ವಿಶ್ವಾಸದಲೆಮೇಲೆ, ಭರವಸೆಯ ಜೊತೆಗೂಡಿ
ಬಂದಿತ್ತು ಕುಣಿಯುತ್ತಲೀ ಕಳೆದ ವರುಷ ||
ದುಃಖವನು ಕಷ್ಟವನು ಬದಿಗೊತ್ತಿ ದೂಡಿ
ತರುವೆತಾನೆಂದಿತ್ತು ಬಹಳಷ್ಟು ಹರುಷ || ೧ ||
ಹಳೆಯ ಮುದುಕನ ಬದಲು ಹೊಸತು ಮಗುವೆಂದು
ಆಂಧಕಾರವ ತೊಡೆಯೊ ಮುಂಜಾನೆಯೆಂದು
ಬರಗೊಂಡೆವು ನಾವು ಕುಣಿಯುತ್ತ ನಲಿಯುತ್ತ
ಶುಭದಿನಗಳಾಗನಸು ಸವಿ ನನಸಾಗಲೆಂದು || ೨ ||
ದಿನಗಳುರುಳುತಿರೆ, ಚಿಗುರು ನೆರೆಯುತಿರೆ
ಆಸೆಗಳಾವಿಯಲಿ ನೈಜಗಳು ಬೇಯುತಿರೆ
ಸುಖದ ಬಿಳುಪಿಗೆ ಕಪ್ಪು ಕಷ್ಟಗಳ ಹೆಣೆಯುತಿರೆ
ತುಂಬಿಹುದು ಜನಮನದಿ ಚಿಂತೆಗಳ ಸಾಲೆ || ೩ ||
ಕಟು ಜೀವನದರಿವು ತಾಪಿಸುತಲಿರುವಾಗ
ಮತ್ತೆ ತೋರುತಲಿಹುದು ಮಂಗಳದ ನೋಟ ||
ಸಂತೋಷವೀವುದು, ಶಾಂತಿ ಸ್ಥಿಥಿಸುವುದು
ನವ ವರುಷ ಸೊಗಸಾದ ತಂಪ ನೀಡುವುದು || ೪ ||
ವಿಶ್ವಾಸದಲೆಮೇಲೆ, ಭರವಸೆಯ ಜೊತೆಗೂಡಿ
ಬರುತಿಹುದು ಕುಣಿಯುತ್ತ ಮತ್ತೊಂದು ವರುಷ ||
ದುಃಖವನು ಕಷ್ಟವನು ಬದಿಗೊತ್ತಿ ದೂಡಿ
ತರುವೆತಾನೆಂದಿಹುದು ಬಹಳಷ್ಟು ಹರುಷ || ೫ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!