ನಿಧಾನ, ನಿಧಾನ. ಶೀರ್ಷಿಕೆ ನೋಡಿ ಯಾವುದೋ ಭಾಷೆಯ ಕವಿಗಳನ್ನು ಇವನು ಕೀಳಾಗಿ ಕಾಣುತ್ತಿದ್ದಾನೆ ಅನ್ನೋ ಆತುರದ ನಿರ್ಧಾರಕ್ಕೆ ಬರಬೇಡಿ. ಇದೊಂದು ತಮಾಷೆಯ ಪ್ರಸಂಗ. ಒಂದು ಮುಜುಗರದ ಪ್ರಸಂಗಾನೂ ಹೌದು.
ಇತ್ತೀಚೆಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಮಗನೊಂದಿಗೆ ಮೈಸೂರಿಗೆ ಹೋಗುತ್ತಿದ್ದೆ. ರಾತ್ರಿಯ ಪ್ರಯಾಣ. ರೈಲು ಹೊರಟಿತ್ತು. ಮೇಲಿನ ಬರ್ಥ್ನಲ್ಲಿ ಮಲಗಿದಾಗ ಮನಸ್ಸಿನ ಲಹರಿ ಹರಿಯಲು ಶುರು. ಮುಖದಲ್ಲಿ ಮುಗುಳ್ನಗು ಮೂಡಿರಬೇಕು. ಮಗ "ಯಾಕಪ್ಪಾ ನಗ್ತಿದೀ?" ಅಂದ. "ಏನೂ ಇಲ್ಲ ಮಗನೆ" ಅಂದರೂ ಅದರ ಹಿಂದೆ ಹೇಳಲಾಗದ ಸೋಮಾರಿತನ ಇತ್ತು ಅಷ್ಟೆ!
ಮನಸ್ಸಿನ ಲಹರಿ ಅಂದೆನಲ್ಲ! ನೆನಪುಗಳ ಮೆರವಣಿಗೆ ಎಲ್ಲಿಂದೆಲ್ಲಿಗೋ ಹೊರಟಿತ್ತು. ರಸ್ತೆ ಬದಿಯ ಪ್ರೇಕ್ಷಕನ ಹಾಗೆ ಸುಮ್ಮನೆ ನಿಂತು ನೋಡುತ್ತಿದ್ದೆ. ಈ ನೆನಪುಗಳೂ ಒಂಥರಾ ಮೂಳುನಾಯಿಗಳ ಹಾಗೆ ಅನ್ಸತ್ತೆ ಒಂದೊಂದು ಸಾರಿ. ಎಲ್ಲೋ ತಿಪ್ಪೆಯ ಮೇಲೆ ಮಲಗಿ ಕುಂಭಕರ್ಣನಿದ್ದೆ ಹೊಡೆಯುವ ಇವು ಅದು ಯಾವಾಗ, ಯಾಕೆ, ಎದ್ದು ಬೊಗಳುತ್ತವೋ ಯಾರಿಗೂ ತಿಳಿಯದು. ಒಮ್ಮೆ ಶುರುವಾಯ್ತೆಂದರೆ ಬಡಪೆಟ್ಟಿಗೆ ಬಿಡುವುದಿಲ್ಲ.
ನನ್ನ ಕಾಲೇಜು ದಿನಗಳ ನೆನಪಿನ ಮೆರವಣಿಗೆ ಬಗೆಗಣ್ಣಿನೆದುರು ಶುರುವಾಗಿತ್ತು. ಬಹುಶ: ಆಗ 1971ರ ಸಮಯ ಇರಬೇಕು. ಡಿಗ್ರಿ ಓದಲು ಸೆಂಟ್ರಲ್ ಕಾಲೇಜಿಗೆ ದಾಖಲಾಗಿದ್ದೆ. ಎರಡೇ ಜೊತೆ ಬಟ್ಟೆ. ಬರೀ ಪೈಜಾಮಾ ಮತ್ತು ಶರ್ಟ್ ಅಷ್ಟೆ! ಬರಿಗಾಲು. ಬೆಂಗಳೂರಿನ ಕಾಲೇಜು ಸೇರಿದ್ದೇ ಒಂದು ವೈಭೋಗವಾಗಿತ್ತು. ದುಬಾರಿಯ ಕನಸಿನ ಪ್ರಪಂಚದಲ್ಲಿ ನನ್ನ ಹೇರಿಕೆಯ ಸರಳತೆ!! ಬಸ್ ಪಾಸ್ ಮಾಡಿಸಿದ್ದರೂ ನಿತ್ಯದ ನಡಿಗೆ ತಪ್ಪಿರಲಿಲ್ಲ. ಅಲ್ಲಿಯ ವರೆಗೆ ಎಲ್ಲಿಯೂ ದೂರದ ಪ್ರಯಾಣ ಮಾಡದ ನನಗೆ ಬಸ್ ಪ್ರಯಾಣ ಓಕರಿಕೆ ತರುತ್ತಿತ್ತು. ಪ್ರೆಟ್ರೋಲ್, ಡೀಸೆಲ್ ಯಾವುದಾದರೂ ಸರಿ,ಹೊಗೆ ಮೂಗು ಹೊಕ್ಕಿತೆಂದರೆ, ವಾಂತಿ ಶುರು. ಹಾಗಾಗಿ ತ್ಯಾಗರಾಜನಗರದಿಂದ ನಡೆದು ಗಾಂಧಿಬಜಾರ್ ತಲಪಿ ಅಲ್ಲಿ ಮಲ್ಲೇಶ್ವರಂ 18 ನೇ ಕ್ರಾಸ್ನ ಬಸ್ ಹತ್ತಿ ಸೆಂಟ್ರಲ್ ಕಾಲೇಜು ಸೇರಬೇಕು. ಸುಮಾರು ಆರು ತಿಂಗಳ ಕಾಲ ವಾಂತಿಯ ಕಾಟದಿಂದ ಪೂರ್ತಿ ಪ್ರಯಾಣ ಮಾಡಲಾಗಲೇ ಇಲ್ಲ. ಹೆಚ್ಚೆಂದರೆ ಜೆ.ಸಿ.ರೋಡೇ ಕೊನೆ. ಅಲ್ಲಿಂದ ಮತ್ತೆ ಕಾಲೇಜಿನ ವರೆಗೆ ನನ್ನ ನಡಿಗೆ ಶುರು. ದಾರಿ ಸರಿಯಾಗಿ ಗೊತ್ತಿಲ್ಲದೆ ಬಸ್ ಹೋಗುವ ಹಾದಿಯನ್ನೇ ಹಿಡಿದು ಸಾಗುತ್ತಿದ್ದೆ.
ಅದೆಷ್ಟೋ ಸಾರಿ ಬಸ್ಪಾಸ್ ಕಳೆದುಕೊಂಡು ತ್ಯಾಗರಾಜನಗರದಿಂದ ಸೆಂಟ್ರಲ್ ಕಾಲೇಜಿನವರೆಗೆ ನಡೆದುಕೊಂಡು ಹೋಗಿದ್ದೂ ಉಂಟು. ಇಂಥದ್ದೇ ಒಂದು ದಿನಗಳಲ್ಲಿ. . . . . .. . .
ರಜೆ ಮುಗಿಸಿ ಊರಿಂದ ಆಗ ತಾನೆ ಬಂದಿದ್ದೆ. ಈ ಸಾರಿ ಒಂದು ಹೊಸ ಸಂಭ್ರಮ ಬೇರೆ!! ನನ್ನ ಚಿಕ್ಕಪ್ಪ ಹಾಕಿಕೊಂಡು ಬಿಟ್ಟಿದ್ದ ಒಂದು ಜೊತೆ ಷೂ ನನ್ನ ಚಿಕ್ಕಮ್ಮನವರ ಔದಾರ್ಯದಿಂದ ಸಿಕ್ಕಿದ್ದು ಸ್ವರ್ಗ ಕೈಸೇರಿದ ಹಾಗಾಗಿತ್ತು. ಬರಿಯ ಷೂ. ಕಾಲುಚೀಲ ಇಲ್ಲವೇ ಇಲ್ಲ. ಅದು ಗೊತ್ತಾಗದ ಹಾಗೆ ಪೈಜಾಮಾ ಸ್ವಲ್ಪ ಕೆಳಗಿಳಿಸಿ ಯಾರಿಗೂ ಕಾಲುಚೀಲ ಇಲ್ಲದ್ದು ತಿಳಿಯದ ಹಾಗೆ adjust ಮಾಡ್ತಿದ್ದೆ. ಅಥವಾ ಹಾಗೆ ತಿಳ್ಕೊಂಡಿದ್ದೆ. ಈಗೀಗ ನೆನೆಸಿಕೊಂಡರೆ ಅಸಾಧ್ಯ ನಗು ಉಕ್ಕುಕ್ಕಿ ಬರುತ್ತದೆ.
ಬಸ್ ಪಾಸ್ ಕಳ್ಕೊಂಡಿದ್ದೆ ಅಂದೆನಲ್ಲ!! ದಿನಾ ಮೈಲಿಗಟ್ಟಲೆ ನಡಿಗೆ. ಮೊದಲೇ ಹಳೆಯ ಷೂಗಳು. ಅಟ್ಟೆಗಳು ಬಹಳ ಬೇಗನೇ ಸವೆದವು. ನನಗೆ ಮಾತ್ರ ಅದು ತಿಳಿದಿದ್ದು ನನ್ನ ಕಾಲುಗಳಿಗೆ ಕೆಳಗಿನಿಂದ ಒರಟು ನೆಲ ತಾಗಿದಾಗಲೇ!! ಒಂದು ಸಂಜೆ ಹತ್ತಿರದ ದಾರಿ ಅಂತ ಅವೆನ್ಯೂ ರೋಡಿನಲ್ಲಿ ಹೋಗುತ್ತಿದ್ದೆ. ಸಂಜೆಯ ಜನಜಂಗುಳಿ ಜೋರಾಗಿತ್ತು. ಅವತ್ತು ಮಧ್ಯಾಹ್ನದ ಸಮಯಕ್ಕೇ ಷೂನ ಅಟ್ಟೆ ಪೂರ್ತಿ ಸವೆದಿದ್ದು ಅಂಗಾಲುಗಳು ಬಹಳ ತೊಂದರೆ ಅನುಭವಿಸಿದ್ದವು. ಜೊತೆಗೆ ಕಾಲೆತ್ತಿ ನಡೆಯಲಾಗದ ಮುಜುಗರ. ನೆಪಕ್ಕೆ ಮಾತ್ರ ಮೇಲ್ಗಡೆ ಷೂ. ಕೆಳಗೆ ಏನೂ ಇಲ್ಲ. ಕಾಲಿನ ತೊಂದರೆ, ಮನಸ್ಸಿನ ಹಿಂಸೆ ತಪ್ಪಿಸಲು ಕಾಲೇಜಿಂದ ಹೊರಡುವ ಮೊದಲು ಒಂದು ಉಪಾಯ ಮಾಡಿದ್ದೆ. Toilet ಒಳಹೊಕ್ಕು ಷೂ ಕಳಚಿ ಸಧ್ಯಕ್ಕೆ ನನ್ನ ಬಳಿ ಇದ್ದ rough note bookಅನ್ನೇ ಉದ್ದುದ್ದಕ್ಕೆ ಅರ್ಧಕ್ಕೆ ಹರಿದು ಕಷ್ಟದಿಂದ ಅವನ್ನು ಷೂಗಳ ಒಳತುರುಕಿದೆ. ಚಿಕ್ಕಂದಿನಿಂದ ಕಾಗದ ಅಂದ್ರೆ ಸರಸ್ವತಿ ಅನ್ನುವ ಮನೋಭಾವನೆ ತುಂಬಿದ್ದರಿಂದ ಮನಸ್ಸಿನ ತುಂಬ ತೀರಾ ಮುಜುಗರ. ಆದರೆ ಅಂಗಾಲು ರಕ್ಷಣೆಗೆ ಸಧ್ಯಕ್ಕೆ ಇದ್ದಿದ್ದು ಅದೊಂದೇ ಉಪಾಯ. History of Classical Sanskrit Literature ಬರೆದುಕೊಂಡಿದ್ದ ನೋಟ್ಸ್ ಅದು. Toiletನಿಂದ ಹೊರಬಂದು ಗೆದ್ದ ನೋಟ ಬೀರಿ ಮನೆಕಡೆಗೆ ನಡಿದೆ. ಅಂಗಾಲುಗಳು ಇದ್ದಿದ್ದರಲ್ಲಿ ಹಿತ ಅನುಭವಿಸುತ್ತಿದ್ದವು. ಸರಿ, ಅವೆನ್ಯೂ ರಸ್ತೆಗುಂಟ ನಿರುಮ್ಮಳವಾಗಿ ಸಾಗುತ್ತಿದ್ದವನಿಗೆ ಅವೆನ್ಯೂ ರಸ್ತೆಯ ಕೊನೆಗೆ ಇನ್ನೇನು ಸಿಟಿ ಮಾರ್ಕೆಟ್ ಬಳಿ ಬರುವ ಹೊತ್ತಿಗೆ ಹಿಂದಿನಿಂದ ಒಂದಷ್ಟು ಜನ ಗೊಳ್ಳನೆ ನಗುವ ದನಿ ಕೇಳಿ ಏನಿರಬಹುದು ಅನ್ನುವ ಕುತೂಹಲದಿಂದ ಹಿಂದಿರುಗಿ ನೋಡಿದೆನಷ್ಟೆ!! ನಗುವಿಗೆ ಕಾರಣ ನಾನೇ ಅನ್ನುವ ಅರಿವಾಗಿದ್ದೆ ತಡ, ಭೂಮಿ ಬಿರಿದು ನನ್ನನ್ನು ನುಂಗಬಾರದೆ ಅನ್ನುವಷ್ಟು ಮುಜುಗರ ಹಿಂಸೆ ಕ್ಷಣಾರ್ಧದಲ್ಲಿ ಅನುಭವಿಸಿದ್ದೆ. ಆದರೆ ಆ ಸಂಜೆ ದೇವರು ರಜೆ ಹಾಕಿದ್ದಹಾಗಿತ್ತು. ನನ್ನ ಮೊರೆ ಯಾರಿಗೂ ತಲಪಲಿಲ್ಲ. ಸುಮಾರು ನೂರು ಹೆಜ್ಜೆಗಳ ಹಿಂದಿನಿಂದ ನನ್ನ ಒಂದೊಂದು ಹೆಜ್ಜೆಗೂಂದೊಂದರಂತೆ ಎರಡೂ ಷೂಗಳ ಕೆಳಗಿನಿಂದ ಷೂ ಆಕಾರದ ನೋಟ್ಸ್ನ ಹಾಳೆಗಳು ರಸ್ತೆಯಲ್ಲಿ ನೀಟಾಗಿ ಬಿದ್ದಿದ್ದವು. ಜನ ಕರ್ಚೀಫ್ ಹಿಡಿದು ನಗು ತಡೆಯಲಾರದೆ ಹಿಂಸೆಪಡುತ್ತಿದ್ದರು. ಭಾಸ, ಕಾಳಿದಾಸ, ಭಾರವಿ, ಮಾಘಕವಿಗಳು ಅವೆನ್ಯೂ ರಸ್ತೆಯಲ್ಲಿ ಅಸಹಾಯಕರಾಗಿ ಬಿದ್ದಿದ್ದರು. ಕ್ಷಣಾರ್ಧದಲ್ಲಿ ಒಂದು ಓಣಿಯಲ್ಲಿ ತಿರುಗಿ ಷೂ ವೇಷದ ಆ ಅಪಮಾನವನ್ನು ಕಳಚಿ ದಿಕ್ಕು ತೋಚಿದತ್ತ ಓಡಿದೆ. ಸಂಜಯ ಟಾಕೀಸ್ ಬಳಿ ಬರುವಷ್ಟು ಹೊತ್ತಿಗೆ ಓಡಿ ಓಡಿ ಎದೆ ನಗಾರಿಯಾಗಿತ್ತು. ಅಲ್ಲಿಯ boulevardನ ಮರದ ಕೆಳಗೆ ಕುಳಿತು ಏನಾಯ್ತು ಅಂತ ಸ್ವಲ್ಪ ಯೋಚಿಸಿದೆ. ಮನೆ ಸೇರುವಷ್ಟು ಹೊತ್ತಿಗೆ ಜ್ವರವೇರಿತ್ತು.
ಈಗಲೂ ಸುಮಾರು 38 ವರ್ಷಗಳ ನಂತರವೂ ಇದ್ದಕ್ಕಿದ್ದಂತೆ ಆ ನೆನಪು ನೂರಾರು ಭಾವನೆಗಳನ್ನು ಉಕ್ಕಿಸುತ್ತದೆ. ಕೆಲಸಕ್ಕೆ ಸೇರಿ ಸ್ವಲ್ಪ ಆರ್ಥಿಕ ಸ್ಥಿತಿ ಸುಧಾರಿಸುತ್ತಲೇ Bata Company ಯ Ambassador, Mocassiono ಗಳಂಥ ಷೂಗಳನ್ನು ಕೊಂಡು ಧರಿಸಿದ ಮೇಲೆ ಸ್ವಲ್ಪ ಮನಸ್ಸಿಗೆ ಸಮಾಧಾನವಾಗಿ ಅವಮಾನದ ನೆನಪು ಕಾಡುವುದು ಕಡಿಮೆಯಾಯಿತು.
ಭಾಸನ "ಚಾರುದತ್ತಂ’ನಾಟಕ ಪಾಠ ಮಾಡುವಾಗ ಬಡತನದ ವರ್ಣನೆಯ ಸಂದರ್ಭದಲ್ಲಿ ಅನೇಕ batch ನ ಮಕ್ಕಳಿಗೆ ಈ ವಿಷಯ ಹೇಳಿ, ಅವರು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದೇನೆ. :)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)