ಜಗತ್ತಿನ ಅತ್ಯಂತ ಹ್ರಸ್ವ ಕಾವ್ಯ ಪ್ರಕಾರ-ಹಾಯ್ಕು
ಹಾಯ್ಕು ಎನ್ನುವುದು ಜಪಾನೀ ಕಾವ್ಯದ ಒಂದು ಪ್ರಭೇದ. ಇದರಲ್ಲಿ ಒಟ್ಟು ೧೭ ಅಕ್ಷರಗಳಿರುತ್ತವೆ. ಅವನ್ನು ಮೂರು ಸಾಲಿನಲ್ಲಿ ಹಂಚಿರುವರು. ಮೊದಲ ಸಾಲಿನಲ್ಲಿ ಐದು. ಎರಡನೆಯ ಸಾಲಿನಲ್ಲಿ ಏಳು ಹಾಗೂ ಮೂರನೆಯ ಸಾಲಿನಲ್ಲಿ ಐದು. ಇಲ್ಲಿ ಅಕ್ಷರವನ್ನು ಇಡಿಯಾಗಿ ಪರಿಗಣಿಸಬೇಕಾಗುತ್ತದೆ. ನಮ್ಮ ಹಾಗೆ ಮಾತ್ರೆಗಳನ್ನಲ್ಲ. ಜಪಾನೀಯರು ಹಾಯ್ಕು ನಿಯಮಗಳನ್ನು ಕರಾರುಕ್ಕಾಗಿ ಪಾಲಿಸುತ್ತಾರೆ.
ಹಾಯ್ಕು, ಇಂಗ್ಲೀಷ್ ಹಾಗೂ ಇತರ ಭಾಷೆಗಳನ್ನು ಪ್ರವೇಶಿಸಿದೆ. ಬಹುಶಃ ರವೀಂದ್ರನಾಥ ಠಾಕೂರರು ಹಾಯ್ಕುವನ್ನು ಬಂಗಾಳಿಯಲ್ಲಿ ಪ್ರಯೋಗಿಸಿದರು. ಗುಜಾರಾತಿಯಲ್ಲಿ ಹಾಯ್ಕುವಿನ ಪ್ರಯೋಗಗಳು ಸಾಕಷ್ಟು ನಡೆದಿವೆ. ಕನ್ನಡಕ್ಕೆ ಹಾಯ್ಕುವಿನ ಪ್ರವೇಶವಾಗಿ ಹಲವು ದಶಕಗಳು ಕಳೆದಿವೆ.
ಇಂಗ್ಲೀಷ್ ಅಥವ ಕನ್ನಡದಲ್ಲಿ ಹಾಯ್ಕುವನ್ನು ಬರೆಯುವಾಗ ೧೭ ಅಕ್ಷರಗಳ ನಿಯಮವನ್ನು ಪಾಲಿಸುತ್ತಾರೆ. ಆದರೆ ಅವುಗಳ ೫-೭-೫ ವಿತರಣೆಯ ನಿಯಮವನ್ನು ಪಾಲಿಸುವುದಿಲ್ಲ.
ಹಾಯ್ಕು, ಜಗತ್ತಿನ ಅತ್ಯಂತ ಹ್ರಸ್ವ ಸ್ವರೂಪದ ಕಾವ್ಯಪ್ರಕಾರ ಎಂದು ತಜ್ಞರ ಅಭಿಮತ. ಹಾಯ್ಕುವಿನ ವಿಷಯ ಏನು ಬೇಕಾದರೂ ಆಗಬಹುದು. ಆದರೆ ವಿಷಯ ಎಲ್ಲರಿಗೂ ಚಿರಪರಿಚಿತವಾಗಿರಬೇಕು. ಓದಿದಾಗ, ಅದರಲ್ಲಿ ಒಂದು ಸೆಳೆಮಿಂಚು ಇರಬೇಕು. ಕೇಳಿದ ಕೂಡಲೇ ವಾರೆ ವಾಹ್ ಎನ್ನುವಂತಿರಬೇಕು. ಪರಿಚಿತ ವಿಷಯದ ಹೊಸಮಗ್ಗುಲನ್ನು ತೋರುವಂತಿರಬೇಕು. ಅರ್ಥವನ್ನು ಪೆಪ್ಪರಿಮೆಂಟಿನ ಹಾಗೆ ಪದೇ ಪದೇ ಚಪ್ಪರಿಸುವತಿರಬೇಕು.
ಈಗ ಒಂದೆರಡು ಕನ್ನಡ ಹಾಯ್ಕುಗಳು:
ಮಹತ್ತು
ಸಖಿಯ ನೆನಪು ತಂದ
ಮತ್ತು-
ನಿನಗಿಲ್ಲ ಮದಿರೆ!
ಔಷಧ
ಏಕಾಂತ! ತಡೆಯಲಾರೆ
ಹಚ್ಚು
ನೆನಪಿನ ಮುಲಾಮು!
ತುಡಿತ
ಸೀನು, ಅರೆಬಂದು
ಹೋದ ಹಾಗೆ-
ಸಖಿ! ಪೂರ್ಣ ಪ್ರೀತಿಸು!
ಅನುಮಾನ
ನಿನ್ನ ಬೇರು ಬಿಳಲು
ನನ್ನ ಹೃದಯದಲಿ-
ನನ್ನದು?!
ಸಂಪದಿಗರೆ! ಇನ್ನು ತಡವೇಕೆ? ಬರಲಿ ಪುಂಖಾನುಪುಂಖವಾಗಿ ಹಾಯ್ಕುವಿನ ಬಿರುಮಳೆ!!!
-ನಾಸೋ
ಪ್ರತಿಕ್ರಿಯೆ (2)