳುವಳಿ ಪಡೆದಿದ್ದರು ಮತ್ತು ಹೆಚ್ಚಾಗಿ ಹೆಂಗಸರಿಗೆ ಅವರ ಗಂಡಂದಿರಿಂದಲೇ ಈ ಕಾಯಿಲೆ ಬಂದಿತ್ತು. ಇದು ನನಗೆ ಸ್ವಲ್ಪ ಆತಂಕವನ್ನುಂಟು ಮಾಡಿತ್ತು. ನನ್ನ ಮಗುವಿಗೇನಾದರೂ ಆದರೆ! ಎಷ್ಟೇ ವೈದ್ಯರೂ ನನಗೆ ಸಮಾಧಾನ ಮಾಡಿದರೂ ಉತ್ತರಕ್ಕೆ ಇನ್ನೂ ೨-೩ ತಿಂಗಳು ಕಾಯಬೇಕಿತ್ತು ನಾನು.
ಅಲ್ಲಿ ನನ್ನ ಗಮನ ಸೆಳೆದ ಮಗುವೆಂದರೆ ೬-೭ ವರ್ಷದ ಪುಟ್ಟ ಬಾಲಕಿ ರೇಶ್ಮಾ. ಆಕೆಯನ್ನು ನೋಡಿದರೆ ಒಂದು ಪುಟ್ಟ ಗೊಂಬೆಯನ್ನು ನೋಡಿದಂತಾಗುತ್ತಿತ್ತು. ಆಕೆ ನಗುವಾಗ ಆಕೆಯ ಕೆನ್ನೆಯಲ್ಲಿ ಮೂಡುವ ಗುಳಿ ನೋಡುತ್ತಿದ್ದರೆ ನನ್ನೆಲ್ಲಾ ಕಷ್ಟ ಮರೆತು ಹೋಗುತ್ತಿತ್ತು. ಗುಂಗುರು ಕೂದಲಿನ, ಕಪ್ಪು ಕಣ್ಗಳ ಪುಟ್ಟ ಗೊಂಬೆ ರೇಷ್ಮಾ. ಪಾಪ ತಂದೆ ತಾಯಿಯಿಲ್ಲದ ಅನಾಥ ಮಗು. ಆ ಮಗುವನ್ನು ಅವಳ ಚಿಕ್ಕಪ್ಪ ತಂದು ಇಲ್ಲಿ ಬಿಟ್ಟು ಹೋಗಿದ್ದ. ಇಲ್ಲಿಗೆ ಬಂದ ಮೇಲೆಯೇ ಅವಳಿಗೂ ಕೂಡಾ ಈ ಕಾಯಿಲೆಯಿರುವುದು ಗೊತ್ತಾಗಿತ್ತು. ಕ್ಲಾಸಿಗೆ ಫಸ್ಟ್ ಬರುತ್ತಿತ್ತು ಆ ಮಗು. ಅವಳು ಕಣ್ಗಳನ್ನು ಅರಳಿಸಿ, ಪಟಪಟ ಮಾತಾಡುತ್ತಿದ್ದರೆ ಮನಸ್ಸಿಗೆ ಬಹಳ ಹಿತವಾಗುತ್ತಿತ್ತು ಹಾಗೇಯೇ ನೋವು ಕೂಡಾ. ಒಮ್ಮೆಯಂತೂ ನಾನು ಅವಳೊಟ್ಟಿಗೆ ಮಾರ್ಕೆಟ್ಟಿಗೆ ಹೋಗಿ ಬರುವಾಗ ಕಾಲೇಜೊಂದನ್ನು ತೋರಿಸಿ, ನಾನಲ್ಲಿ ಲೆಕ್ಚರರ್ ಆಗಬೇಕೆಂಬ ಆಸೆ ಎಂದಾಗ ನನ್ನ ಕಣ್ಣಲ್ಲಿ ನನಗರಿವಾಗದಂತೆ ನೀರು ತುಂಬಿದ್ದು ಸುಳ್ಳಲ್ಲ. ಪಾಪ ಅವಳಿಗೆ ಇಂತಹ ಭಯಾನಕ ಕಾಯಿಲೆಯಿದೆ ಎಂಬುದರ ಅರಿವಿರಲಿಲ್ಲ. ಒಮ್ಮೊಮ್ಮೆ ಅವಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರಲು ತೋಚುತ್ತಿರಲಿಲ್ಲ. ಅವಳ ಚಿಕ್ಕಮ್ಮ ಅವಳಿಗೆಂದೇ ಬೇರೆ ತಟ್ಟೆ, ಲೋಟ ಇಟ್ಟು, ಅವಳೇ ಅದನ್ನು ತೊಳೆದು ತರುವಂತೆ ಹೇಳುತ್ತಿದ್ದರಂತೆ. ಅವಳ ಬಟ್ಟೆಗಳನ್ನು, ಅವಳ ರೂಮನ್ನು ಅವಳೇ ಕ್ಲೀನ್ ಮಾಡಿಕೊಳ್ಳಬೇಕಿತ್ತಂತೆ. ಅವಳಿಗೆ ಊಟ ಬಡಿಸಬೇಕೆಂದರೆ ಅಸ್ಪಶ್ಯ್ರರಂತೆ ಬಡಿಸುತ್ತಿದ್ದರಂತೆ. ನೆರೆಹೊರೆಯ ಮಕ್ಕಳು ಇವಳು ಬಂದ ಕೂಡಲೇ ಮನೆಗೆ ಓಡಿ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದರಂತೆ. ಒಂದು ದಿನ ಪಕ್ಕದ ಮನೆಯ ಹುಡುಗಿಯನ್ನು ಮುಟ್ಟಿ ಮಾತಾಡಿಸಿದಕ್ಕೆ ಆ ಮನೆಯವರು ಬಂದು ದೊಡ್ಡ ಜಗಳವಾಡಿ, ಚಿಕ್ಕಮ್ಮ ಇವಳಿಗೆ ಹಿಗ್ಗಾಮುಗ್ಗಾ ಹೊಡಿದಿದ್ದರಂತೆ. ಇವಳ ಚಿಕ್ಕಪ್ಪ ಅದಾದ ಮೇಲೆ ಇವಳನ್ನು ತಂದು ಇಲ್ಲಿ ಬಿಟ್ಟು ಹೋಗಿದ್ದರು. "ನನ್ನ ತಪ್ಪೇನು ಆಂಟಿ? ನಾನು ಅವರೊಡನೆ ಆಡಬಾರದೇ? ಎಂದೆಲ್ಲಾ ಕೇಳುತ್ತಿದ್ದಳು. ಅವಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. "ಆದರೂ ಇಲ್ಲಿಗೆ ಬಂದ ಮೇಲೆ ಬಹಳ ಸಂತೋಷವಾಗಿದ್ದೀನಿ" ಎಂದೆಲ್ಲಾ ಹೇಳುತ್ತಿದ್ದಳು. ಇಲ್ಲಿಗೆ ಬರುವ ವೈದ್ಯರು ಕೊಡುವ ಚಾಕಲೇಟ್ ಗಳಿಗೆ ಕಾಯುತ್ತಿದ್ದ ಅವಳನ್ನು ನೋಡುತ್ತಿದ್ದಾಗ ಕರುಳು ಚುರುಕ್ ಎನ್ನುತ್ತಿತ್ತು.
ದಿವಸಗಳು ತುಂಬಿತು. ಆಶಾಕಿರಣದಲ್ಲಿರುವ ಆಸ್ಪತ್ರೆಯಲ್ಲಿ ನನ್ನ ಹೆರಿಗೆ ಯಾವುದೇ ತೊಂದರೆಯಿಲ್ಲದೆ ಆಯಿತು. ಗಂಡು ಮಗು. ನೋಡಲು ಆರೋಗ್ಯವಾಗಿ ಕಾಣುತ್ತಿತ್ತು. ಅವಿನಾಶ್ ನಿಗೆ ನನ್ನಂತಹ ಹೆಣ್ಣುಮಗು ಬೇಕಿತ್ತಂತೆ. ನನಗೆ ಮಾತ್ರ ಅದು ಆರೋಗ್ಯವಾಗಿದ್ದರೆ ಸಾಕು ಎಂಬ ಆಸೆ. ನನ್ನ ಪಡಿಯಚ್ಚಿನಂತಿದೆ ಎಂದು ಅಲ್ಲಿರುವ ನರ್ಸ್ ಗಳೆಲ್ಲರೂ ಹೇಳುತ್ತಿದ್ದರು. ಅಣ್ಣ ಅತ್ತಿಗೆ ಬರಲೇ ಇಲ್ಲ. ಗೊತ್ತಿದ್ದಿದ್ದೇ ಅದು. ಅವರು ಬರದಿದ್ದರಿಂದ ನನಗೇನೂ ನಿರಾಸೆಯಾಗಲಿಲ್ಲ. ರೇಶ್ಮಾಳಂತೂ ನನ್ನನ್ನು ಬಿಟ್ಟು ಅಲಗಿರಲಿಲ್ಲ. ತಮ್ಮ, ತಮ್ಮ ನೆಂದು ಮಗುವನ್ನು ಎತ್ತಾಡಿ ಮುದ್ದಿಸುತ್ತಿದ್ದಳು. ನನ್ನನ್ನು ನೋಡಲು ಬಂದ ವೈದ್ಯರು ಇನ್ನೂ ೩ ತಿಂಗಳು ಕಾಯಬೇಕು ಮಗುವಿನ ರಕ್ತ ಪರೀಕ್ಷೆ ಮಾಡಿಸಲೆಂದರು. ಇನ್ನೂ ಮೂರು ತಿಂಗಳು ಕಾಯಬೇಕೆ?
ಮಗು ಹುಟ್ಟಿದ ಗಳಿಗೆಯೋ ಏನೋ! ಅವಿನಾಶ್ ನಿಗೆ ಪ್ರತಿಷ್ಟಿತ ಕಂಪೆನಿಗಳಿಗೆ ಫೈಲ್, ಲೆಟರ್ ಹೆಡ್ಸ್ ಮುಂತಾದವುಗಳನ್ನು ಮಾಡಿಕೊಡಲು ಕಂಟ್ರಾಕ್ಟ್ ಸಿಕ್ಕಿತು. ಇನ್ನೂ ಇಬ್ಬರು HIV ಇಂದ ಬಳಲುತ್ತಿರುವವರನ್ನು ಕೆಲಸಕ್ಕೆ ತೆಗೆದುಕೊಂಡ. ಓಡಾಡಲು ಒಂದು ಬೈಕ್ ತೆಗೆದುಕೊಂಡ. ವೈದ್ಯರು ಹೇಳಿದ ದಿನಕ್ಕೆ ಮಗುವಿನ ರಕ್ತ ಪರೀಕ್ಷೆ ಮಾಡಿಸಲು ಆತಂಕದಿಂದಲೇ ಹೋದೆವು. ಲ್ಯಾಬ್ ನಲ್ಲಿ ಮಗುವಿನ ರಕ್ತ ಪರೀಕ್ಷೆ ಆಯಿತು. ಕೈಕಾಲುಗಳಲ್ಲಿ ನಡುಕ. ಏನಾಗುವುದೋ? ಎಂಬ ಭಯ. ನನ್ನ ಆತಂಕ ನೋಡಿ ಅಲ್ಲಿದ್ದ ನರ್ಸ್ ಗಳೆಲ್ಲರೂ ನನಗೆ ಸಮಾಧಾನ ಹೇಳುತ್ತಿದ್ದರೂ, ಅವರೆಲ್ಲರೂ ಕೂಡಾ ಆತಂಕದಲ್ಲಿದ್ದರು. ರಿಪೋರ್ಟ್ ಬಂತು. ಗಾಬರಿಯಿಂದಲೇ, ನಡುಗುತ್ತಿದ್ದ ಕೈಗಳಿಂದ ರಿಪೋರ್ಟ್ ನೋಡಿದೆ. ‘ನೆಗೆಟೀವ್’. ನನ್ನ ಕಣ್ಣನ್ನು ನಾನೇ ನಂಬಲಿಲ್ಲ. ಮನಸಾರೆ ಮಗುವನ್ನು ಮುದ್ದಿಟ್ಟೆ. ಕುಣಿದಾಡಿದೆ. ನನ್ನ ಸಂತೋಷವನ್ನು ಕಂಡ ಅಲ್ಲಿದ್ದವರ ಕಣ್ಣುಗಳಲ್ಲೂ ತೆಳು ನೀರು. ವೈದ್ಯರ ಕಾಲಿಗೆ ಬಿದ್ದೆ. "ನನಗೆ ಕೃತಜ್ನತೆ ಸಲ್ಲಿಸಬೇಕೆಂದಿದ್ದರೆ, ನಿನ್ನನ್ನು ಮತ್ತು ನಿನ್ನ ಮಗುವನ್ನು ಸುರಕ್ಷತೆಯಿಂದ ನೋಡಿಕೋ" ಎಂದರು ಆ ಮಹಾನುಭಾವ ವೈದ್ಯರು. ನನ್ನ ಕಣ್ಣಲ್ಲಿ ಮೂಡಿತ್ತು ಆನಂದೋಭಾಷ್ಪ. ವೈದ್ಯರಿಗೆ ಕೃತಜ್ನತೆ ಸಲ್ಲಿಸಿ ಹೊರಬಂದೆವು. ಮೊದಲ ಬಾರಿಗೆ ಮನೆಯಲ್ಲಿ ಸಿಹಿ ಮಾಡಿ ಆಶಾಕಿರಣಕ್ಕೆ ಕೊಂಡೊಯ್ಚು ಸಂತೋಷವನ್ನು ಆಚರಿಸಿದೆವು. ರೇಶ್ಮಾಳನ್ನು ನೋಡಿದ ಕೂಡಲೇ ಈ ಮಗುವನ್ನು ದತ್ತು ತೆಗೆದುಕೊಳ್ಳಲೇ ಎಂದನ್ನಿಸಿತು. ಅವಿನಾಶ ನ ಅಭಿಪ್ರಾಯ ಕೇಳಿದೊಡನೆಯೇ ಒಪ್ಪಿಕೊಂಡುಬಿಟ್ಟ. ಆಶಾಕಿರಣದ ಮುಖ್ಯಸ್ಥರೊಂದಿಗೆ ಭೇಟಿ ಮಾಡಿ ವಿಷಯ ತಿಳಿಸಿದೆ. ಅವರು ಒಪ್ಪಿಕೊಂಡರು. ಕಾನೂನಿನ ಪ್ರಕಾರ ರೇಶ್ಮಾಳನ್ನು ದತ್ತು ತೆಗೆದುಕೊಂಡೆ. ಒಂದು ಒಳ್ಳೆಯ ದಿವಸ ಮನೆಗೆ ಕರೆದುಕೊಂಡು ಬಂದೆ. ನನ್ನ ಮನೆ ತುಂಬಿತ್ತು. ಸಂಪೂರ್ಣವಾಗಿತ್ತು. ಸುಖೀ ಕುಟುಂಬವಾಯಿತು.
ಮುಗಿಯಿತು.
ಸಂಪದಿಗರೇ! ಈ ಕಥೆಗೆ ನಾನು ನೀಡಿದ ಮುಕ್ತಾಯವಿದು. ನೀವು ಕೂಡಾ ನಿಮಗನ್ನಿಸಿದ ಹಾಗೆ ಮುಕ್ತಾಯ ಹಾಡಬಹುದು. ಬರೆಯಿರಿ ಎಲ್ಲರೂ
ಮೂರು ಭಾಗಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ.
http://sampada.net/blog/inchara123/09/03/2009/17724
http://sampada.net/blog/inchara123/10/03/2009/17782
http://sampada.net/blog/inchara123/11/03/2009/17823
ಪ್ರತಿಕ್ರಿಯೆ (5)