ಹೆಸರಲ್ಲೇನಿದೆ ಅಂತ ಷೇಕ್ಸ್ ಪಿಯರ್ ಕೇಳಿದ್ರು, ಆದ್ರೆ ನಮ್ಮೆಲ್ರಿಗೂ ಗೊತ್ತು ಹೆಸರಲ್ಲೇ ಎಲ್ಲಾ ಇದೆ ಅಂತ. ಒಂದು ಸರ್ವೇ ಪ್ರಕಾರ, ಎಲ್ರಿಗೂ ತಮ್ಮ ತಮ್ಮ ಹೆಸರು ಅಂದ್ರೆ ತುಂಬಾ ಇಷ್ಟ ಅಂತೆ, ಯಾಕಂದ್ರೆ ಪ್ರತಿ ವ್ಯಕ್ತಿಯೂ ತುಂಬಾ ಸರ್ತಿ ಕೇಳಿರೋ ಪದ ಅಂದ್ರೆ ಅವರವರ ಹೆಸರೇ ಅಂತೆ. ಹೌದಲ್ವಾ, ಹುಟ್ಟಿದಾರಭ್ಯ ಅಥವಾ ಹೆಸರಿಟ್ಟಾರಭ್ಯ ನಮ್ಮದೇ ಹೆಸರನ್ನ ಅದೆಷ್ಟು ಸಲ ಕೇಳಿರ್ತೀವೋ ಲೆಕ್ಕವಿಲ್ಲ, ಬಯ್ಯಿಸಿಕೊಳ್ಳೋಕ್ಕೆ, ಹೊಗಳಿಸಿಕೊಳ್ಳೋಕ್ಕೆ, ಕರೆಯುವಾಗ, ಬುದ್ಧಿವಾದ ಕೇಳೋವಾಗ, ಶಾಲೆ/ ಕಾಲೇಜುಗಳಲ್ಲಿ ಅಟೆಂಡೆನ್ಸ್ ಹಾಕೋವಾಗ, ಇತ್ಯಾದಿ ಇತ್ಯಾದಿ.

ಎಳೆ ಮಕ್ಕಳು ತಮ್ಮ ಹೆಸರಿಗೆ ಪ್ರತಿಕ್ರಿಯಿಸೋದು ಕೂಡ ಅವರ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲು ಅನ್ನಿಸಿಕೊಳ್ಳತ್ತೆ. ಅವರವರ ಹೆಸರು ಹೇಗೇ ಇರ್ಲಿ ಅದರ ಬಗ್ಗೆ ಎಲ್ಲರಿಗೂ ಒಂಥರಾ ಅಭಿಮಾನ ಇದ್ದೇ ಇರತ್ತೆ, ತಮಗೆ ಇಟ್ಟ ಹೆಸರಿನ ವಿಶೇಷಕ್ಕೆ(ಅದರ ಕಾರಣಕ್ಕೆ) ಅಥವಾ ವಿಶೇಷವಾದ ಹೆಸರಿನ ಬಗ್ಗೆ ಹೆಮ್ಮೆ ಕೆಲವರಿಗಾದ್ರೆ, ಅಪರೂಪದ ಹೆಸರಿರುವವರಿಗೆ ಅದನ್ನೇ ಮೆರೆಯಿಸುವ ಇಚ್ಛೆ. ಕ್ಲಿಷ್ಟವಾದ ತಮ್ಮ ಹೆಸರನ್ನು ತಪ್ಪಾಗಿ ಉಚ್ಚರಿಸಿದರೆ ಕಡುಕೋಪ ಕೆಲವರಿಗಾದ್ರೆ, ಬೇರೆಯವರ ಹೆಸರಿಂದ ತಮ್ಮನ್ನು ಗುರುತಿಸಿದರೆ/ ಕರೆದ್ರೆ ’ಐಡೆಂಟಿಟಿ ಕ್ರೈಸಿಸ್’ ಆಗುತ್ತಿದೆ ಎಂಬ ಭಾಧೆ ಕೆಲವರಿಗೆ !!!

ಕಾರಣಾಂತರಗಳಿಂದ ತಮ್ಮ ಹೆಸರನ್ನೇ ಬದಲಿಸಿಕೊಳ್ಳುವವರಂತೂ ಚಿತ್ರರಂಗದಲ್ಲಿ ಮಾಮೂಲಿ. ರೀಲ್ ಲೈಫಿಗೆ ಅದರ ಅಗತ್ಯ ಇದೆ ಅಂತ ಕೆಲವರಿಗೆ ಅನ್ನಿಸಿದ್ರೆ, ರಿಯಲ್ ಲೈಫಿನಲ್ಲೂ ತಮ್ಮ ಹೆಸರು ವಿಚಿತ್ರವಾಗಿದೆ ಎಂದೋ ಅಥವಾ ಈಗಿನ ಹೊಸಾ ’ಹುಚ್ಚಾ’ದ ನೇಮಾಲಜಿಯ ಪ್ರಕಾರ ತಮ್ಮ ಹೆಸರನ್ನು ಬದಲಿಸೋ ಅಥವಾ ಅದರ ಸ್ಪೆಲ್ಲಿಂಗನ್ನೇ ತಿದ್ದಿಸೋ ಅಫಿಡವಿಟ್ ಮಾಡಿಸುವ ಪರದಾಟ ಕೆಲವರದ್ದು.

ತಮಗೆ ಹುಟ್ಟಿದ ಮಕ್ಕಳಿಗಂತೂ ಇರೋದ್ರಲ್ಲಿ ’ಯುನೀಕ್’ ಹೆಸರನ್ನಿಡಬೇಕು ಅನ್ನೋ ತವಕದಲ್ಲಿ ವಿಶಿಷ್ಟ ಹೆಸರುಗಳನ್ನ ಹುಡುಕೋ ತಂದೆತಾಯಿಯರು ಒಂದು ಕಡೆಯಾದರೆ, ಜಾತಕ-ಪಾತಕಗಳನ್ನ ನಂಬೋ ಜನರ ದಂಡು ಅದರಲ್ಲಿ ಹೇಳಿರೋ / ಬಂದಿರೋ ಅಕ್ಷರದಿಂದ್ಲೇ ಹೆಸರಿಡಬೇಕೆಂದು (ಆ ಅಕ್ಷರ – ಡ, ಟ ಹೀಗೆ ಎಷ್ಟೇ ಕಷ್ಟವಾಗಿದ್ರೂ) ಪೇಚಾಡುತ್ತಾರೆ. ಕರೆಯಲು ಸುಲಭವಾಗಿರಬೇಕು, ಅರ್ಥಪೂರ್ಣವಾಗಿರಬೇಕು, ಪುರಾಣಗಳಲ್ಲಿದ್ದರೂ ಆಧುನಿಕ ಅನ್ನಿಸಬೇಕು ಅಂತೆಲ್ಲ ಹೊಸಾ ಅಪ್ಪ ಅಮ್ಮಂದಿರಿಗೆ ಅನ್ನಿಸೋದು ಸಹಜ. ಇದೇ ಗುಂಗಿನಲ್ಲಿದ್ದಾಗ ಒಂದು ಮಗುವಿನ ಹೆಸರನ್ನು ಅವನ ಅಮ್ಮ ಒಂದು ದೇವಸ್ಥಾನದಲ್ಲಿ ಕರೆದಾಗ ಇತ್ತೀಚೆಗೆ ಕೇಳಿದೆ – ಆ ಪುಟ್ಟ ಹುಡುಗನ ಹೆಸರು ಶಾರ್ದೂಲ ಅಂತ…ಶಾರ್ದೂಲ ಅನ್ನೋದು ಒಂದು ಕಾಲ್ಪನಿಕ ಪ್ರಾಣಿ ಅಂತ ಇವರಿಗೆ ವಿವರಿಸಬೇಕು ಅನ್ನಿಸಿದರೂ ಯಾರೋ ಗುರುತು ಪರಿಚಯ ಇಲ್ಲದವರ ಹತ್ತಿರ ಹಾಗೆ ಹೇಳೋ ಧೈರ್ಯ ಬರಲಿಲ್ಲ, ಸುಮ್ಮನಾದೆ :-(

ಹೀಗೆ ಹೆಸರಿನ ಅವಾಂತರಗಳನ್ನ ನೆನಪಿಸಿಕೊಂಡಾಗ ಹೆಕ್ಕಿದ ಕೆಲವು ಕಾಳುಗಳು:
- ನನಗೆ ಗೊತ್ತಿರುವವರೊಬ್ಬರ ಮಗಳ ಹೆಸ್ರು "ಮೆಜೋಸೆ" -ಯಾಕಂದ್ರೆ ಆ ಹುಡುಗಿಯ ಅಮ್ಮ ಮೇರಿ, ಅಪ್ಪ ಜೋಸೆಫ್-- ಇದು ನಿಜವಾಗಿಯೂ ನಿಜ!!
- ನಮ್ಮ ತರಗತಿಯಲ್ಲಿ ಒಬ್ಬಳು ದ್ರಾಕ್ಷಾಯಿಣಿ ಅಂತಿದ್ಳು. ದಕ್ಷನ ಮಗಳ ಹೆಸರು ಇಡಕ್ಕೆ ಹೋದಾಗ ಅವ್ರಿಗೆ "ದ್ರಾಕ್ಷಿ"ಯ ನೆನಪು ಬಂದಿತ್ತೋ ಏನೋ :-)
- ಅಕ್ಕನ ಕ್ಲಾಸಿನಲ್ಲಿ ಒಬ್ಬಳು ’ತಾಮಸದೇವಿ’ ಇದ್ಲು!
- ನಮ್ಮದೇ ಲೆಕ್ಚರರ್ ಒಬ್ರು ಕೆ.ಆರ್. ಎಸ್ ಅಂತ, ಅವರ ಹೆಸ್ರು ಎಷ್ಟು ಅನ್ವರ್ಥವಾಗಿತ್ತೆಂದರೆ, ಅವರ ಕ್ಲಾಸಿನಲ್ಲಿ ಮೊದಲ ಬೆಂಚಿನ ಹುಡುಗಿಯರೆಲ್ಲಾ ಅವರ "ಮಳೆ"ಗೆ/ಪುಟಿಯುವ ಕಾರಂಜಿಗೆ ಹೆದರಿ ಸೀಟ್ ಖಾಲಿ ಮಾಡಿ ಬಿಡೋವ್ರು, ನಾವೆಲ್ಲಾ ಹಿಂದಿನ ಸಾಲಿನವರಾದ್ರಿಂದ ಬಚಾವ್...
-ನಮ್ಮ ಕಚೇರಿಯಲ್ಲಿ ಒಬ್ರು ಕಿರುಬಾನಂದನ ಅಂತಿದ್ದಾರೆ, ನಾನು ಎಲ್ಲಾ ಬಿಟ್ಟು ಇವ್ರಿಗೆ ಕಿರುಬನ ಮಗ ಅಂತ ಯಾಕೆ ಹೆಸ್ರಿಟ್ರಪ್ಪಾ ಅಂತ ಯೋಚಿಸ್ತಿದ್ದೆ, ಆಮೇಲೆ ಒಬ್ಬ ತಮಿಳ್ ಪಂಡಿತರು ಹೇಳಿದರು, ಕೃಪಾ ಅನ್ನೋದಕ್ಕೆ ತಮಿಳರು ಕಿರುಬಾ ಅಂತಾರೆ ಅಂತ
-“ನಂದ” ಅಂತ ಹೆಸರಿಟ್ಟುಕೊಂಡವರಿಗೆ ಬೇರೆಯವರು ಅವರ ಹೆಸರನ್ನ ಕೇಳಿದಾಗ ಪಡಬಹುದಾದ ಪರಿಪಾಟಲಿನ ಬಗ್ಗೆ ಸ್ನೇಹಿತರೊಬ್ಬರು ಹೇಳಿದ ನಗೆ ಚಟಾಕಿ ಈ ಸಮಯದಲ್ಲಿ ನೆನಪಾಗುತ್ತದೆ…(ಇದು ಬಹುತೇಕ ಗೊತ್ತಿರಬಹುದು ಅಂತ ಪ್ರತ್ಯೇಕವಾಗಿ ಅದರ ಬಗ್ಗೆ ಹೇಳ್ತಿಲ್ಲ! :-)

ಬೇಕೆಂದೇ ಹೆಸರು ಕೇಳಿದ್ರೆ ಹೆಸರು - ಹೆಸರು ಕಾಳು ಅಂತಾ ಗೇಲಿ ಮಾಡೋವ್ರು ಕೆಲವರಾದ್ರೆ, ಬರಹಗಾರರಲ್ಲಿ ಕೆಲವರು ತಮ್ಮ ಹೆಸರನ್ನೇ ಅಡಗಿಸಿಕೊಂಡು ಅಥವಾ ಬೇರೆ ಕಾವ್ಯನಾಮ ಇಟ್ಕೊಂಡು ಬರೀತಾರೆ. ಈ ನಾಮಬಲವೇ ಕೆಲವೊಮ್ಮೆ ಅವರಿಗೆ ಮೂಲ ಹೆಸರಿಗಿಂತ ಹೆಚ್ಚಿನ ಪ್ರಸಿದ್ಧಿ ತಂದುಕೊಡತ್ತೆ.
ಹೆಸರಿಗೆ ಇರೋ ಪ್ರಾಮುಖ್ಯತೆಯಿಂದಾನೇ ಬಹುಶಃ ಇಂಥಾ ಪದಪುಂಜಗಳ ಸೃಷ್ಟಿಯಾಗಿವೆ: ಒಳ್ಳೇ ಹೆಸರು ಮಾಡ್ಬೇಕು, ಅಪ್ಪ-ಅಮ್ಮನ ಹೆಸರು ಮುಂದೆ ತರಬೇಕು. ಶಾಲೆಗೆ ಒಳ್ಳೇ ಹೆಸರು ತರಬೇಕು, ನನ್ನ ಹೆಸರು ಹೇಳಿ ಸಾಕು, ಗಡ ಗಡ ನಡಗ್ತಾರೆ, ವಂಶಕ್ಕೆ ಒಳ್ಳೇ ಹೆಸರು ತರಬೇಕು, ಹೆಸರು ಕೆಡಿಸಿಕೋ ಬಾರದು, ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಿದೆ ಇತ್ಯಾದಿ. :-)

ಬೇರೆಯವ್ರಿಗೆ ಇರೋ ಒಳ್ಳೇ ಹೆಸರಿಂದಾನೇ ತಮ್ಮ ಬೇಳೆ ಬೇಯಿಸಿಕೊಳ್ಳೋರೂ ಇರ್ತಾರೆ- ತಾನು ಇಂಥವರ ಮಗ, ತನಗೆ ಇಂತಿಂಥಾ ದೊಡ್ಡ ಜನರ ಪರಿಚಯ ಇದೆ, ನಾವೆಲ್ಲಾ – ’ ಹೋಗೋ-ಬಾರೋ’ ದೋಸ್ತಿಗಳು ಹೀಗೆ ಸಮಜಾಯಿಶಿ ಕೊಟ್ಟು ಕೆಲಸ ಮುಗಿಸಿಕೊಳ್ಳೋ ಎಷ್ಟೋ ಜನರನ್ನ ನಾವು – ನೀವು ಭೇಟಿ ಮಾಡಿರ್ತೀವಿ, ಏನಂತೀರಾ?

ಕೊನೆ ಹನಿ: ಯಾರೇ ಆಗ್ಲಿ ಒಂದು ಹೊಸ ಪೆನ್ನೋ ಅಥವಾ ಪೆನ್ಸಿಲನ್ನೋ ತೊಗೊಂಡ್ರೆ ಅದ್ರಿಂದ ಮೊದಲು ಬರೆಯೋದು – ಅಂದ್ರೆ ಆ ಪೆನ್ / ಪೆನ್ಸಿಲ್ ಬರೆಯತ್ತಾ ಅಂತ ಟೆಸ್ಟ್ ಮಾಡೋದು ತಮ್ಮ ಹೆಸರು ಅಥವಾ ಹೆಸರಿನ ಮೊದಲನೇ ಅಕ್ಷರವನ್ನು ಬರೆದೇ ಅಂತೆ, ಇದಕ್ಕೆ ಅಪವಾದಗಳು ಬೇಕದಷ್ಟು ಇರಬಹುದು; ಆದ್ರೆ ಗಮನಿಸಿ ನಾವೂ ಬಹಳಷ್ಟು ಬಾರಿ ಹೀಗೇ ಮಾಡಿಲ್ವಾ?