ಬಯಲ ಮರಗಳ ತುಂಬ
ಜೀವಸೆಲೆಯುಸಿರು
ವಸಂತ ತಂದಿಹ ನೋಡು
ಮರಮರದಿ ಹಸಿರು ||
ಎಲ್ಲೆಲ್ಲೂ ಹೊಸ ಹರುಷ
ಉತ್ಸಾಹ ಕಿರಣ
ನವ ವರುಷ ಹಾದಿಯಲಿ
ನಗೆ ಬಗೆಯ ಸ್ಫುರಣ ||
ಸಂತಸವನುಕ್ಕಿಸುವ
ಸಂತರೆದೆಯಲ್ಲೂ
ಉತ್ಸಾಹವಿರಿಸಿ
ಕಹಿ ಬೇವ ಚಿಗುರಲ್ಲೂ ||
ವಸಂತನದೆ ಹೆಸರಿಹುದು
ಚಿಗುರೆಲೆಯ ತುಂಬ
ಪ್ರಕೃತಿಯ ಒಡಲಿನಲಿ
ಅವನದ್ದೆ ಬಿಂಬ ||
ನವ ಜೀವ ನವ ಭಾವ
ಸಿರಿ ಬಯಲಿನಲ್ಲಿ
ನರ್ತನವಗೈದಿಹುದು
ಹೂ ನಗೆಯ ಚೆಲ್ಲಿ ||
ಪ್ರತಿ ಜೀವದಲಿ ಹೊಸತು
ಹುರುಪು ಬಂದಾಯ್ತು
ಜೀವನಕೆ ಚೇತನದ
ಚಿಲುಮೆ ತಂದಾಯ್ತು ||
ಪ್ರತಿಕ್ರಿಯೆ (6)