ಹದಿಹರಯದ ಹುಚ್ಚು ಖೋಡಿ ಹೆಣ್ಣು ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ನಾಚಿದೆ, ನುಲಿದೆ, ಗುಲಾಬಿ ಬಿಳಚಿ ಬೆಳ್ಳಗಾಯಿತು

ತಲೆಬಾಗಿ ಕಾಲ್ಬೆರಳಲ್ಲಿ ಬರೆದೆ

 

ಇಪ್ಪತ್ತರ ಹಿತ ಬಿಸಿಲ  ಬೆಚ್ಚನೆಯ ಹೆಣ್ಣು ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ! 

ಕಣ್ಣ ಕುಡಿಯಂಚಲ್ಲಿ ಸಾವಿರ ಭಾವ ಬೀರಿ ಒರಗಿದೆ

ಹೆಗಲ ಮೇಲೆ ಭಾಷ್ಪವ ಕರೆದೆ

 

ಇಪ್ಪತೈದರ ತುಂಬು ತಾರುಣ್ಯದ ತರುಣಿ ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ಉಪಾಹಾರವನ್ನಲ್ಲಿಟ್ಟು ಮತ್ತ ಮುತ್ತನ್ನು ನೀಡಿದೆ

ಕೆಲಸಕ್ಕೆ ಹೋಗಲು ತಡವಾಗಲಿಲ್ಲವೆ?

 

ಮೂವತ್ತರ ಮಾಗಿದ ಹರಯದ ಹೆಣ್ಣು ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ಬೇಗ ಬನ್ನಿ ಸಂಜೆಗೆ, ಹೋಗಬೇಕಿದೆ ಶಾಪಿಂಗಿಗೆ

ಕೊರಳ ಕೊಂಕಿಸಿ ಆಜ್ಞೆಯ ನೀಡಿದೆ

 

ನಲವತ್ತರ ಸ್ಥೂಲ ನಡುವ ಮಹಿಳೆ ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ಪಾತ್ರೆ ತೊಳೆಯುತ್ತ, ‘ಹೇಳಬಾರದೆ ಮಕ್ಕಳಿಗೆ ಪಾಠ’

ಅಸಹನೆಯ ನುಡಿಯನ್ನೀನಾಡಿದೆ

 

ಐದು ದಶಕ ಕಳೆದ ಪ್ರೌಢ ಮಹಿಳೆಯಾಗಿದ್ದೆ ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ಪುಸ್ತಕವನೋದುತ್ತಾ ತಲೆಯನೆತ್ತಿ ನನ್ನತ್ತ ನೋಡಿದೆ

ಹೊಟ್ಟೆ ಬಿರಿವ ಹಾಗೆ ನಕ್ಕುಬಿಟ್ಟೆ!!

 

ಅರವತ್ತರ ಅರಳು-ಮರಳ ಹಿರಿಯ ಜೀವ ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ಮೊಮ್ಮಗುವಿನ ಹೆರಳ ಬಾಚುತ ನೀ ನನ್ನ ನೋಡಿದೆ

ತುಸುವೇ ಮುಗುಳು ನಗೆ ಬೀರಿದೆ

 

ಎಪ್ಪತ್ತರ ಎಳೆ ವಯಸ್ಸಿನ ಅಜ್ಜಿಯಾಗಿದ್ದೆ ನೀನಾಗ

ಹೇಳಿದೆ, ನಾನು ನಿನ್ನ ಪ್ರೀತಿಸುವೆ!

೫೦ ದಶಕಗಳ ಹಿಂದಿನ ಪ್ರೇಮ ಪತ್ರವ ನೇವರಿಸುತ್ತಾ

ಕಂಠ ತುಂಬಿ ಬರಲು ವಾಚಿಸಿದೆ

 

ಎಂಟು ದಶಕ, ಬೆಳ್ಳಿಕೂದಲ ಹೊದ್ದಿದ್ದೆ ನೀನಾಗ 

ನೀ ಹೇಳಿದೆ, ನಾನು ನಿನ್ನ ಪ್ರೀತಿಸುವೆ!

ದಶಕಗಳ ಕಣ್ಣೀರ ಹೆಪ್ಪು ಕರಗಿ ಕೋಡಿಯಾಯಿತು! 

ಮಡಿಲಲಿ ಮುಖವನ್ನಿಟ್ಟು ಅತ್ತುಬಿಟ್ಟೆ!!

 

ಓಹೋ! ಇದುವೇ ಮಹಾ ಸುದಿನ ನನ್ನ ಬಾಳಿನಲ್ಲಿ

ಕಾದಿದ್ದೆ ಅದೆಷ್ಟು ದಿನಗಳಿಂದ ನಾನು

ಕೇಳಲೊಮ್ಮೆ ನಿನ್ನ ಉಲಿ ‘ನಾನು ನಿನ್ನ ಪ್ರೀತಿಸುವೆ’

ಧನ್ಯ! ಗಳಿಸಿದೆ ನಾನು ನಿನ್ನೊಲವನ್ನು!!

 

ಸಖ! ಒಲವ ಪಯಣದಿ ಎಲ್ಲವೆಲ್ಲ ನುಡಿವೆ ನೀನು

ಮೌನದಿ ನಾನು ಹಾಡಿದೆ ಸಾವಿರ ಕವನ

ಸಾವಿನರಮನೆಯ ಹೊಸಲಲ್ಲಿ ನಿಂತು ಪೇಳ್ವೆ ಸಖ!

ಮೌನವೇ ಬಂಗಾರ, ನೀನು ನನ್ನ ಚಿನ್ನ!

------- 

-ನಾಸೋ

www.yakshaprashne.org

(ಸಂಪುಟ ೧ ಸಂಚಿಕೆ ೪ ಸಿದ್ಧವಾಗಿದೆ) 

 

ಸ್ಪೂರ್ತಿ: ಇಂಗ್ಲೀಷಿನಲ್ಲಿ ಓದಿದ ಒಂದು ಕವನ