ನಮ್ಮ ಹೆಸರಿನ ಉಸಾಬರಿ ಇವಳಿಗ್ಯಾಕೆ ಎಂದುಕೊಳ್ಳಬೇಡಿ...ಖಂಡಿತ ನಿಮಗೂ ಇಂಥ ಒಂದು ಹೆಸರು ಇದ್ದೇ ಇರುತ್ತದೆ. ಏಕೆಂದರೆ ನನಗೂ ಒಂದು 'ನಿಕ್ ನೇಮ್' ಇರಬೇಕೆಂಬುದು ಎಲ್ಲರ ಆಸೆ. ಆದ್ರೆ ನಾನೀಗ ಮಾತಾಡ್ತಿರೋದು ನಿಮ್ಮ 'ನಿಕ್ ನೇಮ್' ಬಗ್ಗೆ ಅಲ್ಲ ಸ್ವಾಮೀ, ನಿಮ್ಮ ಅವತಾರ ನೋಡಿಯೋ ಅಥವಾ ನಿಮ್ಮ ಗುಣ ನೋಡಿಯೋ ನಿಮ್ಮ ಮನೆಯವರು,ಗೆಳೆಯರು ಇಟ್ಟಿರುವ ಹೆಸರು-ಅದೇ 'ಅಡ್ಡೆಸರು' ಖಂಡಿತ ಅಂಥ ಒಂದು ಹೆಸರು ನಿಮಗೂ ಇದ್ದೇ ಇರುತ್ತದೆ. ಇಂಗ್ಲೀಷಿನ 'ನಿಕ್ ನೇಮ್' ಎಂದರೆ ಪ್ರೀತಿಯಿಂದ ಮುದ್ದಾಗಿ ಕರೆಯಲೆಂದೇ ಇಟ್ಟುಕೊಂಡವಾಗಿರುತ್ತವೆ. ಅದರಲ್ಲಿ ಅಂಥ ಸ್ವಾರಸ್ಯ ಇಲ್ಲ ಬಿಡಿ. ಆದರೆ ಈ ಅಡ್ಡ ಹೆಸರುಗಳಿರುತ್ತವೆಯಲ್ಲಾ ಇಲ್ಲಿ ಪ್ರೀತಿಗಿಂತ ಹೆಚ್ಚು ವ್ಯಂಗ್ಯತೆಯೇಕೂಡಿರುತ್ತದೆ. ಆದರೂ ನಾವದನ್ನು ಪ್ರೀತಿಸುತ್ತೇವೆ.

ಅಡ್ಡ ಹೆಸರಿನ ಬಗೆಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಬಹುಶಃ ಮಾನವನ ಭಾಷೆಯ ಅರಿವಿನ ಜೊತೆಗೆ ಈ ಅಡ್ಡಹೆಸರಿನ ಉಗಮವೂ ಆಗಿರಬಹುದೇನೋ. ಬಹು ಸಂದರ್ಭದಲ್ಲಿ ಮಗುವಿನ ರೂಪ ನಡವಳಿಕೆಯನ್ನು ಗಮನಿಸಿಯೇ ಹೆಸರಿಡುವುದನ್ನು ನಾವು ಕಾಣಬಹುದು. ಇದೆಲ್ಲಾ ಒಂದು ರೀತಿಯಾದರೆ ಮತ್ತೊಂದು ಬಗೆಯ ಹೆಸರುಗಳು ನಮ್ಮ ಬಾಲ್ಯದಲ್ಲಿ ನಮ್ಮನ್ನು ಎಡತಾಕಿಕೊಳ್ಳುತ್ತವೆ. ನಾವು ಮನೆಯ ಹೊರಗೆ ಕಾಲಿಟ್ಟು ಅಕ್ಕಪಕ್ಕದ ಮನೆಯ ಮಕ್ಕಳೊಡನೆ ಆಡಲು ಆರಂಭಿಸಿದಂದಿನಿಂದ,ಹೊರ ಪ್ರಪಂಚವನ್ನು ಕಾಣಲು ಆರಂಭಿಸಿದಂದಿನಿಂದ ನಮಗೆ ಒಂದು ಅಥವಾ ಅನೇಕ ಹೆಸರುಗಳು ಹುಟ್ಟಿ ಅವು ಕೆಲವು ವರ್ಷಗಳವರೆಗೆ ಉಳಿಯಬಹುದು. ಇಲ್ಲವೇ ಯಾವುದೋ ಅವಧಿಯಲ್ಲಿ ಕೊನೆಗೊಳ್ಳಬಹುದು.
ನಮ್ಮೂರಲ್ಲಂತೂ ಇಂಥ ಹೆಸರುಗಳು ಯಾರೊಬ್ಬರನ್ನೂ ಬಿಟ್ಟಿಲ್ಲ. ಕೆಲವಂತೂ ಯಾರಿಂದಲೋ ಹುಟ್ಟಿ ಇಡೀ ಮನೆತನಕ್ಕೆ ಆ ಹೆಸರು ನಿಂತುಬಿಟ್ಟಿದೆ. ಉತ್ತರ ಕರ್ನಾಟಕದಲ್ಲಿರುವ ಹಾಗಿನ ಮನೆತನದ ಹೆಸರುಗಳಲ್ಲ. ಇಲ್ಲೊಂದು ಉದಾಹರಣೆ ನೋಡಿ: ನಮ್ಮ ಚಿಕ್ಕಮಾವನವರಿಗೆ ವಿಪರೀತ ಸುಳ್ಳು ಹೇಳುವ ಅಭ್ಯಾಸ. ಇರುವುದನ್ನು ಉತ್ಪ್ರೇಕ್ಷೆ ಮಾಡಿ ಹೇಳುವುದರಲ್ಲಿ ಅವರು ನಿಸ್ಸೀಮರು. ಅದು ಊರಿನಲ್ಲಿ ಎಲ್ಲರಿಗೂ ತಿಳಿದಿರುವ ಸಂಗತಿ. ಅದಕ್ಕೆ ಅವರಿಗಿರುವ ಹೆಸರು 'ಸೀಸ' ಅದರ ಮುಂದೆ ಅವರ ಹೆಸರು ಒಂದು ಆಶ್ಚರ್ಯವೆಂದರೆ ಅವರ ಮಕ್ಕಳು ಕೂಡ ಈ ರೀತಿಯ ಮಾತಿನವರೆ. ಯಾರಾದರೂ ಹೊರಗಿನವರು ಬಂದು ಇಲ್ಲಿ ರಾಮಣ್ಣನವರ ಮನೆಯೆಲ್ಲಿ ಎಂದರೆ ಜನ ಕೇಳುವುದು 'ಅಂಗಡಿ' ರಾಮಣ್ಣನೋ ಇಲ್ಲ 'ಸೀಸ' ರಾಮಣ್ಣನೋ ಎಂದು.ಅಂಗಡಿ ಇಟ್ಟವರು ಅಂಗಡಿ ರಾಮಣ್ಣ, ಸೀಮೆಹಸು ಸಾಕಿದವರು 'ಸೀಮೇಹಸೀನ' ರಾಮಣ್ಣ.

ಇದೆಲ್ಲದರದು ಒಂದು ಬಗೆ. ಮತ್ತೂ ಕೆಲವಿವೆ, ಬಾಲ್ಯದಲ್ಲಿ ಸ್ನೇಹಿತರು ಚುಡಾಯಿಸಲು ಇಡುವ ಹೆಸರುಗಳು. ದೊಡ್ಡ ವಿದ್ವಾಂಸರೆನಿಸಿದವರಿಗೆ ತಿಳಿಯದಂಥ ವಿಷಯಗಳು ಈ ಹೆಸರಿನಲ್ಲಿರುತ್ತವೆ. ನನ್ನ ಚಿಕ್ಕ ತಮ್ಮನ ಹೆಸರು ಆನಂದ್. ಆದರೆ ಅವನಿಗೆ ಅವನ ಸ್ನೇಹಿತರು ಇಟ್ಟ ಹೆಸರು 'ಮಾರ್ಕ್' ನಮ್ಮಮ್ಮ ಟೈಲರ್ ಆದ್ದರಿಂದ ಆಸ್ಟ್ರೇಲಿಯಾದ ಕ್ರಿಕೆಟಿಗ 'ಮಾರ್ಕ್ ಟೇಲರ್'ನ ಹೆಸರು ನನ್ನ ತಮ್ಮನಿಗೆ. ನನ್ನ ದೊಡ್ಡ ತಮ್ಮನ ಹೆಸರು ಅಂಜನ್ ಆದರೂ ಅವನು ಈಗಲೂ ಕರೆಯಲ್ಪಡುವುದು 'ಶುಕ್ಲಾಚಾರಿ'ಯೆಂದು. ಅವನು ತುಂಬಾ ತರಲೆ ಸ್ವಭಾವದವನಾದ್ದರಿಂದ ಅವನು ಮೊದಲು ತಿಕ್ಕಲು ಎನಿಸಿ ಅದು ಶುಕ್ಲ ಆಗಿ ನಂತರದಲ್ಲಿ ಶುಕ್ಲಾಚಾರಿಯಾಗಿ ಬಿರುದಾಂಕಿತವಾಗಿದೆ. ಹೆಣ್ಣುಮಕ್ಕಳಿಗೆ ಈ ರೀತಿಯ ಹೆಸರುಗಳಿಂದ ವಿನಾಯಿತಿಯಿದ್ದರೂ ನನ್ನ ಹಲ್ಲುಗಳು ನಟಿ ಮಾಲಾಶ್ರೀಯವರ ಹಲ್ಲುಗಳಂತೆ ವಕ್ರವಾಗಿದ್ದರ ಪರಿಣಾಮ ನನ್ನ ಹೆಸರು 'ಸೊಟ್ಟಪಟ್ಟ'. ನಮ್ಮ ಪಕ್ಕದ ಮನೆಯ ಶೀಲಾ ಎಂಬ ಹುಡುಗಿಯ ಹೆಸರು 'ಟೆಂಪೋ'ಎಂದು. ಯಾಕೆಂದು ನನಗಂತೂ ಗೊತ್ತಿಲ್ಲ. ನನ್ನ ಗಂಡನ ಚಿಕ್ಕಂದಿನ ಹೆಸರುಗಳು' ಮಂಜುನಾಥ್- ಮಂಜ ಆಗಿ ಅದು ಕೋಳಿಹುಂಜ ಆಗಿ ನಾವೆಲ್ಲಾ ಅವನನ್ನು 'ಕೋಳಿ' ಎಂತಲೇ ಈಗಲೂ ಕರೆಯುತ್ತೇವೆ. ಅವನು ಚಿಕ್ಕಂದಿನಲ್ಲಿ ಗುಂಡಗಿದ್ದರಿಂದ ಅವನ ಮತ್ತೊಂದು ಹೆಸರು 'ಗಣಪ'. ಅವನ ತಲೆ ದಪ್ಪಗಿದ್ದರಿಂದ 'ದಡ್ದಲೆ' ಅವನ ಮತ್ತೊಂದು ಹೆಸರು. ಚಿಕ್ಕ ಹುಡುಗನಾಗಿದ್ದಾಗ ಸಿಂಬಳ ಸುರಿಸುತ್ತಿದ್ದ ಸುರೇಶನ ಹೆಸರು 'ಗೊಣ್ಣೆ'. ಪುರುಷೋತ್ತಮ 'ಪರ್ಸಿ'. ನನ್ನ ಕಪ್ಪಗಿನ ಮೈದುನ ಮದುವೆಯಾದ ಮೇಲೆ ಕೂಡ ಅವನ ಸ್ನೇಹಿತರಿಗೆ 'ಬ್ಲಾಕಿ'ಯೇ. ನಮ್ಮ ತಂದೆ ಯಾವುದೋ ಜಮಾನದಲ್ಲಿ ಲಾಟರಿ ಮಾರುತ್ತಿದ್ದಾಗ ನನ್ನ ಹೆಸರು ಕೂಡ 'ಲಾಟ್ರಿ'ಯೇ ಆಗಿಹೋಗಿತ್ತು. ನನ್ನ ತಮ್ಮನ ಸ್ನೇಹಿತನೊಬ್ಬನ ಹೆಸರು ಸತೀಶನಾದರೂ ಅವನನ್ನು ಕರೆಯುತ್ತಿದ್ದದ್ದು 'ಪಸಲಿ' ಎಂದು. ನನಗೆ ಇನ್ನೂ ಸುಂದರವಾಗಿರಬಹುದಾದ ನಮ್ಮೂರಿನ ಹೆಸರುಗಳು ಮರೆತುಹೋಗಿವೆ. ಈ ಬಾರಿ ಊರಿಗೆ ಹೋಗಿ ಮತ್ತಷ್ಟು ಹೆಸರಿನ ಭಂಡಾರವನ್ನು ಹೊತ್ತು ತರುತ್ತೇನೆ. ಇವು ಸುಂದರ ಮಾತ್ರವೇ ಅಲ್ಲ. ನಮ್ಮನ್ನು ಒಂದು ಸಂಶೋಧನೆಯಲ್ಲಿ ತೊಡಗುವಂತೆ ಮಾಡಿಬಿಡುತ್ತವೆ. ನಿಮ್ಮಲ್ಲಿಯೂ ಇಂತಹ ಒಂದು ಭಂಡಾರವಿದ್ದರೆ ನನಗೂ ತಿಳಿಸಿ. ಸಂಶೋಧನೆ ಮಾಡಿಯೇ ಬಿಡೋಣ ಅದರ ಮೂಲವನ್ನು ಪತ್ತೆ ಹಚ್ಚೋಣ.